ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನೆಯ ಮಿತಿ ಮತ್ತು ಆತ್ಮಾಭಿಮಾನದ ಭಿತ್ತಿ

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇದೊಂದು ಹಳೆಯ ಜನಪದ ಕಥೆ. ‌

ಒಂದು ಕಾಡಿನ ದಾರಿಯ ಪಕ್ಕದಲ್ಲಿ ಒಂದು ಸರ್ಪ ವಾಸಿಸುತ್ತಿತ್ತು. ಅತಿಯಾದ ಕೋಪ ಹಾಗೂ ಗರ್ವದಿಂದ ತುಂಬಿದ್ದ ಅದು ದಾರಿಹೋಕರನೆಲ್ಲಾ ಕಚ್ಚಿ ತೊಂದರೆ ಕೊಡುತ್ತಿತ್ತು. ಒಮ್ಮೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಸಾಧುವೊಬ್ಬರು ಆ ಹಾವಿನ ಕೃತ್ಯವನ್ನು ನೋಡಿ, ಅದಕ್ಕೆ ಬುದ್ಧಿವಾದ ಹೇಳಿದರು. ‘ಕೋಪ ಕೆಟ್ಟದು. ನಿನಗೆ ಹಾನಿಯುಂಟು ಮಾಡದವರ ಮೇಲೂ ವೃಥಾ ಸಿಟ್ಟಿಗೆದ್ದು ಕಚ್ಚಿ ತೊಂದರೆ ಕೊಡುವುದು ತಪ್ಪು. ಇನ್ನು ಮುಂದಾದರೂ ಒಳ್ಳೆಯ ಹಾದಿಯಲ್ಲಿ ನಡೆದುಕೊ’ ಎಂದು ತಿಳಿಹೇಳಿದರು. ಅವರ ಮಾತಿಗೆ ತಲೆ ಬಾಗಿದ ಹಾವು, ‘ಇನ್ನು ಮುಂದೆ ಯಾರಿಗೂ ಕಚ್ಚುವುದಿಲ್ಲ; ಹಾಗೂ ಯಾರ ಮೇಲೆಯೂ ಕೋಪಗೊಳ್ಳುವುದಿಲ್ಲ’ ಎಂದು ಭಾಷೆ ಕೊಟ್ಟಿತು.

ಬಹಳ ದಿನಗಳು ಕಳೆದ ನಂತರ, ಸಾಧುಗಳು ಮತ್ತೆ ಅದೇ ಹಾದಿಯಲ್ಲಿ ನಡೆದು ಬರುತ್ತಿದ್ದರು. ಆ ಹಾವು ಮತ್ತೆ ಕಂಡಿತು. ಆದರೆ  ಈಗ ಅದರ ಮೈಯೆಲ್ಲ ಗಾಯಗಳಿಂದ ತುಂಬಿ ಆಗಲೋ ಈಗಲೋ ಸಾಯುವ ಸ್ಥಿತಿಯಲ್ಲಿತ್ತು. ಅದನ್ನು ಕಂಡು ಸಾಧುಗಳಿಗೆ ಆಶ್ಚರ್ಯವಾಯಿತು. ಅದರ ಈ ಪರಿಸ್ಥಿತಿಗೆ ಕಾರಣ ಏನು ಎಂದು ವಿಚಾರಿಸಿದರು.

ಆಗ ಆ ಸರ್ಪವು ವಿವರಿಸಿತು. ‘ಸ್ವಾಮಿ, ತಮಗೆ ಮಾತು ಕೊಟ್ಟಂತೆ ನಾನು ಈಗ ಯಾರಿಗೂ ಕಚ್ಚುವುದಿಲ್ಲ, ವೃಥಾ ತೊಂದರೆ ಕೊಡುವುದಿಲ್ಲ. ಆದರೆ ನಾನು ನಿರುಪದ್ರವಿ ಎಂದು ತಿಳಿದ ನಂತರ ಜನ ನನ್ನತ್ತ ಕಲ್ಲು ತೂರಿ ಮೋಜು ನೋಡುತ್ತಾರೆ. ಕಚ್ಚುವುದಿಲ್ಲ ಎಂದು ತಿಳಿದು ಬಾಲ ಹಿಡಿದು ಎತ್ತಿ ತೂರಾಡಿ ಆಟವಾಡುತ್ತಾರೆ. ನಾನು ಅವರಿಗೊಂದು ಮನರಂಜನೆಯ ವಸ್ತುವಾಗಿಬಿಟ್ಟಿದ್ದೇನೆ. ನೋಡಿ ನನ್ನನ್ನು ಈ ಸ್ಥಿತಿಗೆ ತಳ್ಳಿದ್ದಾರೆ. ಇದು ನ್ಯಾಯವೇ? ದಯವಿಟ್ಟು ನನ್ನನ್ನು ಈ ಕಷ್ಟದಿಂದ ಪಾರುಮಾಡಿ’ ಎಂದು ಅಳಲು ತೋಡಿಕೊಂಡಿತು.

ಹಾವಿನ ಮಾತನ್ನು ಕೇಳಿ ನಕ್ಕು ಸಾಧು ಹೇಳಿದರು, ‘ಅಯ್ಯೋ ಮೂರ್ಖ ಸರ್ಪವೇ, ನಾನು ನಿನಗೆ ಹೇಳಿದ್ದು ಸಿಕ್ಕ ಸಿಕ್ಕವರನ್ನೆಲ್ಲ ಕಚ್ಚಬೇಡ ಎಂದು. ನಿನಗೆ ತೊಂದರೆ ಮಾಡುವವರನ್ನು ನೋಡಿ ಬುಸುಗುಟ್ಟಬೇಡ ಎಂದು ಹೇಳಲಿಲ್ಲವಲ್ಲ. ಎಲ್ಲಿಯವರೆಗೆ ನಮ್ಮ ಆತ್ಮಗೌರವಕ್ಕೆ ಪೆಟ್ಟಾಗುವುದಿಲ್ಲವೋ ಅಲ್ಲಿಯತನಕ ಸಹಿಸಿಕೊಳ್ಳಬಹುದು. ನಂತರ ಯಾರಾದರೂ ಸರಿ, ನಿನ್ನ ರಕ್ಷಣೆ ನೀನು ಮಾಡಿಕೊಳ್ಳಲೇ ಬೇಕು. ಆತ್ಮಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದರು. ಹಾವಿಗೆ ಈಗ ಸ್ವಾಮಿಜಿಯ ಮಾತಿನಲ್ಲಿನ ವಿವೇಕ ಅರ್ಥವಾಯಿತು.‌

ಮೇಲ್ನೋಟಕ್ಕೆ ಸರಳವಾಗಿ ಕಾಣುವ ಈ ಕಥೆಯಲ್ಲಿ ನಾವೆಲ್ಲರೂ ಅರಿತುಕೊಳ್ಳಲೇಬೇಕಾದ ಮಹತ್ವದ ವಿವೇಕವೊಂದಿದೆ. ಅದು ಸಹನೆ ಮತ್ತು ಆತ್ಮಾಭಿಮಾನದ ನಡುವಿನ ತೆಳುವಾದ ಗೆರೆಗೆ ಸಂಬಂಧಿಸಿದ್ದು. ಇವುಗಳಲ್ಲಿ ಒಂದನ್ನು ಇನ್ನೊಂದು ಭಗ್ನಗೊಳಿಸದಂತೆ ಕಾಯ್ದುಕೊಳ್ಳುವ ಬಗೆ ಹೇಗೆ ಎಂಬ ವಿವೇಕ.

ಆ ಸಾಧು ತಿಳಿಸಿದಂತೆ ಆತ್ಮಾಭಿಮಾನ ಎನ್ನುವುದು ಎಲ್ಲರಿಗೂ ಇರುತ್ತದೆ. ಸಹನೆಯ ಮಿತಿ ಇರುವುದು ಸ್ವಾಭಿಮಾನಕ್ಕೆ ಪೆಟ್ಟಾಗುವ ತನಕ ಮಾತ್ರ. ಬೇರೆಯವರಿಗೆ ಗೌರವ ನೀಡುವಂತೆ ನಮ್ಮತನಕ್ಕೂ ಗೌರವ ಬಹಳ ಮುಖ್ಯ. ನಮ್ಮನ್ನು ನಾವು ಮೊದಲು ಗೌರವಿಸಬೇಕು, ನಮ್ಮನ್ನು ನಾವು ಪ್ರೀತಿಸಬೇಕು. ನಮ್ಮ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದರೆ, ಅದನ್ನು ಬೇರೆಯವರಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಅಥವಾ ಆ ಗೌರವವನ್ನು ಬೇರೆಯವರು ನಮಗೆ ತಿರುಗಿ ಕೊಡಲು ಹೇಗೆ ಸಾಧ್ಯ? ಅನ್ಯರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದಕ್ಕಿಂತ ನಮ್ಮ ಬಗ್ಗೆ ನಾವು ಏನು ಯೋಚಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಹುಟ್ಟಿದಾಗಿನಿಂದ ಮನುಷ್ಯ ತನ್ನ ಜೀವನದುದ್ದಕ್ಕೂ ಆತ್ಮಗೌರವವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾನೆ. ಸ್ವಾಭಿಮಾನ, ಸ್ವಗೌರವವನ್ನು ಯಾರು ಯಾರಿಗೂ ಕಲಿಸಲು ಸಾಧ್ಯವಿಲ್ಲ. ಅದನ್ನು ಪ್ರತಿಯೊಬ್ಬರೂ ತಮ್ಮಿಂದ ತಾವೇ, ತಮ್ಮೊಳಗಿನಿಂದಲೇ ಪಡೆದುಕೊಳ್ಳುವಂಥದ್ದು.

ಮನುಷ್ಯನಾಗಿ ಹುಟ್ಟಿದ ಮೇಲೆ ತಾಯಿಯಾದವಳು ಹೆಮ್ಮೆ ಪಡುವಂಥ ಕಾರ್ಯವನ್ನು ಮಾಡಬೇಕು. ತಂದೆಯ ಮಾತಿಗೆ ಗೌರವ, ಮಾನ್ಯತೆ ನೀಡಬೇಕು. ನಮ್ಮ ಮಕ್ಕಳಿಗೆ ನಾವು ಮಾದರಿಯಾಗಬೇಕು. ಹಾಗೆಯೇ ನಮಗಾಗಿ ನಮ್ಮ ಬಗ್ಗೆ ನಾವು ಆತ್ಮಗೌರವ ಬೆಳೆಸಿಕೊಳ್ಳಬೇಕು.

ಆತ್ಮಾಭಿಮಾನ ಹೀನತೆ ಎನ್ನುವುದು ಅಸಮರ್ಥತೆಯ ಸಂಕೇತ. ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದ ಮನುಷ್ಯ ಬದುಕಿನಲ್ಲಿ ಯಾವ ನಿರ್ಧಾರವನ್ನೂ ಸ್ಪಷ್ಟವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥವರು ಬಹಳ ಬೇಗ ಜನರಿಂದ ಮೋಸ ಹೋಗುತ್ತಾರೆ. ಜನರು ಇವರನ್ನು ತಮ್ಮ ಅನುಕೂಲಗಳಿಗೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಕೆಲವರು ತಮ್ಮತನವನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸುತ್ತಾ, ಬೇರೆಯವರ ಒಳಿತಿಗಾಗಿಯೇ ತಮ್ಮ ಜೀವನವನ್ನು ಮುಡಿಪಿಟ್ಟಿರುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಅದು ನಮ್ಮ ಆತ್ಮಗೌರವಕ್ಕೆ ದಕ್ಕೆ ಬರುವಂತಿರಬಾರದು. ನಾವೂ ಬೇರೆಯವರಂತೆಯೇ ಮನುಷ್ಯರು, ನಮ್ಮಲ್ಲಿರುವ ಮಾನವತ್ವಕ್ಕೂ ಕೊಂಚ ಮರ್ಯಾದೆ, ಗೌರವ ಅಗತ್ಯ ಎನ್ನುವ ಪರಿಜ್ಞಾನ ನಮ್ಮಲ್ಲಿರಬೇಕು. ನಮ್ಮನ್ನು ನಾವು ಮೊದಲು ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿಯಬೇಕು.

ಸ್ವಾಭಿಮಾನವೆನ್ನುವುದು ವ್ಯಕ್ತಿಯೊಬ್ಬನ ಯೋಗ್ಯತೆ, ನಂಬಿಕೆ, ವಿಶ್ವಾಸ ಹಾಗೂ ವ್ಯಕ್ತಿತ್ವದ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. ಆತ್ಮಗೌರವವಿಲ್ಲದ ವ್ಯಕ್ತಿಗಳ ಜೀವನ ಊರುಗೋಲಿನ ಸಹಾಯದ ನಡಿಗೆಯಂತಿರುತ್ತದೆ. ಅಂಥ ವ್ಯಕ್ತಿಯು ತನ್ನತನವನ್ನೇ ಕಳೆದುಕೊಂಡು ಪರಾವಲಂಬಿಯಂತಾಗಿರುತ್ತಾನೆ. ಕೀಳರಿಮೆ ಮನಸಲ್ಲಿ ಮನೆಮಾಡಲು ಕಾರಣವಾಗುತ್ತದೆ. ಕೀಳರಿಮೆ ಖಿನ್ನತೆಗೆ ಎಡೆಮಾಡಿಕೊಡುತ್ತದೆ. ಆಗ ನಾವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು  ಹಿಂದೇಟು ಹಾಕುತ್ತೇವೆ. ಯಾವುದೇ ಕೆಲಸವನ್ನು ಮಾಡಲು ಹೋದರೂ ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆ ಬೃಹದಾಕಾರವಾಗಿ ಎದ್ದು ಕಾಡುತ್ತದೆ. ಅದೇ ವೈಫಲ್ಯಕ್ಕೂ ಕಾರಣವಾಗುತ್ತದೆ.

ಆತ್ಮಗೌರವದ  ಕೀಲಿಕೈ ಯಾವುದು?: ಹಾಗಾದರೆ ಸ್ವಾಭಿಮಾನವನ್ನು, ಆತ್ಮಗೌರವವನ್ನು ಬೆಳಸಿಕೊಳ್ಳುವುದು ಹೇಗೆ?

ಬೇರೆಯವರಿಂದ ಗೌರವವನ್ನು ಪಡೆದರೆ ನಮ್ಮ ಬಗ್ಗೆ ನಮಗೇ ಅಭಿಮಾನ ಬೆಳೆಯುತ್ತದೆ. ಬೇರೆಯವರಿಂದ ಗೌರವ ಪಡೆಯಬೇಕಾದರೆ ಅವರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು. ಇನ್ನೊಬ್ಬರ ದೃಷ್ಟಿಕೋನದಿಂದ ವಿಷಯವನ್ನು ಪರಾಂಬರಿಸುವ ವಿವೇಚನೆ ಬೆಳೆಸಿಕೊಳ್ಳಬೇಕು. ಬೇರೆಯವರೊಂದಿಗಷ್ಟೇ ಅಲ್ಲ, ನಮಗೆ ನಾವೂ ಪ್ರಾಮಾಣಿಕರಾಗಿರಬೇಕು. ಪ್ರಾಮಾಣಿಕತೆಯಿದ್ದರೆ, ಅಪರಾಧಿ ಮನೋಭಾವ ಕಾಡುವುದಿಲ್ಲ. ಆಗ ನಮ್ಮ ಬಗ್ಗೆ ಗೌರವ ತಾನಾಗೇ ಹೆಚ್ಚುತ್ತದೆ.

ಅಭಿಮಾನಕ್ಕೆ ಅತ್ಯಗತ್ಯವಾದ ಕೀಲಿ ಕೈ ಎಂದರೆ ಜ್ಞಾನ ಸಂಪಾದನೆ. ಜ್ಞಾನದ ಹಸಿವು ಹೆಚ್ಚಿದಷ್ಟೂ ಆತ್ಮಗೌರವ ಬೆಳೆಯುತ್ತದೆ. ಆದಷ್ಟೂ ನಾವು ವಿನಯವಂತರಾಗಿದ್ದರೆ, ಅನ್ಯರಿಂದ ಗೌರವ ಸಿಗುತ್ತದೆ. ಹೀಗೆ ನಮ್ಮನ್ನು ಪ್ರೀತಿಸುವ,  ಗೌರವಿಸುವ ವ್ಯಕ್ತಿಗಳ ಒಡನಾಟದಲ್ಲಿದ್ದರೆ ಸ್ವಾಭಿಮಾನ ಬೆಳೆಯಲು ಸಹಕಾರಿಯಾಗುತ್ತದೆ. ಎಲ್ಲಕ್ಕೂ ಮುನ್ನ ನಮ್ಮನ್ನು ನಾವು ಅರಿಯಲು ಪ್ರಯತ್ನಿಸಬೇಕು. ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳದೆ, ನಮ್ಮನ್ನು ನಾವಿರುವಂತೆಯೇ ಒಪ್ಪಿಕೊಳ್ಳಬೇಕು. ನಮ್ಮನ್ನು ನಾವು ಕ್ಷಮಿಸಿಕೊಳ್ಳುವ ಗುಣವನ್ನು ಬೆಳಸಿಕೊಳ್ಳಬೇಕು. ಜೊತೆಗೆ ಬೇರೆಯವರನ್ನು ಕ್ಷಮಿಸುವ ಗುಣವನ್ನೂ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.

ಸಕಾರಾತ್ಮಕತೆಯ ದಾರಿ: ಸಕಾರಾತ್ಮಕ ಚಿಂತನೆಯೆಡೆಗೆ ಮನಸ್ಸನ್ನು ಹರಿಯಬಿಡಬೇಕು. ಬೇರೆಯವರಿಂದ ಟೀಕೆಗೊಳಗಾದಾಗ, ಅದನ್ನು ಸಂಭಾಳಿಸುವುದನ್ನು ಕಲಿಯಬೇಕು. ಬೇರೆಯವರು ಅಗೌರವ ತೋರಿದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡಬೇಕೇ ಹೊರತು ಅದನ್ನು ತಡೆದುಕೊಳ್ಳುವುದಲ್ಲ! ತಡೆಯಲು ಸಾಧ್ಯವಾಗದಿದ್ದಲ್ಲಿ ಅವರಿಂದ ದೂರವಿದ್ದರೆ ಸರಿ. ಅವರ ಟೀಕೆಯನ್ನೇ ಮನಸ್ಸಿಗೆ ತೆಗೆದುಕೊಂಡು ನಮ್ಮನ್ನು ನಾವು ದೂಷಿಸಿಕೊಳ್ಳುವುದನ್ನು ನಿಲ್ಲಿಸಬೇಕು. ನಮ್ಮಿಂದ ತಪ್ಪಾದಾಗ ಒಪ್ಪಿಕೊಂಡು ತಿದ್ದಿಕೊಳ್ಳಲು ಪ್ರಯತ್ನಪಡಬೇಕು.

ಇವೆಲ್ಲವೂ ಆತ್ಮಗೌರವ ಗಳಿಸಿಕೊಳ್ಳುವ ದಾರಿಗಳು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮಗೇ ಅರಿವಿಲ್ಲದಂತೆ ಅಹಂಕಾರವಲ್ಲದ ಆತ್ಮಗೌರವ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ಹೀಗೆ ಮೊಳಕೆಯೊಡೆದ ಸ್ವಾಭಿಮಾನವನ್ನು ಬೆಳೆಸಿಕೊಳ್ಳಲು ಜವಾಬ್ದಾರಿಯುತ ಕೆಲಸವನ್ನು ಮಾಡಬೇಕಾಗುತ್ತದೆ. ಸವಾಲುಗಳನ್ನು ಸ್ವೀಕರಿಸಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕಾಗುತ್ತದೆ. ಆತ್ಮಗೌರವ ಬೆಳೆಯುತ್ತಿದ್ದಂತೆಯೇ ಸರಿ-ತಪ್ಪುಗಳ ಬಗ್ಗೆ ತಿಳಿವಳಿಕೆ ಉಂಟಾಗುತ್ತದೆ. ನಮಗರಿವಿಲ್ಲದಂತೆಯೆ ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸಲು ತೊಡಗುತ್ತೇವೆ. ಸ್ವಾಭಿಮಾನ ಬೆಳೆದಂತೆ ಧೈರ್ಯವೂ ಬೆಳೆಯುತ್ತದೆ.

ಬೇರೆಯವರನ್ನು ಮೆಚ್ಚಿಸಲಿಕ್ಕಾಗಿಯೇ ಯಾವುದೇ ಕೆಲಸವನ್ನು ಮಾಡಬೇಕಾಗಿಲ್ಲ.  ಬದಲಿಗೆ ಅನ್ಯರು ಒಪ್ಪದಿದ್ದರೂ, ಮೆಚ್ಚದಿದ್ದರೂ, ಯಾವಾಗಲೂ ಸರಿಯಾದ ಹಾದಿಯಲ್ಲಿ ನಡೆದರೆ, ನಮ್ಮ ಆತ್ಮಸಾಕ್ಷಿ ಮೆಚ್ಚುವಂತೆ ವರ್ತಿಸಿದರೆ ಆತ್ಮಗೌರವ ಹೆಚ್ಚುತ್ತದೆ. ಇದು ನೆಮ್ಮದಿಯ ಬದುಕಿನತ್ತ ನಮ್ಮನ್ನು ನಡೆಸುವ ದಿಕ್ಸೂಚಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT