ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಲೋಕದ ಅನನ್ಯ ಪ್ರತಿಭೆ

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಶಕಗಳಿಂದಲೂ ಫಾರ್ವರ್ಡ್ ವಿಭಾಗದಲ್ಲಿ ಭಾರತ ತಂಡದ ಬೆನ್ನೆಲುಬಾಗಿರುವ ಪ್ರತಿಭಾನ್ವಿತ ಆಟಗಾರ ಕರ್ನಾಟಕದ ಎಸ್‌.ವಿ. ಸುನಿಲ್‌. ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಅವರು ಹಾಕಿ ಲೋಕದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ.

2007ರಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಅಡಿ ಇಟ್ಟ ಕೊಡಗಿನ ಸುನಿಲ್‌, ಸುಲ್ತಾನ್‌ ಅಜ್ಲಾನ್‌ ಷಾ ಕಪ್‌, 2011ರ ಚಾಂಪಿಯನ್ಸ್‌ ಚಾಲೆಂಜ್‌, ಚಾಂಪಿಯನ್ಸ್‌ ಟ್ರೋಫಿ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಭಾರತ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.

ಈ ಬಾರಿ ಹಾಕಿ ಇಂಡಿಯಾ, ಸುನಿಲ್‌ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಈ ಬಾರಿ ಅರ್ಜುನ ಪ್ರಶಸ್ತಿಗೆ ನಿಮ್ಮ ಹೆಸರು ಶಿಫಾರಸು ಮಾಡಲಾಗಿದೆ. ಹೇಗನಿಸುತ್ತಿದೆ ?

ಅರ್ಜುನ ಪ್ರಶಸ್ತಿ ಪಡೆಯುವುದು ‍ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಈ ಬಾರಿ ಹಾಕಿ ಇಂಡಿಯಾ ಪ್ರತಿಷ್ಠಿತ ಗೌರವಕ್ಕೆ ನನ್ನ ಹೆಸರು ಶಿಫಾರಸು ಮಾಡಿದ ಸುದ್ದಿ ಕೇಳಿ ಅತೀವ ಖುಷಿಯಾಯಿತು. ಇದಕ್ಕಾಗಿ ಹಾಕಿ ಇಂಡಿಯಾಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನೆಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದ ಕುಟುಂಬದವರು, ಭಾರತ ತಂಡದ ಸಿಬ್ಬಂದಿ ಮತ್ತು ಸಹ ಆಟಗಾರರಿಗೂ ಕೃತಜ್ಞನಾಗಿದ್ದೇನೆ.

* ಈ ಬಾರಿ ನಿಮ್ಮ ಹೆಸರು ಶಿಫಾರಸು ಮಾಡಬಹುದೆಂಬ ನಿರೀಕ್ಷೆ ಇತ್ತೆ?

ಸಾಕಷ್ಟು ವರ್ಷಗಳಿಂದ ದೇಶಕ್ಕಾಗಿ ಆಡಿದ್ದೇನೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಪದಕ ಗೆಲ್ಲಲು ಶ್ರಮಿಸಿದ್ದೇನೆ. ಹೀಗಾಗಿ ಈ ಸಲ ಪ್ರಶಸ್ತಿಗೆ ನನ್ನ ಹೆಸರು ಶಿಫಾರಸು ಮಾಡಬಹುದೆಂಬ ನಿರೀಕ್ಷೆ ಇತ್ತು.

* 2016ನೇ ಸಾಲಿನ ಏಷ್ಯಾದ ವರ್ಷದ ಶ್ರೇಷ್ಠ ಆಟಗಾರ ಗೌರವ ಲಭಿಸಿದೆ. ಈ ಬಗ್ಗೆ ಏನಂತೀರಾ?

ವರ್ಷದ ಶ್ರೇಷ್ಠ ಆಟಗಾರ ಗೌರವ ಸಿಕ್ಕ ವಿಷಯ ತಿಳಿದು ಅಚ್ಚರಿಯಾಯಿತು. ಖಂಡಿತವಾಗಿಯೂ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. 2016ರಲ್ಲಿ ನಡೆದ ಹಲವು ಟೂರ್ನಿಗಳಲ್ಲಿ ಶ್ರೇಷ್ಠ ಆಟ ಆಡಿದ್ದೆ. ಈ ಸಾಧನೆಗೆ ಸಂದ ಗೌರವ ಇದು. ನನ್ನನ್ನು  ಪ್ರಶಸ್ತಿಗೆ ಆಯ್ಕೆ ಮಾಡಿದ ಏಷ್ಯಾದ ಎಲ್ಲಾ ಕೋಚ್‌ಗಳಿಗೆ ಆಭಾರಿಯಾಗಿದ್ದೇನೆ.

* ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಐತಿಹಾಸಿಕ ಬೆಳ್ಳಿ ಗೆಲ್ಲುವಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿತ್ತು. ಈ ಸಾಧನೆಯ ಬಗ್ಗೆ ಹೇಳಿ?

ಅದು ಕೇವಲ ನನ್ನೊಬ್ಬನಿಂದ ಮೂಡಿಬಂದ ಸಾಧನೆಯಲ್ಲ. ಅದರ ಹಿಂದೆ ತಂಡದ ಎಲ್ಲಾ ಆಟಗಾರರ ಅವಿರತ ಪರಿಶ್ರಮವಿತ್ತು. ಒಲಿಂಪಿಕ್ಸ್‌ ಸಮೀಪಿಸುತ್ತಿದ್ದುದರಿಂದ ಎಲ್ಲರೂ ಕಠಿಣ ಅಭ್ಯಾಸ ನಡೆಸಿದ್ದೆವು. ಆ ಸಮಯದಲ್ಲಿ ನಾನು ಉತ್ತಮ ಲಯದಲ್ಲಿದ್ದೆ. ಹಿರಿಯ ಆಟಗಾರನಾಗಿ ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಆಟ ಆಡುವುದು ನನ್ನ ಕರ್ತವ್ಯವಾಗಿತ್ತು. ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆ. ಸಹ ಆಟಗಾರರಿಂದಲೂ ತುಂಬಾ ಬೆಂಬಲ ಸಿಕ್ಕಿತ್ತು. ಆ ಸಾಧನೆಯ ಶ್ರೇಯ ಇಡೀ ತಂಡಕ್ಕೆ ಸಲ್ಲಬೇಕು.

* ಈ ವರ್ಷ ನಡೆದ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ನಲ್ಲಿ ತಂಡದಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲವಲ್ಲ?

ಹೌದು, ಈ ಬಾರಿ ನಾವು ಚಿನ್ನ ಗೆಲ್ಲುತ್ತೇವೆ ಎಂದು ಎಲ್ಲರೂ ಭಾವಿಸಿದ್ದರು. ಹೀಗಾಗಿ ಬೆಟ್ಟದಷ್ಟು ನಿರೀಕ್ಷೆ ಹೊತ್ತುಕೊಂಡು  ಲಂಡನ್‌ಗೆ ಹೋಗಿದ್ದೆವು. ಟೂರ್ನಿಯ ಲೀಗ್‌ ಹಂತದಲ್ಲಿ ತುಂಬಾ ಚೆನ್ನಾಗಿಯೇ ಆಡಿದ್ದೆವು. ಆದರೆ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಮಲೇಷ್ಯಾ ವಿರುದ್ಧ ಸೋತೆವು. ಇದರಿಂದ ತುಂಬಾ ನೋವಾಗಿತ್ತು. ಆ ದಿನ ರಾತ್ರಿ ಯಾರೂ ಸರಿಯಾಗಿ ನಿದ್ದೆ ಮಾಡಲಿಲ್ಲ. ಅಷ್ಟರ ಮಟ್ಟಿಗೆ ಸೋಲು ನಮ್ಮನ್ನು ಕಾಡಿತ್ತು. ಪಂದ್ಯ ಮುಗಿದ ಬಳಿಕ ಎಲ್ಲರೂ ಒಂದೆಡೆ ಕುಳಿತು ವಿಡಿಯೊ ತುಣುಕುಗಳನ್ನು ವೀಕ್ಷಿಸಿದೆವು. ಯಾವ ವಿಭಾಗದಲ್ಲಿ ಎಡವಿದ್ದೆವು, ಹೇಗೆ ಆಡಬೇಕಿತ್ತು ಎಂಬುದರ ಕುರಿತು ಪರಾಮರ್ಶೆ ಮಾಡಿಕೊಂಡೆವು. ಆ ಪಂದ್ಯದಲ್ಲಿ ಆದ ತಪ್ಪುಗಳು ಮುಂದೆಂದೂ ಮರುಕಳಿಸಬಾರದೆಂದು ಅಂದೇ ದೃಢವಾಗಿ ನಿಶ್ಚಯಿಸಿದೆವು.

* ಕೋಚ್‌ ರೋಲಂಟ್‌ ಓಲ್ಟಮಸ್‌ ಅವರ ತರಬೇತಿ ಕ್ರಮದ ಬಗ್ಗೆ ಹೇಳಿ?

ಅಭ್ಯಾಸದ ವೇಳೆ ನಾವು ಮಾಡುವ ತಪ್ಪುಗಳನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಂತರ ಅವುಗಳನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ. ತಮ್ಮ ಆಲೋಚನೆಗಳನ್ನು ಯಾವತ್ತೂ ಆಟಗಾರರ ಮೇಲೆ ಹೇರುವುದಿಲ್ಲ. ಜೊತೆಗೆ ಪ್ರತಿ ಬಾರಿ ತರಬೇತಿ ಶಿಬಿರ ನಡೆದಾಗ ವಿನೂತನ ಕೌಶಲಗಳನ್ನು ಹೇಳಿಕೊಟ್ಟು ಆಟಗಾರರ ಸಾಮರ್ಥ್ಯ ಹೆಚ್ಚಿಸುತ್ತಾರೆ. ಪಂದ್ಯದ ಮುನ್ನಾ ದಿನ ಎದುರಾಳಿ ತಂಡ ಹಿಂದೆ ಆಡಿದ ಪಂದ್ಯಗಳ ವಿಡಿಯೊ ತುಣುಕುಗಳನ್ನು ನೋಡಿ ಅದಕ್ಕನುಗುಣವಾಗಿ ಯೋಜನೆ ರೂಪಿಸುತ್ತಾರೆ.

* ಹಾಕಿ ಇಂಡಿಯಾ ಲೀಗ್‌ನಿಂದ ಆಗಿರುವ ಲಾಭಗಳೇನು?

ಎಚ್‌ಐಎಲ್‌ ಶುರುವಾದ ಮೇಲೆ ಭಾರತದ ಹಾಕಿ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಿದೆ. ಹೊಸ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಲೀಗ್‌ನಲ್ಲಿ ವಿದೇಶಿ ಆಟಗಾರರಿಗೂ ಅವಕಾಶ ನೀಡಲಾಗಿದೆ. ಹೀಗಾಗಿ ಅವರ ಆಹಾರ ಕ್ರಮ, ಪಂದ್ಯಕ್ಕೆ ಸಜ್ಜಾಗುವ ರೀತಿ, ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅನುಸರಿಸುವ ತಂತ್ರಗಳು ಹೀಗೆ ಅನೇಕ ವಿಷಯಗಳನ್ನು ಕಲಿಯಲು ನಮ್ಮವರಿಗೆ ಲೀಗ್‌ ವೇದಿಕೆಯಾಗಿದೆ. ಇದರಲ್ಲಿ ಶ್ರೇಷ್ಠ ಆಟ ಆಡಿದ ಅನೇಕರು ಈಗ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಮಿಂಚುತ್ತಿದ್ದಾರೆ. ಲೀಗ್‌ ಶುರುವಾದ ನಂತರ ಭಾರತ ತಂಡ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿದೆ ಎಂಬುದು ಗಮನಾರ್ಹ.

* ಉಪನಾಯಕನ ಜವಾಬ್ದಾರಿ ನಿಭಾಯಿಸುತ್ತಿರುವುದರಿಂದ ಆಟದ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರಿದೆಯೇ?

ಉಪನಾಯಕನಾಗಿ ನೇಮಕವಾದ ನಂತರ ಹಿಂದೆಂದಿಗಿಂತಲೂ ಶ್ರೇಷ್ಠ ಆಟ ಆಡುತ್ತಿದ್ದೇನೆ. ಹೊಸ ಜವಾಬ್ದಾರಿಯನ್ನು ಬಹಳ ಖುಷಿಯಿಂದಲೇ ನಿಭಾಯಿಸುತ್ತಿದ್ದೇನೆ.  ಈ ಕೆಲಸ ತುಂಬಾ ಕಷ್ಟ ಅಂತಾ ಯಾವತ್ತೂ ಅನಿಸಿಲ್ಲ. ಆಟಗಾರರಾದವರು ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯ.

* ತಂಡದ ಯಶಸ್ಸಿನಲ್ಲಿ ಮುಂಚೂಣಿ ವಿಭಾಗದ ಆಟಗಾರರ ಮಹತ್ವ ಏನು?

ಪ್ರತಿ ಪಂದ್ಯದಲ್ಲೂ ಹೆಚ್ಚೆಚ್ಚು ಗೋಲು ಹೊಡೆದು ಎದುರಾಳಿಗಳ ಮೇಲೆ ಒತ್ತಡ ಹೇರಬೇಕಾದ ಜವಾಬ್ದಾರಿ ಮುಂಚೂಣಿ ವಿಭಾಗದ ಆಟಗಾರರ ಮೇಲಿರುತ್ತದೆ. 60 ನಿಮಿಷಗಳ ಕಾಲವೂ ರಕ್ಷಣೆಗೆ ಒತ್ತು ನೀಡಿ ಆಡುವುದರಿಂದ ಏನೂ ಲಾಭವಾಗುವುದಿಲ್ಲ.

* ನೀವು ತುಂಬಾ ಅನುಭವಿ.ಹೀಗಿದ್ದರೂ ನಿಮ್ಮ ಆಟದಲ್ಲಿ ಏನಾದರೂ ಬದಲಾವಣೆಯಾಗಬೇಕು ಎಂದು ಅನಿಸಿದೆಯೇ?

ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಹಿರಿಯ ಆಟಗಾರ ಎಂದ ಮಾತ್ರಕ್ಕೆ  ಎಲ್ಲವೂ ತಿಳಿದಿರುತ್ತದೆ ಎಂದು ಭಾವಿಸುವುದು ತಪ್ಪು. ಎಷ್ಟೇ ಅನುಭವಿಯಾದರು ಹೊಸ ವಿಚಾರಗಳನ್ನು ಕಲಿಯಲೇಬೇಕಾಗಿರುತ್ತದೆ. ಹೀಗಾಗಿ ವಿನೂತನ ಕೌಶಲಗಳನ್ನು ಕಲಿತು, ಅವುಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

* ನಿಮ್ಮ ಅಭ್ಯಾಸ ಕ್ರಮದ ಬಗ್ಗೆ ಹೇಳಿ?

ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತೇನೆ. ಹಾಕಿ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆಯಾಗಿರುವ ಕಾರಣ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಇದಕ್ಕಾಗಿ ಜಿಮ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತೇನೆ.

* ಮುಂದಿನ ಟೂರ್ನಿಗಳ ಬಗ್ಗೆ ಹೇಳಿ?

ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಏಷ್ಯಾಕಪ್‌ ಟೂರ್ನಿ ಆಯೋಜನೆಯಾಗಿದೆ. ಇದರಲ್ಲಿ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ನಂತರ ವಿಶ್ವ ಹಾಕಿ ಲೀಗ್‌ ಫೈನಲ್‌ ಟೂರ್ನಿ ಜರುಗಲಿದ್ದು, ಅದರಲ್ಲೂ ಪದಕದ ಮೇಲೆ ಕಣ್ಣು ನೆಟ್ಟಿದ್ದೇವೆ.

* ಕರ್ನಾಟಕದಿಂದ ಹೆಚ್ಚು ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲವಲ್ಲ?

ಕರ್ನಾಟಕದಲ್ಲಿ ಪ್ರತಿಭಾನ್ವಿತರ ದೊಡ್ಡ ದಂಡೇ ಇದೆ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ.

* ವಿ.ಆರ್. ರಘುನಾಥ್‌ ಅವರ ನಿವೃತ್ತಿ ನಿರ್ಧಾರದ ಬಗ್ಗೆ ನೀವೇನಂತೀರಾ?

ರಘುನಾಥ್‌ ಅವರು ನನ್ನ ಆತ್ಮೀಯ ಗೆಳೆಯ. ಅವರು ವಿದಾಯ ಹೇಳುತ್ತಾರೆ ಎಂಬ ವಿಷಯ ತಿಳಿದು ಅಚ್ಚರಿಯಾಯಿತು. ಅವರಲ್ಲಿ ಇನ್ನೂ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವ ಸಾಮರ್ಥ್ಯ ಇದೆ. ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಯಿತು. ಅವರ ತೀರ್ಮಾನವನ್ನು  ಗೌರವಿಸುತ್ತೇನೆ.

* ನಿಮ್ಮ ಮನಸ್ಸಿನಲ್ಲಿ ಎಂದಾದರೂ ನಿವೃತ್ತಿಯ ಆಲೋಚನೆ ಮೂಡಿದೆಯೇ?

ಸದ್ಯಕ್ಕಂತೂ ಇಲ್ಲ. ಈಗ ಚೆನ್ನಾಗಿಯೇ ಆಡುತ್ತಿದ್ದೇನೆ. ಮುಂದೆಯೂ ಇದೇ ಆಟ ಮುಂದುವರಿಸಿಕೊಂಡು ಹೋಗಬೇಕು. ವಿಶ್ವಕಪ್‌ ವರೆಗೂ ತಂಡದ ಭಾಗವಾಗಿರಬೇಕು ಎಂಬುದು ನನ್ನ ಬಯಕೆ. ಆ ನಂತರ ಏನಾಗುತ್ತದೆಯೋ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT