ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಸಾಲಕ್ಕೆ ಮನಿಟ್ಯಾಪ್‌ ಆ್ಯಪ್‌

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಸಾಲ ಎನ್ನುವುದು ಮಧ್ಯಮ ವರ್ಗದವರ ಜೀವನಕ್ಕೆ ಅತ್ಯವಶ್ಯಕ. ಅದು ಮನೆ ಕಟ್ಟಲು, ಮದುವೆಗೆ ಮಾಡುವ ದೊಡ್ಡ ಮೊತ್ತದ ಸಾಲವಷ್ಟೇ ಅಲ್ಲದೆ ನಿತ್ಯ ಬದುಕಿನ ಖರ್ಚಿಗೆಂದೂ ಸಣ್ಣ ಪುಟ್ಟ ಸಾಲಗಳು ಅನಿವಾರ್ಯ. ಆದರೆ, ಬ್ಯಾಂಕ್‌ಗಳಿಂದ ಸಣ್ಣ ಮೊತ್ತದ ಸಾಲ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮನಿಟ್ಯಾಪ್‌ ಹೆಚ್ಚು ಉಪಯೋಗಕ್ಕೆ ಬರುತ್ತದೆ’ ಎನ್ನುವುದು ಮನಿ ಟ್ಯಾಪ್‌ ಸಹ ಸ್ಥಾಪಕ ಅನುಜ್‌ ಕಾಕರ್‌ ಅವರ ಅಭಿಪ್ರಾಯವಾಗಿದೆ.

'ಸಾಮಾನ್ಯವಾಗಿ ಸ್ನೇಹಿತರು, ಸಂಬಂಧಿಕರು ₹1,000 ದಿಂದ ₹10,000ದವರೆಗೆ ಸಾಲ ನೀಡುತ್ತಾರೆ. ಅದಕ್ಕೂ ಹೆಚ್ಚಿನ ಅಂದರೆ ₹50 ಸಾವಿರ ಅಥವಾ ₹1 ಲಕ್ಷಕ್ಕಿಂತ ಹೆಚ್ಚಿನ ಸಾಲ ಬೇಕಿದ್ದರೆ ಬಡ್ಡಿ ವ್ಯಾಪಾರಿಗಳಿಂದ ಅಥವಾ ಪರಿಚಯ ಇರುವವರ ಬಳಿಯೇ  ಗರಿಷ್ಠ ಬಡ್ಡಿಗೆ ಸಾಲ ಪಡೆಯಬೇಕಾಗುತ್ತದೆ. ಇದರ ಬಡ್ಡಿ ತೀರಿಸುವುದಕ್ಕೆ ಮತ್ತೊಂದು ಕಡೆ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಒಂದು ಕಡೆ ಮಾಡಿದ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡುವ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿ ತಿಂಗಳೂ ಅದಕ್ಕೆ ಪ್ರತ್ಯೇಕವಾಗಿ ಬಡ್ಡಿ ಕಟ್ಟುವ ಗೋಳೂ ಇದ್ದೇ ಇರುತ್ತದೆ. ಈ ಸಮಸ್ಯೆಗಳಿಂದ ಹೊರಬರಲು ‘ಮನಿಟ್ಯಾಪ್‌’ ಉತ್ತಮ ಪರಿಹಾರವಾಗಿದೆ ಎಂದು ಅವರು ಹೇಳುತ್ತಾರೆ.

ಯಾರು ಅರ್ಹರು: ತಿಂಗಳಿಗೆ ಕನಿಷ್ಠ ₹ 20,000 ವೇತನ ಪಡೆಯುವವರು ಈ ಆ್ಯಪ್‌ನಿಂದ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಯಾವುದೇ ಭದ್ರತೆ ಇಲ್ಲದ, ಅಲ್ಪಾವಧಿ ಸಾಲ ಪಡೆಯಲು ಮನಿಟ್ಯಾಪ್‌ ನೆರವಾಗುತ್ತದೆ. ಸಾಲ ಸೌಲಭ್ಯ ನೀಡಲು ಕಂಪೆನಿಯು ಆರ್‌ಬಿಎಲ್‌ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಂಕ್‌ ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವ ಕೆಲಸ ಈ ಆ್ಯಪ್‌ ಮೂಲಕ ನಡೆಯುತ್ತದೆ. ಗ್ರಾಹಕರ ಬಗ್ಗೆ ಸಾಲ ಮಾಹಿತಿ ಮಂಡಳಿ (ಸಿಐಬಿಐಎಲ್‌) ನೀಡುವ ರೇಟಿಂಗ್ಸ್‌ ಆಧರಿಸಿ, ಕೆವೈಸಿ ಮಾಹಿತಿಯನ್ನು ಪರಿಶೀಲಿಸಿ ಅವರಿಗೆ ಸಾಲ ಪಡೆಯುವ ಅರ್ಹತೆ ಇದೆಯೇ ಎನ್ನುವುದನ್ನು ಬ್ಯಾಂಕ್ ತಿಳಿಸುತ್ತದೆ. ಆ್ಯಪ್‌ ಮೂಲಕ ಸಾಲ ಪಡೆಯುವ ಮತ್ತು ಅದನ್ನು ನಿರ್ವಹಿಸುವ ಕೆಲಸ ಮಾಡಬೇಕು. ‌

ಮನಿಟ್ಯಾಪ್‌ ಆ್ಯಪ್ ಬಳಕೆ ಬಹಳ ಸರಳವಾಗಿದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಹೆಸರು, ವಿಳಾಸ ವಿವರ ನೀಡಬೇಕು. ಸೆಲ್ಪಿ ತೆಗೆದು ಅರ್ಜಿಗೆ ಫೋಟೊ ಅಪ್‌ಲೋಡ್‌ ಮಾಡಬಹುದು. ಕೆವೈಸಿಗೆ ಪ್ಯಾನ್‌ ಕಾರ್ಡ್, ಸದ್ಯ ಇರುವ ಮನೆ ವಿಳಾಸ ಬೇಕು. ನಾವು ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಮಾಡುವಂತೆಯೇ, ಮನಿಟ್ಯಾಪ್‌ ಆ್ಯಪ್‌ನಲ್ಲಿ ನಮ್ಮ ಮಾಹಿತಿಗಳನ್ನು ನೀಡುವ ಬಗ್ಗೆ, ಅದು ಬ್ಯಾಂಕ್‌ನಿಂದ ದೃಢೀಕರಣಗೊಂಡ ಬಗ್ಗೆ ತಕ್ಷಣವೇ ಸಂದೇಶ ಬರುತ್ತದೆ. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಐದು ನಿಮಿಷದಲ್ಲಿಯೇ ಸಾಲ ಸಿಗುವ ಬಗ್ಗೆ ಖಾತರಿ ಸಂದೇಶ ಬರುತ್ತದೆ.

ಪ್ರತಿನಿಧಿಗಳು ಗ್ರಾಹಕರ ಬಳಿಗೆ ಬಂದು ಗ್ರಾಹಕರ ಸಾಲಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳುತ್ತಾರೆ. ಆ ಬಳಿಕ ಸಾಲದ ಮೊತ್ತ ಬಳಸಿಕೊಳ್ಳಬಹುದು. ಬ್ಯಾಂಕ್‌ ಒಪ್ಪಿಗೆ ನೀಡಿದ ಬಳಿಕ ಬಳಕೆದಾರರ ಸಿಬಿಲ್ ಸ್ಕೋರ್ ಆಧರಿಸಿ ಮನಿಟ್ಯಾಪ್‌ ಆ್ಯಪ್‌ಗೆ ಗರಿಷ್ಠ ₹5 ಲಕ್ಷ ಬರುತ್ತದೆ. ಆ ಮೊತ್ತ ಬಳಸದೇ ಇದ್ದರೆ ಅದಕ್ಕೆ ಬಡ್ಡಿ ಪಾವತಿಸುವ ಅಗತ್ಯವಿಲ್ಲ. ಅದರಲ್ಲಿ ₹10,000ಗಳನ್ನು ಮೂರು ತಿಂಗಳ ಅವಧಿಗೆ ಬಳಸಿದರೆ ಆ ಮೊತ್ತಕ್ಕೆ ಮಾತ್ರವೇ ಬಡ್ಡಿ ಕಟ್ಟಬೇಕು. ಬಡ್ಡಿ ಪಾವತಿಸುತ್ತಿದ್ದಂತೆಯೇ ಸಾಲದ ಮೊತ್ತ ಮತ್ತೆ ಮೂಲ ಸಾಲದ ಮೊತ್ತವಾದ ₹5 ಲಕ್ಷಕ್ಕೆ ಸೇರಿಕೊಳ್ಳುತ್ತಾ ಹೋಗುತ್ತದೆ.

ಎಷ್ಟು ಹಣ ಬಳಕೆಗೆ ಬೇಕು ಮತ್ತು ಅದರ ಮರುಪಾವತಿ ಅವಧಿ ನೀಡಿದ ಬಳಿಕ ಆ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಆ್ಯಪ್‌ ಜತೆ ಸಂಪರ್ಕ ಹೊಂದಿರುವ ಕ್ರೆಡಿಟ್‌ ಕಾರ್ಡ್‌ ಬಳಸಿಯೂ ಬಿಲ್‌ ಪಾವತಿ, ಆನ್‌ಲೈನ್‌ ಖರೀದಿ ಮಾಡಬಹುದು

(ಅನುಜ್ ಕಾಕರ್‌)

ಮೂರು ತಿಂಗಳಿನಿಂದ ಮೂರು ವರ್ಷಗಳ ಸಾಲ ಮರುಪಾವತಿ ಅವಧಿ ಇದೆ. ಬಡ್ಡಿದರವನ್ನು ಸಾಲದ ಮೊತ್ತ ಆಧರಿಸಿ ಶೇ 1.25 ರಿಂದ ಶೇ 1.5ರವರೆಗೆ ನಿಗದಿಮಾಡಲಾಗಿದೆ. ತಿಂಗಳ ಕಂತು ಪಾವತಿಸುತ್ತಿದ್ದಂತೆಯೇ ಸಾಲ ಪಡೆದ ಮೊತ್ತ ಮತ್ತೆ ₹5 ಲಕ್ಷಕ್ಕೆ ಸೇರಿಕೊಳ್ಳುತ್ತದೆ. ಕ್ರೆಡಿಟ್‌ ಕಾರ್ಡ್ ಮೂಲಕವೂ ಸಾಲದ ಮೊತ್ತವನ್ನು ವಿವಿಧ ಕಡೆಗಳಲ್ಲಿ ಬಳಸಬಹುದು.

ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಚೆನ್ನೈ ನಗರಗಳಲ್ಲಿ ಈ ಆ್ಯಪ್‌ ನೆರವಿನಿಂದ ಸಾಲ ಪಡೆಯಬಹುದು. ಮುಂದಿನ ಕೆಲವೇ ತಿಂಗಳುಗಳಲ್ಲಿ ಬೇರೆ ನಗರಗಳಿಗೂ ವಿಸ್ತರಣೆ ಮಾಡುವ ಯೋಜನೆ ಇದೆ.

ಪ್ರಮುಖ ಅಂಶಗಳು

ಸಾಲ ಮಿತಿ: ಕನಿಷ್ಠ ₹3,000 ಗರಿಷ್ಠ ₹ 5 ಲಕ್ಷ

ಬಳಸಿದರೆ ಮಾತ್ರ ಬಡ್ಡಿ: ಮಂಜೂರಾದ ಒಟ್ಟು ಸಾಲದ ಮೊತ್ತಕ್ಕೆ (ಕ್ರೆಡಿಟ್‌ ಲೈನ್‌ನಲ್ಲಿ ಇರುವ ಮೊತ್ತ)  ಬಡ್ಡಿ ಕಟ್ಟುವ ಅಗತ್ಯ ಇಲ್ಲ. ಅದರಲ್ಲಿ ಬಳಸಿಕೊಂಡಿದ್ದಕ್ಕೆ ಮಾತ್ರವೇ ಬಡ್ಡಿ ಕಟ್ಟಬೇಕು.

ಬಡ್ಡಿದರ: ತಿಂಗಳಿಗೆ ಶೇ 1.25 ರಿಂದ ಶೇ 1.5. ಯಾವುದೇ ಮರೆಮಾಚಿದ ಶುಲ್ಕ ಇಲ್ಲ

ಮರುಪಾವತಿ ಆಯ್ಕೆ: ಗ್ರಾಹಕರು ಸಾಲ ಮರುಪಾವತಿ ಅವಧಿಯನ್ನು ತಾವೇ ನಿರ್ಧರಿಸಬಹುದು. ಕನಿಷ್ಠ 2 ತಿಂಗಳಿನಿಂದ 36 ತಿಂಗಳ ಅವಧಿ ಇದೆ.

ಪ್ರಯೋಜನ: ಮನಿಟ್ಯಾಪ್‌ ಕ್ರೆಡಿಟ್‌ ಕಾರ್ಡ್‌, ಹಲವು ಕೊಡುಗೆಗಳು ಮತ್ತು ಲಾಭಗಳನ್ನು ಒಳಗೊಂಡಿದೆ

ಸುರಕ್ಷಿತ: ಆನ್‌ಲೈನ್‌ನಲ್ಲಿ ಶಾಪಿಂಗ್‌ ನಡೆಸಬಹುದು ಅಥವಾ ಮಳಿಗೆಗಳಲ್ಲಿ ಕಾರ್ಡ್ ಬಳಸಬಹುದು. ಒಂದೇ ಕಂತ್‌ನಲ್ಲಿ ಬ್ಯಾಂಕ್‌ಗೆ ಹಣ ವರ್ಗಾವಣೆಯೂ ಸಾಧ್ಯ.

ವರ್ಗಾವಣೆಯ ಮಾಹಿತಿ: ಎಷ್ಟು ಸಾಲ ಮರುಪಾವತಿ ಬಾಕಿ ಉಳಿದಿದೆ. ಬಡ್ಡಿದರ ಎಷ್ಟು ಎನ್ನುವ ಎಲ್ಲಾ ವಿವರಗಳನ್ನೂ ಪರಿಶೀಲಿಸಬಹುದು.

ಕ್ರೆಡಿಟ್‌ ಕಾರ್ಡ್‌ಗೆ ₹499 ಮತ್ತು ತೆರಿಗೆ ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT