ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್- ಲೋಹಿಯಾ ಕೊನೇ ಕನಸು

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಶರದ್ ಯಾದವ್ ರಾಜ್ಯಸಭೆಯಲ್ಲಿ ಎರಡು ವರ್ಷಗಳ ಕೆಳಗೆ ಹೆಣ್ಣಿನ ಮೈಬಣ್ಣದ ಬಗ್ಗೆ ಏನೋ ಹೇಳಿ ಲೇವಡಿಗೊಳಗಾದರು. ಶರದ್ ಅವತ್ತು ರಾಮಮನೋಹರ ಲೋಹಿಯಾರ ಮಾತನ್ನು ಸರಿಯಾಗಿ ಹೇಳಿರಲಿಲ್ಲ. ಜೆಡಿಯು ನಾಯಕ ನಾಡಗೌಡರಿಂದ ಶರದ್ ನಂಬರ್ ತೆಗೆದುಕೊಂಡು ಅವರ ಮನೆಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಿದ ಅವರ ಕಾರ್ಯದರ್ಶಿಗೆ ‘ಲೋಹಿಯಾ ಶಿಷ್ಯರಾದ ಶರದ್ ಯಾದವ್ ಲೋಹಿಯಾರ ‘ಸೌಂದರ್ಯ ಮತ್ತು ಮೈಬಣ್ಣ’ ಲೇಖನದ ಮಾತುಗಳನ್ನು ಸರಿಯಾಗಿ ಕೋಟ್ ಮಾಡಿಲ್ಲ; ಆದ್ದರಿಂದ ಗೊಂದಲವಾಗಿದೆ’ ಎಂದೆ. ಅವರು ‘ಆ ಲೇಖನ ಇಲ್ಲಿಲ್ಲ. ಕಳಿಸಿಕೊಡಿ’ ಎಂದರು. ಶರದ್ ಮನೆಯಲ್ಲೇ ಲೋಹಿಯಾ ಪುಸ್ತಕ ಇಲ್ಲದಿದ್ದರೆ, ಇನ್ನೆಲ್ಲಿರಬಲ್ಲದು! ಹಸನ್ ನಯೀಂ ಸುರಕೋಡರಿಂದ ಹಿಂದಿ ಲೇಖನ ತರಿಸಿ ಕಳಿಸಿಕೊಟ್ಟೆ. ಯಾದವ್ ಅದನ್ನು ಓದಿದರೋ ಇಲ್ಲವೋ, ಅಂತೂ ವಿವಾದ ತಣ್ಣಗಾಯಿತು.

ಈಗ ಇದನ್ನು ಹೇಳಲು ಕಾರಣವಿದೆ. ಇವತ್ತು ಲೋಹಿಯಾರ ಮತ್ತೊಂದು ಪುಟ್ಟ ಭಾಷಣವನ್ನು ಶರದ್ ಯಾದವರಿಗೆ ನೆನಪಿಸುವ ಸಂದರ್ಭ ಬಂತು. ಈಚೆಗೆ ಭವಿಷ್ಯದ ಲೆಕ್ಕಾಚಾರ ಹಾಕಿ ರಾಜ್ಯಸಭೆಗೆ ರಾಜೀನಾಮೆ ಕೊಟ್ಟಿರುವ ಮಾಯಾವತಿ, ಫೂಲ್ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ. ಈ ಘಟ್ಟದಲ್ಲಿ, ರಾಜಕೀಯ ಧ್ರುವೀಕರಣದ ಬಗ್ಗೆ ಮಾತಾಡುತ್ತಿರುವ ಶರದ್, ಲೋಹಿಯಾರ ಈ ಪುಟ್ಟ ಭಾಷಣವನ್ನು ಓದಲೇಬೇಕೆಂದು ಕಳಿಸಿದೆ. ಆ ಭಾಷಣವನ್ನು ಇವತ್ತು ಬಿಜೆಪಿಯೇತರ ಪಕ್ಷಗಳೆಲ್ಲ ಓದಬೇಕು. 1962ರಲ್ಲಿ ಪ್ರಧಾನಿ ನೆಹರೂ ವಿರುದ್ಧ ಫೂಲ್ಪುರ ಕ್ಷೇತ್ರದಲ್ಲಿ ಲೋಹಿಯಾ ಸ್ಪರ್ಧಿಸಿದ್ದರು. ಆದರೆ ಅದಕ್ಕಿಂತ ಲೋಹಿಯಾಗೆ ಗ್ವಾಲಿಯರ್ ಲೋಕಸಭಾ ಕ್ಷೇತ್ರ ಇಂಡಿಯಾದ ಚರಿತ್ರೆಯ ಮಂಥನದ ದೃಷ್ಟಿಯಿಂದ ಮುಖ್ಯವಾಗಿತ್ತು. ಅವತ್ತು ಲೋಹಿಯಾ ‘ಸಮಾಜವಾದಿ ಪಕ್ಷವನ್ನು ಶೇಕಡ 99 ದಲಿತ ಜನರ ಪಕ್ಷವನ್ನಾಗಿ ಬೆಳೆಸಬೇಕೆಂದು ಜನರನ್ನು ಕೇಳಿಕೊಳ್ಳುತ್ತಾ’ ಹೇಳಿದ ಮಾತುಗಳಿವು:

‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಟಿನ ಮೇಲೆ ಗ್ವಾಲಿಯರ್ ಮಹಾರಾಣಿ ಸ್ಪರ್ಧಿಸಿದ್ದಾರೆ; ಆಕೆಗೆ ಪ್ರತಿಸ್ಪರ್ಧಿಯಾಗಿರುವವರು ಸಮಾಜವಾದಿ ಪಕ್ಷದ ಝಾಡಮಾಲಿ ಮಹಿಳೆ ಸುಖೋರಾಣಿ. ಸುಖೋರಾಣಿಯವರನ್ನು ಗೆಲ್ಲಿಸುವುದರ ಮೂಲಕ ಗ್ವಾಲಿಯರ್ ಜನರ ಅದ್ಭುತವಾದ ಸಾಮಾಜಿಕ, ಆರ್ಥಿಕ ಕ್ರಾಂತಿಯ ನಾಂದಿ ಹಾಡಿ ದೇಶದ ಚರಿತ್ರೆಗೆ ಉಜ್ವಲ ಪುಟವನ್ನು ಸೇರಿಸಬಹುದು. ಫೂಲ್ಪುರ ಲೋಕಸಭಾ ಕ್ಷೇತ್ರದಲ್ಲಿ ನೆಹರೂ ಜೊತೆಗಿನ ನನ್ನ ಸ್ವಂತದ ಸ್ಪರ್ಧೆಗಿಂತ ಗ್ವಾಲಿಯರ್ ಚುನಾವಣಾ ಹೋರಾಟ ಹೆಚ್ಚು ಮಹತ್ವದ್ದಾಗಿದೆ’. ಇವತ್ತು ಮಾಯಾವತಿ ಫೂಲ್ಪುರದಲ್ಲಿ ಸ್ಪರ್ಧಿಸಿದರೆ, ಲೋಹಿಯಾ ಭಾಷಣವನ್ನು ಶರದ್ ಜೊತೆಗೇ ಮುಲಾಯಂ, ರಾಹುಲ್, ಅಖಿಲೇಶ್ ಎಲ್ಲರೂ ಓದುವ ಅಗತ್ಯವಿದೆ.

ಅವತ್ತು ಗ್ವಾಲಿಯರ್ ಮಹಾರಾಣಿ, ನೆಹರೂ ಇಬ್ಬರು ಗೆದ್ದರು; ಮಹಾರಾಣಿ, ನೆಹರೂ ಪಕ್ಷವನ್ನು ಬಿಟ್ಟು ಜನಸಂಘಕ್ಕೆ ಹಾರಿದರು. ಮೊನ್ನೆ ಫೂಲ್ಪುರದಿಂದ ಗೆದ್ದು ಉತ್ತರಪ್ರದೇಶ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಕೇಶವಪ್ರಸಾದ್ ಮೌರ್ಯ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇರುವುದರಿಂದ, ಮಾಯಾವತಿ ಫೂಲ್ಪುರ ಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ. ಇಂಡಿಯಾದುದ್ದಕ್ಕೂ ಇರುವ ಸುಖೋರಾಣಿಯವರ ಜಾತಿಯ ಕೋಟ್ಯಂತರ ಜನರಲ್ಲಿ ಕೊಂಚ ಆತ್ಮವಿಶ್ವಾಸ ಹಾಗೂ ಹೆಮ್ಮೆಯನ್ನಾದರೂ ಮೂಡಿಸಬಲ್ಲ ದೇಶದ ದೊಡ್ಡ ನಾಯಕಿಯರಲ್ಲೊಬ್ಬರಾದ ಮಾಯಾವತಿಯವರ ಲೋಕಸಭಾ ಪ್ರವೇಶ ತಡೆಯಲು, ಕೇಶವಪ್ರಸಾದ್ ಉಪಮುಖ್ಯಮಂತ್ರಿ ಪದವಿಯನ್ನೇ ಬಿಟ್ಟು ಲೋಕಸಭಾ ಸದಸ್ಯರಾಗೇ ಮುಂದುವರಿಯುವ ಸಾಧ್ಯತೆಯೂ ಇದೆ! ಆಗ, ಮಾಯಾವತಿ ಉತ್ತರಪ್ರದೇಶ ವಿಧಾನಸಭೆಯನ್ನು ಪ್ರವೇಶಿಸುವ ಸಾಧ್ಯತೆಯ ಬಗೆಗೂ ಯೋಚಿಸಬಹುದು. ಈ ಎರಡೂ ಸನ್ನಿವೇಶಗಳಲ್ಲಿ, ಮಾಯಾವತಿಯವರನ್ನು ಬೆಂಬಲಿಸಲು ವಿರೋಧ ಪಕ್ಷಗಳು ಒಗ್ಗಟ್ಟಾದರೆ, ಅದು ಇಂಡಿಯಾದ ಇವತ್ತಿನ ಮಹತ್ತರ ರಾಜಕೀಯ ಧ್ರುವೀಕರಣಕ್ಕೆ ನಾಂದಿಯಾಗುತ್ತದೆ.

ಈ ಘಟ್ಟದಲ್ಲಿ, ‘ಸಮಾಜವಾದಿಗಳು’ ಎಂದು ಇನ್ನೂ ಕರೆದುಕೊಳ್ಳುವ ಮುಲಾಯಂ, ಶರದ್, ಲಾಲು; ಅಂಬೇಡ್ಕರ್‌ವಾದಿ ಎಂದು ಹೇಳಿಕೊಳ್ಳುವ ಮಾಯಾವತಿ- ಈ ನಾಲ್ವರೂ ಅಂಬೇಡ್ಕರ್ ತೀರಿಕೊಂಡ ವರ್ಷ ಲೋಹಿಯಾ-ಅಂಬೇಡ್ಕರ್ ನಡುವೆ ನಡೆದ ಚಾರಿತ್ರಿಕ ಪತ್ರವ್ಯವಹಾರವನ್ನು ಅಗತ್ಯವಾಗಿ ಗಮನಿಸಬೇಕು. ಅಂಬೇಡ್ಕರ್ ಅವರನ್ನು ಮೀಸಲಾತಿಯಿಲ್ಲದ ಸಾಮಾನ್ಯ ಲೋಕಸಭಾ ಕ್ಷೇತ್ರವೊಂದರಿಂದ ಸ್ಪರ್ಧಿಸುವಂತೆ ಲೋಹಿಯಾ ಆಹ್ವಾನಿಸಿದ್ದರು. ಲೋಹಿಯಾ 1956ರ ಅಕ್ಟೋಬರ್ 20ರಂದು ತಮ್ಮನ್ನು ಭೇಟಿಯಾಗಬಹುದೆಂದು ಅಂಬೇಡ್ಕರ್ ಪತ್ರ ಬರೆದಿದ್ದರು. ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾಗುವ ಸಾಧ್ಯತೆ ಇತ್ತು; ಆದರೆ ಅಂಬೇಡ್ಕರ್ ಡಿಸೆಂಬರ್ 6ರಂದು ನಿಧನರಾದರು. ಆಗ ಲೋಹಿಯಾ ಬರೆದ ಮಾತು: ‘ಅಂಬೇಡ್ಕರ್ ಅವರನ್ನು ನಮ್ಮ ಕಕ್ಷೆಯೊಳಗೆ ತರಬೇಕೆನ್ನುವುದು ಸಂಘಟನೆಯ ದೃಷ್ಟಿಯಿಂದಷ್ಟೇ ಅಲ್ಲದೆ, ತಾತ್ವಿಕ ದೃಷ್ಟಿಯಿಂದ ಕೂಡ ಮುಖ್ಯವಾಗಿತ್ತು ಹಾಗೂ ಆ ಕಾಲ ಸಂಪೂರ್ಣ ಹತ್ತಿರವಾಗುತ್ತಿರುವಂತೆ ಕಾಣುತ್ತಿತ್ತು’.

ಆನಂತರದ ಇಂಡಿಯಾದಲ್ಲಿ ಈ ಕಾಲ ಆಗಾಗ್ಗೆ ಬಂದುಹೋಗಿದೆ. ಲೋಹಿಯಾ ಶಿಷ್ಯರು, ಅಂಬೇಡ್ಕರ್ ಶಿಷ್ಯರು ಒಂದಾಗಿ ಅಧಿಕಾರ ನಡೆಸಲಾಗದೆ, ಕೋಮುವಾದಿಗಳ ಗುಲಾಮರಾಗಿ, ಸಾಮಾಜಿಕ ನ್ಯಾಯದ ಪ್ರಗತಿಪರ ರಾಜಕಾರಣವನ್ನೇ ನಾಶ ಮಾಡಿದ್ದೂ ಆಗಿದೆ. ಸಮಾಜವಾದಿಗಳ ಈ ಸರಸಗಳಿಗೆ ಅವರ ಗುರುಗಳು ಮಾಡಿದ ತಾತ್ವಿಕ ಎಡವಟ್ಟುಗಳೂ ಕಾರಣವಾಗಿವೆ. ನಿತೀಶ್ ಥರದವರ ಆಟಗಳು ಅವರು ಬಾಯಿಚಪಲಕ್ಕೆ ‘ಗುರುಗಳು’ ಎನ್ನುವ ಲೋಹಿಯಾ, ಜೆ.ಪಿ.ಯವರಂಥ ನಾಯಕರು ಜನಸಂಘದ ಜೊತೆಗೆ ಆಡಿದ ಸರಸದ ವಿಕೃತ ಮುಂದುವರಿಕೆಯಂತೆಯೂ ಇವೆ. ಇಷ್ಟಾಗಿಯೂ ಲೋಹಿಯಾ, ಜೆ.ಪಿ.ಯವರು ತಮ್ಮ ಕಾಲದ ಒತ್ತಾಯಗಳಿಂದಾಗಿ, ಕಾಂಗ್ರೆಸ್ ಪಕ್ಷ ಸರ್ವಾಧಿಕಾರಿಯಾಗಿ, ದೇಶದ ಶತ್ರುವಾಗಿದ್ದಾಗ ಆಡಿದ ಸರಸವನ್ನು ನಿತೀಶ್ ಥರದವರ ನಿರ್ಲಜ್ಜ ರಾಜಕಾರಣಕ್ಕೆ ಹೋಲಿಸಲಾಗದು. ಆದರೂ, ಗುರುಗಳು ಮಾಡುವ ತಾತ್ವಿಕ ಎಡವಟ್ಟುಗಳು ಅವರ ಶಿಷ್ಯರ ಲಜ್ಜಾಹೀನ ರಾಜಕಾರಣದಲ್ಲಿ ತಲುಪುವ ಹೀನ ಮಟ್ಟಗಳನ್ನು ನಾವು ಎಲ್ಲ ಕ್ಷೇತ್ರಗಳಲ್ಲೂ ಎಚ್ಚರದಿಂದ ಗಮನಿಸುತ್ತಿರಬೇಕಾಗುತ್ತದೆ!

ಅದೇನೇ ಇದ್ದರೂ, ಇದು ನಿತೀಶರ ಕೊನೆಯ ಇನಿಂಗ್ಸ್ ಅನ್ನಿಸುತ್ತದೆ. ಬರಲಿರುವ ಗುಜರಾತ್ ಚುನಾವಣೆಯ ಜೊತೆಗೇ ಬಿಹಾರದ ಚುನಾವಣೆಯ ಘೋಷಣೆಯ ಒಪ್ಪಂದ ಮಾಡಿಕೊಂಡೇ ನಿತೀಶ್ ಮತ್ತೆ ಮುಖ್ಯಮಂತ್ರಿಯಾಗಿರಬಹುದು ಎಂಬುದು ನನ್ನ ಊಹೆ. ಆದರೆ ಲಾಲುಪ್ರಸಾದ್, ಶರದ್ ಯಾದವರಿಗೆ ಮುಖ್ಯಮಂತ್ರಿಯ ಗಾಳ ಒಡ್ಡಿ, ಜೆಡಿಯುನ ಮೂರನೇ ಒಂದು ಭಾಗದಷ್ಟು ಶಾಸಕರು ಹೊರಬಂದರೆ ಇಡೀ ಚಿತ್ರವೇ ಬದಲಾಗಬಹುದು. ನೀಚ ರಾಜಕಾರಣ ಪರಮನೀಚ ರಾಜಕಾರಣವನ್ನಷ್ಟೇ ಹುಟ್ಟು ಹಾಕಬಲ್ಲದು! ವಿಶ್ವಾಸಮತ ಪಡೆದ ಆರು ತಿಂಗಳ ಕಾಲ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ, ನಿಜ; ಆದರೆ ಬಹುಮತವಿಲ್ಲದ ಸರ್ಕಾರವೊಂದು ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡುವುದು ಕೂಡ ಕಷ್ಟ! ಗುಜರಾತ್ ರಾಜ್ಯಸಭೆಯ ಒಂದು ಸೀಟಿಗಾಗಿ ಬಿಜೆಪಿ ತಯಾರಿಸಿದ ವಿಶೇಷ ಪಾಠಗಳು ಹಾಗೂ ಕಾಂಗ್ರೆಸ್ ಆಡಿದ್ದ ಹಳೆಯ ಆಟಗಳು ಇದೀಗ ಬಿಹಾರದಲ್ಲಿ ಹಾಗೂ ಎಲ್ಲೆಡೆ ಉಚಿತವಾಗಿ ಲಭ್ಯವಿವೆ ಹಾಗೂ ನಿರಂತರ ಪ್ರಯೋಗಕ್ಕೊಳಗಾಗಲಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT