ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವೇ ಗುರಿ : ಅಮಿತ್‌ ಷಾ

ಪಕ್ಷ ಸಂಘಟನೆಯತ್ತ ರಾಜ್ಯ ನಾಯಕರ ನಿರಾಸಕ್ತಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಕ್ರೋಶ
Last Updated 13 ಆಗಸ್ಟ್ 2017, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಜರಾತಿಗಿಂತ ಕರ್ನಾಟಕ ನಮಗೆ ಮುಖ್ಯ. ವಿಧಾನಸಭೆ ಚುನಾವಣೆ ಗೆದ್ದು, ಅಧಿಕಾರ ಹಿಡಿಯುವುದೇ ನಮ್ಮ ಗುರಿ. ಮತದಾನ ಮುಗಿಯುವವರೆಗೂ ರಾಜ್ಯದ ಮೇಲೆ ನಿರಂತರ ನಿಗಾ ಇಡಲಾಗುವುದು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆಯೇ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿದ ಅವರು, ‘ರಾಜ್ಯಕ್ಕೆ ತಿಂಗಳಿಗೊಮ್ಮೆ ತಪ್ಪದೆ ಭೇಟಿ ನೀಡುತ್ತೇನೆ. ಚುನಾವಣೆ ಮುಗಿಯುವವರೆಗೂ ಎಲ್ಲ ಹಂತದ ಉಸ್ತುವಾರಿಯನ್ನೂ ನಾನೇ ನೋಡಿಕೊಳ್ಳುತ್ತೇನೆ’ ಎಂದೂ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಮದುಮಗ ಇದ್ದಂತೆ. ಎಲ್ಲರಿಗೂ ಕೈಮುಗಿಯುತ್ತಾ ಓಡಾಡುವುದಷ್ಟೇ ಅವರ ಕೆಲಸ. ಮದುವೆಗೆ ಚಪ್ಪರ ಕಟ್ಟುವುದು, ಊಟದ ವ್ಯವಸ್ಥೆ , ಬಂದವರನ್ನು ಉಪಚರಿಸುವುದು ಮಿಕ್ಕವರ ಜವಾಬ್ದಾರಿ. ನಾನೇ ಮುಂದೆ ನಿಂತು ಎಲ್ಲ ಜವಾಬ್ದಾರಿ ನಿಭಾಯಿಸುತ್ತೇನೆ’ ಎಂದು ಷಾ ಖಚಿತಪಡಿಸಿದ್ದಾರೆ.

ಕಾರ್ಯವೈಖರಿಗೆ ಆಕ್ರೋಶ:‘ಚುನಾವಣೆಗೆ ಇನ್ನು ಒಂಬತ್ತು ತಿಂಗಳು ಇರುವಾಗ ಆಕ್ರಮಣಕಾರಿಯಾಗಿ ಇರಬೇಕಾದ ಪಕ್ಷ ಎನ್‌ಜಿಒ (ಸ್ವಯಂ ಸೇವಾ ಸಂಸ್ಥೆ) ರೀತಿ ಕೆಲಸ ಮಾಡುತ್ತಿದೆ. ರಾಜಕೀಯ ಪಕ್ಷದ ರೀತಿಯಲ್ಲಿ ರಾಜ್ಯ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಎದುರಾಳಿ ಪಕ್ಷದ ಮೇಲೆ ಮುಗಿಬಿದ್ದು ಹೋರಾಟ ನಡೆಸಬೇಕಾದ ನಾಯಕರು, ಪರಸ್ಪರರ ಮೇಲೆ ಕೆಸರು ಎರಚಿಕೊಳ್ಳುತ್ತಿರುವುದು ಸರಿಯಲ್ಲ. ಇವೆಲ್ಲವನ್ನೂ ಮರೆತು ಒಗ್ಗೂಡಿ ಹೋರಾಟ ನಡೆಸಿ. ನಿಮ್ಮ ನಡುವಿನ ಮನಸ್ತಾಪ ಪಕ್ಷದ ಗೆಲುವಿಗೆ ಅಡ್ಡಿಯಾಗಬಾರದು’ ಎಂದು ತಾಕೀತು ಮಾಡಿದ್ದಾರೆ.

‘ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಆಪ್ತರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ₹300 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಇರುವುದು ಪತ್ತೆಯಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಡಲು ಇದಕ್ಕಿಂತ ಅಮೂಲ್ಯ ಅವಕಾಶ ಬೇರೊಂದು ಬೇಕಿತ್ತೇ’ ಎಂದು ನಾಯಕರನ್ನು ಪ್ರಶ್ನಿಸಿದ ಷಾ, ‘ಹೀಗೆ ಸುಮ್ಮನೆ ಕುಳಿತಿರುವುದು ಸರಿಯಲ್ಲ. ಇನ್ನುಳಿದ ಅವಧಿಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಭಾರಿ ಹೋರಾಟ ನಡೆಸಬೇಕು’ ಎಂದು ಕಟ್ಟಪ್ಪಣೆ ವಿಧಿಸಿದ್ದಾರೆ.

‘ರಾಜ್ಯದಲ್ಲಿ ಪಕ್ಷದ ಗೆಲುವಿಗಾಗಿ ನಾನೇ ಮತಗಟ್ಟೆಗಳ ಹಂತಕ್ಕೆ ಬರಲಿದ್ದೇನೆ. ನಾಯಕರೆಲ್ಲ ಕಾರ್ಯಕರ್ತರಾಗಬೇಕು. ಪ್ರತಿಯೊಬ್ಬರೂ ಮತಗಟ್ಟೆ ಮಟ್ಟಕ್ಕೆ ಹೋಗಬೇಕು’ ಎಂದು ಹೇಳುವ ಮೂಲಕ ರಾಜ್ಯದ ಪ್ರಮುಖರು ಮತ್ತು ಕಾರ್ಯಕರ್ತರ ಮಧ್ಯೆ ಅಂತರ ಇರುವುದನ್ನು ಅವರು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

ಜಾತಿ ಆಧಾರಿತ ಸಂಘಟನೆ ಕೂಡದು: ‘ಜಾತಿ ಆಧಾರಿತ ಸಂಘಟನೆಯನ್ನು ಯಾರೂ ಮಾಡಕೂಡದು. ಪಕ್ಷದ ಸಿದ್ಧಾಂತ ಮತ್ತು ಕೇಂದ್ರ ಸರ್ಕಾರದ ಹತ್ತಾರು ಕಾರ್ಯಕ್ರಮಗಳನ್ನು ಆಧರಿಸಿ ಜನರ ಬಳಿಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಿ’ ಎಂದು ಕಿವಮಾತು ಹೇಳಿದ್ದಾಗಿ ಮೂಲಗಳು ಹೇಳಿವೆ.

ಕ್ರಿಯಾ ಯೋಜನೆ: ‘2018ರ ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಬೇಕು ಎಂಬ ಸಂಕಲ್ಪ ಇಟ್ಟುಕೊಂಡು ‍ಪ್ರತಿಯೊಬ್ಬ ಕಾರ್ಯಕರ್ತನಿಗೆ (ಸಂಸದರು, ಶಾಸಕರು ಸೇರಿ) ಕ್ರಿಯಾ ಯೋಜನೆ ನೀಡುತ್ತೇವೆ. ಅದನ್ನು ನಿಯಮಿತವಾಗಿ ಅನುಸರಿಸುತ್ತಿರುವ ಬಗ್ಗೆ  ಪ್ರತಿ ಹಂತದಲ್ಲೂ ಕಣ್ಗಾವಲು ಇಡುತ್ತೇವೆ’ ಎಂದೂ ಷಾ ಹೇಳಿದರು.

‘ಪ್ರತಿ ಮತಗಟ್ಟೆಗೆ 10 ಜನ ಸಮರ್ಥ ಕಾರ್ಯಕರ್ತರನ್ನು ನೇಮಿಸಬೇಕು. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ಕ್ರಿಯಾಶೀಲ ಉಸ್ತುವಾರಿ ಇರಬೇಕು. ತಿಂಗಳ ಅಂತ್ಯದೊಳಗೆ ಈ ನೇಮಕ ಆಗಬೇಕು. ಇದರ ವರದಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು’ ಎಂದು ಅವರು ಸೂಚಿಸಿದ್ದಾರೆ.

ಹಳೆ ಮೈಸೂರಿಗೆ ತಂತ್ರವೇನು?
‘ಹಳೆ ಮೈಸೂರು ಪ್ರಾಂತದಲ್ಲಿ 48 ವಿಧಾನಸಭೆ ಕ್ಷೇತ್ರಗಳಿದ್ದು, ಅಲ್ಲಿನ ಗೆಲುವಿಗೆ ಏನು ಕಾರ್ಯತಂತ್ರ ರೂಪಿಸಿದ್ದೀರಿ’ ಎಂದು ಷಾ ಇದೇ ಸಂದರ್ಭದಲ್ಲಿ ರಾಜ್ಯ ನಾಯಕರನ್ನು ಪ್ರಶ್ನಿಸಿದ್ದಾರೆ.

‘ಜೆಡಿಎಸ್‌, ಕಾಂಗ್ರೆಸ್‌ ಪ್ರಾಬಲ್ಯ ಇರುವ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮುಖ್ಯ. ಎದುರಾಳಿಗಳಿಬ್ಬರು ಒಟ್ಟಾಗಿ ಬಂದರೆ ಅವರನ್ನು ಹೇಗೆ ಎದುರಿಸುತ್ತೀರಿ ಎಂಬ ಬಗ್ಗೆ ಮುಂದಿನ ಬಾರಿ ಸ್ಪಷ್ಟ ಕಾರ್ಯ ಯೋಜನೆ ಕೊಡಿ’ ಎಂದು ಬಿಜೆಪಿ ಅಧ್ಯಕ್ಷರು ತಾಕೀತು ಮಾಡಿದ್ದಾರೆ.

ಆರ್‌ಎಸ್‌ಎಸ್‌ ನಾಯಕರ ಜತೆ ಸಭೆ ಇಂದು
ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ, ಚುನಾವಣೆ ಗೆಲುವಿನ ಕಾರ್ಯತಂತ್ರ ಹೆಣೆಯುವ ಕುರಿತು ಆರ್‌ಎಸ್‌ಎಸ್‌ ಪ್ರಮುಖರಿಂದಲೂ ಮಾಹಿತಿ ಸಂಗ್ರಹಿಸಲು ಅಮಿತ್‌ ಷಾ ಮುಂದಾಗಿದ್ದಾರೆ.

ಸಹ ಬೌದ್ಧಿಕ್‌ ಪ್ರಮುಖ್ ಸಿ.ಆರ್‌. ಮುಕುಂದ, ದಕ್ಷಿಣ ಪ್ರಾಂತ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ, ಪ್ರಾಂತ ಕಾರ್ಯವಾಹ ಬಿ.ವಿ. ಶ್ರೀಧರಸ್ವಾಮಿ, ಕ್ಷೇತ್ರೀಯ ಸಂಘ ಚಾಲಕ ನಾಗರಾಜ್‌, ಹಿರಿಯ ಮುಖಂಡ ಕೃ. ನರಹರಿ ಅವರ ಜತೆಗೆ ಸೋಮವಾರ ಬೆಳಿಗ್ಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಠಿ ಏಟು ತಿಂದಿದ್ದೀರಾ?
‘ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಜನ ಲಾಠಿ ಏಟು ತಿಂದಿದ್ದೀರಿ. ಎಷ್ಟು ಜನ ಅಶ್ರುವಾಯು ದಾಳಿಯಿಂದ ತಪ್ಪಿಸಿಕೊಂಡಿದ್ದೀರಿ’ ಎಂದು ಯುವ ಮೋರ್ಚಾ ಪ್ರಮುಖರನ್ನು ಲೇವಡಿ ಮಾಡುವ ರೀತಿಯಲ್ಲಿ ಪ್ರಶ್ನಿಸಿದ ಅಮಿತ್ ಷಾ, ರಾಜ್ಯ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿಯದ ಧೋರಣೆಗೆ ಚಾಟಿ ಬೀಸಿದರು.

‘ಯುವ ಮೋರ್ಚಾ ಏನು ಮಾಡುತ್ತಿದೆ. ಅದರ ಕೆಲಸಕಾರ್ಯ ಕಣ್ಣಿಗೆ  ಕಾಣುತ್ತಿಲ್ಲವಲ್ಲ’ ಎಂದು ಷಾ ಪ್ರಶ್ನಿಸಿದರು. ‘ಅನೇಕ ಸಭೆ ನಡೆಸಿ, ಸಾಮಾಜಿಕ ಜಾಲ ತಾಣವನ್ನು ಸಕ್ರಿಯವಾಗಿ ಬಳಸಿಕೊಂಡಿದ್ದೇವೆ’ ಎಂದು ಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ ವಿವರಿಸಿದರು.

‘ಯುವಮೋರ್ಚಾ ಹೋರಾಟಕ್ಕೆ ಇಳಿದರೆ ಇಡೀ ವ್ಯವಸ್ಥೆಯೇ ಬದಲಾವಣೆ ಆಗಬೇಕು’ ಎಂದು ಕಟುವಾಗಿ ಪ್ರಶ್ನಿಸಿದರು.

‘ನೀವು ಸಂಸದ ತಾನೆ? ನೀವಿನ್ನೂ ಹೆಚ್ಚಿನ ಕೆಲಸ ಮಾಡಬೇಕು. 15 ದಿನದಲ್ಲಿ ಏನು ಮಾಡುತ್ತೀರಿ ನೋಡುತ್ತೇನೆ’ ಎಂದು ಷಾ, ಪ್ರತಾಪ ಸಿಂಹ ಅವರನ್ನು ಉದ್ದೇಶಿಸಿ ಹೇಳಿದರು.

ಷಾ ಕಾರ್ಯವೈಖರಿಗೆ ದಂಗು
ಬೆರಳ ತುದಿಯಲ್ಲಿ ಮಾಹಿತಿ ಇಟ್ಟುಕೊಂಡು, ಪಟಪಟನೆ ಮಾತನಾಡುತ್ತಾ, ಎಲ್ಲ ಆಯಾಮಗಳಿಂದಲೂ ಪ್ರಶ್ನೆ ಕೇಳುತ್ತಿದ್ದ ಅಮಿತ್‌ ಷಾ ಅವರ ಕಾರ್ಯವೈಖರಿ ನೋಡಿ ಶಾಸಕರು, ಪ್ರಮುಖರು ದಂಗಾಗಿದ್ದಾರೆ.

‘ಯಾರ ಮಾತನ್ನೂ ಕೇಳಿಸಿಕೊಳ್ಳುವ ರೀತಿ ಅವರು ಇಲ್ಲ. ಆಕ್ರಮಣಕಾರಿ ಆಗಿ ಮಾತನಾಡುತ್ತಾರೆ. ಯಾವುದಾದರೂ ಒಂದು ಸಮರ್ಥನೆ ನೀಡಿದರೆ ಹತ್ತು ದಿಕ್ಕಿನಿಂದ ಪ್ರಶ್ನೆ ಎಸೆದು ನಮ್ಮನ್ನೇ ಇಕ್ಕಟ್ಟಿಗೆ ಸಿಕ್ಕಿಸುತ್ತಾರೆ. ಹಾಗಾಗಿ ಎಲ್ಲರೂ ಏನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ’ ಎಂದು ಶಾಸಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT