ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ರೈಡರ್‌ಗಳ ಕಾರುಬಾರು

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ನಾಗ್ಪುರ ಚರಣದ ನಾಲ್ಕನೇ ದಿನ ಗುಜರಾತ್‌ ಸೂಪರ್‌ ಜೈಂಟ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ನಡುವಿನ ಪಂದ್ಯ ಕಳೆಕಟ್ಟಿತ್ತು. 18 ವರ್ಷದ ಆಟಗಾರ ಸಚಿನ್‌ ಆಲ್‌ರೌಂಡ್ ಆಟದ ಮೂಲಕ ಒಟ್ಟು ಎಂಟು ಪಾಯಿಂಟ್‌ ಗಳಿಸಿ ಮಿಂಚಿದ್ದರು. ರೈಡಿಂಗ್‌ನಲ್ಲಿ ಐದು ಪಾಯಿಂಟ್ ಗಳಿಸಿದ ಅವರು ಟ್ಯಾಕ್ಲಿಂಗ್‌ನಲ್ಲೂ ಮೂರು ಪಾಯಿಂಟ್ ಬಗಲಿಗೆ ಹಾಕಿಕೊಂಡಿದ್ದರು. ಒಂದು ಸೂಪರ್‌ ಟ್ಯಾಕಲ್‌ ಮೂಲಕ ತಂಡಕ್ಕೆ ನೆರವಾಗಿದ್ದರು. ಆದರೆ ಅಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದದ್ದು ಅವರ ರೈಡಿಂಗ್ ಮಾತ್ರ.

ಆ ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್‌ನ ರಾಕೇಶ್ ಕುಮಾರ್‌ ಮತ್ತು ಬೆಂಗಳೂರು ಬುಲ್ಸ್‌ನ ಪ್ರೀತಮ್ ಚಿಲ್ಲಾರ್ ಅವರ ಉತ್ತಮ ಟ್ಯಾಕ್ಲಿಂಗ್‌ ನೆರವಿನಿಂದ ಪಂದ್ಯ ಸಮಬಲಗೊಂಡಿತ್ತು. ಆದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದದ್ದು ರಾಹುಲ್‌ ಚೌಧರಿ ಮತ್ತು ರೋಹಿತ್ ಕುಮಾರ್ ಅವರ ರೈಡಿಂಗ್ ಮಾತ್ರ.

ಮೂರನೇ ಪ್ರಸಂಗ: ನಾಗ್ಪುರ ಚರಣದ ಐದನೇ ದಿನದ ಪಂದ್ಯ. ಆಲ್‌ ರೌಂಡರ್ ಆಶಿಶ್‌ ಕುಮಾರ್‌ ಅವರು ಈ ಪಂದ್ಯದಲ್ಲಿ ಎರಡು ಬಾರಿ ಮೋಹಕ ಸೂಪರ್ ಟ್ಯಾಕ್ಲಿಂಗ್‌ನಲ್ಲಿ ಭಾಗಿಯಾಗಿ ಬೆಂಗಳೂರು ಬುಲ್ಸ್ ತಂಡವನ್ನು ಆಲ್‌ಔಟ್‌ ಅಪಾಯದಿಂದ ಪಾರು ಮಾಡಿದ್ದರು. ಆದರೆ ಪಂದ್ಯದಲ್ಲಿ ಬುಲ್ಸ್‌ 31–25ರಿಂದ ಬೆಂಗಾಲ್ ವಾರಿಯರ್ಸ್ ಎದುರು ಗೆದ್ದಾಗ ಎಲ್ಲರ ಮೆಚ್ಚುಗೆಗೆ ಪಾತ್ರರಾದದ್ದು ರೈಡಿಂಗ್‌ನಲ್ಲಿ ಮಿಂಚಿದ ಅಜಯ್‌ ಕುಮಾರ್ ಮತ್ತು ರೋಹಿತ್ ಕುಮಾರ್‌. ಎದುರಾಳಿ ತಂಡದ ನಾಯಕ ಸುರ್ಜೀತ್‌ ಸಿಂಗ್‌ ಟ್ಯಾಕ್ಲಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರೂ ಗಮನ ಸೆಳೆದದ್ದು ರೈಡರ್‌ ಜಾಂಗ್ ಕುನ್‌ ಲೀ.

(ಸಚಿನ್‌)

ಜಗಮಗಿಸುವ ಬೆಳಕಿನಲ್ಲಿ ಆಟಗಾರರು ಅತ್ಯಮೋಘ ಸಾಮರ್ಥ್ಯ ತೋರುವ ಪ್ರೊ ಕಬಡ್ಡಿಯಲ್ಲಿ ರೈಡರ್‌ಗಳೇ ಹೆಚ್ಚು ಮಿನುಗುತ್ತಿದ್ದಾರೆ ಎಂಬುದಕ್ಕೆ ಇಂಥ ಅನೇಕ ಉದಾಹರಣೆಗಳು ಇವೆ. ಕ್ರಿಕೆಟ್‌ನಲ್ಲಿ ಬೌಲರ್‌ಗಳು ಎಷ್ಟೇ ಪ್ರಭಾವಿ ಆಟವಾಡಿದರೂ ಬ್ಯಾಟ್ಸ್‌ಮನ್‌ಗಳಿಗೆ ಗೌರವ ಸಿಗುವಂತೆ ಕಬಡ್ಡಿಯಲ್ಲಿ ರೈಡರ್‌ಗಳಿಗೇ ಹೆಚ್ಚು ಮಾನ್ಯತೆ.

ಕಬಡ್ಡಿಯಲ್ಲಿ ರೈಡರ್‌ಗಳಿಗೆ ಸಹಜವಾಗಿ ಮಿಂಚುವ ಅವಕಾಶ ಹೆಚ್ಚು. ‘ಏಳು ಸುತ್ತಿನ ಕೋಟೆ’ಯೊಳಗೆ ನುಗ್ಗಿ ಬೋನಸ್‌ ಪಾಯಿಂಟ್‌ ಗಳಿಸುವುದು, ಕೈಯಲ್ಲಿ ಅಥವಾ ಕಾಲಿನಲ್ಲಿ ಎದುರಾಳಿ ತಂಡದ ಆಟಗಾರರನ್ನು ಸ್ಪರ್ಷಿಸಿ ಔಟ್‌ ಮಾಡುವುದು, ಅವರ ಬಲೆಯಿಂದ ತಪ್ಪಿಸಿಕೊಳ್ಳುವುದು ಮುಂತಾದವು ರೋಮಾಂಚಕ ಅನುಭವವನ್ನು ನೀಡುತ್ತವೆ. ವೇಗ, ಸೂಕ್ಷ್ಮ ನಡೆ, ಎದುರಾಳಿಗಳಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಇತ್ಯಾದಿ ಗುಣಗಳಿಂದಾಗಿ ಕೆಲವು ರೈಡರ್‌ಗಳು ಪ್ರೊ ಕಬಡ್ಡಿಯ ಹೀರೊಗಳಾಗಿ ಮೆರೆಯುತ್ತಿದ್ದಾರೆ.

ಬೆಂಗಳೂರು ಬುಲ್ಸ್‌ನ ರೋಹಿತ್ ಕುಮಾರ್‌, ಅಜಯ್‌ ಕುಮಾರ್‌, ಬೆಂಗಾಲ್‌ ವಾರಿಯರ್ಸ್‌ನ ಜಾಂಗ್ ಕುನ್‌ಲೀ, ಮಣಿಂದರ್ ಸಿಂಗ್‌, ವಿನೋದ್ ಕುಮಾರ್‌, ದಬಂಗ್ ದೆಲ್ಲಿಯ ಆನಂದ್ ಪಾಟೀಲ, ತೆಲುಗು ಟೈಟನ್ಸ್‌ನ ಸುಖೇಶ್ ಹೆಗ್ಟೆ, ರಾಹುಲ್ ಚೌಧರಿ, ಹರಿಯಾಣ ಸ್ಟೀಲರ್ಸ್‌ನ ಪ್ರಶಾಂತ್ ರೈ, ಜೈಪುರ್ ಪಿಂಕ್‌ ಪ್ಯಾಂಥರ್ಸ್‌ನ ಜಸ್ವೀರ್ ಸಿಂಗ್‌, ಪುಣೇರಿ ಪಲ್ಟನ್‌ನ ದೀಪಕ್ ಹೂಡಾ, ರಾಜೇಶ್ ಮೊಂಡಲ್‌, ತಮಿಳ್ ತಲೈವಾಸ್‌ನ ಅಜಯ್ ಠಾಕೂರ್‌, ಕೆ.ಪ್ರಪಂಚನ್‌, ಯು ಮುಂಬಾದ ಅನೂಪ್ ಕುಮಾರ್‌, ಕಾಶಿಲಿಂಗ ಅಡಕೆ, ಶಬ್ಬೀರ್ ಬಾಪು, ಯು.ಪಿ.ಯೋಧಾ ತಂಡದ ನಿತಿನ್‌ ತೋಮರ್‌, ಮಹೇಶ್ ಗೌಡ, ರಿಶಾಂಕ್ ದೇವಾಡಿಗ ಮುಂತಾದವರು ಈಗಾಗಲೇ ಕಬಡ್ಡಿ ಪ್ರಿಯರ ಮನದಲ್ಲಿ ಸ್ಥಾನ ಗಳಿಸಿದ್ದಾರೆ.

ಪಾಯಿಂಟ್‌ ಗಳಿಕೆಯಲ್ಲೂ ಮುಂದೆ

ರೈಡರ್‌ಗಳಿಗೆ ಪಾಯಿಂಟ್‌ಗಳನ್ನು ಗಳಿಸಲು ಅವಕಾಶ ಹೆಚ್ಚು. ಸೂಪರ್ ರೈಡ್‌ಗಳಲ್ಲಿ ಮೂರು ಅಥವಾ ನಾಲ್ಕು ಪಾಯಿಂಟ್‌ಗಳನ್ನು ಹೆಕ್ಕಿ ತರುವ ಅವಕಾಶಗಳಿರುತ್ತವೆ. ಪ್ರೊ ಕಬಡ್ಡಿಯಲ್ಲಿ ವೈಯಕ್ತಿಕ ಹೆಚ್ಚು ಪಾಯಿಂಟ್ ಗಳಿಸಿದವರ ಪಟ್ಟಿಯಲ್ಲಿ ರೈಡರ್‌ಗಳದ್ದೇ ಪಾರಮ್ಯ.

ಐದನೇ ಆವೃತ್ತಿಯಲ್ಲಿ ಮೊದಲ ಎರಡು ಚರಣಗಳು ಮುಕ್ತಾಯಗೊಂಡಾಗ ಹೆಚ್ಚು ಪಾಯಿಂಟ್‌ ಗಳಿಸಿದವರ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ರೋಹಿತ್ ಕುಮಾರ್‌ ಅವರ ಬಗಲಲ್ಲಿ 54 ಪಾಯಿಂಟ್ ಇದ್ದರೆ ಟ್ಯಾಕ್ಲಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಶಾಲ್ ಭಾರದ್ವಾಜ್ ಗಳಿಸಿರುವುದು 19 ಪಾಯಿಂಟ್ ಮಾತ್ರ. ರೈಡರ್‌ಗಳ ಪಟ್ಟಿಯ ನಂತರದ ನಾಲ್ಕು ಸ್ಥಾನದಲ್ಲಿರುವರ ಪಾಯಿಂಟ್‌ಗಳು ಕ್ರಮವಾಗಿ 53, 42, 31 ಮತ್ತು 26. ಟ್ಯಾಕ್ಲಿಂಗ್ ವಿಭಾಗದಲ್ಲಿ ಈ ಸಂಖ್ಯೆಗಳು 17, 15, 13 ಹಾಗೂ 12 ಆಗಿವೆ.

ಪ್ರೊ ಕಬಡ್ಡಿಯಲ್ಲಿ ಇಲ್ಲಿಯ ವರೆಗೆ ಹೆಚ್ಚು ವೈಯಕ್ತಿಕ ಪಾಯಿಂಟ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಹುಲ್ ಚೌಧರಿ ಒಟ್ಟು 570 ಪಾಯಿಂಟ್ ಗಳಿಸಿದ್ದರೆ ಟ್ಯಾಕ್ಲಿಂಗ್ ವಿಭಾಗದಲ್ಲಿ ಗರಿಷ್ಠ ಗಳಿಕೆ ಮಾಡಿರುವ ಮನ್‌ಜೀತ್ ಚಿಲ್ಲಾರ್ ಗಳಿಸಿರುವುದು 204 ಪಾಯಿಂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT