ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ವಹಿವಾಟಿಗೆ ನಿರ್ಬಂಧ

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ಅರವಿಂದ ರಾಘವನ್‌

*

ಬೇನಾಮಿ ಆಸ್ತಿ ಮಾರಾಟ ತಡೆ ಕಾಯ್ದೆ’ 1988ರಲ್ಲಿ ರಚನೆ ಆಗಿದ್ದರೂ ಅದನ್ನು ಜಾರಿ ಮಾಡುವ ವ್ಯವಸ್ಥೆ ಇಲ್ಲದೆ ಈವರೆಗೆ ಕಾನೂನು ನಿಷ್ಪ್ರಯೋಜಕವಾಗಿತ್ತು. 2016ರಲ್ಲಿ ಈ ಕಾಯ್ದೆಗೆ ಮಾಡಿರುವ ತಿದ್ದುಪಡಿಯಲ್ಲಿ ಕೆಲವು ಪ್ರಾಧಿಕಾರಗಳನ್ನು ರಚಿಸಿ ಅವುಗಳ ಮೂಲಕ ಕಾನೂನಿನ ಸುಗಮ ಜಾರಿಗೆ ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿಕೊಟ್ಟಿದೆ.

ಏನಿದು ಬೇನಾಮಿ ವಹಿವಾಟು?

ಬೇನಾಮಿ ಆಸ್ತಿ ಹೊಂದಿರುವ ಒಬ್ಬ ವ್ಯಕ್ತಿ, ಅದನ್ನು ಇನ್ನೊಬ್ಬನ ಹೆಸರಿಗೆ ವರ್ಗಾಯಿಸಿ, ಮೂರನೇ ವ್ಯಕ್ತಿಯಿಂದ ಅದರ ಮೌಲ್ಯವನ್ನು ಅಥವಾ ಪ್ರತಿಫಲವನ್ನು ಪಡೆಯುವುದು ಬೇನಾಮಿ ವಹಿವಾಟು ಎಂದಾಗುತ್ತದೆ. ಇಲ್ಲಿ ಬೇನಾಮಿ ಆಸ್ತಿ ನೇರವಾಗಿ ಹಣ ಕೊಟ್ಟ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಆಗುವುದಿಲ್ಲ. ಆದರೆ, ಆ ಕ್ಷಣದಿಂದ ಅಥವಾ ಭವಿಷ್ಯದಲ್ಲಿ ಆ ಆಸ್ತಿಯನ್ನು ಆತ ಅನುಭವಿಸುತ್ತಾನೆ. wಬೇನಾಮಿ ಆಸ್ತಿ ವಹಿವಾಟಿನಲ್ಲಿ ಹಲವು ವಿಧಗಳಿವೆ. ಸಾಮಾನ್ಯವಾಗಿ ಈ ವಹಿವಾಟು ಕಾಲ್ಪನಿಕ ಹೆಸರಿನಲ್ಲಿ ನಡೆಯುತ್ತದೆ. ಅನೇಕ ಸಂದರ್ಭದಲ್ಲಿ ತನ್ನ ಹೆಸರಿನಲ್ಲಿ ಇಂಥ ಒಂದು ಆಸ್ತಿ ನೋಂದಣಿಯಾಗಿದೆ ಎಂಬುದೇ ವ್ಯಕ್ತಿಗೆ (ಬೇನಾಮಿದಾರ) ಗೊತ್ತಿರುವುದಿಲ್ಲ. ಇಂತಹ ಆಸ್ತಿಗೆ ಹಣ ಕೊಡುವವನ ಹೆಸರೂ ಸಹ ಗೌಪ್ಯವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಅವನನ್ನು ಪತ್ತೆ ಮಾಡಲು ಸಹ ಸಾಧ್ಯವಾಗುವುದಿಲ್ಲ.

ಹೀಗೆ ಒಬ್ಬನ ಬೇನಾಮಿ ಆಸ್ತಿಯನ್ನು ಇನ್ನೊಬ್ಬನ ಹೆಸರಿಗೆ ವರ್ಗಾಯಿಸಲು ಮೂರನೇ ವ್ಯಕ್ತಿ ಹಣ ಕೊಡುವ ವಹಿವಾಟು ಅಪರಾಧವಾಗಿದ್ದರೂ ಕೆಲವು ಕಡೆ ಇದಕ್ಕೆ ವಿನಾಯಿತಿ ಇದೆ. ಹಿಂದೂ ಅವಿಭಕ್ತ ಕುಟುಂಬದ ಸ್ವಾಧೀನದಲ್ಲಿ ಆಸ್ತಿ ಇದ್ದರೆ ಇಂಥ ವಹಿವಾಟಿಗೆ ಅವಕಾಶ ಇದೆ. ಇಂಥ ಕುಟುಂಬದ ಯಜಮಾನ ಅಥವಾ ಒಬ್ಬ ವ್ಯಕ್ತಿ ಒಂದು ಆಸ್ತಿ ಖರೀದಿಸಿ, ಅದಕ್ಕೆ ಕುಟುಂಬದ ಆದಾಯದ ಮೂಲಗಳಿಂದಲೇ ಹಣ ಪಾವತಿ ಮಾಡಿದ್ದರೆ ಅದು ಬೇನಾಮಿ ವಹಿವಾಟು ಎನಿಸುವುದಿಲ್ಲ.

ಕಾನೂನು ಪ್ರಕಾರ, ಯಾವುದೇ ಒಂದು ಸಂಸ್ಥೆಯ ಟ್ರಸ್ಟಿ, ಪಾರ್ಟ್‌ನರ್‌, ನಿರ್ದೇಶಕನಾಗಿ ಅಥವಾ ಸಂಸ್ಥೆಯ ಸೊತ್ತುಗಳ ನಿರ್ವಹಣೆ ಮಾಡುವವನಾಗಿ ಅಥವಾ ಅದರ ಏಜೆಂಟ್‌ ಆಗಿದ್ದು, ಸಂಸ್ಥೆಯ ಆಸ್ತಿಯನ್ನು ತನ್ನ ಹೆಸರಿನಲ್ಲಿ ಹೊಂದಿದ್ದರೆ ಅದೂ ಅಪರಾಧವೆನಿಸುವುದಿಲ್ಲ. ವ್ಯಕ್ತಿಯೊಬ್ಬ ಬಲ್ಲ ಮೂಲಗಳಿಂದ ಹಣ ಪಾವತಿಸಿ, ಸಹೋದರ, ಸಹೋದರಿ, ಅವಲಂಬಿತರ ಜಂಟಿ ಮಾಲೀಕತ್ವದಲ್ಲಿ ಆಸ್ತಿ ಖರೀದಿಸುವುದೂ ಬೇನಾಮಿ ವಹಿವಾಟು ಆಗುವುದಿಲ್ಲ.

ವ್ಬಕ್ತಿಯೊಬ್ಬ ಯಾವುದೋ ಒಂದು ನೋಂದಾಯಿತ ವ್ಯವಹಾರದ ಭಾಗವಾಗಿದ್ದು, ಆ ವ್ಯವಹಾರದ ಭಾಗವಾಗಿ ಆಸ್ತಿ ಖರೀದಿಸಿ, ಅದನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದರೆ ಅಂಥ ವ್ಯವಹಾರವನ್ನು ಸಕ್ರಮ ಎಂದು ಪರಿಗಣಿಸಲಾಗುತ್ತದೆ.

ಬೇನಾಮಿ ವಹಿವಾಟಿಗೆ ಶಿಕ್ಷೆ ಏನು?

ಬೇನಾಮಿ ವಹಿವಾಟು ನಿಷಿದ್ಧ. ಅದಕ್ಕೆ ಕಾನೂನು ಪ್ರಕಾರ ಶಿಕ್ಷೆ ಅಥವಾ ದಂಡ ವಿಧಿಸಲು ಮತ್ತು ಬೇನಾಮಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಹ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ. ಬೇನಾಮಿ ವಹಿವಾಟನ್ನು ಕ್ರಿಮಿನಲ್‌ ಅಪರಾಧ ಎಂದೂ ಪರಿಗಣಿಸಲಾಗುತ್ತದೆ. ಇದಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆಯ ಜೊತೆಗೆ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ 25ರಷ್ಟು ದಂಡ ವಿಧಿಸಲು ಸಹ ಕಾನೂನಿನಲ್ಲಿ ಅವಕಾಶ ಇದೆ.

ಬೇನಾಮಿ ವಹಿವಾಟು ನಾನ್‌ಕಾಗ್ನಿಜೆಬಲ್‌ (ಸಂಜ್ಞೇಯವಲ್ಲದ) ಅಪರಾಧವಾಗಿರುವುದರಿಂದ ವಾರಂಟ್‌ ಇಲ್ಲದೆ ಪೊಲೀಸ್‌ ಅಧಿಕಾರಿ ಆರೋಪಿಯನ್ನು ಬಂಧಿಸಲು ಅವಕಾಶ ಇರುವುದಿಲ್ಲ. ಅದರಂತೆ ಬಂಧನಕ್ಕೊಳಗಾದ ಆರೋಪಿಗೆ ಸಹಜವಾಗಿ ಜಾಮೀನು ಸಹ ಲಭಿಸುವುದಿಲ್ಲ. ಕೆಲವು ನಿಬಂಧನೆಗಳ ಮೇಲೆ ಮಾತ್ರ ಜಾಮೀನು ನೀಡಲು ಸಾಧ್ಯವಾಗುತ್ತದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಪೂರ್ವಾನುಮತಿ ಪಡೆದ ಬಳಿಕವೇ ಇಂಥ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಬೇನಾಮಿ ವಿಹಿವಾಟು ನಡೆಸಿರುವ ಒಬ್ಬ ವ್ಯಕ್ತಿ, ಹಿಂದೂ ಅವಿಭಕ್ತ ಕುಟುಂಬದ ಮುಖ್ಯಸ್ಥ ಅಥವಾ ಯಾವುದೇ ಒಬ್ಬ ಸದಸ್ಯ, ಪಾರ್ಟರ್ನರ್ ಷಿಪ್‌ ಸಂಸ್ಥೆ (ಇಡೀ ಸಂಸ್ಥೆ ಅಥವಾ ಸಂಸ್ಥೆಯ ಒಬ್ಬ ವ್ಯಕ್ತಿ), ಕಂಪೆನಿ (ನಿರ್ದೇಶಕರು)... ಹೀಗೆ ಯಾರ ವಿರುದ್ಧವಾದರೂ ಕಾನೂನು ಕ್ರಮ ಕೈಗೊಳ್ಳಬಹುದು.

ಯಾರಿಗೆ ಅಧಿಕಾರ?

ಬೇನಾಮಿ ಆಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಆದಾಯ ತೆರಿಗೆ ಇಲಾಖೆಯ ಸಹಾಯಕ ಅಥವಾ ಉಪ ಆಯುಕ್ತ ಶ್ರೇಣಿ ಅಥವಾ ಅದಕ್ಕೂ ಉನ್ನತ ಹುದ್ದೆಯ ಅಧಿಕಾರಿಗೆ ಮಾತ್ರ ಇರುತ್ತದೆ. ಅವರೂ ಮೇಲಧಿಕಾರಿಗಳ (ಹೆಚ್ಚುವರಿ ಅಥವಾ ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿಯಿಂದ) ಅನುಮತಿ ಪಡೆದಿರಬೇಕು. ಮೊದಲು ಬೇನಾಮಿದಾರ ಮತ್ತು ಆಸ್ತಿ ಖರೀದಿಸಿದ ವ್ಯಕ್ತಿಗೆ ನೋಟಿಸ್‌ ನೀಡಬೇಕು. ಆರೋಪಿಗಳಿಂದ ಉತ್ತರ ಬಂದ ಬಳಿಕ, ಅದನ್ನು ನಿರ್ಣಯ ಕೈಗೊಳ್ಳುವ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಈ ಪ್ರಾಧಿಕಾರಕ್ಕೆ ಒಬ್ಬ ಅಧ್ಯಕ್ಷ ಹಾಗೂ ಕನಿಷ್ಠ ಇಬ್ಬರು ಸದಸ್ಯರು ಇರಬೇಕು. ಎಲ್ಲರೂ ಆದಾಯ ತೆರಿಗೆ ಇಲಾಖೆ ಆಯುಕ್ತರ ಶ್ರೇಣಿಯವರಾಗಿರಬೇಕು ಅಥವಾ ಭಾರತೀಯ ನ್ಯಾಯಾಂಗ ಸೇವೆಯ ಜಂಟಿ ಕಾರ್ಯದರ್ಶಿ ಅಥವಾ ಅದಕ್ಕೆ ಸಮನಾದ ಹುದ್ದೆಯನ್ನು ಹೊಂದಿರಬೇಕು. ಈ ಪ್ರಾಧಿಕಾರವು ಸಾಕ್ಷಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ನಿರ್ಣಯ

ವನ್ನು ನೀಡುತ್ತದೆ. ಒಂದುವೇಳೆ ಆಸ್ತಿ ಬೇನಾಮಿ ಎಂಬುದು ಸಾಬೀತಾದಲ್ಲಿ, ಪ್ರಾಧಿಕಾರ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸುತ್ತದೆ. ಇಂಥ ಆಸ್ತಿಯು ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬರುತ್ತದೆ. ಇದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಶ್ರೇಣಿಯ ಆಡಳಿತಾಧಿಕಾರಿಯ ವಶಕ್ಕೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಪರವಾಗಿ ಅವರು ಅದರ ನಿರ್ವಹಣೆ ಮಾಡಬೇಕಾಗುತ್ತದೆ. ಈ ಪ್ರಾಧಿಕಾರಗಳಿಗೆ ಸಿವಿಲ್‌ ಕೋರ್ಟ್‌ನಂತೆಯೇ, ಸಾಕ್ಷಿದಾರರಿಗೆ ಸಮನ್ಸ್‌ ಜಾರಿ ಮಾಡುವ, ದಾಖಲೆಗಳು ಹಾಗೂ ಇತರ ಸಾಕ್ಷಿಗಳನ್ನು ಪರಿಶೀಲಿಸುವ ಅಧಿಕಾರ ಇರುತ್ತದೆ.

ಮೇಲ್ಮನವಿ ಪರಿಹಾರ

ಈ ಪ್ರಾಧಿಕಾರ ನೀಡುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಅವಕಾಶ ಇದೆ. ಆರೋಪಿಗಳು ಮೊದಲು ಮೇಲ್ಮನವಿ ನ್ಯಾಯಾಧಿಕರಣದ ಮೊರೆಹೋಗಬೇಕು. ಇದಕ್ಕೆ ಒಬ್ಬ ಅಧ್ಯಕ್ಷ (ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ), ಒಬ್ಬ ನ್ಯಾಯಾಂಗ ಸದಸ್ಯ (ಭಾರತೀಯ ನ್ಯಾಯಾಂಗ ಸೇವೆಯ ಹೆಚ್ಚುವರಿ ಕಾರ್ಯದರ್ಶಿ ಅಥವಾ ತತ್ಸಮಾನ ಹುದ್ದೆಯ) ಹಾಗೂ ಒಬ್ಬ ಆಡಳಿತಗಾರ (ಆದಾಯ ತೆರಿಗೆ ಇಲಾಖೆ ಆಯುಕ್ತ ಅಥವಾ ತತ್ಸಮಾನ ಶ್ರೇಣಿ) ಇರುತ್ತಾರೆ. ಆದರೆ, ಬೇನಾಮಿ ವಹಿವಾಟಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳನ್ನು ಸಿವಿಲ್‌ ಕೋರ್ಟ್‌ಗಳು ಕೈಗೆತ್ತಿಕೊಳ್ಳುವಂತಿಲ್ಲ.

ಕಾನೂನಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾದಲ್ಲಿ ಮಾತ್ರ ಹೈಕೋರ್ಟ್‌ಗೆ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ.

ಅಪರಾಧ ಮತ್ತು ಶಿಕ್ಷೆ

ಕಾನೂನಿನಿಂದ ತಪ್ಪಿಸಿಕೊಳ್ಳುವ, ಶುಲ್ಕದಿಂದ ಪಾರಾಗುವ ಅಥವಾ ಇನ್ಯಾವುದೇ ಉದ್ದೇಶದಿಂದ ಬೇನಾಮಿ ವಹಿವಾಟು ನಡೆಸಿದ್ದು ಸಾಬೀತಾದರೆ ಅಂಥ ವ್ಯಕ್ತಿ ಶಿಕ್ಷೆಗೆ ಅರ್ಹನಾಗುತ್ತಾನೆ. ಆರೋಪಿ ಅಥವಾ ಸಾಕ್ಷಿದಾರರು ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ನೀಡಿದರೆ ಅವರೂ ಶಿಕ್ಷೆಗೆ ಅರ್ಹರು. ಅಂಥವರಿಗೆ ಗರಿಷ್ಠ 5 ವರ್ಷಗಳ ಕಠಿಣ ಕಾರಾಗೃಹ ಹಾಗೂ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ 10ರಷ್ಟು ದಂಡ ವಿಧಿಸಲು ಅವಕಾಶ ಇದೆ.

ಈ ಕಾಯ್ದೆಯಡಿ ಆರೋಪಿಗಳ ವಿಚಾರಣೆ ನಡೆಸಲು ಕೇಂದ್ರ ಸರ್ಕಾರವು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಬಹುದು. ಇಂಥ ನ್ಯಾಯಾಲಯಗಳು ದಂಡ ಪ್ರಕ್ರಿಯಾ ಸಂಹಿತೆ–1973 ಅಡಿ ವಿಚಾರಣೆ ನಡೆಸಿ ಆರು ತಿಂಗಳೊಳಗೆ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು.

(ಅರವಿಂದ್‌ ರಾಘವನ್‌ ಆ್ಯಂಡ್‌ ಅಸೋಸಿಯೇಟ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT