ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪದ ಐಸಿರಿ

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಿರುಗುಪ್ಪ ತಾಲ್ಲೂಕಿನ ಎಚ್‌.ಬೈರಾಪುರದ ಐದು ಎಕರೆ ಜಮೀನಿನಲ್ಲಿ ಬಿ.ಎಂ. ಈರಪ್ಪಯ್ಯ ಅವರು ಮೇ ತಿಂಗಳಲ್ಲಿ ಸಿರಿಧಾನ್ಯಗಳಾದ ಬರಗು ಮತ್ತು ಕೊರಲೆ ಬಿತ್ತನೆ ಮಾಡಿದಾಗ, ಕಾಲುವೆ ನೀರಿಗಾಗಿ ಜಮೀನುಗಳನ್ನು ಬೀಳುಬಿಟ್ಟು ಕಾಯುತ್ತಾ ಖಾಲಿ ಕುಳಿತಿದ್ದ ಹಳ್ಳಿಯ ಜನ ಅವರ ಕಡೆಗೆ ಕೈತೋರಿಸಿ ನಗೆಯಾಡಿದ್ದರು.

ಬಳ್ಳಾರಿ–ಸಿರುಗುಪ್ಪ ಹೆದ್ದಾರಿಯುದ್ದಕ್ಕೂ ಬರಡು ಜಮೀನುಗಳ ನಡುವೆ ಈಗ ಅವರ ಜಮೀನಿನ ಎರಡೂವರೆ ಎಕರೆಯಲ್ಲಿ ಸಹಜ ಹಸಿರಿನ ಕೊರಲೆಯಲ್ಲಿ ತೆನೆಗಳು ಬಲಿಯುತ್ತಾ ತೊನೆದಾಡುತ್ತಿವೆ. ಉಳಿದ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಬರಗು ಬೆಳೆಯನ್ನು ಕೆಲವು ದಿನಗಳ ಹಿಂದೆಯೇ ಕಟಾವು ಮಾಡಿದ್ದಾಗಿದೆ. ಪರಿಣಾಮ ಇಷ್ಟೇ: ‘ಸಿರಿಧಾನ್ಯದ ಬಿತ್ತನೆ ಬೀಜ ನಮಗೂ ಕೊಡಿ’ ಎಂದು ಸುತ್ತಮುತ್ತಲಿನ ರೈತರಷ್ಟೇ ಅಲ್ಲದೆ, ಹೊರಜಿಲ್ಲೆಗಳ ರೈತರೂ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ರೈತರು ನವಣೆಯನ್ನಷ್ಟೇ ಬೆಳೆಯುವುದು ರೂಢಿ. ಆದರೆ ಇದೇ ಮೊದಲ ಬಾರಿಗೆ ಈರಪ್ಪಯ್ಯ ಅಪರೂಪದ, ಬೇಡಿಕೆ ಹೆಚ್ಚಿರುವ, ಬೆಲೆಬಾಳುವ ಸಿರಿಧಾನ್ಯಗಳನ್ನು ಸಹಜ ಕೃಷಿ ಪದ್ಧತಿಯಲ್ಲಿ ಬೆಳೆದು ಜಿಲ್ಲೆಯ ರೈತರ ಹುಬ್ಬೇರುವಂತೆ ಮಾಡಿದ್ದಾರೆ.

ಸಿರಿಧಾನ್ಯಗಳನ್ನು ಬೆಳೆಯುವ ಎರಡು ವರ್ಷ ಮುನ್ನ ಈರಪ್ಪಯ್ಯ ಕೊಳವೆಬಾವಿಯ ನೀರು ಹರಿಸಿ ಕಬ್ಬು ಬೆಳೆದಿದ್ದರು. ನಂತರ ಭತ್ತ ಬೆಳೆದಿದ್ದರು. ‘ಈಗ ಪ್ರಕೃತಿಯೇ ಪಾಠ ಕಲಿಸಿದೆ. ಸಿರಿಧಾನ್ಯಗಳು, ಬರಗಾಲದಲ್ಲೂ ಮಳೆ ಆಶ್ರಯದಲ್ಲಿ ಮತ್ತು ಕಡಿಮೆ ನೀರು ಬಳಸಿ, ಬೆಳೆ ಬೆಳೆದು ಲಾಭ ಮಾಡುವ ಪಾಠವನ್ನು ಚೆನ್ನಾಗಿ ಕಲಿಸಿವೆ’ ಎನ್ನುತ್ತಾರೆ ಅವರು. ಎರಡೂವರೆ ಇಂಚಿನ ವ್ಯಾಸದ ಪೈಪು ತುಂಬುವಷ್ಟೇ ನೀರು ಬರುವ ಒಂದು ಕೊಳವೆಬಾವಿ, ಸಮಯ ಪ್ರಜ್ಞೆ, ಹೊಸ ಪ್ರಯೋಗದ ಸಾಹಸ ಮನೋವೃತ್ತಿ ಅವರಿಗೆ ಅಪಾರ ಲಾಭವನ್ನು ತಂದುಕೊಟ್ಟಿವೆ.

ಜಾಣತನ: ಏಕದಳ ಧಾನ್ಯವಾದ ಬರಗನ್ನು ಬಿತ್ತುವಾಗಲೇ ಅವರು ಅದರ ನಡುವೆ ಪ್ರತಿ ಮೂರು ಅಡಿಗೆ ಒಂದರಂತೆ ಹೆಸರುಕಾಳಿನ ಎರಡು ಸಾಲು ಮತ್ತು ಪ್ರತಿ ಒಂಬತ್ತು ಅಡಿಗೆ ಒಂದರಂತೆ ತೊಗರಿಯನ್ನೂ ಬಿತ್ತನೆ ಮಾಡಿದ್ದರು. ಕಾರಣ ಇಷ್ಟೇ: ದ್ವಿದಳ ಧಾನ್ಯಗಳಾದ ಇವೆರಡೂ ಮಣ್ಣಿನಲ್ಲಿ ಸಾರಜನಕವನ್ನು ನೆಲೆಗೊಳಿಸುತ್ತವೆ. ಆ ಮೂಲಕ ಬರಗಿಗೆ ಗೊಬ್ಬರವೂ ದೊರಕುತ್ತದೆ ಎಂಬುದು. ಯಾವ ರಾಸಾಯನಿಕವೂ ಇಲ್ಲದೆ, ಒಮ್ಮೆ ಮಾತ್ರ ಬೇವಿನ ಎಣ್ಣೆಯನ್ನು ಸಿಂಪಡಿಸಿದ ಅವರ ಜಮೀನಿನಲ್ಲಿ ಲಕ್ಷಾಂತರ ಎರೆಹುಳುಗಳು ಸಂಸಾರ ಹೂಡಿರುವುದು ಮತ್ತೊಂದು ವಿಶೇಷ.

ಏಳು ಕ್ವಿಂಟಲ್‌ ಬರಗು: ಒಂದು ಎಕರೆಗೆ ಕನಿಷ್ಠ ಏಳು ಕ್ವಿಂಟಲ್‌ ಬರಗು ಇಳುವರಿ ನಿರೀಕ್ಷಿತ. ಆದರೆ ಕಟಾವು ಸಮಯದಲ್ಲಿ ಮಳೆ ಬಂದು ನಷ್ಟವಾಗಿದ್ದನ್ನು ಬಿಟ್ಟು ಅವರಿಗೆ ಎರಡೂವರೆ ಎಕರೆಯಲ್ಲಿ ಹನ್ನೆರಡೂವರೆ ಕ್ವಿಂಟಲ್‌ ಇಳುವರಿ ದೊರಕಿದೆ. ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಫಿರ್ಕಾ, ಸಿರಿಗೇರಿ, ಮರಿಯಮ್ಮನಹಳ್ಳಿಯ ರೈತರಿಗೆ ಪ್ರತಿ ಕೆ.ಜಿಗೆ ನೂರು ರೂಪಾಯಿಯಂತೆ ಅವರು ಅದನ್ನು ಮಾರಾಟ ಮಾಡಿದ್ದೂ ಆಗಿದೆ!

ಐದು ಎಕರೆಯಲ್ಲಿ ಎರಡೂ ಬೆಳೆ ತೆಗೆಯಲು ಅವರು ಖರ್ಚು ಮಾಡಿದ್ದು ಕೇವಲ ಇಪ್ಪತ್ತೇಳು ಸಾವಿರ ರೂಪಾಯಿ. ಆದರೆ ಈಗಾಗಲೇ ಮಾರಾಟವಾಗಿರುವ ಹತ್ತು ಕ್ವಿಂಟಲ್‌ ಬರಗಿನಿಂದ ಅವರಿಗೆ ಒಂದು ಲಕ್ಷ ರೂಪಾಯಿ ಕೈಗೆ ಸಿಕ್ಕಿದೆ. ರಾಸುಗಳಿಗೆ ಹೆಚ್ಚು ಪೌಷ್ಟಿಕಾಂಶ ನೀಡುವ ಬರಗಿನ ಹುಲ್ಲನ್ನೂ ಅವರು ಇಪ್ಪತ್ತು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಉಳಿದ ಎರಡೂವರೆ ಎಕರೆಯಲ್ಲಿ ಬಲಿಯುತ್ತಿರುವ ಕೊರಲೆಯ ಕನಿಷ್ಠ ಹತ್ತು ಕ್ವಿಂಟಲ್‌ ಇಳುವರಿ ದೊರೆತರೂ ಅವರಿಗೆ ಒಂದೂವರೆ ಲಕ್ಷ ರೂಪಾಯಿ ಆದಾಯ ಖಚಿತವಾಗಿದೆ. ಬಿತ್ತನೆ ಬೀಜಕ್ಕಾಗಿ ಖರೀದಿಸುವವರಿಗೆ ಅವರು ಪ್ರತಿ ಕೆ.ಜಿ.ಗೆ ನೂರೈವತ್ತು ರೂಪಾಯಿಯಂತೆ ಮಾರಿದರೆ ಈ ಲಾಭ. ಅಕ್ಕಿ ಮಾಡಿಸಿ ಮಾರಿದರೆ ಪ್ರತಿ ಕೆ.ಜಿ ಬೆಲೆ ಕನಿಷ್ಠ ತೊಂಬತ್ತರಿಂದ ನೂರು ರೂಪಾಯಿ. ಆದರೆ ಬಿತ್ತನೆ ಬೀಜವೇ ಅವರ ಆದ್ಯತೆ.

‘ಅಪರೂಪವಾದ ಕೊರಲೆ ಬಿತ್ತನೆ ಬೀಜವನ್ನು ಹುಡುಕಲು ಒಂದೂವರೆ ಸಾವಿರ ಕಿ.ಮೀ. ಸುತ್ತಿದ್ದೇನೆ’ ಎನ್ನುವ ಅವರು ಕೊನೆಗೆ, ಮದ್ದೂರು ತಾಲ್ಲೂಕಿನ ಕೊಪ್ಪದಿಂದ ಹತ್ತು ಕೆ.ಜಿ. ಖರೀದಿಸಿ ತಂದು, ಆರು ಕೆ.ಜಿ.ಯಷ್ಟು ಬಿತ್ತನೆ ಮಾಡಿದ್ದರು.

ಕಡಿಮೆ ನೀರು: ಎರಡೂ ಬೆಳೆಗಳನ್ನೂ ಮೇ ತಿಂಗಳಲ್ಲೇ ಬಿತ್ತನೆ ಮಾಡಿದ್ದ ಅವರು, ಬರಗಿಗೆ ಎರಡು ಬಾರಿ ನೀರು ಹರಿಸಿದ್ದಾರೆ. ಬಿತ್ತನೆ ಬಳಿಕ ಮತ್ತು ಕಾಳು ಕಟ್ಟುವಾಗ. ಕೊರಲೆಗೆ ಮಾತ್ರ ಮೂರು ಬಾರಿ. ಇವೆರಡರ ನಡುವೆ ಅವರು ಕಿರುಧಾನ್ಯವಾದ ಸಾಮೆಯನ್ನೂ ಕೊಂಚ ಬೆಳೆದಿದ್ದಾರೆ. ಅದೂ ಬಿತ್ತನೆ ಬೀಜಕ್ಕಾಗಿ.

2002ರಿಂದ 2012ರವರೆಗೂ ಅವರು, ಸಾವಯವ ಪದ್ಧತಿಯಲ್ಲಿ ಕಾಲುವೆ ನೀರು, ಜೀವಾಮೃತ ಬಳಸಿ ಸೋನಾಮಸೂರಿ ಭತ್ತ ಬೆಳೆದಿದ್ದರು. ಅದು ಅವರ ಮನೆ ಬಳಕೆಗೆ ಮತ್ತು ಸ್ನೇಹಿತರಿಗೆ ಮೀಸಲಾಗಿತ್ತು. ಒಮ್ಮೆ ತಲಾ ಕಾಲು ಎಕರೆಯಲ್ಲಿ ಪ್ರಾಯೋಗಿಕವಾಗಿ ಅವರು ಬೆಳೆದ ರಾಜಮುಡಿ, ಚಿನ್ನಾಪೊನ್ನಿ ಮತ್ತು ಬಾಸುಮತಿ ಬೆಳೆ ನೋಡಲು ಡೆಹ್ರಾಡೂನಿನ ವಿಜ್ಞಾನಿಗಳೂ ಬಂದಿದ್ದರು. ಹತ್ತು ತಿಂಗಳಿಂದ ಅವರ ಮನೆಯಲ್ಲಿ ಎರಡು ಹೊತ್ತು ಸಿರಿಧಾನ್ಯದ್ದೇ ಆಹಾರ ಪದಾರ್ಥಗಳು ತಯಾರಾಗುತ್ತಿವೆ. ಅವರ ಪತ್ನಿ ಬಿ.ಎಂ.ಶೈಲಜಾ ಸಿರಿಧಾನ್ಯಗಳ ಅಡುಗೆಯಲ್ಲಿ ಪಳಗಿದ ಗೃಹಿಣಿಯಾಗಿದ್ದಾರೆ.

‘ಪ್ರಜಾವಾಣಿ’ ಲೇಖನವೇ ಸ್ಫೂರ್ತಿ: ಸಿರಿಧಾನ್ಯಗಳನ್ನು ಬೆಳೆಯಲು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಲೇಖನವೇ ಸ್ಫೂರ್ತಿ ಎಂದು ಈರಪ್ಪಯ್ಯ ಸ್ಮರಿಸುತ್ತಾರೆ.

2016 ಫೆಬ್ರುವರಿ–ಮಾರ್ಚ್‌ನಲ್ಲಿ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ರೈತ ಕೃಷ್ಣಪ್ಪನವರ ಬಗ್ಗೆ ಪ್ರಕಟವಾಗಿದ್ದ ಲೇಖನವನ್ನು ಓದಿ ಪ್ರಭಾವಿತವಾಗಿದ್ದೆ. ನಂತರ ಡಾ.ಖಾದರ್‌ ಅವರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಪರಿಣಾಮವಾಗಿ ಸಿರಿಧಾನ್ಯಗಳ ಮಹತ್ವದ ಅರಿವಾಯಿತು ಎನ್ನುತ್ತಾರೆ.

ರೈತನಾದ ಶಿಕ್ಷಕ: ಇಡೀ ಗ್ರಾಮದಲ್ಲಿ ಮಾದರಿ ಎನ್ನಿಸುವಂತೆ ಬೆಳೆ ತೆಗೆದಿರುವ ಈ ರೈತ, ಬಿ.ಎ, ಬಿ.ಇಡಿ ಮತ್ತು ಎಲ್‌.ಎಲ್‌.ಬಿ. ಪದವೀಧರ. ಆರು ತಿಂಗಳು ಮುನಿರಾಬಾದ್‌ನ ಖಾಸಗಿ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು, ಕೆಲ ಕಾಲ ವಕೀಲಿ ವೃತ್ತಿಯನ್ನೂ ಅಭ್ಯಾಸ ಮಾಡಿದ್ದರು. ತಮ್ಮ ಸಹೋದರರ ಕರೆಗೆ ಓಗೊಟ್ಟು ಕೆಲಸಕ್ಕೆ ರಾಜೀನಾಮೆ ನೀಡಿ ಹಳ್ಳಿಗೆ ವಾಪಸು ಬಂದವರು.

ನೀರಾವರಿ ಸೌಕರ್ಯವಿರುವ ಜಮೀನನ್ನು ಸಹೋದರರು ಪಡೆದಾಗ, ತಮ್ಮ ಪಾಲಿಗೆ ಬಂದ ಮಳೆಯಾಶ್ರಿತ ಜಮೀನಿನಲ್ಲೇ ಏನಾದರೂ ಸಾಧನೆ ಮಾಡುವ ಹಟ ತೊಟ್ಟವರು. ಮುಂದಿನ ವರ್ಷ ಜಮೀನಿನಲ್ಲೇ ಮನೆ ಕಟ್ಟಿ, ಐದು ಎಕರೆಯಲ್ಲಿ ಅಂಜೂರ, ಏಳೂವರೆ ಎಕರೆಯಲ್ಲಿ ರೇಷ್ಮೆ ಬೆಳೆಯುವ, 100 ಕುರಿ ಸಾಕಣೆ ಮಾಡುವ ಗುರಿಯೂ ಇದೆ. ‘ಮಳೆ ಇಲ್ಲದ ಕಾಲದಲ್ಲಿ ಇವೆಲ್ಲ ಸಾಧ್ಯವೇ?’ ಎಂದರೆ ‘ಅದೇಕೆ ಸಾಧ್ಯವಿಲ್ಲ?’ ಎಂಬ ಮರುಪ್ರಶ್ನೆಯೇ ಅವರ ಉತ್ತರ.

ಅವರ ಸಂಪರ್ಕಕ್ಕೆ: 94487 91506.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT