ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿ ಸಮೀಕ್ಷೆ: ಸಕಾಲಿಕ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ

Last Updated 14 ಆಗಸ್ಟ್ 2017, 20:20 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದಲ್ಲಿ (2017–18) ದೇಶದ ಆರ್ಥಿಕ ಸ್ಥಿತಿಗತಿಯು ಆಶಾದಾಯಕವಾಗಿರುವ ಸಾಧ್ಯತೆ ಕ್ಷೀಣಿಸಿದೆ. ಲೋಕಸಭೆಯಲ್ಲಿ ಮಂಡಿಸಲಾದ ಎರಡನೆ ಕಂತಿನ ಆರ್ಥಿಕ ಸಮೀಕ್ಷೆಯು ನಿರಾಶಾದಾಯಕ ಚಿತ್ರಣ ನೀಡಿದೆ. ಅರ್ಥ ವ್ಯವಸ್ಥೆಯನ್ನು ಗಂಭೀರವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಈ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಹಾಗೆಯೇ ಪರಿಹಾರಗಳನ್ನೂ ಸೂಚಿಸಿರುವುದನ್ನು ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗಂಭೀರವಾಗಿ ಪರಿಗಣಿಸಬೇಕಾಗಿದೆ.‌

ಈ ಮೊದಲು ಈ ವರ್ಷದ ಜನವರಿಯಲ್ಲಿ ಮಂಡಿಸಲಾಗಿದ್ದ ಸಮೀಕ್ಷೆಯಲ್ಲಿ ಗರಿಷ್ಠ ಆರ್ಥಿಕ ವೃದ್ಧಿ ಸಾಧಿಸುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಲಾಗಿತ್ತು. ಈಗ ಅಂತಹ ಆಶಾಗೋಪುರ ಕಳಚಿ ಬಿದ್ದಿದೆ. ಆರ್ಥಿಕತೆಯ ಬಹುತೇಕ ವಲಯಗಳಲ್ಲಿ ಮಂದಗತಿಯ ಪ್ರಗತಿ ಇರುವುದರಿಂದ, ಈ ಮೊದಲು ಅಂದಾಜಿಸಿದ್ದ ಶೇ 6.75 ರಿಂದ ಶೇ 7.5ರ ವ್ಯಾಪ್ತಿ ಒಳಗಿನ ಆರ್ಥಿಕ ಬೆಳವಣಿಗೆ ಸಾಧಿಸುವುದು ಕಷ್ಟಸಾಧ್ಯ ಎನ್ನುವ ಕಟು ವಾಸ್ತವತೆ ಅನಾವರಣಗೊಂಡಿದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಸಿದ್ಧಪಡಿಸಿರುವ ಈ ವಾರ್ಷಿಕ ಆರ್ಥಿಕ ಪರಾಮರ್ಶೆಯಲ್ಲಿ ವರ್ಷದ ಆರ್ಥಿಕ ಪ್ರಗತಿಯು ಹೆಚ್ಚು ಮಸುಕಾಗಿದೆ.

ರಾಜ್ಯ ಸರ್ಕಾರಗಳು ಪ್ರಕಟಿಸಿರುವ ಕೃಷಿ ಸಾಲ ಮನ್ನಾ, ನಷ್ಟಪೀಡಿತ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ನೆರವು ನೀಡಲು ಹಣ ತೆಗೆದು ಇರಿಸಿರುವುದರಿಂದ ರಾಜ್ಯಗಳಲ್ಲಿ ಸಂಪನ್ಮೂಲ ಕ್ರೋಡೀಕರಣ ಕಡಿಮೆಯಾಗಲಿದೆ. ವಿದ್ಯುತ್‌ ಮತ್ತು ದೂರಸಂಪರ್ಕ ವಲಯದಲ್ಲಿನ ಲಾಭದ ಪ್ರಮಾಣ ಕುಸಿತವೂ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದೆ. ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದ ನಿರಂತರ ಹೆಚ್ಚಳವು ರಫ್ತುದಾರರಿಗೆ ಪ್ರತಿಕೂಲವಾಗಿದೆ. ಡಾಲರ್‌ ಎದುರು ಅಪಮೌಲ್ಯಗೊಂಡಿರುವ ಕರೆನ್ಸಿ ಹೊಂದಿದ ದೇಶಗಳ ಅಗ್ಗದ ಬೆಲೆ ಪೈಪೋಟಿ ಎದುರಿಸುವುದು ಸವಾಲಾಗಿ ಪರಿಣಮಿಸಿದೆ.

‘ಸರ್ಕಾರ ಜಾರಿಗೆ ತಂದಿರುವ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳು ಆಶಾದಾಯಕವಾಗಿವೆ.  ಇದರಿಂದ  ಆರ್ಥಿಕ ಪ್ರಗತಿಯ ಚಿತ್ರಣ ದೀರ್ಘಾವಧಿಯಲ್ಲಷ್ಟೇ ಬದಲಾಗಲಿದೆ’ ಎಂದೂ ಸಮೀಕ್ಷೆ ಅಭಿಪ್ರಾಯಪಟ್ಟಿರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿ, ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿಯಿಂದ ಕಪ್ಪು ಹಣ ಹಾವಳಿಯ ಕೆಲಮಟ್ಟಿಗಿನ ನಿಯಂತ್ರಣ, ತೆರಿಗೆ ಬದ್ಧತೆ ಹೆಚ್ಚಳ ಬೀರಿರುವ ಸಕಾರಾತ್ಮಕ ಪರಿಣಾಮ, ಏರ್‌ ಇಂಡಿಯಾ ಖಾಸಗೀಕರಣ ಮತ್ತು ಇನ್ನಷ್ಟು ಸಬ್ಸಿಡಿಗಳ ಕಡಿತ ನಿರ್ಧಾರಗಳು ಆರ್ಥಿಕ ಪುನಶ್ಚೇತನದ ಭರವಸೆ ಮೂಡಿಸಿವೆ.

ಇವೆಲ್ಲಾ ದೀರ್ಘಾವಧಿಯಲ್ಲಿ ಸಕಾರಾತ್ಮಕತ ಪರಿಣಾಮ ಬೀರುವಂತಹವು. ಆದರೆ ತಕ್ಷಣದಲ್ಲಿ ವೃದ್ಧಿ ದರ ಏರಿಕೆಯೂ ಮುಖ್ಯ ಎಂಬುದನ್ನು ಮರೆಯಲಾಗದು. ಅದರಲ್ಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇರುವುದು ಹಾಗೂ ರಾಷ್ಟ್ರದ ವಿವಿಧೆಡೆ ಮುಂಗಾರು ಫಸಲು ಚೆನ್ನಾಗಿರುವ ಈ ಸಂದರ್ಭದಲ್ಲೂ ಆರ್ಥಿಕ ಚೇತರಿಕೆ ಮಂದಗತಿಯಲ್ಲಿರುವುದು ಆತಂಕಕಾರಿ. ಇದನ್ನು ಸಕಾಲಿಕ ಎಚ್ಚರಿಕೆಯಾಗಿ ಸರ್ಕಾರ ಪರಿಗಣಿಸುವುದು ಅಗತ್ಯ.

ಬ್ಯಾಂಕ್‌ ಬಡ್ಡಿ ದರ ತಗ್ಗಿಸುವಂತಹ ಸರಳ ಹಣಕಾಸು ನೀತಿ ಪಾಲನೆ ಮತ್ತು ವಿತ್ತೀಯ ಹೊಂದಾಣಿಕೆ ಕ್ರಮಗಳನ್ನು ತುರ್ತಾಗಿ ಜಾರಿಗೆ ತರುವ ಅಗತ್ಯವನ್ನೂ ಸಮೀಕ್ಷೆ ಮನದಟ್ಟು ಮಾಡಿಕೊಟ್ಟಿದೆ. ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25 ರಿಂದ ಶೇ 0.75ರವರೆಗೆ ಇಳಿಸಲು ಅವಕಾಶ ಇರುವುದರತ್ತ ಆರ್‌ಬಿಐನ ಗಮನ ಸೆಳೆಯಲಾಗಿದೆ. ಉದ್ದಿಮೆ ಸಂಸ್ಥೆಗಳು ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟು ಮತ್ತು ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಕೃಷಿ ಉತ್ಪನ್ನಗಳ ರಫ್ತು ನಿಷೇಧ, ದಾಸ್ತಾನು ಮಿತಿ ಮತ್ತು ಮಾರುಕಟ್ಟೆ ನಿರ್ಬಂಧಗಳ ಮೂಲಕ ಸರ್ಕಾರ ಕೃಷಿ ವರಮಾನವನ್ನೂ ಹೆಚ್ಚಿಸಬೇಕಾಗಿದೆ. ಆರ್ಥಿಕ ಕುಸಿತ ರಾಜಕೀಯದ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು  ಇನ್ನು ಸುಮಾರು 20 ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಬೇಕಿರುವ ಕೇಂದ್ರ ಸರ್ಕಾರ ಅರಿತುಕೊಳ್ಳುವುದು ಅಗತ್ಯ. ಹಣಹೂಡಿಕೆ ಜೊತೆಜೊತೆಗೇ ಉದ್ಯೋಗಗಳು ಸೃಷ್ಟಿಯಾಗದಿದ್ದಲ್ಲಿ ಆರ್ಥಿಕ ವೃದ್ಧಿದರ ಹೆಚ್ಚಾಗುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಬಲಿಷ್ಠ ನಾಯಕತ್ವ ಹೊಂದಿರುವ ಈ ಸರ್ಕಾರದಲ್ಲಿ ಪೂರ್ಣಾವಧಿ ಹಣಕಾಸು ಸಚಿವರೇ ಇಲ್ಲ ಎನ್ನುವುದಂತೂ ದೊಡ್ಡ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT