ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಾಣಿಕೆ ರಾಜಕಾರಣಕ್ಕೆ ಕಡಿವಾಣ ಹಾಕಿ: ಅಮಿತ್‌ ಷಾ

ರಾಜ್ಯ ಘಟಕ ಪುನರ್‌ ರಚನೆ
Last Updated 14 ಆಗಸ್ಟ್ 2017, 19:11 IST
ಅಕ್ಷರ ಗಾತ್ರ

ಬೆಂಗಳೂರು : ‘ಬಿಜೆಪಿಯ ಕೆಲವು ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಪಕ್ಷ ದುರ್ಬಲವಾಗಿದೆ’ ಎಂದು ಆರ್‌ಎಸ್‌ಎಸ್‌ ‍ಪ್ರಮುಖರು, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಬಳಿ ದೂರಿದ್ದಾರೆ.

ಕೇಶವ ಕೃಪಾಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ್ದ ಷಾ, ಸುಮಾರು ಒಂದೂಕಾಲು ಗಂಟೆ ಸಂಘ ಪರಿವಾರದ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.

ರಾಜ್ಯದ ನಾಯಕರ ನಿಲುಮೆ, ಒಲುಮೆ, ಪಕ್ಷದ ಸ್ಥಿತಿಗತಿ ಕುರಿತು ಪರಿವಾರದ ಪ್ರಮುಖರಿಂದ ಮಾಹಿತಿ ಪಡೆದ ಷಾ ಬೆಂಗಳೂರಿನಿಂದ ಹೊರಡುವ ಮುನ್ನ ‘ಕೆಲಸ ಮಾಡಿ, ಇಲ್ಲವೇ ಹುದ್ದೆ ಬಿಡಿ’ ಎಂಬ ಕಠಿಣ ಎಚ್ಚರಿಕೆಯನ್ನು ಪಕ್ಷದ ನಾಯಕರಿಗೆ ನೀಡಿದರು ಎಂದು ಗೊತ್ತಾಗಿದೆ.

‘ನಗರದಲ್ಲಿ ಮೂರು ದಿನ ಬಿಜೆಪಿಯ ವಿವಿಧ ಘಟಕಗಳು, ಸಂಘ– ಪರಿವಾರದ ನಾಯಕರು ಹಾಗೂ ಬುದ್ಧಜೀವಿಗಳ ಸಭೆ ನಡೆಸಿದ ಬಳಿಕ ಷಾ, ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಬಲಿಷ್ಠವಾಗಿಲ್ಲ. ದೌರ್ಬಲ್ಯಗಳಿಂದ ಸೊರಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೊರಡುವ ಮುನ್ನ ಅವರು ಕೊಟ್ಟ ಸಂದೇಶ ಗಮನಿಸಿದರೆ ಈ ತಿಂಗಳ ಅಂತ್ಯದೊಳಗೆ ರಾಜ್ಯ ಘಟಕದ ಆಯಕಟ್ಟಿನ ಹುದ್ದೆಯಲ್ಲಿರುವ ಅನೇಕರಿಗೆ ಕೊಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಆಮೂಲಾಗ್ರ ಬದಲಾವಣೆ ತರದೇ ಇದ್ದರೆ ಪಕ್ಷ ಅಧಿಕಾರಕ್ಕೇರುವುದು ಕಷ್ಟ ಎಂಬುದು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಬಂದಿದೆ’ ಎಂದು ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡಿ ಅನುಭವ ಪಡೆದವರು, ಸಂಘದ ಗರಡಿಯಲ್ಲಿ ಬೆಳೆದವರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿಲ್ಲ ಎಂಬುದನ್ನು ಷಾ ಅರಿತಿದ್ದಾರೆ. 10 ವರ್ಷಗಳಿಂದ ಪಕ್ಷದ ಸಂಘಟನೆಗೆ ದುಡಿದವರು ಎಷ್ಟು ಜನ ಇದ್ದೀರಿ, ಕೈ ಎತ್ತಿ ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಷಾ ಪ್ರಶ್ನಿಸಿದರು. ಕೇವಲ 3 ಜನ ಮಾತ್ರ ಕೈ ಎತ್ತಿದರು. ಐದು ಸಾವಿರಕ್ಕಿಂತ ಹೆಚ್ಚಿನ ಜನ ಸೇರಿಸಿ ಎಷ್ಟು ಹೋರಾಟ ನಡೆಸಿದ್ದೀರಿ ಎಂಬ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ.  ಜಿಲ್ಲಾ ಘಟಕದಿಂದ ರಾಜ್ಯ ಘಟಕದವರೆಗೆ ಸಮಸ್ಯೆ ಇರುವುದು ಅವರಿಗೆ ಗೊತ್ತಾಗಿದೆ. ಇದರಿಂದಾಗಿ ಪಕ್ಷದ ಎಲ್ಲ ಹಂತದಲ್ಲೂ ಬದಲಾವಣೆ ನಿಶ್ಚಿತ’ ಎಂದು ಅವರು ಹೇಳಿದರು.

ಹೋರಾಟ ಇಲ್ಲ: ‘ಕಾಂಗ್ರೆಸ್‌ ಪಕ್ಷದ ಪ್ರಚೋದನೆಯಿಂದ ಸಂಘ– ಪರಿವಾರದ ನಾಯಕರನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದರ ಬಗ್ಗೆ ಪರಿಣಾಮಕಾರಿ ಹೋರಾಟವನ್ನು ಬಿಜೆಪಿಯ ವಿವಿಧ ಹಂತದ ಪ್ರಮುಖರು ನಡೆಸಿಲ್ಲ. ಹಿಂದೂ ಸಮುದಾಯಕ್ಕೆ ಸೇರಿದವರಲ್ಲಿ ಇದರಿಂದ ಆತಂಕವಾಗಿದೆ. ಪರಿವಾರದ ಕಾರ್ಯಕರ್ತರು ಇದರಿಂದ ಎದೆಗುಂದಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್‌ ಪ್ರಮುಖರು ಸಲಹೆ ನೀಡಿದರು.

‘ಇದು ನನ್ನ ಗಮನಕ್ಕೂ ಬಂದಿದೆ. ಸೂಕ್ತ ಸೂಚನೆ ನೀಡಿದ್ದೇನೆ. ಕೇಂದ್ರ ಸರ್ಕಾರ ತನ್ನ ಪರಿಮಿತಿಯಲ್ಲಿ ಕ್ರಮ ಕೈಗೊಳ್ಳಲಿದೆ. ರಾಜಕೀಯ ಪಕ್ಷವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಪರಿವಾರದ ವಿವಿಧ ಸಂಘಟನೆಗಳೂ ಇದರ ಬಗ್ಗೆ ಜನ ಜಾಗೃತಿ ಮೂಡಿಸಲು ಶ್ರಮಿಸಬೇಕು’ ಎಂದು ಷಾ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿರುವ ‘ಶಾದಿ ಶಗುನ್‌’ ಅಲ್ಪಸಂಖ್ಯಾತರ ಓಲೈಕೆಯ ಕ್ರಮವಲ್ಲವೇ ಎಂದು ಆರ್‌ಎಸ್ಎಸ್‌ ಪ್ರಮುಖರು ಪ್ರಶ್ನಿಸಿದರು. ‘ಓಲೈಕೆ ಮಾಡುವ ಉದ್ದೇಶ ಇದರ ಹಿಂದಿಲ್ಲ. ಅಂಚಿನಲ್ಲಿರುವ ಸಮುದಾಯಗಳನ್ನು ಒಳಗೊಳ್ಳುವ ಕ್ರಮವಾಗಿ ಇದನ್ನು ಜಾರಿಮಾಡಲಾಗಿದೆ’ ಎಂದು ಷಾ ಸಮರ್ಥಿಸಿಕೊಂಡರು.

ಹೊಸಬರ ಜತೆ ಚರ್ಚೆ: ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಎಸ್‌.ಎಂ. ಕೃಷ್ಣ, ಜಯಪ್ರಕಾಶ ಹೆಗ್ಡೆ, ಕುಮಾರ ಬಂಗಾರಪ್ಪ, ಪರಿಮಳ ನಾಗಪ್ಪ, ಸುನಿಲ್‌ ಹೆಗಡೆ, ಐಪಿಎಸ್ ಅಧಿಕಾರಿ ಶಂಕರ ಬಿದರಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಶಿವರಾಂ ಅವರ ಜತೆ ಷಾ ಸಮಾಲೋಚನೆ ನಡೆಸಿದರು.

ಶೇ 60ರಷ್ಟು ಟಿಕೆಟ್‌ ಹೊಸಬರಿಗೆ: ವಿಧಾನಸಭೆ ಚುನಾವಣೆಯಲ್ಲಿ ಶೇ 60 ಟಿಕೆಟ್‌ಗಳನ್ನು ಯುವಕರಿಗೆ, ಹೊಸ ಮುಖಗಳಿಗೆ ನೀಡಲಾಗುವುದು ಎಂದು ಅಮಿತ್‌ ಷಾ ಸ್ಪಷ್ಟಪಡಿಸಿದ್ದಾರೆ. ‘ಹಾಲಿ ಮತ್ತು ಮಾಜಿ ಶಾಸಕರು ಟಿಕೆಟ್‌ ಖಾತ್ರಿ ಎಂದು ತಿಳಿದುಕೊಳ್ಳುವುದು ಬೇಡ.  ಕೆಲವರು ಈಗಾಗಲೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಓಡಾಡುತ್ತಿರುವುದೂ ಗಮನಕ್ಕೆ ಬಂದಿದೆ. ಅಂತಹ ಯಾವುದೇ ತೀರ್ಮಾನವನ್ನೂ ಪಕ್ಷ ಮಾಡಿಲ್ಲ. ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ, ರಾಜ್ಯ ಸರ್ಕಾರದ ವಿರುದ್ಧ ಬಲಿಷ್ಠ ಹೋರಾಟ ರೂಪಿಸಿ, ಪಕ್ಷಕ್ಕೆ ಬಲವಾದ ನೆಲೆ ತಂದುಕೊಡುವವರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ’ ಎಂದು ಷಾ ಖಚಿತವಾಗಿ ಹೇಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT