ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮನದ ಕಿಚ್ಚು ಸುಡುವುದು ಯಾರನ್ನು?

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಒಂದು ದಿನ ಕಾಡಿನಲ್ಲಿ ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಕೋತಿಗೆ ಒಂದು ಒಂಟಿ ಗುಡಿಸಲು ಕಾಣಿಸಿತು. ಕುತೂಹಲದಿಂದ ಅದರ ಬಾಗಿಲಿಗೆ ಹೋಗಿ ಇಣುಕಿ ನೋಡಿತು. ಒಳಗೆ ಯಾರೂ ಇರಲಿಲ್ಲ. ಒಳಗೆ ಜಿಗಿಯಿತು. ಗುಡಿಸಲಿನ ಒಂದು ಗೋಡೆಗೆ ದೊಡ್ಡದೊಂದು ಕನ್ನಡಿಯಿತ್ತು. ಮಂಗನೋ ಕನ್ನಡಿಯನ್ನು ಜೀವನದಲ್ಲಿಯೇ ಕಂಡಿಲ್ಲ. ಅಂದಮೇಲೆ ತನ್ನಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಮಾತೇ ಬರದು ಬಿಡಿ.

ಟಂಗನೆ ಜಿಗಿದ ಮಂಗ ಪಾದವೂರಿ ನಿಂತಿದ್ದು ಕನ್ನಡಿ ಎದುರಿಗೇ! ಅರೇ ಹೊರಗಿನಿಂದ ನೋಡಿದಾಗ ಯಾರೂ ಇರಲಿಲ್ಲ. ಈಗ ನೋಡಿದರೆ ತನ್ನೆದುರು ನನ್ನಂಥದೇ ಕೋತಿಯೊಂದು ಥೇಟ್‌ ನನ್ನ ಹಾಗೆಯೇ ನಿಂತು ನನ್ನನ್ನೇ ನೋಡುತ್ತ ನಿಂತಿದೆ! ಕನ್ನಡಿಯಲ್ಲಿ ಕಾಣುತ್ತಿರುವುದು ತನ್ನ ಬಿಂಬ ಎಂಬುದನ್ನು ಅರಿಯಲಾರದೇ ಹೋದ ಕೋತಿಗೆ ಒಮ್ಮಿಂದೊಮ್ಮೆಲೇ ಕೋಪ ನೆತ್ತಿಗೇರಿತು. ತಾನು ಕಂಡುಕೊಂಡ ಜಾಗಕ್ಕೆ ಬಂದ ಪ್ರತಿಸ್ಪರ್ಧಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಕಣ್ಣು ಗರಗರ ತಿರುಗಿಸಿ ಕಲ್ಲು ಕಿರಿಯಿತು. ಅಬ್ಬಾ ಸೊಕ್ಕೇ! ಎದುರಿಗಿರುವ ಮಂಗನೂ ತನ್ನ ಹಾಗೆಯೇ ಹಲ್ಲುಕಿರಿದು ಪಂಥಾಹ್ವಾನ ನೀಡುತ್ತಿದೆ. ಇನ್ನು ಸುಮ್ಮನಿರುವುದು ತರವಲ್ಲ ಎಂದು ಅನ್ನಿಸಿ ಒಮ್ಮೆ ಗೂಕ್‌ ಎಂದ ಹೂಂಕರಿಸಿದ್ದೇ ಕೈಗೆ ಸಿಕ್ಕ ಕಟ್ಟಿಗೆಯನ್ನೆತ್ತಿ ಎದುರಿನ ಮಂಗನತ್ತ ಬೀಸಿ ಒಗೆಯಿತು.

ಟಳ್‌ ಎಂಬ ಶಬ್ದದೊಂದಿಗೆ ಕನ್ನಡಿಯ ಗಾಜು ಒಡೆಯಿತು. ಅದರೊಟ್ಟಿಗೆ ಅದರಲ್ಲಿನ ಕೋತಿಯ ಬಿಂಬದ ಮೇಲೂ ಬಿರುಕು ಮೂಡಿತು. ಒಂದೊಂದು ಬಿರುಕಿನಲ್ಲಿಯೂ ಒಂದೊಂದು ಬಿಂಬ. ತನ್ನ ಪ್ರಹಾರದ ಹೊಡೆತಕ್ಕ ಒಂದಾಗಿದ್ದ ಎದುರಾಳಿ ಹಲವಾಗಿ ರೂಪಾಂತರಗೊಂಡ ಬಗೆ ನೋಡಿ ಕೋತಿ ನಿಬ್ಬೆರಗಾಯ್ತು.  ಎದುರಿನ ಎಲ್ಲ ಕೋತಿಗಳೂ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಕೋಪ ಇಮ್ಮಡಿಸಿ ಜಿಗಿದು ಮುಂದೆರಗಿದ್ದೇ ಕೈ ಬೀಸಿ ಬಾರಿಸಿತು. ಒಡೆದ ಕನ್ನಡಿಯ ಹರಿತ ಅಂಚಿನಲ್ಲಿ ತಾಗಿ ಕೋತಿಯ ಕೈ ಸೀಳಿ ರಕ್ತ ತೊಟ್ಟಿಕ್ಕತೊಡಗಿತು. ಕನ್ನಡಿಯ ಬಿಂಬದ ಗುಂಟ ಇಳಿಯುತ್ತಿದ್ದ ಆ ರಕ್ತ ಎದುರಾಳಿಯ ದೇಹದಿಂದಲೇ ಚಿಮ್ಮಿದ್ದು ಎಂದೇ ಅದಕ್ಕನಿಸಿ ಗೆಲುವಿನಿಂದ ಹೂಂಕರಿಸಿತು.

ರಕ್ತ ಸುರಿಯುತ್ತಿದ್ದರೂ ತನ್ನತ್ತೇ ನೋಡುತ್ತಿದ್ದ ಎದುರಾಳಿ ಕೋತಿ ತನ್ನಂತೆಯೇ ಹೂಂಕರಿಸಿದ್ದನ್ನು ಕಂಡು ಸಿಟ್ಟು ಇನ್ನಷ್ಟು ಉಕ್ಕಿತು. ಹಿಂದು ಮುಂದು ನೋಡದೇ ಇದ್ದ ಶಕ್ತಿಯನ್ನೆಲ್ಲ ಹಾಕಿ ಎದುರಾಳಿಯತ್ತ ಹಾರಿ ಕಚ್ಚಿತು, ಪರಚಿತು... ಯಾವುದೋ ತಡೆ ತನ್ನನ್ನು ಆ ಎದುರಾಳಿಯನ್ನು ತಾಗದಂತೆ ನಿಯಂತ್ರಿಸುತ್ತಿದೆ ಎಂದು ಗೊತ್ತಾಗಿ ಇನ್ನಷ್ಟು ವೇಗದಿಂದ ಮುನ್ನುಗ್ಗಿ ದಾಳಿ ಮಾಡುತ್ತಲೇ ಇತ್ತು. ಇನ್ನಷ್ಟು ಮತ್ತಷ್ಟು ರಕ್ತ ಸುರಿಯುತ್ತಲೇ ಹೋಯಿತು.

ಕೋಪದ ಆವೇಶ ಇಳಿದು ತಣ್ಣಗಾಗುವಷ್ಟರಲ್ಲಿ ಕೋತಿಯ ಮೈಯಿಂದ ರಕ್ತವೆಲ್ಲ ಬಸಿದು ಹೋಗಿ ನಿತ್ರಾಣಗೊಂಡಿತ್ತು. ಎದ್ದು ನಿಲ್ಲಲಾಗದೇ ಮಲಗಿತು. ಇದರೊಟ್ಟಿಗೇ ಕನ್ನಡಿಯಲ್ಲಿನ ಬಿಂಬವೂ ಮಲಗಿದ್ದು ಕಂಡು ಅದಕ್ಕೆ ನೋವಿನಲ್ಲಿಯೂ ಅಚ್ಚರಿಯಾಯಿತು. ಕೋಪ ಆವೇಶಗಳು ಇಳಿದು ನೋವಿನಿಂದ ಮುಲುಗುತ್ತಿರುವಾಗ ಅದಕ್ಕೆ ವಿವೇಚನೆ ಜಾಗೃತವಾಯ್ತು. ನಿನ್ನೆಯ ದಿನ ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ತನ್ನ ಬಿಂಬ ತನಗೇ ಕಾಣುತ್ತಿದ್ದದ್ದು ನೆನಪಾಯಿತು. ಇದೂ ಅಂಥದ್ದೇ ಒಂದು ಪರಿಕರ ಇರಬಹುದು ಎಂಬುದು ಹೊಳೆಯಿತು. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿತ್ತು. ಪ್ರಾಣಪಕ್ಷಿ ಹಾರಿ ಹೋಗಿತ್ತು.

***

ಇದೊಂದು ಸರಳ ಕಥೆ. ಈ ಕಥೆಯನ್ನು ಸಾವಧಾನದಿಂದ ಓದಿಕೊಂಡರೆ ನಮ್ಮ ಬದುಕಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದೂ ಹೊಳೆಯುತ್ತ ಹೋಗುತ್ತದೆ. ಸಿಟ್ಟು – ದ್ವೇಷಗಳಂಥ ಭಾವಗಳು ನಮ್ಮೊಳಗೇ ಇರುವ ಕಿಚ್ಚು. ಅದನ್ನು ಕನ್ನಡಿ ಎಂದು ಕಲ್ಪಿಸಿಕೊಳ್ಳಿ. ಅದರಲ್ಲಿ ಕಾಣುವ ಬಿಂಬ ನಮ್ಮ ಎದುರಾಳಿಯದು ಎಂದು ನಾವು ಭಾವಿಸಿಕೊಳ್ಳುತ್ತಿರುತ್ತೇವೆ. ಆ ಭಾವದ ಮೇಲೆಯೇ ದ್ವೇಷದ ಭರದಲ್ಲಿ ಹರಿಹಾಯುತ್ತೇವೆ. ಅದರಿಂದ ಎದುರಾಳಿಗೆ ನಷ್ಟವಾದಂತೆ ಭ್ರಮಿಸಿ ಗೆಲುವಿನ ಅಟ್ಟಹಾಸ ಬೀರುತ್ತೇವೆ. ಆದರೆ ಅಂತಿಮವಾಗಿ ಆ ದ್ವೇಷದ ಬೆಂಕಿ ನಮ್ಮ ಮನದ ನೆಮ್ಮದಿಯನ್ನೇ ಸುಟ್ಟಿರುತ್ತದೆ. ನಮ್ಮ ಬಿಂಬದ ವಿರುದ್ಧದ ಯುದ್ಧದಲ್ಲಿ ಗೆದ್ದಂತೆ ಕಂಡರೂ ನಾವೇ ಸೋತು ನಿತ್ರಾಣರಾಗಿರುತ್ತೇವೆ. ನಮಗೆ ನಾವೇ ಗಾಯಮಾಡಿಕೊಂಡಿರುತ್ತೇವೆ.

ಕಥೆಯಲ್ಲಿನ ಕೋತಿಗೆ ಕೊನೆಗಳಿಗೆಯಲ್ಲಿ ಬಂದ ವಿವೇಕ ಮೊದಲೇ ಬಂದಿದ್ದರೆ ಪ್ರಾಣ ಉಳಿಯುತ್ತಿತ್ತಲ್ಲವೇ? ಹಾಗೆಯೇ ನಮ್ಮೊಳಗೂ ಅಂಥದ್ದೊಂದು ವಿವೇಕವನ್ನು ದ್ವೇಷಕ್ಕೆ ಬಲಿಯಾಗುವ ಮುನ್ನವೇ ಬೆಳಗಿಕೊಳ್ಳುವುದು ಹೇಗೆ? ಉತ್ತರ ಕಥೆಯಲ್ಲಿಲ್ಲ; ನಮ್ಮಲ್ಲಿಯೇ ಇದೆ. ಹುಡುಕಿಕೊಳ್ಳಬೇಕಷ್ಟೆ.

-ಗೌರಿ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT