ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥವರೂ ದೇಶದಲ್ಲಿ ಇದ್ದಾರೆ

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ, ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತನ್ನ ಸ್ನೇಹಿತರ ಮುಂದೆ, ಖಾಸಗಿ ಮಾತಿನಲ್ಲಿ, ‘ನನಗೆ ದೊಡ್ಡ ಮೊತ್ತದ ಪೆನ್ಶನ್ ಬರುತ್ತದೆ. ಇಷ್ಟು ದೊಡ್ಡ ಮೊತ್ತದ ಅಗತ್ಯ ನನಗೆ ಇಲ್ಲ. ನನ್ನ ಮಕ್ಕಳೂ ಕೂಡ ತಿಂಗಳಿಗೆ ಲಕ್ಷಕ್ಕೂ ಮಿಕ್ಕಿ ಸಂಪಾದಿಸುವ ಉದ್ಯೋಗದಲ್ಲಿದ್ದಾರೆ. ಅವರು ತಮ್ಮ ಸಂಪಾದನೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಯಿಸುವುದು ಅವರಿಗೆ ದೈನಂದಿನ ವ್ಯವಹಾರದಂತೆ ಸ್ವಾಭಾವಿಕವೇ ಆಗಿದೆ. ಅವರ ಬಳಿ ಸ್ವಂತ ಮನೆ, ಕಾರು ಮುಂತಾದ್ದು ಇವೆ. ಅವರಿಗೆ ನನ್ನ ಹಣ ಬೇಡ. ನನಗೆ ಎರಡು ಫ್ಲಾಟು, ಎರಡು ಕಾರು ಇತ್ಯಾದಿ ಕೊಂಡುಕೊಂಡು ಹಣವನ್ನು ದುರ್ವ್ಯಯ ಮಾಡುವ ಮನಸ್ಸು ಇಲ್ಲ. ಕೆಲವು ಹಣವಂತರು ಸಜ್ಜನ ದುರ್ಜನ ಎಂದು ನೋಡದೆ ಹಣ ದಾನ ಮಾಡುತ್ತಾರೆ. ನನಗೆ ಹಾಗೆ ದಾನ ಮಾಡುವ ಮನಸ್ಸು ಕೂಡ ಇಲ್ಲ’ ಎಂದರು.

ಮಾತು ಮುಂದುವರಿಸುತ್ತಾ ‘ಈಗ ನನಗಿರುವುದು ಎಂಥ ಸಮಸ್ಯೆ ಎಂದರೆ, ಇದು ಸಮಸ್ಯೆ ಹೌದೇ ಅಲ್ಲವೇ ಎಂದು ತೀರ್ಮಾನಿಸಲು ನನ್ನಿಂದ ಆಗುತ್ತಿಲ್ಲ. ನನಗೆ ಬರುವ ಹಣದಲ್ಲಿ ಹತ್ತನೇ ಒಂದಂಶದಷ್ಟು ಕೂಡ ಖರ್ಚು ಮಾಡುವ ಅಗತ್ಯ ನನಗಿಲ್ಲ. ಬ್ಯಾಂಕಿನಲ್ಲಿ ಕೂಡ ನಾನು ನನ್ನ ಅಧಿಕಾರಾವಧಿಯಲ್ಲಿ ಪಡೆದ ಸಂಬಳದಲ್ಲಿ ಉಳಿಸಿದ ಹಣ ಕೂಡ ಸಾಕಷ್ಟಿದೆ. ಅನ್ಯಾಯವಾಗಿ ನಾನು ಒಂದು ಕಾಸು ಕೂಡ ಗಳಿಸಿಲ್ಲ. ನನ್ನಲ್ಲಿ ಈಗಲೇ ಇರುವ ಹಣ ಮತ್ತು ನನಗೆ ತಿಂಗಳು ತಿಂಗಳು ಬರುತ್ತಿರುವ ಪೆನ್ಶನ್ ಎಲ್ಲಾ ಸೇರಿ ಹಣದ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ. ಇಷ್ಟು ಹಣವನ್ನು ಏನು ಮಾಡಬೇಕು ಅಂತ ನನಗೆ ತಿಳಿಯುತ್ತಿಲ್ಲ’ ಎಂದು ಹೇಳಿಕೊಂಡರು.

ದೊಡ್ಡ ಸಂಬಳದ ದೊಡ್ಡ ಅಧಿಕಾರದಲ್ಲಿರುವವರು, ದೊಡ್ಡ ಪಗಾರ ಪಡೆಯುವ ಸಂಸದರು, ಸಚಿವರು, ನ್ಯಾಯಾಧೀಶರು, ವಕೀಲರು ಮುಂತಾದವರಲ್ಲಿ ಹಲವರು ದುರ್ಮಾರ್ಗದಿಂದ ಕೂಡ ಹಣ ಕೂಡಿಹಾಕಿಕೊಂಡವರಿರುತ್ತಾರೆ, ನಿಜ. ಅದು ಒಂದು ರಾಷ್ಟ್ರೀಯ ಮಟ್ಟದ ಸಾಮಾಜಿಕ ಸಮಸ್ಯೆ ಮತ್ತು ಅದೊಂದು ದೈತ್ಯ ಸಮಸ್ಯೆ. ಆ ಸಮಸ್ಯೆಗೆ ಪರಿಹಾರವನ್ನು ದೇಶವೇ ಕಂಡುಹಿಡಿಯಬೇಕು.

ನ್ಯಾಯವಾಗಿ ಪಡೆದ ಸಂಬಳ ಮತ್ತಿತರ ಕೆಲಸಗಳ ಮೂಲಕ ದೊಡ್ಡ ಮೊತ್ತದ ಹಣ ಗಳಿಸಿದ ಮತ್ತು ಗಳಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು, ಸಂಸದರು ಇದ್ದಾರೆ. ಅವರಿಗೆ ಕೂಡ ಹಣ ಹೇಗೆ ಖರ್ಚು ಮಾಡುವುದು ಎಂಬ ಈ ಸಮಸ್ಯೆಯಲ್ಲದ ಸಮಸ್ಯೆ ಕಾಡುತ್ತಿರಬಹುದು. ತಾವು ಸಂಬಳದ ರೂಪದಲ್ಲಿ ಪಡೆಯುವ ಹಣ ಬರುವುದು ಸಮಾಜದಿಂದ ಮತ್ತು ಜನರ ದುಡಿಮೆಯಿಂದ ಎಂಬ ಅರಿವು ಈ ವರ್ಗದ ಅನೇಕ ಮಂದಿಯ ಪ್ರಜ್ಞೆಯಲ್ಲಿ ಇಲ್ಲದಿರುವುದು ಅಚ್ಚರಿಯ ವಿಷಯ. ಈ ಹಣ ತಮ್ಮ ಕೆಲಸಗಳ ಮೂಲಕ ಸಮಾಜದ ಸೇವೆಗಾಗಿಯೇ ವಿನಿಯೋಗವಾಗುತ್ತಿದೆ ಎಂಬ ವಿಚಾರ ಕೂಡ ಇವರ ಪ್ರಜ್ಞೆಯಲ್ಲಿ ಇಲ್ಲದಿರುವುದು ಇನ್ನೂ ಅಚ್ಚರಿಯ ವಿಚಾರ.

ಮತ್ತೂ ಒಂದು ಅಚ್ಚರಿಯ ವಿಷಯವೆಂದರೆ ಉಪಯೋಗಕ್ಕಿಲ್ಲದ ಹಣವನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿರುವವರ ಮನಸ್ಸಿನಲ್ಲಿ ‘ಯಾರಿಗಾದರೂ ಸಹಾಯ ಮಾಡೋಣ, ಏನಾದರೂ ಜನೋಪಯೋಗಿ ಕಾರ್ಯಕ್ಕೆ ಬಳಸೋಣ’ ಎಂಬ ಯೋಚನೆ ಹುಟ್ಟದಿರುವುದು. ಹಣದ ಮುಗ್ಗಟ್ಟಿನಲ್ಲಿರುವ ಅಗತ್ಯವಿರುವ ತೀರಾ ಹತ್ತಿರದ ಬಂಧುವಿಗೆ ನೀಡೋಣ ಎಂಬ ಯೋಚನೆ ಸಹ ಉಂಟಾಗದಿರುವುದು. ಕಾಯಿಲೆಗೆ ತುತ್ತಾಗಿ ನರಳುವ ನೆರೆಮನೆಯ ಬಡವನಿಗೆ ನೀಡುವ ಮನಸ್ಸು ಇಲ್ಲದಿರುವುದು. ಶುಲ್ಕ ಕಟ್ಟಲು ಹಣವಿಲ್ಲದೆ, ಮನೆಯಲ್ಲಿ ಕುಳಿತು ಅಳುತ್ತಿರುವ, ಸರ್ಕಾರಿ ಶಾಲೆಯಲ್ಲಿ ಓದುವ ಹುಡುಗನಿಗೋ ಹುಡುಗಿಗೋ ನೀಡುವ ಮನಸ್ಸು ಇಲ್ಲದಿರುವುದು. ಹಣವೆಂಬ ಸಾಧನ ಮನುಷ್ಯನ ಸಂವೇದನಾಶೀಲತೆಯನ್ನು ಕುಂಠಿತಗೊಳಿಸುತ್ತಿರಬಹುದೇ ಎಂಬ ಸಂದೇಹ ಒಬ್ಬ ಪ್ರಜ್ಞಾವಂತನಲ್ಲಿ ಉಂಟಾಗದೆ?

ಸತ್ಕೃತ್ಯಕ್ಕಾಗಿ ಹಣವನ್ನು ಬಳಸಲು ಹತ್ತು ಹಲವು ದಾರಿಗಳಿವೆ. ಹಣ ಗುಡ್ಡೆ ಹಾಕಿ, ಇದನ್ನು ಏನು ಮಾಡುವುದು ಎಂದು ಕೊರಗುವ ಬದಲು ಅದನ್ನು ಸನ್ಮಾರ್ಗದಲ್ಲಿ ವ್ಯಯಿಸಿ ಸಂತೋಷವಾಗಿ ಜೀವಿಸಬಹುದು. ಸರಳವಾಗಿ ಜೀವಿಸಲು ಸಾಧ್ಯವಾದರೆ ಅದೇ ಭೂಮಿಯ ಮೇಲಿನ ಸ್ವರ್ಗವಾಗುತ್ತದೆ.

ದುಬಾರಿ ಸಂಬಳ ಪಡೆಯುವ ಅಧಿಕಾರಿಗಳೂ ಸೇರಿದಂತೆ, ಸರ್ಕಾರ ಅರ್ಥಾತ್ ಆಡಳಿತ ನಡೆಸುವ ‘ದೇವರ ಸೇವೆಯೆಂಬ ಸರ್ಕಾರದ ಸೇವೆ’ ಮಾಡುವ ಒಂದು ದೊಡ್ಡ ಸಮೂಹಕ್ಕೆ ಬದುಕಿಗೆ ಅಗತ್ಯವಿಲ್ಲದಷ್ಟು ದೊಡ್ಡ ಪಗಾರವನ್ನು ನೀಡುವುದಾದರೂ ಯಾಕೆ? ಹಣದ ಅಗತ್ಯವಿರುವ ಕಡು ಬಡವರನ್ನು ಕಡೆಗಣಿಸಿ ಉಳ್ಳವರ ಮಡಿಲಿಗೆ ಮತ್ತಷ್ಟು ಇನ್ನಷ್ಟು ಸುರಿಯುವುದರಿಂದ ಪರೋಕ್ಷವಾಗಿ ಬಡ ಜನರಿಗೆ ಅನ್ಯಾಯವಾಗುತ್ತದೆ ಎಂಬ ಅರಿವು ಸರ್ಕಾರಕ್ಕೆ ಇಲ್ಲವೇ?

ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವುದು, ಸರ್ಕಾರದ ಅವಜ್ಞೆಯಿಂದ ಅಲ್ಲವೇ? ಹೇಗಿರಬೇಕೋ ಹಾಗಿರದ ಆಸ್ಪತ್ರೆಗಳು, ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳು, ಸರ್ಕಾರಕ್ಕೆ ಕಾಣಿಸುವುದಿಲ್ಲವೇ? ಜನರಿಂದ ಬಂದ ಹಣವನ್ನು ಜನರಿಗಾಗಿ ಎಲ್ಲಿ ವ್ಯಯಿಸಬೇಕು, ಹೇಗೆ ವ್ಯಯಿಸಬೇಕು ಎಂದು ಸರ್ಕಾರಕ್ಕೆ ತಿಳಿದಿಲ್ಲವೇ?

ಹಸಿದವನಿಗೆ ಅನ್ನ ಹಾಕುವ ಬದಲು ಹೊಟ್ಟೆ ಬಿರಿಯುವಂತೆ ಉಂಡವನಿಗೆ ಮತ್ತೂ ಉಣಿಸುವಂತೆ ಸರ್ಕಾರ ಹಣವನ್ನು ಉಳ್ಳವರ ಮಡಿಲಿಗೆ ಇನ್ನಷ್ಟು ಮತ್ತಷ್ಟು ಸುರಿಯುವುದನ್ನು ಸಮಾಜ ನೋಡುತ್ತಾ ಇರುತ್ತದೆ. ಪ್ರಜಾಸತ್ತೆ ಒಂದಿಷ್ಟು ಮಂದಿಗೆ ದೇವಲೋಕವಾಗಿರುವುದು, ಒಂದಷ್ಟು ಮಂದಿಗೆ ನರಕಲೋಕವಾಗಿರುವುದು ಸಮಾಜಕ್ಕೆ ಸ್ಪಷ್ಟವಾಗಿ ಕಾಣಿಸುತ್ತದೆ.

ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದಲ್ಲಿ ಬಂಡವಾಳಶಾಹಿ, ನೌಕರಶಾಹಿ ಆಡಳಿತ ನಡೆಯುವುದು ಕೂಡ ಸಮಾಜಕ್ಕೆ ಗೊತ್ತಿದೆ. ದೇಶವನ್ನು ಅರ್ಥಾತ್ ಸರ್ಕಾರವನ್ನು ಹೇಗೆ ಸರಿದಾರಿಯಲ್ಲಿ ನಡೆಸಬಹುದು ಎಂದು ತಿಳಿದಿರುವ ಬುದ್ಧಿವಂತರು, ಪ್ರಜ್ಞಾವಂತರು ಸಮಾಜದಲ್ಲಿ ಇದ್ದಾರೆ. ಆದರೆ ಯಾರ ಕೈಯಲ್ಲಿಯೂ ಶಕ್ತಿ ಇಲ್ಲ. ಬುದ್ಧಿವಂತರ ಕೈಯಲ್ಲಿಯೂ ಅಜ್ಞಾನಿಗಳ ಕೈಯಲ್ಲಿಯೂ ವೋಟು ಎಂಬ ಒಂದೇ ಒಂದು ಅಸ್ತ್ರ ಇದೆ. ಅದನ್ನು ಶಕ್ತಿವಂತರೂ ಬಳಸಬಹುದು, ಶಕ್ತಿಹೀನರೂ ಬಳಸಬಹುದು. ಆದರೆ ಆ ಅಸ್ತ್ರವನ್ನು ಹೇಗೆ ಉಪಯೋಗಿಸಬೇಕು ಎಂಬ ಜ್ಞಾನ ಶಕ್ತರಲ್ಲಿಯೂ ಇಲ್ಲ. ಶಕ್ತಿಹೀನರಲ್ಲಿಯೂ ಇಲ್ಲ. ಎಲ್ಲಿದೆ ಪ್ರಜಾಪ್ರಭುತ್ವ? ಪ್ರಜಾಪ್ರಭುತ್ವ ಎಂದರೆ ಇದೇ ಏನು ಎಂಬ ಪ್ರಶ್ನೆಯನ್ನು ದೇಶವಿಡೀ ಕೇಳುತ್ತಿದೆ; ಉತ್ತರ ಯಾರಲ್ಲಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT