ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವೇ ಬೆದರಿದಾಗ...

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಈ ಸಾರಿಯೂ ಕೃಷಿಗೆ ನೀರು ಕೊಡುವುದಿಲ್ಲ’ ಎಂದು ಸರ್ಕಾರ ಘೋಷಿಸುವ ಸಮಯದಲ್ಲಿ ಮಂಡ್ಯ ಜಿಲ್ಲೆ ಗೂಳೂರುದೊಡ್ಡಿ ರೈತ ಸಿ.ಪಿ. ಕೃಷ್ಣ ಅವರ ಗದ್ದೆಯಲ್ಲಿ ಕೊರಲೆ ಕೊಯ್ಲಿಗೆ ಸಿದ್ಧತೆ ನಡೆದಿತ್ತು. ಕಾಲುವೆಯಲ್ಲಿ ನೀರು ಹರಿಯದೇ ಹೋದರೆ ಗದ್ದೆಯಲ್ಲಿ ಪೈರು ನಾಟಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ದಿನ ದೂಡುತ್ತಿರುವಾಗ ಕೃಷ್ಣ ಅವರದು ಕೊರಲೆಯನ್ನು ಅಕ್ಕಿ ಮಾಡಿಸಿ, ಮಾರುಕಟ್ಟೆಗೆ ಕಳಿಸುವ ಗಡಿಬಿಡಿ. ಅಂದಹಾಗೆ, ಇದು ಅವರು ಈ ವರ್ಷ ತೆಗೆದ ಮೂರನೇ ಬೆಳೆ! ಹುಡುಕಿದರೆ ಇನ್ನಷ್ಟು ಇಂಥ ರೈತರು ಸಿಕ್ಕಾರು.

***

ಕಳೆದ ತಿಂಗಳು ಸೊರಬ-ಸಾಗರ ಭಾಗದಲ್ಲಿ ಸುತ್ತಾಡುವಾಗ ಒಂದಷ್ಟು ಮಹಿಳೆಯರು ಮಟಮಟ ಮಧ್ಯಾಹ್ನ ಊರ ಕಡೆಗೆ ಹೊರಟಿದ್ದರು. ಧೋ ಎಂದು ಮಸಲಧಾರೆ ಸುರಿಯಬೇಕಿದ್ದ ಅವಧಿಯಲ್ಲಿ ಬಿಸಿಲಿನ ಝಳ ಅವರನ್ನು ಹೈರಾಣು ಮಾಡಿತ್ತು. ‘ಬೆಳಿಗ್ಗೆ ಬೇಗನೇ ಬಂದು ಕಳೆ ತೆಗೆದು ವಾಪಸು ಮನೆಗೆ ಹೊರಟಿದ್ದೇವೆ. ಬಾವಿಯಲ್ಲಿ ನೀರಿಲ್ಲ. ಕಳೆ ತೆಗೆದ ಬಳಿಕ ಕೈ ತೊಳೆಯಲೂ ಬೊಗಸೆ ನೀರು ಸಿಗುತ್ತಿಲ್ಲ’ ಎಂಬ ಅಸಹಾಯಕ ನುಡಿ ಶಾರದಾ ಅವರದು. ಮಲೆನಾಡು ಸ್ಥಿತಿಯೇ ಹೀಗಿರುವಾಗ ಉಳಿದ ಭಾಗದ ಮಾತೇನು?

***

ಬಿತ್ತನೆಗೆ ಬೀಜ-ಗೊಬ್ಬರ ಖರೀದಿಸಿ ಸಿದ್ಧತೆ ನಡೆಸಿದ್ದ ರೈತರೆಲ್ಲ ಸ್ತಬ್ಧರಾಗಿದ್ದಾರೆ. ಮಳೆ ಇಲ್ಲ. ಅಣೆಕಟ್ಟುಗಳಲ್ಲಿ ನೀರಿಲ್ಲ. ಅರ್ಧಂಬರ್ಧ ತುಂಬಿಕೊಂಡಿದ್ದರೂ ಕೃಷಿಗೆ ಸರ್ಕಾರ ಕೊಡುತ್ತಿಲ್ಲ. ನಾಲ್ಕನೇ ವರ್ಷಕ್ಕೆ ಬರಗಾಲ ಕಾಲಿಟ್ಟಿದೆ. ಕಬ್ಬು, ಭತ್ತ ಒಂದೆಡೆ ಇರಲಿ; ಕಡಿಮೆ ನೀರು ಬಯಸುವ ವಾಣಿಜ್ಯ ಬೆಳೆಗಳೂ ಹೊಲದಲ್ಲಿ ಕಾಣುತ್ತಿಲ್ಲ!

(ಕಾಲುವೆಗೆ ನೀರು ಹರಿಯದೇ ಇದ್ದರೂ ಚಿಂತಿಸದ ಸಿ.ಪಿ.ಕೃಷ್ಣ, ಗದ್ದೆಯಲ್ಲಿನ ತೇವಾಂಶವನ್ನಷ್ಟೇ ಬಳಸಿಕೊಂಡು ಸಿರಿಧಾನ್ಯ ಬೆಳೆಯುತ್ತಿದ್ದಾರೆ)

ಹಾಗೆಂದು ಇದೇನೂ ಈಗ ಧುತ್ತನೇ ಎದುರಾದ ಬಿಕ್ಕಟ್ಟು ಅಲ್ಲ. ಕಳೆದ ದಶಕದಲ್ಲಿ ಒಂದಷ್ಟು ಸಲ ಮಳೆ ಏರುಪೇರು ಆದಾಗ ಜಲತಜ್ಞರು ಮುನ್ನೆಚ್ಚರಿಕೆ ನೀಡಿದ್ದರು. ‘ಉಚಿತ ವಿದ್ಯುತ್ ಸಿಗುತ್ತಿದೆ. ಅಂತರ್ಜಲ ಸುಲಭವಾಗಿ ಸಿಗುತ್ತಿದೆ. ಇವೆರಡೇ ಅಂಶಗಳು ಸಾಕು- ಕರ್ನಾಟಕವನ್ನು ಮರುಭೂಮಿಯನ್ನಾಗಿ ಮಾಡಲು’ ಎಂದು ಜಲತಜ್ಞ ಎನ್. ದೇವರಾಜ ರೆಡ್ಡಿ ಅವತ್ತು ಹೇಳಿದ್ದು ಈಗ ನಿಜವಾಗುತ್ತಿದೆ. ಈ ಅಪಾಯವನ್ನು ಗ್ರಹಿಸಿ ಒಂದಷ್ಟು ಸಾವಯವ ಕೃಷಿಕರು, ರೈತಪರ ಸಂಘಟನೆಗಳು ಜಲ ಸಮೃದ್ಧಿ ಕಾಪಿಡುವ ಯತ್ನಕ್ಕೆ ಮುಂದಾಗಿದ್ದೂ ಉಲ್ಲೇಖಾರ್ಹ. ಜಗತ್ತನ್ನು ಈಗ ಕಾಡುತ್ತಿರುವ ‘ಹವಾಮಾನ ಬದಲಾವಣೆ’ ಬಿಕ್ಕಟ್ಟು ಆಗಿನ್ನೂ ಅಪರಿಚಿತ ಪದ! ಹಾಗಿದ್ದೂ ಆ ಕುರಿತ ಒಂದಷ್ಟು ಪ್ರಯತ್ನಗಳು ನಡೆದಿದ್ದವು.

ಸೊರಬ ಭಾಗದಲ್ಲಿ ಭತ್ತವನ್ನು ಕೇಂದ್ರವಾಗಿಟ್ಟು ಕೊಂಡು, ಅದರ ಸುತ್ತ ಕೃಷಿ ಸಂಸ್ಕೃತಿ ರೂಪಿಸುವ ಯತ್ನವನ್ನು ಸಹಜ ಸಮೃದ್ಧ ಬಳಗವು ಮೂರು ವರ್ಷಗಳ ಹಿಂದೆ ಕೈಗೆತ್ತಿಕೊಂಡಿತ್ತು. ಮೂವತ್ತು ವರ್ಷಗಳ ಮಳೆಯ ಪ್ರಮಾಣವನ್ನು ಪಡೆದು, ವಿಶ್ಲೇಷಣೆ ಮಾಡಿ ಭತ್ತದ ಬೇಸಾಯ ವಿಧಾನವನ್ನು ಸಿದ್ಧಪಡಿಸಲಾಗಿತ್ತು. ಗದ್ದೆಯ ಇಳಿಭಾಗದಲ್ಲಿ ಕೃಷಿಹೊಂಡ ನಿರ್ಮಿಸಿ ಮೀನು ಸಾಕಣೆ, ಅದರ ಬದುವಿನಲ್ಲಿ ತರಕಾರಿ ಬೆಳೆಯುವುದು ಹಾಗೂ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ದೇಸಿ ಭತ್ತದ ತಳಿಗೆ ಉತ್ತೇಜನ ಕೊಡುವುದು ಹಾಗೂ ಒಣಭೂಮಿ ಬಿತ್ತನೆ ಮತ್ತೆ ತರುವುದು ಈ ಯೋಜನೆಯ ಉದ್ದೇಶವಾಗಿತ್ತು. ಒಂದು ವೇಳೆ ವಾತಾವರಣ ವೈಪರೀತ್ಯದಿಂದ ಭತ್ತ ಹಾಳಾದರೂ ಇತರ ತರಕಾರಿ ಹಾಗೂ ದ್ವಿದಳ ಧಾನ್ಯ ಪರ್ಯಾಯ ಆದಾಯ ತಂದುಕೊಡುತ್ತದೆ. ‘ಅಂದವಳ್ಳಿ ಗ್ರಾಮದಲ್ಲಿ ಒಂದಷ್ಟು ರೈತರು ಈ ಪ್ರಯೋಗ ಮಾಡಿ ಗೆದ್ದರು. ಹವಾಮಾನ ಬದಲಾವಣೆಗೆ ಇದೊಂದು ಸ್ಥಳೀಯ ಮಟ್ಟದ ಪರಿಹಾರವಾಗಿತ್ತು’ ಎಂದು ಸಂಸ್ಥೆಯ ಸಂಯೋಜಕ ಸಿ. ಶಾಂತಕುಮಾರ್ ನೆನಪಿಸಿಕೊಳ್ಳುತ್ತಾರೆ.

‘ಶ್ರೀ’ ಬೆಳಕು! ಕಳೆದ ದಶಕದಲ್ಲಿ ಪ್ರಚಾರಕ್ಕೆ ಬಂದ ವಿಧಾನ ‘ಶ್ರೀ’ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್) ಪದ್ಧತಿ. ಕೆಸರುಗದ್ದೆಯಲ್ಲಿ ಭತ್ತ ಬೆಳೆಯುವ ಬದಲಿಗೆ ಅಗತ್ಯವಿದ್ದಷ್ಟೇ ನೀರು ಕೊಟ್ಟು, ಪೈರುಗಳ ಮಧ್ಯೆ ಅಂತರ ಕಾಯ್ದುಕೊಂಡು ಹೆಚ್ಚು ಇಳುವರಿ ಪಡೆಯುವ ಆ ವಿಧಾನವನ್ನು ಖ್ಯಾತ ಸಾವಯವ ಕೃಷಿಕ ನಾರಾಯಣರೆಡ್ಡಿ ಅಳವಡಿಸಿಕೊಂಡಿದ್ದರು. ಅಲ್ಲಿಯವರೆಗೆ ಸುಮ್ಮನಿದ್ದ ಕೃಷಿ ವಿಶ್ವವಿದ್ಯಾಲಯಗಳು ದಿಢೀರನೇ ನಿದ್ದೆಯಿಂದ ಎಚ್ಚೆತ್ತು, ಆ ವಿಧಾನವನ್ನು ‘ಏರೋಬಿಕ್ ವಿಧಾನ’ ಎಂದು ಪರಿಚಯಿಸಲು ಮುಂದಾದವು. ಸ್ವಲ್ಪ ವರ್ಷಗಳ ನಂತರ ಅದು ಎಲ್ಲೋ ಇತರ ಯೋಜನೆ, ಕಡತಗಳ ಮಧ್ಯೆ ಕಾಣೆಯಾಗಿ ಹೋಯಿತು!

ಆದರೂ ಒಂದಷ್ಟು ವರ್ಷ ಆಸಕ್ತ ಹಿರಿಯ ಅಧಿಕಾರಿಗಳ ಒತ್ತಾಸೆಯಿಂದ ‘ಏರೋಬಿಕ್ ಪದ್ಧತಿ’ ರೈತರ ಹೊಲದಲ್ಲಿತ್ತು. ಮುಂದಿನ ಹಂತದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಆಲಸ್ಯ ತೋರದೇ ಹೋಗಿದ್ದರೆ ‘ಭತ್ತ ಬೆಳೆಯಬೇಡಿ’ ಎಂದು ಹೇಳುವ ಮೂಲಕ ನಗೆಪಾಟಲಿಗೆ ಈಡಾಗುವ ಪ್ರಮೇಯವೇ ಬರುತ್ತಿರಲಿಲ್ಲ.

(ಸಿರಿಧಾನ್ಯ ಬೆಳೆದು ಗೆಲುವಿನ ನಗೆ ಬೀರಿದ ಈಶ್ವರಗೌಡ ಪಾಟೀಲ)

ಭತ್ತದ ನಾಡು ಭಣಭಣ: ಕನ್ನಂಬಾಡಿಯಲ್ಲಿ ನೀರಿಲ್ಲ. ಮಂಡ್ಯದ ರೈತರಿಗೆ ನೀರು ಸಿಗುತ್ತಿಲ್ಲ. ಭತ್ತದ ನಾಡು ಭಣಗುಡುತ್ತಿದೆ. ಇದಕ್ಕೆ ವ್ಯತಿರಿಕ್ತ ನೋಟ ಕೃಷ್ಣ ಅವರ ಗದ್ದೆಯಲ್ಲಿ ಕಾಣುತ್ತಿದೆ. ಗೂಳೂರುದೊಡ್ಡಿಯ ಕೃಷ್ಣ ಕಳೆದ ವರ್ಷ ಭತ್ತದ ಗದ್ದೆಯಲ್ಲಿ ಸಿಕ್ಕಷ್ಟೇ ತೇವಾಂಶದಿಂದ ಮೊದಲಿಗೆ ಸಿರಿಧಾನ್ಯ ಬೆಳೆದರು. ಅಲ್ಲಿ ಸಿಕ್ಕ ಯಶಸ್ಸು ಅವರನ್ನು ಮತ್ತಷ್ಟು ಮುಂದೆ ಸಾಗುವಂತೆ ಮಾಡಿತು. ಈ ಸಲ ಬೇಸಿಗೆಯಲ್ಲಿಯೂ ಕೊರಲೆ ಬೆಳೆದಿದ್ದಾರೆ.

‘ಅಣೆಕಟ್ಟೆಯಿಂದ ನೀರು ಬಿಟ್ಟಿಲ್ಲ ಎಂಬ ಚಿಂತೆ ನಮಗಿಲ್ಲ. ಆಗಾಗ ತೇವ ಆರದಂತೆ ಮಳೆಯಾದರೆ ಸಾಕು’ ಎನ್ನುತ್ತಾರೆ ಕೃಷ್ಣ. ಈ ಸಾಲಿಗೆ ಶಿವಳ್ಳಿಯ ಬೋರೇಗೌಡ, ಸೋಮಶೇಖರ ಕೂಡ ಸೇರುತ್ತಾರೆ. ಕೆಸರುಗದ್ದೆಗಳಲ್ಲಿ ಭತ್ತದ ತೆನೆಗಳು ತೊಯ್ದಾಡುವ ದೃಶ್ಯದ ಬದಲಿಗೆ ಸಿರಿಧಾನ್ಯಗಳು ಅರಳಿನಿಂತಿವೆ. ಮಂಡ್ಯ ಆರ್ಗಾನಿಕ್ಸ್ ಹಾಗೂ ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘದ ಪ್ರಯತ್ನದಿಂದಾಗಿ ಐನೂರಕ್ಕೂ ಹೆಚ್ಚು ರೈತರು ಸಿರಿಧಾನ್ಯ ಬೆಳೆಯುವ ಮೂಲಕ ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಂಡಿದ್ದಾರೆ.

ಇದು ಕನ್ನಂಬಾಡಿಗೆ ಮಾತ್ರ ಸೀಮಿತವಾಗಿಲ್ಲ. ವಿವೇಚನೆ ಯಿಲ್ಲದೇ ನೀರು ಬಳಸುತ್ತಿದ್ದ ತುಂಗಭದ್ರಾ ಕಾಲುವೆಗಳ ವ್ಯಾಪ್ತಿಯ ರೈತರಿಗೆ ಈಗ ತತ್ವಾರದ ಕಾಲ. ನರ್ಸರಿ ಹಾಗೂ ಗದ್ದೆಗೆ ಯಥೇಚ್ಛ ನೀರು ಇಲ್ಲದ ಪರಿಣಾಮವಾಗಿ, ಈ ಸಲ ಅಲ್ಲಿ ಮೊದಲ ಬಾರಿಗೆ ಕೂರಿಗೆ ಬಿತ್ತನೆ ನಡೆಯುತ್ತಿದೆ (ಈ ವಿಧಾನದಲ್ಲಿ ನೀರಿನ ಬಳಕೆ ಕಡಿಮೆ).

ಬಸವಳಿದ ಬಿಟಿ ಹತ್ತಿ: ಧಾರವಾಡ, ಖಾನಾಪುರ ಭತ್ತಕ್ಕೆ ಹೆಸರುವಾಸಿ. ಅಲ್ಲೂ ಈಗ ಮಳೆ ಕೈಕೊಟ್ಟಿದೆ. ‘ಈ ಸಲ ಮಳೆ ಇಲ್ಲದೇ ಭತ್ತದ ಪೈರು ನರ್ಸರಿಯಲ್ಲೇ ಉಳಿದು ಹಾಳಾಯಿತು’ ಎಂದು ನೋವಿನಲ್ಲಿ ಹೇಳುವ ಬೆಳಗಾವಿಯ ಗುಂಡೇನಹಟ್ಟಿ ಗ್ರಾಮದ ಸಾವಯವ ಕೃಷಿಕ ಶಂಕರ, ರಾಗಿ ಮಾತ್ರ ಯಾವುದೇ ಸಮಸ್ಯೆಯಿಲ್ಲದೇ ಬೆಳೆಯುತ್ತಿದೆ ಎಂಬ ಸಮಾಧಾನದಲ್ಲಿ ಇದ್ದಾರೆ. ಹಿರಿಯರು ಬೆಳೆಯುತ್ತಿದ್ದ ಸಿರಿಧಾನ್ಯ ಅಲ್ಲಿ ಮತ್ತೆ ಬೆಳಕಿಗೆ ಬಂದಿವೆ. ಪಕ್ಕದ ಸವದತ್ತಿ ಪ್ರದೇಶದಲ್ಲಿ ಸದಾ ಬಿ.ಟಿ. ಹತ್ತಿ- ಮೆಣಸಿನಕಾಯಿ ದರ್ಬಾರು ಕಾಣುತ್ತಿತ್ತು. ‘ಈಗ ಅವಾವೂ ಇಲ್ಲ. ನವಣೆ, ಕೊರಲೆ, ಸಾಮೆ, ಸಜ್ಜೆ ಇತ್ಯಾದಿ ಸೀಮಿತವಾದರೂ ಅಲ್ಲಲ್ಲಿ ಬೆಳೆಯುತ್ತಿವೆ’ ಎಂದು ಸಿರಿಧಾನ್ಯ ಕೃಷಿ ಉತ್ತೇಜಿಸುತ್ತಿರುವ ‘ಸ್ಪ್ರೆಡ್’ ಸಂಸ್ಥೆ ಮುಖ್ಯಸ್ಥ ಆನಂದ ಹೇಳುತ್ತಾರೆ. ರೈತರಲ್ಲಿ ಹುಸಿಕನಸು ಮೂಡಿಸಿದ್ದ ಬಿಟಿ ಹತ್ತಿ, ಕೊನೆಗೂ ಬರದ ಬವಣೆಗೆ ಸಿಕ್ಕು ಮೂಲೆಗುಂಪಾಗಿದೆ.

ಇನ್ನು, ಮೆಕ್ಕೆಜೋಳ- ಬಿಟಿ ಹತ್ತಿಯಲ್ಲಿ ಲಕ್ಷ ಲಕ್ಷ ರೂಪಾಯಿ ನೋಡಿದ್ದ ಹಾವೇರಿ ರೈತರೂ ಅದರ ಉಸಾಬರಿ ಬಿಟ್ಟಿದ್ದಾರೆ. ಕುಂದಗೋಳ ತಾಲ್ಲೂಕಿನ ಹನುಮನಹಳ್ಳಿ ವ್ಯಾಪ್ತಿಯ ಮೂರ್ನಾಲ್ಕು ಗ್ರಾಮಗಳಲ್ಲಿ ಈಗ ಸಿರಿಧಾನ್ಯಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿವೆ. ಬರೀ ಸಿರಿಧಾನ್ಯ ಮಾತ್ರವಲ್ಲ; ‘ಶ್ರೀ’ ವಿಧಾನದ ಮಾದರಿಯಲ್ಲಿ ತೊಗರಿ ಬೆಳೆದು, ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸಿದ ಯುವ ಕೃಷಿಕ ಮತ್ತಿಗಟ್ಟಿಯ ಈಶ್ವರಗೌಡ ಪಾಟೀಲ ಗೆಲುವಿನ ನಗೆ ಬೀರಿದ್ದಾರೆ. ಎರಡೂವರೆ ಅಡಿ ಅಂತರದಲ್ಲಿ ತೊಗರಿ ಸಸಿ ನಾಟಿ ಮಾಡಿ, ಪ್ರತಿ ಗಿಡಕ್ಕೆ ಸಾವಿರಕ್ಕೂ ಹೆಚ್ಚು ಕಾಯಿ ಪಡೆದಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಈ ವಿಧಾನ ಈಗ ನಿಧಾನವಾಗಿ ರಾಜ್ಯದಾದ್ಯಂತ ವ್ಯಾಪಿಸುತ್ತಿದೆ.

ದೇಶದ ಬೇರೆ ಕಡೆ ಸಮೃದ್ಧಿ ಕಾಣುತ್ತಿದ್ದರೂ ಕರ್ನಾಟಕ ಮಾತ್ರ ಅದರಿಂದ ವಂಚಿತವಾಗುತ್ತಿದೆ. ನಾಲ್ಕೈದು ವರ್ಷಗಳಿಂದ ವಾತಾವರಣದಲ್ಲಿ ಕಾಣುತ್ತಿರುವ ಏರುಪೇರು ಮುಂದಿನ ದಿನಗಳಲ್ಲಿ ಇರಲಾರದೇ? ಮಳೆ ಇಲ್ಲವೆಂದು ಪಾತಾಳಗಂಗೆಗೆ ಕನ್ನ ಹಾಕುವುದು ಎಷ್ಟು ಅಧ್ವಾನವೋ ಮೋಡ ಬಿತ್ತನೆಗೆ ಮುಂದಾಗುವುದೂ ಅಷ್ಟೇ ಮೂರ್ಖತನ. ನಮ್ಮಲ್ಲೇ ಬರನಿರೋಧಕ ಜಾಣ್ಮೆಯ ವ್ಯವಸಾಯ ತಂತ್ರಗಳು ಎಷ್ಟೊಂದು ಕಾಣುತ್ತಿವೆ! ಅವುಗಳತ್ತ ಒಂದಷ್ಟು ಕಣ್ಣು ಹಾಯಿಸಿದರೂ ಸಾಕು; ಹವಾಮಾನ ಬದಲಾವಣೆಯ ಪರಿಹಾರಗಳು ಸಾಲುಸಾಲಾಗಿ ಕಾಣಿಸುತ್ತವೆ. ಅವುಗಳನ್ನು ನೋಡುವ ದೃಷ್ಟಿ ನಮ್ಮ ಸರ್ಕಾರಕ್ಕಾಗಲೀ ಕೃಷಿ ಸಂಶೋಧನಾ ಕೇಂದ್ರಗಳಿಗಾಗಲೀ ಇಲ್ಲ ಎಂಬುದೇ ದುರಂತ.

*

ಆಂಧ್ರಕ್ಕೆ ಗುಳೇ ಹೋದ ‘ಗುಳಿ ಪದ್ಧತಿ’!

ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ರಾಗಿಯ ದೇಸಿ ಕೃಷಿ ವಿಧಾನ, ಆಂಧ್ರಪ್ರದೇಶಕ್ಕೂ ಕಾಲಿಟ್ಟಿದೆ. ಕಳೆದ ವರ್ಷ ರಾಣೆಬೆನ್ನೂರಿನಲ್ಲಿ ‘ಸಹಜ ಸಮೃದ್ಧ’ ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಆಂಧ್ರದ ರೈತರು ಪಾಲ್ಗೊಂಡಿದ್ದರು. ಅವರ ಒತ್ತಾಸೆಯಿಂದಾಗಿ ಆಂಧ್ರ ಸರ್ಕಾರ ಈ ವಿಧಾನವನ್ನು ಜಾರಿ ಮಾಡಲು ಮುಂದಾಗಿದೆ.

ನಮ್ಮ ಕೃಷಿ ವಿಶ್ವವಿದ್ಯಾಲಯಗಳು ತಲೆಬುಡವಿಲ್ಲದ ಯೋಜನೆಗಳನ್ನು ಪ್ರಚುರಪಡಿಸುತ್ತ ಕಾಲಹರಣ ಮಾಡುತ್ತಿದ್ದರೆ, ಗುಳಿ ಕೃಷಿ ವಿಧಾನಗಳನ್ನು ಪರಿಚಯಿಸುವ ಪುಸ್ತಿಕೆಯನ್ನು ಆಂಧ್ರ ಸರ್ಕಾರದ ಕೃಷಿ ಇಲಾಖೆ ಪ್ರಕಟಿಸಿದೆ.

*

ರಾಗಿ ಪೈರು ಉತ್ಪಾದನೆಗೆ ಟ್ರೇ

ದಕ್ಷಿಣ ಕರ್ನಾಟಕದ ಪ್ರಮುಖ ಬೆಳೆಯಾದ ರಾಗಿಗೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸಲ ಕಂಟಕ ಬಂದೊದಗಿದೆ! ನೇರ ಬಿತ್ತನೆ ವಿಧಾನದಲ್ಲಿ ಬಿತ್ತುವ ರಾಗಿಗೆ ಸರಿಯಾದ ಸಮಯದಲ್ಲಿ ಮಳೆ ಸಿಗದೇ ಪೈರು ಬಾಡಿ ಹೋಗುತ್ತದೆ. ಇದರಿಂದ ಪಾರಾಗುವ ಬಗೆ ಹೇಗೆ?

‘ಇಲ್ಲ ಸೋಮೇ, ಬೇಕೆಂದಾಗ ಮಳಿ ಬರಲ್ಲ. ಅದು ಬಂದಾಗ ನಾವ್ ರೆಡಿ ಇರ್ಬೇಕು’ ಎನ್ನುತ್ತಾರೆ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಗುಡ್ನಳ್ಳಿ ಗ್ರಾಮದ ರೈತ ವೆಂಕಟೇಶಪ್ಪ. ಬಿತ್ತನೆಗೆ ಮುನ್ನ ಹಾಗೂ ನಂತರ ಬರಬೇಕಾದ ಮಳೆಯನ್ನು ‘ಸದ್ಬಳಕೆ’ ಮಾಡುವ ಜಾಣತನ ರೈತರಲ್ಲಿ ಮೈ ಗೂಡಬೇಕು. ಅಂಥ ತಂತ್ರಗಳನ್ನು ಕಲಿತಿರುವ ವೆಂಕಟೇಶಪ್ಪ, ರಾಗಿ ಕೃಷಿಕರ ಹೊಸಬೆಳಕು.

‘ಮೊದಲೆಲ್ಲ ನಾವು ಸಸಿ ಮಾಡುತ್ತಿದ್ದೆವು. ಆದರೆ ಹಗಲು ಹೊತ್ತು ಕೋತಿಗಳು, ರಾತ್ರಿ ಸಮಯ ಮೊಲಗಳು ದಾಳಿ ಮಾಡಿ ಪೈರು ಕಿತ್ತು ಹಾಕುತ್ತಿದ್ದವು. ಮತ್ತೆ ಪೈರು ತಯಾರಿಸಿ ಮಳೆಗಾಗಿ ಕಾಯಬೇಕು. ಮಳೆ ಬಂದಾಗ ಪೈರು ಇಲ್ಲ ಅಂದರೆ ರಾಗಿ ನಾಟಿ ಮಾಡುವುದು ಕಷ್ಟ. ಇದಕ್ಕೆ ಪರಿಹಾರ ಎಂಬಂತೆ ನರ್ಸರಿಯವರಿಗೆ ಬಿತ್ತನೆ ಬೀಜ ಕೊಟ್ಟು ಮಾಡಿಸಿದೆವು. ಈಗ ಮಳೆ ಬರುತ್ತಿದೆ. ನಾಟಿ ಮಾಡಿದರೆ ಆಯ್ತು’ ಎಂದು ಹಸನ್ಮುಖರಾಗಿ ಹೇಳುತ್ತಾರೆ ವೆಂಕಟೇಶಪ್ಪ. ಹವಾಮಾನ ವೈಪರೀತ್ಯಕ್ಕೆ ಪರಿಹಾರ ಕಂಡುಕೊಂಡಿರುವ ವೆಂಕಟೇಶಪ್ಪ ಅವರ ದಾರಿ ಇತರರಿಗೆ ಬೆಳಕು ತೋರಿಸಿದೆ. ಇದರ ಪರಿಣಾಮವಾಗಿ ನರ್ಸರಿಗಳಲ್ಲಿ ಈಗ ಹನಿ ನೀರಾವರಿ ಆಶ್ರಯದಲ್ಲಿ ಟ್ರೇಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಾಗಿ ಪೈರು ಬೆಳೆದು, ಹಾಸನ, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ರವಾನೆಯಾಗುತ್ತಿದೆ.

ಮಳೆ ಪದೇ ಪದೇ ಕೈಕೊಡುತ್ತಿರುವ ಈ ಸಮಯದಲ್ಲಿ ಇದು ಉಳಿತಾಯದ ದಾರಿಯೂ ಆಗಿದೆ. ಇತರ ಬಿತ್ತನೆ ವಿಧಾನಗಳಲ್ಲಿ ಎಂಟು ಕಿಲೋ ಬೀಜ ಬೇಕು; ಆದರೆ ಪೈರು ನಾಟಿ ವಿಧಾನಕ್ಕೆ ಬರೀ 40 ಗ್ರಾಂ ಸಾಕು. ಇಷ್ಟೇ ಬೀಜಕ್ಕೆ 10,880 ಸಸಿ ಒಂದು ಎಕರೆಗೆ ಬೇಕಾಗುತ್ತವೆ ಎಂದು ವೆಂಕಟೇಶಪ್ಪ ಲೆಕ್ಕಾಚಾರ ಮುಂದಿಡುತ್ತಾರೆ. ಮಳೆ ಕೈಕೊಟ್ಟರೆ ಹನಿ ನೀರಾವರಿ ವ್ಯವಸ್ಥೆ ಇದೆ. ಅಂದ ಹಾಗೆ ಅವರು ತೆಗೆಯುವ ಇಳುವರಿ ಎಕರೆಗೆ 30 ಕ್ವಿಂಟಲ್! ಏನೆಲ್ಲ ಸುರಿದು, ಸಿಂಪಡಿಸಿದರೂ ಸಿಗದಷ್ಟು ಆದಾಯ! ಇಂದಿನ ಮಾರುಕಟ್ಟೆ ಬೆಲೆ ಎಕರೆಗೆ 90,000 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT