ಸ್ವಾತಂತ್ರ್ಯದ ಅರ್ಥ ಹುಡುಕುತ್ತಾ ಕಂಡಷ್ಟು...

ಮದುವೆ ಎನ್ನುವುದು ಖಾಸಗಿ ವಿಚಾರವಾದರೂ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೇ ಇಲ್ಲದ ಹೆಣ್ಣು ಮಕ್ಕಳಷ್ಟೇ ಅಲ್ಲ, ಅನೇಕ ಗಂಡು ಮಕ್ಕಳನ್ನೂ ನೋಡಿದ್ದೇನೆ. ಅವರ ಆಸಕ್ತಿ, ಅಭಿರುಚಿ, ಮನೋಧರ್ಮಕ್ಕೆ ತಕ್ಕಂತೆ ಜತೆಗಾರರನ್ನು ಹುಡುಕಿಕೊಳ್ಳುವ ಸ್ವಾತಂತ್ರ್ಯಕ್ಕೆ ಇವತ್ತಿಗೂ ಜಾತಿ, ಧರ್ಮ, ಅಂತಸ್ತುಗಳೇ ಅಡ್ಡಿಯಾಗಿರುವುದನ್ನು ನೋಡುತ್ತಲೇ ಇದ್ದೇವೆ

ಸ್ವಾತಂತ್ರ್ಯದ ಅರ್ಥ ಹುಡುಕುತ್ತಾ ಕಂಡಷ್ಟು...

ಇಂದು ಸ್ವಾತಂತ್ರ್ಯೋತ್ಸವ. ಶಾಲಾ ದಿನಗಳಂತೆ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ವಯಸ್ಕರಿಗೆ ಸಕಾರಣಗಳು ಸಿಗಲಾರದು. ಅದರಲ್ಲೂ ವರ್ತಮಾನದ ಆಗುಹೋಗುಗಳ ಬಗ್ಗೆ ಪ್ರತಿಕ್ರಿಯಿಸುವ ನನ್ನಂಥವರಿಗೆ ಈ ಹಬ್ಬವೂ ಒಂದು ಶಾಸ್ತ್ರ. ನಮ್ಮ ಮನೆಯಲ್ಲೂ ಸಾಂಕೇತಿಕವಾಗಿ ತ್ರಿವರ್ಣ ಧ್ವಜ ಹಾರಿಸುವ ಪರಿಪಾಠ ವರ್ಷಗಳಿಂದ ನಡೆದು ಬಂದಿದೆ. ಒಂದು ದೇಶವಾಗಿ ಭಾರತದ ಸ್ವಾತಂತ್ರ್ಯೋತ್ಸವ ಬಹುಮುಖ್ಯ ಚಾರಿತ್ರಿಕ ನೆನಪುಗಳನ್ನು ಹಂಚಿ ಸಂಭ್ರಮಿಸುವ ಸಂದರ್ಭವನ್ನು ಒದಗಿಸುತ್ತದೆ. ಹಾಗೆ ಸಂಭ್ರಮ ಅನುಭವಿಸುವುದಕ್ಕೆ ತಕ್ಕ ವಾತಾವರಣವೂ ಬೇಕು.

ಓರ್ವ ಲೇಖಕ ‘ಸ್ವಾತಂತ್ರ್ಯವೇ ಒಂದು ದೊಡ್ಡ ಸೆರೆಮನೆ’ ಎಂದು ಎಲ್ಲೋ ಒಂದೆಡೆ ಪ್ರಸ್ತಾಪಿಸಿದ್ದ ನೆನಪು. ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ನಾವು ಇಷ್ಟ ಬಂದಂತೆ ಇರುವುದು ಸಾಧ್ಯವಿಲ್ಲ. ಒಂದು ವ್ಯವಸ್ಥೆ ಎಂಬ ದೊಡ್ಡ ಸೆರೆಮನೆಯ ಅಲ್ಲಿನ ವಿವಿಧ ಕಟ್ಟುಪಾಡುಗಳಿಗೆ ತಕ್ಕಂತೆ ನಾವು ಗೊತ್ತಿದ್ದೂ ಗೊತ್ತಿಲ್ಲದಂತೆ, ಗೊತ್ತಿಲ್ಲದೆಯೂ ಗೊತ್ತಿರುವಂತೆ ಬಂದಿಗಳಾಗಿರುತ್ತೇವೆ. ಇದು ಕುಟುಂಬ, ಊರು, ಜಿಲ್ಲೆ, ರಾಜ್ಯ ಅಥವಾ ದೇಶವೇ ಆಗಿರಬಹುದು. ವೈಯಕ್ತಿಕ ಸಂಬಂಧಗಳಲ್ಲಿಯೂ ಬಂಧಗಳನ್ನೇ ಬಂಧನವಾಗಿಸಿಕೊಂಡವರೂ ಇರಬಹುದು.

ನಾವು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ, ವೈಜ್ಞಾನಿಕ ಆವಿಷ್ಕಾರಗಳ ಸಕಲ ಅನುಕೂಲ ಪಡೆಯುತ್ತಿದ್ದರೂ ಮೌಢ್ಯಗಳ ಬಂಧನದಲ್ಲಿ, ಜಾತಿಗಳ ಬಂಧನದಲ್ಲಿ, ಧರ್ಮಗಳ ಬಂಧನದಲ್ಲಿ, ಸಾಮಾಜಿಕ ಪ್ರತಿಷ್ಠೆಯ ಬಂಧನದಲ್ಲಿ ಸ್ವತಂತ್ರ ಮನುಷ್ಯರಾಗಿ ಚಿಂತಿಸುವುದನ್ನೇ ಕಳೆದುಕೊಂಡಿದ್ದೇವೆ. ಕಾಲ ಉರುಳಿದಂತೆ ಈ ಎಲ್ಲ ಬಂಧನಗಳು ಸಡಿಲಗೊಂಡು ನಾವೆಲ್ಲರೂ ಬಿಡುಗಡೆಯ ಸ್ವಚ್ಛ ಹವೆಯನ್ನು ಉಸಿರಾಡಬೇಕಿತ್ತು. ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ, ಅದಕ್ಕೆ ತಕ್ಕಂತೆ ಪ್ರಗತಿಪರ ಚಿಂತನೆ, ಜಾಗತೀಕರಣ ಈ ಎಲ್ಲ ಬೆಳವಣಿಗೆಗಳು ಒಂದಷ್ಟು ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ತಂದಿರ
ಬಹುದೇ ಹೊರತು ಮಾನಸಿಕ ಮಾಲಿನ್ಯದಿಂದ ಬಿಡುಗಡೆಯಾಗುವುದು ಸಾಧ್ಯವೇ ಆಗಿಲ್ಲ. ಈ ಕಲುಷಿತ ವ್ಯವಸ್ಥೆ ನಮ್ಮನ್ನು ನಮ್ಮ ಅರಿವಿಗೇ ಬಾರದಂತೆ ಜಾತಿಯ, ಧರ್ಮದ ಬಂಧನದಲ್ಲಿಡುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ನೀಡುತ್ತೇನೆ.

ಆಗ ನನ್ನ ಮಗ ಐದನೇ ತರಗತಿಯಲ್ಲಿದ್ದ. ಸಂಜೆ ಆಟವಾಡಲು ಹೋಗಿದ್ದವನು ಮನೆಗೆ ಓಡೋಡಿ ಬಂದು, ‘ಅಮ್ಮಾ, ನಮ್ಮ ಜಾತಿ ಯಾವುದು?’ ಎಂದು ಪ್ರಶ್ನಿಸಿದ. ನಾನು ಅವನಿಗೆ ‘ಯಾಕೆ ಈ ಪ್ರಶ್ನೆ’ ಎಂದು ಕೇಳಿದೆ. ಅದಕ್ಕೆ ಅವನು, ‘ನಮ್ಮ ಮನೆ ಎದುರಿರುವ ಸಂಜಯ್ ಒಕ್ಕಲಿಗರಂತೆ, ನೀವ್ಯಾವ ಜಾತಿ ಎಂದು ಕೇಳಿದ’ ಎಂದ. ಯಾವತ್ತೂ ಜಾತಿಯ ಬಗ್ಗೆ ಏನನ್ನೂ ಹೇಳದೇ ಇದ್ದ ನಮಗೆ ಅಚ್ಚರಿ, ಆಘಾತ ಉಂಟಾಗಿತ್ತು. ನನ್ನ ಮಗನನ್ನು ಪ್ರಶ್ನಿಸಿದೆ, ‘ನಿನ್ನ ತಾತ ಏನು ಮಾಡುತ್ತಾರೆ?’ ‘ಅವರು ಟೀಚರ್’, ‘ನಿನ್ನ ಅಮ್ಮ?’ ‘ಅವಳು ಲಾಯರ್’, ‘ನಾನು?’ ‘ನೀವು ಜರ್ನಲಿಸ್ಟ್’ ಎಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ಮಗನಿಗೆ ‘ಒಕ್ಕಲಿಗರು ಎಂದರೆ ಕೃಷಿಕರು’ ಎಂದೆ. ‘ಹಾಗಾದರೆ ಮೊಹ್ಮದ್’... ಅವನ ಪ್ರಶ್ನೆಗಳ ಮಾಲೆ ಇನ್ನಷ್ಟು ವಿಸ್ತರಿಸುತ್ತಿದ್ದಂತೆ ಆತಂಕ ಹೆಚ್ಚಾಯಿತು. ಯಾವುದನ್ನೆಲ್ಲ ಹೇಳಿಕೊಡಬಾರದು ಎಂದುಕೊಂಡಿದ್ದೆನೋ ಅದೆಲ್ಲವನ್ನೂ ಅವನು ಕೇಳಲು ಶುರು ಮಾಡಿದ್ದ. ಯಾವುದು ಧರ್ಮ, ಯಾವುದು ಅಧರ್ಮ ಎಂಬ ಅರಿವು ಮೂಡಿಸಿ ಸ್ವತಂತ್ರವಾಗಿ ಬೆಳೆಸುವ ಸವಾಲು ನಮ್ಮ ಮುಂದಿತ್ತು.

ಮದುವೆ ಎನ್ನುವುದು ಖಾಸಗಿ ವಿಚಾರವಾದರೂ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೇ ಇಲ್ಲದ ಹೆಣ್ಣು ಮಕ್ಕಳಷ್ಟೇ ಅಲ್ಲ, ಅನೇಕ ಗಂಡು ಮಕ್ಕಳನ್ನೂ ನೋಡಿದ್ದೇನೆ. ಅವರ ಆಸಕ್ತಿ, ಅಭಿರುಚಿ, ಮನೋಧರ್ಮಕ್ಕೆ ತಕ್ಕಂತೆ ಜತೆಗಾರರನ್ನು ಹುಡುಕಿಕೊಳ್ಳುವ ಸ್ವಾತಂತ್ರ್ಯಕ್ಕೆ ಇವತ್ತಿಗೂ ಜಾತಿ, ಧರ್ಮ, ಅಂತಸ್ತುಗಳೇ ಅಡ್ಡಿಯಾಗಿರುವುದನ್ನು ನೋಡುತ್ತಲೇ ಇದ್ದೇವೆ. ಹಾಗೂ ಹೀಗೂ ಹೇಗೋ ಅಂತರ್ಜಾತಿ, ಅಂತರ್ಮತೀಯ ಮದುವೆಯಾದವರೂ ತಮ್ಮ ಜಾತಿ, ಧರ್ಮಗಳ ಬಂಧನದಿಂದ ಹೊರಬರದಿರುವ, ಹಾಗೇ ಜಾತಿಯ ಒಳಗೇ ಮದುವೆಯಾಗಿದ್ದರೂ ಜಾತೀಯತೆಯ ಎಳ್ಳಷ್ಟೂ ಸೋಂಕಿಲ್ಲದ ಎಷ್ಟೋ ಜೋಡಿಗಳನ್ನು ನಾನು ನೋಡಿದ್ದೇನೆ.

ಇದು ಈ ದ್ವಂದ್ವ ವ್ಯವಸ್ಥೆಯ ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ. ಜಾತ್ಯತೀತ ನಿಲುವು ಮೂಡಬೇಕಾಗಿರುವುದು ನಮ್ಮ ಅಂತರಂಗದಲ್ಲೇ ಹೊರತು ತೋರಿಕೆಯ ಮಾತುಗಳಲ್ಲಿ ಅಲ್ಲ. ಹಾಗೇ ಎಷ್ಟೋ ಅಪರಾಧ ಪ್ರಕರಣಗಳಲ್ಲಿ ಸೆರೆಮನೆಯಲ್ಲೇ ಆತಿಥ್ಯ ಸ್ವೀಕರಿಸಬೇಕಾದ ಅದೆಷ್ಟೋ ‘ಗಣ್ಯ’ ವ್ಯಕ್ತಿಗಳು ಒಂದಿಷ್ಟೂ ಸಂಕೋಚ ಇಲ್ಲದೆ ಎದೆ ಎತ್ತಿಕೊಂಡು ಓಡಾಡುತ್ತಿರುವ, ಬಿಡುಗಡೆಯಾಗಿರುವ, ಅಪರಾಧವೇ ಸರಿ ಎಂಬಂಥ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿರುವಾಗ ಎಲ್ಲೋ ಮನದ ಮೂಲೆಯಲ್ಲಿ ಸ್ವೈರತೆ ಬಲಾಢ್ಯರ ಹಕ್ಕು; ಸ್ವಾತಂತ್ರ್ಯ ದುರ್ಬಲರ ಪಾಲಿಗೆ ಭಿಕ್ಷೆ ಅನ್ನಿಸಿಬಿಡುತ್ತದೆ.

ಮೊನ್ನೆಯಷ್ಟೇ ಹಮೀದ್ ಅನ್ಸಾರಿ ತಮ್ಮ ಉಪರಾಷ್ಟ್ರಪತಿ ಅವಧಿಯ ಕೊನೇ ದಿನ ರಾಜ್ಯಸಭಾ ಟಿ.ವಿ.ಗೆ ನೀಡಿದ ಸಂದರ್ಶನದಲ್ಲಿ ‘ಮುಸ್ಲಿಮರು ಅಭದ್ರತೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ಹೇಳಿದ್ದೇ ಅಪರಾಧ ಎಂಬಂತೆ ಅವರ ಅಭಿಪ್ರಾಯವನ್ನು ಟೀಕಿಸುವ ಸ್ಪರ್ಧೆ ಒಂದು ವರ್ಗದಿಂದ ನಡೆಯಿತು. ಆದರೆ ಅವರು ಹೇಳಿದ್ದೇ ಸರಿ ಎನ್ನುವಂಥ ಘಟನೆಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯುತ್ತಿರುವುದಕ್ಕೆ ಸಾಲು ಸಾಲು ಉದಾಹರಣೆಗಳನ್ನು ನೀಡಬಹುದು. ಅಭಿಪ್ರಾಯ ಸ್ವಾತಂತ್ರ್ಯವೂ ಅಪರಾಧ ಎನ್ನುವಂಥ ಪರಿಸ್ಥಿತಿ ಹಮೀದ್ ಅನ್ಸಾರಿ ಅವರ ಪ್ರಕರಣದಲ್ಲೇ ಕಾಣಬಹುದಾಗಿದೆ.

ನೀವೇ ನೋಡಿ. ಯಾವುದೇ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್, ಕುಡಿಯುವ ನೀರು, ಕೃಷಿಗೆ ನೀರಾವರಿ ವ್ಯವಸ್ಥೆ ಒದಗಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಅಲ್ಲಿನ ಸರ್ಕಾರದ ಮಹತ್ತರ ಕರ್ತವ್ಯ. ಆದರೆ ಸಂಘಪರಿವಾರದ ರೆಂಬೆಯಾದ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಅಲ್ಲಿನ ಆದ್ಯತೆಗಳೇ ಬೇರೆಯಾಗಿವೆ. ಉತ್ತರಪ್ರದೇಶದ ಗೋರಖಪುರದ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಕೆ ಕೊರತೆಯಿಂದಾಗಿ 60ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಘಟನೆ ಮೂರು–ನಾಲ್ಕು ದಿನಗಳ ಹಿಂದಷ್ಟೇ ಬಯಲಾಗಿದೆ. ಬಹುತೇಕ ಬಡಜನರೇ ಹೋಗುವ ಸರ್ಕಾರಿ ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿ ಇರಿಸಿ ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿ. ವೈಯಕ್ತಿಕ ಕಾರಣಕ್ಕೆ ಯಾರೋ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ಆ ಪ್ರಕರಣ
ವನ್ನೇ ಪ್ರತಿಭಟನೆಯ ಅಸ್ತ್ರವಾಗಿಸಿ ಬೊಬ್ಬೆ ಹೊಡೆಯುವ ಇದೇ ಪಕ್ಷದ ಅಡಿಯಿಂದ ಮುಡಿಯವರೆಗಿನ ನಾಯಕರು ಈ ಪ್ರಕರಣದಲ್ಲಿ ಮಾತ್ರ ಸಬೂಬು ಹೇಳುತ್ತಾ ನುಣುಚಿಕೊಳ್ಳುತ್ತಿದ್ದಾರೆಯೇ ಹೊರತು ಜವಾಬ್ದಾರಿಯುತವಾಗಿ ಮಾತನಾಡುವ ಚಿತ್ರಗಳೇ ಕಂಡು ಬರಲಿಲ್ಲ.

ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬೆಳಿಗ್ಗೆ ಮೂರು ಗಂಟೆಗೇ ಎದ್ದು ಯೋಗ, ಪ್ರಾರ್ಥನೆ ಮಾಡುತ್ತಾರಂತೆ. ಗೋಶಾಲೆಯಲ್ಲಿರುವ ಐನೂರಕ್ಕೂ ಹೆಚ್ಚು ಗೋವುಗಳಲ್ಲಿ ಒಂದೊಂದನ್ನೂ ಅವುಗಳ ಹೆಸರಿನಿಂದ ಕರೆದು ಸ್ವತಃ ಆಹಾರ ನೀಡಿದ ನಂತರವಷ್ಟೇ ಅವರು ಉಪಾಹಾರ ಸೇವಿಸುತ್ತಾರಂತೆ. ಅವರ ಗುರು ಅವೈದ್ಯನಾಥರ ಪ್ರೇರಣೆಯಂತೆ ಗೋರಕ್ಷಣೆಯ ಪಣತೊಟ್ಟಿದ್ದಾರಂತೆ. ಅವಿವಾಹಿತರೂ ಆಗಿರುವ ಆದಿತ್ಯನಾಥರಿಗೆ ಸಂಸಾರ ತಾಪತ್ರಯಗಳೇನೂ ಇಲ್ಲದಿರುವುದರಿಂದ ಸಮಾಜ ಸೇವೆಗೆ ಹೆಚ್ಚಿನ ಸಮಯ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಗೋವುಗಳ ಬಗ್ಗೆ ಅವರಿಗೆ ಇರುವ ಸಮಯ ಮತ್ತು ಪ್ರೀತಿಯಲ್ಲಿ ಒಂದಿಷ್ಟನ್ನಾದರೂ ಮನುಷ್ಯರಿಗೂ ವಿನಿಯೋಗ ಮಾಡಿದ್ದರೆ ಗೋರಖಪುರ ಆಸ್ಪತ್ರೆ ಈಗಿನ ಕುಖ್ಯಾತಿ ಪಡೆಯುತ್ತಿರಲಿಲ್ಲ. ಅಂದ ಹಾಗೇ ಗೋರಖಪುರ ಎನ್ನುವ ಹೆಸರು ಗೋರಕ್ಷಾಪುರ ಎಂದಿತ್ತಂತೆ!

ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಹೊಂದಿರುವ ನಗರ, ಪ್ರಖ್ಯಾತ ಸಾಹಿತಿ ಪ್ರೇಮ್‌ಚಂದ್ ಕೆಲವು ವರ್ಷ ಸಹಾಯಕ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ನಗರ ಎಂಬ ಹಿರಿಮೆ ಗೋರಖಪುರಕ್ಕೆ ಇದೆ. ಈ ಜಿಲ್ಲೆ ಆಗಿಂದಾಗ್ಗೆ ಪ್ರವಾಹಗಳಿಂದ ನಲುಗಿ ಹೋಗಿದೆ. ಪ್ರವಾಹಗಳ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಮಾಡಬೇಕಿರುವ ಕೆಲಸವೇ ಸಾಕಷ್ಟಿದೆ. ಆಸ್ಪತ್ರೆಗಳ ಸ್ಥಿತಿ ಯಾವ ರೀತಿ ಇರಬಹುದು ಎಂಬುದನ್ನು ಮಕ್ಕಳ ಸಾವಿನ ಪ್ರಕರಣವೇ ಬಿಚ್ಚಿಟ್ಟಿದೆ. ಮಕ್ಕಳನ್ನು ಕಳೆದುಕೊಂಡು ನೋವಿನಲ್ಲಿ ಬೇಯುತ್ತಿರುವ ಪೋಷಕರಂತೂ ಈ ಆಸ್ಪತ್ರೆಯನ್ನು ಕಸಾಯಿಖಾನೆ ಎಂದು ಕರೆದಿದ್ದಾರೆ. ಗೋರಖಪುರ ಸೇರಿದಂತೆ ಉತ್ತರಪ್ರದೇಶದಲ್ಲಿ ಆಗಬೇಕಿರುವ ಜನೋಪಯೋಗಿ ಕಾರ್ಯಗಳು ಬೆಟ್ಟದಷ್ಟಿವೆ. ಆದರೆ ಇಲ್ಲಿನ ಸರ್ಕಾರ ಮಾಡುತ್ತಿರುವುದಾದರೂ ಏನು?

ಸ್ವಾತಂತ್ರ್ಯೋತ್ಸವದ ದಿನ (ಇಂದು) ಬೆಳಿಗ್ಗೆ ತ್ರಿವರ್ಣ ಧ್ವಜ ಹಾರಿಸಬೇಕು, ಸ್ವಾತಂತ್ರ್ಯ ಯೋಧರ ಸ್ಮರಣೆ ಮಾಡಬೇಕು, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು, ಈ ಎಲ್ಲ ಕಾರ್ಯಕ್ರಮಗಳನ್ನು ವಿಡಿಯೊ ಮತ್ತು ಛಾಯಾಚಿತ್ರೀಕರಣ ಮಾಡಿ ತನಗೆ ಕಳಿಸಬೇಕು ಎಂದು ಉತ್ತರಪ್ರದೇಶ ಸರ್ಕಾರ ರಾಜ್ಯದ ಎಲ್ಲ ಮದರಸಾಗಳಿಗೆ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ಸೇರಿದಂತೆ ಇತರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಇದೇ ರೀತಿಯ ಸುತ್ತೋಲೆಗಳನ್ನು ಕಳಿಸಿದ್ದರೆ ವಿವಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಆದರೆ ಮದರಸಾಗಳೆಂದು ಕರೆಯಲಾಗುವ ಇಸ್ಲಾಂ ಧಾರ್ಮಿಕ ಶಾಲೆಗಳಿಗೆ ಮಾತ್ರ ಇಂಥ ಸುತ್ತೋಲೆಗಳನ್ನು ಕಳಿಸಿರುವುದು ಒಂದು ಸಮುದಾಯದ ದೇಶಭಕ್ತಿ, ನಿಷ್ಠೆ ಮತ್ತು ನಂಬಿಕೆಗಳನ್ನೇ ಪ್ರಶ್ನಿಸುವಂತಿದೆ.

ಮುಸ್ಲಿಮರನ್ನು ಅನುಮಾನಿಸುವ ರೋಗ ಈ ಮಟ್ಟಕ್ಕೆ ಬೆಳೆದಿದೆ. ಅನುಮಾನಿಸುವುದು ಕೂಡ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಒಂದು ಬಗೆಯಲ್ಲದೆ ಬೇರೇನಲ್ಲ. ಹಾಗೆ ನೋಡಿದರೆ ಸಂಘ ಪರಿವಾರದ ಯಾವುದೇ ಸಂಸ್ಥೆಗಳಲ್ಲಿ ಎಷ್ಟೋ ವರ್ಷಗಳವರೆಗೆ ತ್ರಿವರ್ಣಧ್ವಜ ಹಾರಿಸುವ ಪದ್ಧತಿಯೇ ಇರಲಿಲ್ಲ. ಈಗ ಎಷ್ಟು ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆಯೋ ಗೊತ್ತಿಲ್ಲ. ಸಂಘ ಪರಿವಾರಕ್ಕೆ ಸೇರಿದವರು ಮಾತ್ರ ದೇಶಭಕ್ತರು, ಉಳಿದವರೆಲ್ಲ ದೇಶದ್ರೋಹಿಗಳು ಎಂಬ ಬುರ್ನಾಸು ಭಾವನೆ ಹುಟ್ಟಿ ಹಾಕಿರುವ ಇಂಥವರಿರುವ ಸರ್ಕಾರ ವಿಡಿಯೊ ಮತ್ತು ಛಾಯಾ ಚಿತ್ರೀಕರಣದ ಮೂಲಕ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ‘ಸೆರೆ’ ಹಿಡಿಯುವ ಆದೇಶದಲ್ಲೇ ಬಂಧನವೂ ಇದೆ. ಇನ್ಯಾರಿಗೋ ತಮ್ಮ ದೇಶಭಕ್ತಿಯನ್ನು ಸಾಬೀತು
ಪಡಿಸುವ ಸ್ಥಿತಿ ಎದುರಿಸುತ್ತಿರುವ ಮದರಸಾಗಳು ಎಷ್ಟರ ಮಟ್ಟಿಗೆ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವುದು ಸಾಧ್ಯವಿದೆ? ಈ ನಿರ್ಧಾರ ಮತಿಹೀನ ಮಾತ್ರವಲ್ಲ, ಅತ್ಯಂತ ಸಂಕುಚಿತ ಮನಸ್ಸಿನ ಪ್ರದರ್ಶನವೂ ಆಗಿದೆ.

ಇನ್ನೊಂದೆಡೆ ಗೋಮಾಂಸವನ್ನು ಅಕ್ರಮವಾಗಿ ಸಂಗ್ರಹಿಸಿರುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅಧಿಕಾರ ನೀಡುವ 1995ರ ಪ್ರಾಣಿ ಸಂರಕ್ಷಣೆ ತಿದ್ದುಪಡಿ ಕಾಯ್ದೆಯ 5 ಡಿ ವಿಧಿಗೆ ಮರು ಜೀವ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಮನವಿ ಸಲ್ಲಿಸಿದೆ. ಯಾವುದೇ ವ್ಯಕ್ತಿ ಎಮ್ಮೆ, ಎತ್ತು ಅಥವಾ ಹಸುವಿನ ಮಾಂಸ ಒಯ್ಯುತ್ತಿರುವ ಬಗ್ಗೆ ಸಂಶಯ ಉಂಟಾದರೆ ಆತನನ್ನು ತಡೆದು ಶೋಧಿಸುವುದಕ್ಕೆ ಮತ್ತು ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸುವುದಕ್ಕೆ ಈ ವಿಧಿ ಅವಕಾಶ ನೀಡಿತ್ತು. ಶಂಕಿತ ವ್ಯಕ್ತಿಗಳು ಇದೇ ಕಾಯ್ದೆಯ 9 ಬಿ ವಿಧಿಯಂತೆ ಆರೋಪಮುಕ್ತರಾಗುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ವಿವಿಧ ಸಂಘಟನೆಗಳ ಮನವಿಯ ಫಲವಾಗಿ 2015ರಲ್ಲಿ ಬಾಂಬೆ ಹೈಕೋರ್ಟ್ ಈ ಎರಡೂ ವಿಧಿಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಈಗ ಮತ್ತೆ ಅದೇ ವಿಧಿಗೆ ಜೀವ ನೀಡುವುದಕ್ಕೆ ನಡೆಸಿರುವ ಮಹಾರಾಷ್ಟ್ರ ಸರ್ಕಾರದ ಪ್ರಯತ್ನ ವೈಯಕ್ತಿಕ ಸ್ವಾತಂತ್ರ್ಯ ಹರಣಕ್ಕೆ ಸಜ್ಜಾಗುತ್ತಿರುವ ಲಕ್ಷಣವಲ್ಲದೆ ಬೇರೇನಲ್ಲ. ಕಿರುಕುಳ ನೀಡುವುದೇ ಆಡಳಿತ ಎಂದು ಬಿಜೆಪಿ ಸರ್ಕಾರಗಳು ಭಾವಿಸಿವೆ! ಇದು ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಇನ್ನಷ್ಟು ಅತಂತ್ರರಾಗಿಸಿ ಅಡಿಯಾಳುಗಳಾಗಿಸುವ ಪ್ರಯತ್ನದ ಒಂದು ಭಾಗವಷ್ಟೇ.

ಸ್ವಾತಂತ್ರ್ಯದ ಗುರಿ ಈಡೇರಲು ಅಡ್ಡಿಯಾಗಿರುವ ಅಂಶಗಳ ಕುರಿತು ವರಕವಿ ದ.ರಾ.ಬೇಂದ್ರೆ ತಮ್ಮ ‘ಸ್ವಾತಂತ್ರ್ಯ ವರ್ಧಂತಿ’ ಕವನದಲ್ಲಿ ಎಚ್ಚರಿಕೆ ನೀಡಿದ್ದು ಹೀಗೆ.

‘ಸ್ವೈರತೆಗೂ ಸ್ವಾತಂತ್ರ್ಯಕು ಇಹುದು ಅಜಗಜಾಂತರಾ
ಸುವ್ಯವಸ್ಥೆ ಮಹಾತಂತ್ರ, ಬದ್ಧತೆ ಬರಿ ಯಂತರಾ
ಮತದ ಹೆಮ್ಮೆ ಬರಡು ಎಮ್ಮೆ, ಸುಫಲವಹುದು ಎಚ್ಚರಾ
ಮನೆಯ ಸುಟ್ಟು ಮಾರ ಸುಟ್ಟುಅಡಗಬಹುದುಮಚ್ಚರಾ’.

Comments
ಈ ವಿಭಾಗದಿಂದ ಇನ್ನಷ್ಟು
ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

ಭಾವಭಿತ್ತಿ
ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

20 Mar, 2018
ರಾಜ್ಯಸಭೆ: ಆತ್ಮಗೌರವಕ್ಕೆ ಬೇಕು ಕನ್ನಡದ ದನಿ

ಭಾವಭಿತ್ತಿ
ರಾಜ್ಯಸಭೆ: ಆತ್ಮಗೌರವಕ್ಕೆ ಬೇಕು ಕನ್ನಡದ ದನಿ

6 Mar, 2018
ಬಿಜೆಪಿಗೆ ಬೇಕು ಅತಲಕುತಲ ನಾಯಕರು

ಭಾವಭಿತ್ತಿ
ಬಿಜೆಪಿಗೆ ಬೇಕು ಅತಲಕುತಲ ನಾಯಕರು

23 Jan, 2018
‘ಭಾರತಕ್ಕೆ ಬೇಕಿರುವುದು ಹಿಂದುತ್ವವಲ್ಲ, ದಲಿತತ್ವ’

ಭಾವಭಿತ್ತಿ
‘ಭಾರತಕ್ಕೆ ಬೇಕಿರುವುದು ಹಿಂದುತ್ವವಲ್ಲ, ದಲಿತತ್ವ’

29 Aug, 2017
ಪೊಳ್ಳು ಸಂಸ್ಕೃತಿ ಪೋಷಾಕಿನ ಅಭಾರತೀಯತೆ

ಭಾವಭಿತ್ತಿ
ಪೊಳ್ಳು ಸಂಸ್ಕೃತಿ ಪೋಷಾಕಿನ ಅಭಾರತೀಯತೆ

1 Aug, 2017