ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು ಬಾಚಿಕೊಂಡ ಹಳ್ಳಿ

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ಮೇಘಧೂತ

*

ಅಲ್ಲಿ ಹತ್ತಾರು ಟ್ರ್ಯಾಕ್ಟರ್‌ಗಳು ಬರ್‍ರೆಂದು ಓಡಾಡುತ್ತಿದ್ದವು. ನೂರಾರು ಯುವಕರು ಪೈಪ್‌ಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಕೆಲವು ‘ತಂತ್ರಜ್ಞಾನಿ’ಗಳು ಆ ಪೈಪ್‌ಗಳನ್ನು ಜೋಡಿಸುತ್ತಿದ್ದರೆ, ‘ಬಾಹುಬಲಿ’ಗಳ ಪಡೆಯೊಂದು ವಾಲಿದ್ದ ವಿದ್ಯುತ್ ಕಂಬಗಳನ್ನು ಸರಿಪಡಿಸುತ್ತಿತ್ತು. ಟ್ರ್ಯಾಕ್ಟರ್‌ನಲ್ಲಿದ್ದ ಮೋಟಾರ್‌ಗಳನ್ನು ಕೆಳಗಿಳಿಸಿ ತಾವೇ ಸ್ಥಾಪಿಸಿದ್ದ ವಿದ್ಯುತ್ ಪರಿವರ್ತಕಕ್ಕೆ (ಟಿ.ಸಿ) ಲೈನ್‍ಮನ್‌ಗಳಂತೆ ಕೆಲವು ಯುವಕರು ಸಂಪರ್ಕ ನೀಡುತ್ತಿದ್ದರು ಕೂಡ.

ಜನ-ಜಾನುವಾರಗಳ ರಕ್ಷಣೆ ಜೊತೆ ಜೊತೆಗೆ ಇದೇ ಜಲ ನಂಬಿರುವ ಆರೇಳು ಹಳ್ಳಿಗಳ ಮೂರು ಸಾವಿರದಷ್ಟು ಎಕರೆ ಭೂಮಿಯಲ್ಲಿರುವ ಕೊಳವೆ ಬಾವಿಗಳ ನೀರಿನಮಟ್ಟ ಮೇಲಕ್ಕೆತ್ತಲು ಇದೊಂದೇ ಮಾರ್ಗ ಎಂದು ಅಲ್ಲಿ ಸೇರಿದ್ದವರ ಲೆಕ್ಕಾಚಾರವಾಗಿತ್ತು. ಅದಕ್ಕೆಂದೇ ಅಲ್ಲಿ ಅಷ್ಟೊಂದು ಗಡಿಬಿಡಿ.

ಈ ಎಲ್ಲಾ ಬಿರುಸಿನ ಕೆಲಸಗಳು ನಡೆಯುತ್ತಿದ್ದುದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿಯಲ್ಲಿ. ಅದೊಂದು ಪುಟ್ಟ ಹಳ್ಳಿ. ಅದರ ಮೂರು ಕಡೆ ತುಂಗಭದ್ರಾ ನದಿಯ ಹಿನ್ನೀರು. ಸುತ್ತಲೂ ಹಸಿರು ಹೊದಿಕೆ ಹೊದ್ದು ಮಲಗಿರುತ್ತಿದ್ದ ಭತ್ತದ ಗದ್ದೆಗಳು, ಎಲೆ ತೋಟಗಳು, ಹಣ್ಣಿನ ತೋಟಗಳು ಈಗ ಮುಂಚಿನ ಕಳೆ ಉಳಿಸಿಕೊಂಡಿಲ್ಲ. ವಿದ್ಯಾವಂತರ, ಬುದ್ಧಿವಂತರ ಹಳ್ಳಿ, ಸುಸಂಸ್ಕೃತರ ಹಳ್ಳಿ ಎಂಬ ಹಿರಿಮೆ ಕೂಡ ಇದಕ್ಕಿದೆ.

ಸತತ ಮೂರು ವರ್ಷಗಳಿಂದ ಆವರಿಸಿರುವ ಬರಗಾಲದಿಂದ ರಾಜ್ಯದ ಬಹುತೇಕ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿವೆ. ಅದೇ ಪರಿಸ್ಥಿತಿ ಇಲ್ಲಿಯೂ ಇದೆ. ಮೈಮೇಲೆ ಬೆಂಕಿ ಬಿದ್ದವರಂತೆ ಬರಗಾಲವನ್ನು ಅನುಭವಿಸಿದ್ದ ಈ ಭಾಗದ ರೈತರಿಗೆ ವರುಣನ ಅವಕೃಪೆಯಿಂದ ಬರಗಾಲದ ಭೀಕರತೆಯನ್ನು ಎದುರಿಸುವ ಅನಿವಾರ್ಯತೆ. ಹೌದು, ಅವರ ಬದುಕೀಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಬಾಚಗೊಂಡನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ರೈತರೆಲ್ಲರೂ ಸೇರಿ ಜಲಾಶಯದ ಹಿನ್ನೀರಿನ ಬಳಿ ಕಾಲುವೆ ತೋಡಿ ತಮ್ಮಲ್ಲಿನ ಪುರಾತನ ಕಾಲದ ಕೆರೆಗೆ ನೀರು ತುಂಬಿಸುವ ಕುರಿತು ಚರ್ಚಿಸಿದರು. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಬದ್ಧತೆಯುಳ್ಳ ಯುವ ಪಡೆಯೇ ಸಿದ್ಧವಾಯಿತು. ಈ ಯುವ ಪಡೆಗೆ ಕೆಲ ಹಂತದಲ್ಲಿ ಮಾರ್ಗದರ್ಶನ ನೀಡಲು ಹಿರಿಯ ಅನುಭವಿಗಳ ತಂಡವೂ ನಿರ್ಮಾಣವಾಯಿತು. ಕೆರೆಯವರೆಗೆ ಎರಡು ಅರ್ಥ್‌ ಮೂವರ್‌ಗಳ ಸಹಾಯದಿಂದ ಎಂಟು ಅಡಿ ಅಗಲ ಹಾಗೂ ಅಷ್ಟೇ ಆಳದ 500 ಮೀಟರ್ ಉದ್ದದ ಕಾಲುವೆಯನ್ನು ನೋಡು ನೋಡುತ್ತಿದ್ದಂತೆಯೇ ತೋಡಿಬಿಟ್ಟರು. ಕಾಲುವೆಗೆ ನೀರು ನುಗ್ಗಿದ್ದೇ ತಡ, ಯುವಕರಲ್ಲಿ ಉತ್ಸಾಹದ ಚಿಲುಮೆ ಉಕ್ಕ ತೊಡಗಿತು.

ಯುದ್ಧದಲ್ಲಿ ಗೆದ್ದ ಸೈನಿಕರಂತೆ ಕುಣಿಯಲು ಆರಂಭಿಸಿದರು. ನಿಂತ ಕಾಲುಗಳು ಒಂದೆಡೆ ನಿಲ್ಲದೇ, ‘ಹೇ ಬನ್ರೋ ಮೋಟಾರ್ ತರೋಣ’ ಎಂದವರೇ ನೀರೆತ್ತುವ ಮೋಟಾರ್‌ಗಳನ್ನು ಕೊಡುವುದಾಗಿ ತಿಳಿಸಿದ್ದ ರೈತರ ಪಟ್ಟಿ ಪಡೆದ ಯುವಕರು ಅವರಲ್ಲಿಗೆ ತಂಡ ತಂಡವಾಗಿ ತೆರಳಿದರು. ಮೋಟಾರ್‌ ಜೊತೆಗೆ ನೀರೆತ್ತಲು ಅವಶ್ಯವಿರುವ ಪೈಪ್‌ಗಳನ್ನು ತರುವಾಗ ಅದರ ಯಜಮಾನರನ್ನೂ ಕರೆತಂದರು. ಉಪಯೋಗಕ್ಕೆ ಬರುವಂತಿದ್ದ ಉಪಯೋಗಿಸದೇ ಖಾಲಿ ಇದ್ದ ವಿದ್ಯುತ್ ಪರಿವರ್ತಕವನ್ನೂ ತಂದೇ ಬಿಟ್ಟರು. ವಿದ್ಯುತ್ ಪರಿವರ್ತಕ ಅಳವಡಿಸುವವರ ತಂಡವೇ ಬೇರೆ, ಪಂಪ್ ಮೋಟಾರ್ ನೀರಲ್ಲಿ ಬಿಟ್ಟು ಪೈಪ್‌ಗಳನ್ನು ಜೋಡಿಸುವ ಯುವಕರ ತಂಡವೇ ಬೇರೆ, ಅಲ್ಲಲ್ಲಿ ವಾಲಿದ್ದ ವಿದ್ಯುತ್ ಕಂಬಗಳನ್ನು ಸರಿಪಡಿಸುವ ತಂಡವೇ ಬೇರೆ. ಹೀಗೆ ತಾವೇ ಹಂಚಿಕೊಂಡಿದ್ದ ತಮ್ಮ ತಮ್ಮ ಕೆಲಸಗಳನ್ನು ವ್ಯವಸ್ಥಿತವಾಗಿ ಮುಗಿಸಿದರು.

(ಕೆರೆಯಲ್ಲಿ ಸಂಗ್ರಹಗೊಂಡ ನೀರನ್ನು ಕುಡಿದು ನೀರಿನ ದಾಹ ತೀರಿಸಿಕೊಳ್ಳುತ್ತಿರುವ ದನಕರುಗಳು.)

ಕೆಲವೇ ಗಂಟೆಗಳಲ್ಲಿ ಕೆರೆಗೆ ನೀರು ಬಂದು ಬೀಳಲಾರಂಭಿಸಿತು. ನೀರು ಬಿದ್ದಾಗ ಆ ಯುವ ಪಡೆಗಳ ಉತ್ಸಾಹ ಎಲ್ಲೆ ಮೀರಿತ್ತು. ಶಿಳ್ಳೆ ಹಾಕುತ್ತಾ ಕೆರೆಯ ಏರಿಯ ಮೇಲೆ ಕುಣಿದಾಡಿಯೂ ಬಿಟ್ಟರು.

ಕೆರೆ ತುಂಬಿದರೆ ತಮ್ಮ ಎಲ್ಲಾ ಹೊಲ ಗದ್ದೆಗಳು ಹಸಿರು ಹೊದ್ದು ತೊನೆಯುತ್ತವೆ, ನಿರಂತರ ಬರದಿಂದ ನಿರುದ್ಯೋಗಿಗಳಂತೆ ಆಗಿರುವ ನಮಗೆಲ್ಲಾ ಕೈತುಂಬಾ ಕೆಲಸ ಸಿಗುತ್ತದೆ, ಜನ- ಜಾನುವಾರುಗಳಿಗೆ, ಕುರಿ-ಮೇಕೆಗಳಿಗೆ ಒಂದು ವರ್ಷದವರೆಗೆ ಕುಡಿಯುವ ನೀರಿಗೆ ವ್ಯವಸ್ಥೆ ಆಗುತ್ತದೆ... ಹೀಗೆ ಒಬ್ಬೊಬ್ಬರಲ್ಲೂ ನೆಮ್ಮದಿ ಕಂಡುಕೊಳ್ಳಲು ಒಂದೊಂದು ಕಾರಣ.

ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ತನಕವಷ್ಟೇ ವಿದ್ಯುತ್ ನೀಡುತ್ತದೆ. ಆದರೆ ಇದು ಯಾವುದಕ್ಕೂ ಸಾಲುವುದಿಲ್ಲ. ಈ ಏಳು ಗಂಟೆಗಳ ವಿದ್ಯುತ್‌ನಲ್ಲಿ ನೀರು ಸಂಗ್ರಹಿಸುತ್ತಾ ಕುಳಿತರೆ ಆರೇಳು ತಿಂಗಳು ನೀರೆತ್ತಿದರೂ ಕೆರೆ ತುಂಬುವುದಿಲ್ಲ. ವಿದ್ಯುತ್ ಸಮಸ್ಯೆ ಬಗೆಹರಿಸಲೇಬೇಕು ಎಂಬ ಯೋಚನೆ ಕಾಡುತ್ತಿತ್ತು. ದಾರಿ ಕಾಣದೆ ಇಲ್ಲಿನ ಜೆಸ್ಕಾಂ ಅಧಿಕಾರಿಯನ್ನು ಭೇಟಿಯಾದ ಹಳ್ಳಿಯ ಕೆಲ ಮುಖಂಡರಿಗೆ ಹೆಚ್ಚುವರಿ ವಿದ್ಯುತ್ ನೀಡಲಾಗುವುದಿಲ್ಲ ಎನ್ನುವ ಉತ್ತರ ಸಿಕ್ಕಿತು.

ಅದಕ್ಕೂ ಅವರೇ ಪರಿಹಾರ ಕಂಡುಕೊಂಡರು. ಇನ್ನೊಂದು ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳೋಣ. ಅದಕ್ಕೆ ಮತ್ತಷ್ಟು ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಎತ್ತೋಣ ಎಂದು ನಿರ್ಧರಿಸಿದರು. ಎರಡು ದಿನಗಳಲ್ಲಿ ಈ ನಿರ್ಧಾರವೂ ಅನುಷ್ಠಾನಕ್ಕೆ ಬಂತು.

ಇದೇ ಕೆರೆಯಿಂದ 15 ವರ್ಷಗಳ ಹಿಂದೆ ಹತ್ತು ಕಿ.ಮೀ. ದೂರದ ಹಗರಿಬೊಮ್ಮನಹಳ್ಳಿ ಪಟ್ಟಣದ 40 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ನೀರು ಸರಬರಾಜು ಮಾರ್ಗದ ಮಧ್ಯೆ ಬರುವ ಕಡಲಬಾಳು, ಬ್ಯಾಲಹಾಳು ಗ್ರಾಮಗಳ ಜನತೆಗೂ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ನಂತರದ ದಿನಗಳಲ್ಲಿ ಈ ಘಟಕ ಸ್ಥಗಿತಗೊಂಡಿದ್ದರಿಂದ ಕಡಲಬಾಳು ಮತ್ತು ಬ್ಯಾಲಹಾಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣಿಸಿತ್ತು. ಬೇಸಿಗೆಯಲ್ಲಿ ಸಾವಿರಾರು ಕುರಿ-ಮೇಕೆಗಳ ದಾಹ ತಣಿಸಲು ಈ ಕೆರೆಯೇ ಆಧಾರವಾಗಿತ್ತು. ನೀರಿಲ್ಲದೆ ಭಣಗುಡುತ್ತಿದ್ದ ಕೆರೆಯನ್ನು ಕಂಡು ಕಂಗೆಟ್ಟಿದ್ದ ಹಳ್ಳಿಗರು, ಈಗ ನೀರು ಸಂಗ್ರಹ ಆಗಿದ್ದನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

**

ಸಮುದಾಯ ಸಹಭಾಗಿತ್ವದ ಪಾಠ
ಬಾಚಿಗೊಂಡನಹಳ್ಳಿ ಎಂದರೆ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರಿಗೂ ಅಚ್ಚುಮೆಚ್ಚು. ಅವರು ಆಗಾಗ ಇಲ್ಲಿ ಶಿವಾಚಾರ್ಯ ಪರ್ವ ಆಚರಿಸುತ್ತಾರೆ. ಊರಿನ ಒಳಿತಾಗಿ ಸಮುದಾಯ ಸಹಭಾಗಿತ್ವದ ಪಾಠ ಇಲ್ಲಿನ ಜನರಿಗೆ ಮತ್ತೆ ಮತ್ತೆ ಸಿಗುತ್ತಲೇ ಇರುತ್ತದೆ.

ಮೂರೂವರೆ ದಶಕಗಳ ಹಿಂದಿನ ಮಾತು. ಹಳ್ಳಿಯಿಂದ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿದ್ದ ಚನ್ನಬಸವನಗೌಡರು ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿಯೇ ಭೇಟಿ ನೀಡುತ್ತಿದ್ದರು. ಬೆಂಗಳೂರಿನಿಂದ ಅವರು ಬರುತ್ತಾರೆಂದರೆ ಅವರು ಬರುವ ದಿನಾಂಕ ಅಂಚೆ ಕಾರ್ಡ್ ಮೂಲಕ ಅವರ ಕುಟುಂಬಕ್ಕೆ ಮೊದಲೇ ತಿಳಿದಿರುತ್ತಿತ್ತು. ಅವರನ್ನು ಕರೆದುಕೊಂಡು ಹೋಗಲು ಎತ್ತಿನಗಾಡಿ ಬರುತ್ತಿತ್ತು.

‘ಏನ್ ಗೌಡ್ರೇ ಬಂಡ್ಯಾಗ ಹೋಕ್ಕೀರೆಪಾ.., ಊರ್‌ತನ್ಕಾ ಬಸ್ ಬಿಡ್ಸಬಾರ್ದಾ...’ ಎಂದು ಹಳ್ಳಿ ಜನ ಅಂದರೆ ‘ಏ ಮಾರಾಯಾ ಸುಮ್ನಿರೊ, ನನ್‌ ಒಬ್ಬನ ಸಲುವಾಗಿ ಬಸ್ ಊರ್‌ತನ್ಕಾ ಬರಬೇಕಂದ್ರ ಸರಿಯಲ್ಲ ಬಿಡ್ರೊ ಎನ್ನುತ್ತಿದ್ದರು. ಅಂತಹ ಪರಂಪರೆಯಿಂದ ಬೆಳೆದುಬಂದ ಊರು ನಮ್ಮದು. ಸಮುದಾಯದ ಒಳಿತಾಗಿ ನಮ್ಮೂರಿನ ಪ್ರತಿಯೊಂದು ಮನ ಮಿಡಿಯುತ್ತದೆ ಎಂದು ಇಲ್ಲಿನ ಹಿರಿಯರು ಅಭಿಮಾನದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT