ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಟೆಸ್ಟ್‌ ‍ಪಂದ್ಯದಲ್ಲೂ ನಿರಾಸೆ ಕಂಡ ಆತಿಥೇಯ ಲಂಕಾ :ಭಾರತಕ್ಕೆ ಚಾರಿತ್ರಿಕ ಸರಣಿ

Last Updated 14 ಆಗಸ್ಟ್ 2017, 19:54 IST
ಅಕ್ಷರ ಗಾತ್ರ

ಪಲ್ಲೆಕೆಲೆ:  ಆಫ್‌ಸ್ಪಿನ್ನರ್ ಆರ್‌. ಅಶ್ವಿನ್‌ (68ಕ್ಕೆ4) ಮತ್ತು ಮಧ್ಯಮವೇಗಿ ಮಹಮ್ಮದ್‌ ಶಮಿ (32ಕ್ಕೆ3) ಅವರ ದಾಳಿಗೆ ಬೆದರಿದ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳು ಸೋಮವಾರ ಜಿದ್ದಿಗೆ ಬಿದ್ದವರ ಹಾಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು.

ಅಶ್ವಿನ್‌ ಮತ್ತು ಶಮಿ ಅವರ ಶ್ರೇಷ್ಠ ಬೌಲಿಂಗ್‌ ಬಲದಿಂದ ಭಾರತ ತಂಡ ಲಂಕಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 171ರನ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌ ’ (3–0) ಸಾಧಿಸಿ ಚಾರಿತ್ರಿಕ ಸಾಧನೆ ಮಾಡಿತು.  ಭಾರತ ತಂಡ ವಿದೇಶಿ ನೆಲದಲ್ಲಿ ಆಡಿದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಮಾಡಿದ್ದು ಇದೇ ಮೊದಲು.

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 1 ವಿಕೆಟ್‌ಗೆ 19ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಸಿಂಹಳೀಯ ನಾಡಿನ ತಂಡ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿತು. ದಿನೇಶ್‌ ಚಾಂಡಿಮಲ್‌ ಪಡೆ ದ್ವಿತೀಯ ಇನಿಂಗ್ಸ್‌ನಲ್ಲಿ 74.3 ಓವರ್‌ಗಳಲ್ಲಿ 181ರನ್‌ಗಳಿಗೆ ಹೋರಾಟ ಮುಗಿಸಿತು.

ಮೊದಲ ಇನಿಂಗ್ಸ್‌ನಲ್ಲಿ 487ರನ್‌ ಗಳಿಸಿದ್ದ ವಿರಾಟ್‌ ಕೊಹ್ಲಿ ಪಡೆ, ಭಾನುವಾರ ಲಂಕಾ ತಂಡವನ್ನು 135ರನ್‌ಗಳಿಗೆ ಕಟ್ಟಿಹಾಕಿ, ಫಾಲೋ ಆನ್‌ ಹೇರಿತ್ತು. ಸೋಮವಾರವೂ ಮಿಂಚಿನ ಬೌಲಿಂಗ್‌ ನಡೆಸಿದ ಪ್ರವಾಸಿ ಬಳಗ ಎರಡೂವರೆ ದಿನದೊಳಗೆ ಗೆಲುವಿನ ಸಿಹಿ ಸವಿಯಿತು.

ಶುರುವಿನಲ್ಲೇ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಲಂಕಾ ತಂಡಕ್ಕೆ ಮೂರನೇ ದಿನದ ಮೂರನೇ ಓವರ್‌ನಲ್ಲಿ (16) ಆಘಾತ ಎದುರಾಯಿತು. ಭಾನುವಾರ 12 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ದಿಮುತ್‌ ಕರುಣಾರತ್ನೆ ಈ ಮೊತ್ತಕ್ಕೆ 4 ರನ್‌ ಸೇರಿಸಿ ಆರ್‌.ಅಶ್ವಿನ್‌ ಅವರ ಸ್ಪಿನ್‌ ಬಲೆಯೊಳಗೆ ಬಂದಿಯಾದರು.  ಅಶ್ವಿನ್‌ ಹಾಕಿದ ಓವರ್‌ನ ಮೂರನೇ ಎಸೆತವನ್ನು ಕರುಣಾರತ್ನೆ, ಕಟ್‌ ಮಾಡಲು ಮುಂದಾದರು. ಅವರ ಕೈಗವಸಿಗೆ ತಾಗಿ ಮೇಲಕ್ಕೆ ಚಿಮ್ಮಿದ  ಚೆಂಡನ್ನು ಸ್ಲಿಪ್‌ನಲ್ಲಿದ್ದ ಅಜಿಂಕ್ಯ ರಹಾನೆ ಸುಲಭವಾಗಿ ಹಿಡಿತಕ್ಕೆ ಪಡೆದರು.

21ನೇ ಓವರ್‌ನಲ್ಲಿ ಮಹಮ್ಮದ್‌ ಶಮಿ ಮೋಡಿ ಮಾಡಿದರು. ಎರಡನೇ ಎಸೆತದಲ್ಲಿ ಮಲಿಂದಾ ಪುಷ್ಪಕುಮಾರ ವಿಕೆಟ್‌ ಉರುಳಿಸಿದ ಅವರು ಆತಿಥೇಯರ ಗಾಯದ ಮೇಲೆ ಉಪ್ಪು ಸವರಿದರು. ಜಿಗುಟುತನದ ಆಟಕ್ಕೆ ಮುಂದಾಗಿದ್ದ ಪುಷ್ಪಕುಮಾರ, ಆಫ್‌ಸ್ಟಂಪ್‌ನ ಹೊರಗೆ ಸಾಗುತ್ತಿದ್ದ ಚೆಂಡನ್ನು ಕೆಣಕಿ ಕೈ ಸುಟ್ಟುಕೊಂಡರು. ಅವರ ಬ್ಯಾಟಿನ ಮೇಲಂಚನ್ನು ಸವರಿಕೊಂಡು ಬಂದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಯಾವುದೇ ತಪ್ಪು ಮಾಡಲಿಲ್ಲ.

23ನೇ ಓವರ್‌ನಲ್ಲಿ ಶಮಿ ಮತ್ತೆ ಮಿಂಚಿದರು. ಐದನೇ ಎಸೆತದಲ್ಲಿ ಕುಶಾಲ್‌ ಮೆಂಡಿಸ್‌ (12; 21ಎ, 2ಬೌಂ) ವಿಕೆಟ್‌ ಕಡೆವಿದ ಅವರು ಭಾರತದ ಚಾರಿತ್ರಿಕ ಗೆಲುವಿಗೆ ವೇದಿಕೆ ಸಿದ್ಧಗೊಳಿಸಿದರು.  82ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಊಟದ ವಿರಾಮಕ್ಕೆ ಹೋದ ಸಿಂಹಳೀಯ ನಾಡಿನ ತಂಡ ನಂತರದ ಅವಧಿಯಲ್ಲಿ ಮರು ಹೋರಾಟ ತೋರುವ ಲಕ್ಷಣ ಗೋಚರಿಸಿತ್ತು.

ನಾಯಕ ಚಾಂಡಿಮಲ್‌ (36; 89ಎ, 4ಬೌಂ) ಮತ್ತು ಅನುಭವಿ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌, ಕೆಲಕಾಲ ಭಾರತದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಅಪಾಯದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು.

ಐದನೇ ವಿಕೆಟ್‌ಗೆ 65ರನ್‌ ಸೇರಿಸಿದ್ದ ಈ ಜೋಡಿಯ ಜೊತೆಯಾಟವನ್ನು ಮುರಿಯುವಲ್ಲಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಯಶಸ್ವಿಯಾದರು. 51ನೇ ಓವರ್‌ನಲ್ಲಿ ದಾಳಿಗಿಳಿದ ಅವರು ಮೂರನೇ ಎಸೆತದಲ್ಲಿ ಚಾಂಡಿಮಲ್‌ ಅವರನ್ನು ಸ್ಪಿನ್‌ ಖೆಡ್ಡಾಕ್ಕೆ ಕೆಡವಿದರು. ಕುಲದೀಪ್‌ ಹಾಕಿದ ಚೆಂಡಿನ ಗತಿ ಅರಿಯುವಲ್ಲಿ ವಿಫಲವಾದ ಚಾಂಡಿಮಲ್‌, ಲೆಗ್‌ಸೈಡ್‌ನಲ್ಲಿದ್ದ ಚೇತೇಶ್ವರ ಪೂಜಾರಾಗೆ ಕ್ಯಾಚ್‌ ನೀಡಿ ಹೊರ ನಡೆದರು.

96 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 35ರನ್‌ ಗಳಿಸಿದ್ದ ಮ್ಯಾಥ್ಯೂಸ್‌ ಕೂಡ ದಿನೇಶ್‌ ಅವರ ಹಾದಿಯನ್ನೇ ತುಳಿದರು. 54ನೇ ಓವರ್‌ನಲ್ಲಿ ದಾಳಿಗಿಳಿದ ಅಶ್ವಿನ್‌, ಮ್ಯಾಥ್ಯೂಸ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಕೊಹ್ಲಿ ಪಡೆಯ ಜಯದ ಹಾದಿಯನ್ನು ಸುಗಮ ಮಾಡಿದರು.

ದಿಲ್ರುವಾನ ಪೆರೇರಾ (8) ಮತ್ತು ಲಕ್ಷಣ್‌ ಸಂದಕನ್‌ (8) ಅವರು ಹೆಚ್ಚು ಹೊತ್ತು ಆಡಲಿಲ್ಲ. ಅಶ್ವಿನ್‌ ಅವರು ಪೆರೇರಾ ವಿಕೆಟ್‌ ಹಾಗೂ ಶಮಿಯವರು ಸಂದಕನ್‌ ಅವರನ್ನು ಔಟ್‌ ಮಾಡಿದರು.  ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ನಿರೋಷನ್‌ ಡಿಕ್ವೆಲ್ಲಾ (41; 52ಎ, 5ಬೌಂ) ಎದೆಗುಂದಲಿಲ್ಲ. ಬಿರುಸಿನ ಆಟಕ್ಕೆ ಮುಂದಾದ ಅವರು ತಂಡದ ರನ್‌ ಗಳಿಕೆಗೆ ವೇಗ ತುಂಬಲು ಯತ್ನಿಸಿದರು. ಅರ್ಧಶತಕದೆಡೆ ಮುನ್ನುಗ್ಗುತ್ತಿದ್ದ ಅವರನ್ನು ಕಟ್ಟಿಹಾಕುವಲ್ಲಿ ವಿರಾಟ್‌ ಅನುಸರಿಸಿದ ತಂತ್ರ ಫಲ ನೀಡಿತು.

70ನೇ ಓವರ್‌ ಬೌಲ್‌ ಮಾಡಲು ವೇಗಿ ಉಮೇಶ್ ಯಾದವ್‌ ಕೈಗೆ ನಾಯಕ ಕೊಹ್ಲಿ ಚೆಂಡು ನೀಡಿದರು. ಐದನೇ ಎಸೆತದಲ್ಲಿ ಡಿಕ್ವೆಲ್ಲಾ ಅವರಿಗೆ ಉಮೇಶ್ ಪೆವಿಲಿಯನ್‌ ಹಾದಿ ತೋರಿಸಿದರು. 75ನೇ ಓವರ್‌ನಲ್ಲಿ ಅಶ್ವಿನ್‌ ಮತ್ತೊಮ್ಮೆ ಸ್ಪಿನ್‌ ಜಾದೂ ತೋರಿದರು. ಮೂರನೇ ಎಸೆತದಲ್ಲಿ ಲಾಹಿರು ಕುಮಾರ (10; 15ಎ, 2ಬೌಂ) ಅವರನ್ನು ಬೌಲ್ಡ್‌ ಮಾಡಿದ ಅವರು ಲಂಕನ್ನರ ಇನಿಂಗ್ಸ್‌ಗೆ ತೆರೆ ಎಳೆದರು. ಭಾರತದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT