ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಸಾಕ್ಷರತೆಯ ಕ್ರೌರ್ಯ!

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಈ ತಿಂಗಳ 8ರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯೊಂದು ನನ್ನ ಮನಸ್ಸಿನಲ್ಲಿ ತಲ್ಲಣಗಳನ್ನು ಹುಟ್ಟುಹಾಕಿತು. ಮನಸ್ಸನ್ನು ಗಾಸಿಗೊಳಿಸುವ ಇಂತಹ ಅನೇಕ ಸುದ್ದಿಗಳು ದಿನಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಇದರಲ್ಲೇನು ವಿಶೇಷ ಎನ್ನುವಿರಾ?

ಪೋಷಕರ ಮೇಲೆ ಸಾಮಾನ್ಯವಾಗಿ ಅಕ್ಕರೆ, ಪ್ರೀತಿಗಳನ್ನು ಹೊಂದಿರಬೇಕಾದ ಮಕ್ಕಳು, ಶಾಲಾ ಓದಿನ ಕಾರಣಕ್ಕೆ ಹೆತ್ತವರನ್ನು ಕೊಲೆಯೇ ಮಾಡಿಬಿಡುತ್ತಾರೆಂಬ ಕುರಿತಾದ ಸುದ್ದಿಯನ್ನು ಎಂತಹವರೂ ಅರಗಿಸಿಕೊಳ್ಳುವುದು ಕೊಂಚ ಕಠಿಣವೇ ಸರಿ. ಲಖನೌದಲ್ಲಿ ಗಣಿತ ಅಭ್ಯಾಸಕ್ಕೆ ಒತ್ತಾಯ ಮಾಡಿದ ತಂದೆಯನ್ನು ಮಗ ಹತ್ಯೆ ಮಾಡಿದ ಸುದ್ದಿಯದು.

ತಂದೆಗೆ ಮಗ ಭವಿಷ್ಯದಲ್ಲಿ ಎಂಜಿನಿಯರ್ ಆಗಬೇಕೆಂಬ ಆಸೆ. ಈ ಕಾರಣದಿಂದ ಗಣಿತ ವಿಷಯವನ್ನು ಚೆನ್ನಾಗಿ ಕಲಿತು ಹೆಚ್ಚು ಅಂಕ ಗಳಿಸಲು ತಂದೆಯ ಆಗ್ರಹ, ಗದರುವಿಕೆ, ಒತ್ತಾಯಗಳನ್ನು ಸಹಿಸದೆ ಮಗ ಕೊಲೆಯನ್ನೇ ಮಾಡಿದನೆಂದರೆ ಅವನಲ್ಲಿ ಅದೆಷ್ಟು ಹತಾಶೆ, ಆಕ್ರೋಶ ಮನೆ ಮಾಡಿರಬಹುದೆಂಬುದನ್ನು ಊಹಿಸಬಹುದು.
ಈ ಘಟನೆಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಂದೆಡೆ ಮಕ್ಕಳನ್ನು ‘ಚೆನ್ನಾಗಿ ಓದಿ, ಜಾಣರಾಗಿ’ ಎಂದು ಒತ್ತಾಯ ಮಾಡಬಾರದೇ ಎಂಬ ಮಾತು ಪೋಷಕರ ವಲಯದಿಂದ ವ್ಯಕ್ತವಾಗುತ್ತದೆ. ಇನ್ನೊಂದೆಡೆ, ಮಕ್ಕಳ ಆಸಕ್ತಿ, ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ಓದಲು ಹಿಂಸಿಸುವುದು ಸರಿಯಲ್ಲವೆಂದು ಮಕ್ಕಳ ಮನೋವಿಜ್ಞಾನಿಗಳು, ಶಿಕ್ಷಣ ತಜ್ಞರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವರು.

ಮೇಲ್ನೋಟಕ್ಕೆ ಈ ಎರಡೂ ಅಭಿಪ್ರಾಯಗಳು ಅವರವರ ನೆಲೆಯಲ್ಲಿ ಸರಿಯೆಂದು ತೋರಿದರೂ ಮಕ್ಕಳ ಕುರಿತಾದ ಪ್ರೀತಿ, ಕಾಳಜಿ, ಅನುಭೂತಿಗಳಿಂದ ಸ್ವಲ್ಪ ವಿಚಾರ ಮಾಡುವುದು ಅವಶ್ಯವೆನಿಸುತ್ತದೆ. ತುರುಸಿನ ಸ್ಪರ್ಧೆ, ಪೈಪೋಟಿಗಳ ಮಧ್ಯೆ ಮಕ್ಕಳ ಮಾತನ್ನು ಕೇಳುವುದಿರಲಿ ಅವರೆಡೆ ಸಹಾನುಭೂತಿಯನ್ನೂ ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಮ್ಮ ಸಮಾಜ ಇಲ್ಲವೆಂದೇ ಹೇಳಬಹುದು. ಮೇಲೆ ಚರ್ಚಿಸಿದ ಘಟನೆಯನ್ನು ನಾವು ಅಪಾಯದ ಗಂಟೆಯೆಂದು ಪರಿಗಣಿಸಬೇಕಿದೆ. ಇಂತಹ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡು, ಚಿಕಿತ್ಸಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ನಮ್ಮ ಸಮಾಜವು ಚಲನೆಗಳನ್ನು ಕಳೆದುಕೊಂಡ ಕೋಮಾದ ಸ್ಥಿತಿಯಲ್ಲಿರುವ ಸಮಾಜವಾಗುವುದರಲ್ಲಿ ಸಂಶಯವಿಲ್ಲ.

ತಮ್ಮ ಮಕ್ಕಳು ಎಂಜಿನಿಯರ್ ಅಥವಾ ವೈದ್ಯರಾಗಬೇಕೆಂದೇ ಬಯಸುವ ಹೆಚ್ಚಿನ ತಂದೆ ತಾಯಿಯರು ಮಕ್ಕಳು ತಮಗೆ ಬೇಕೆನಿಸುವಷ್ಟು ಅಂಕಗಳನ್ನು ಗಳಿಸುವ ಯಂತ್ರಗಳಾಗಬೇಕೆಂದೇ ಬಯಸುತ್ತಾರೆ. ಅಂಕಗಳ ಕುರಿತಾದ ತೀರದ ದಾಹಗಳನ್ನು ಹೊಂದಿರುವ ಇಂತಹ ಪೋಷಕರಿಗೆ ನೆರವಾಗಲೆಂದೇ ಅನೇಕ ಶಾಲೆ, ಕಾಲೇಜು, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲದರ ಜೊತೆ ಮಕ್ಕಳ ನೆರೆಯವರು ಹಾಗೂ ಸಮಾಜ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಸಾಮರ್ಥ್ಯಗಳನ್ನು ಅಂಕಗಳಲ್ಲೇ ಅಳೆಯುವ ಮನೋಭಾವ ಹೊಂದಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶಗಳಲ್ಲಿ ಮಕ್ಕಳ ಮನದಲ್ಲಿ ತಂದೆ-ತಾಯಿ, ಶಿಕ್ಷಕರು ಹಾಗೂ ಸಮಾಜದ ಬಗ್ಗೆ ಪ್ರೀತಿ, ಆತ್ಮೀಯ ಭಾವ ಇರಬೇಕೆಂದು ನಿರೀಕ್ಷಿಸುವುದು ಕಷ್ಟವಾಗುತ್ತದೆ.

ಮಕ್ಕಳ ಮನದಾಸೆ, ಅವರ ಆಸಕ್ತಿಯ ವಿಷಯಗಳನ್ನು ಗುರುತಿಸಲು ಹೆಚ್ಚಿನ ಪೋಷಕರು ವಿಫಲರಾಗುತ್ತಾರೆ. ಗುರುತಿಸಿದರೂ ಅದನ್ನು ಹತ್ತಿಕ್ಕಲು ಹವಣಿಸುವವರೇ ಹೆಚ್ಚು. ಸಂಗೀತ, ಕ್ರೀಡೆ ಅಥವಾ ಇನ್ನಿತರೇ ಕ್ಷೇತ್ರದಲ್ಲಿ ಆಸಕ್ತಿ ಇರುವ ಮಗುವನ್ನು ಪೋಷಕರು ತಮ್ಮಿಚ್ಛೆಯ ಶಿಕ್ಷಣ ಅಥವಾ ಉದ್ಯೋಗದೆಡೆ ಮುಖ ಮಾಡಲು ತಿಳಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಆಸಕ್ತಿ, ಸಾಮರ್ಥ್ಯ, ಇಚ್ಛೆಗಳಿಲ್ಲದೆ ಒತ್ತಾಯಪೂರ್ವಕವಾಗಿ ಕಲಿಯಬೇಕಾದ ಸನ್ನಿವೇಶಗಳು ಸಹಜವಾಗಿ ಮಕ್ಕಳಲ್ಲಿ ಆತಂಕವನ್ನು ಸೃಷ್ಟಿಸುತ್ತವೆ.

ಆತಂಕ, ಭಯದ ಭಾವನೆಗಳ ಜೊತೆ ಪೋಷಕರ ಮಾತನ್ನು ನಿರಾಕರಿಸಲಾಗದ ಸನ್ನಿವೇಶಗಳು ಅವರನ್ನು ತೀವ್ರ ಹತಾಶೆಗೆ ದೂಡುತ್ತವೆ. ಇಂತಹ ಹತಾಶೆಯಲ್ಲಿ ಬಹುಕಾಲ ಕಳೆಯುವ ಮಕ್ಕಳು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಒಂದೋ ಮನೆಬಿಟ್ಟು ಹೋಗಬಹುದು ಅಥವಾ ತೀವ್ರ ಖಿನ್ನತೆ, ಆತಂಕಗಳು ಅವರನ್ನು ಕಾಡಬಹುದು. ಖಿನ್ನತೆಯ ಮನಸ್ಥಿತಿಯು ಬಹುದಿನಗಳವರೆಗೆ ಮುಂದುವರೆದಲ್ಲಿ ಇಂತಹ ಮಕ್ಕಳು ಕಾಲಕಳೆದಂತೆ ಆತ್ಮಹತ್ಯೆಗಳಂತಹ ಕೃತ್ಯಗಳಿಗೂ ಕೈಹಾಕಬಹುದು. ಜೋರು ವ್ಯಕ್ತಿತ್ವ ಹೊಂದಿರುವ ಮಕ್ಕಳಾಗಿದ್ದಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಾ ಇತರರಿಗೆ ಹಾನಿ ಮಾಡುವ ಕೃತ್ಯಗಳನ್ನು ಮಾಡುತ್ತಾರೆ. ಪೋಷಕರ ಅಥವಾ ಶಿಕ್ಷಕರ ಒತ್ತಡಗಳನ್ನು ಕಷ್ಟಪಟ್ಟು ಸಹಿಸಿಕೊಳ್ಳುವ ಹೆಚ್ಚಿನ ಮಕ್ಕಳು ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಆಧುನಿಕ ಜೀವನದ ಅನಿವಾರ್ಯಗಳಲ್ಲಿ ಸಿಲುಕಿರುವ ಹೆಚ್ಚಿನ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿರೀಕ್ಷೆ, ಭರವಸೆಗಳನ್ನು ಹೊಂದಿರುತ್ತಾರೆ. ಬಹುತೇಕರಿಗೆ ತಮ್ಮ ಮಕ್ಕಳು ದೊಡ್ಡ ಸಂಬಳ, ವಿದೇಶದಲ್ಲಿ ನೌಕರಿ ಹೊಂದಿರಲಿ ಎಂಬ ಆಶಯಗಳನ್ನು ಹೊಂದಿರುತ್ತಾರೆ. ಅವರ ಆಸೆ, ಆಕಾಂಕ್ಷೆಗಳು ಈಡೇರಿದಾಗ ಸಂಭ್ರಮ, ಸಡಗರದ ಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ತೀವ್ರ ಸ್ಪರ್ಧೆಯ ನೌಕರಿಯ ಅಗತ್ಯಗಳಿಗೆ ಸ್ಪಂದಿಸಬೇಕಾದ ಮಕ್ಕಳು ನಿಧಾನವಾಗಿ ತಮ್ಮ ಪೋಷಕರಿಂದ ದೂರವಾಗುತ್ತಾರೆ. ಇನ್ನು ವಿದೇಶದಲ್ಲಿದ್ದರಂತೂ ಪೋಷಕರ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿಗಳಿಗೆ ಮಕ್ಕಳು ಒಳಗಾಗುತ್ತಾರೆ.

ಈ ತಿಂಗಳ 8ರಂದೇ ‘ಪ್ರಜಾವಾಣಿ’ಯಲ್ಲಿ ವರದಿಯಾದ ಇನ್ನೊಂದು ಸುದ್ದಿಯೂ ಅನೇಕ ಚರ್ಚೆಗಳನ್ನು ಹುಟ್ಟು ಹಾಕುವುದರ ಜೊತೆ ಹೆಚ್ಚಿನವರನ್ನು ದಂಗು ಬಡಿಯುವಂತೆ ಮಾಡಿತು. ಒಂದು ವರ್ಷಕ್ಕೂ ಅಧಿಕ ಕಾಲ ತಾಯಿಯೊಂದಿಗೆ ದೂರವಾಣಿಯಲ್ಲಿಯೂ ಮಾತನಾಡದ ವಿದೇಶದಲ್ಲಿದ್ದ ಮಗ ತಾಯಿಯನ್ನು ನೋಡಲು ಮುಂಬೈನ ನಿವಾಸಕ್ಕೆ ಬಂದಾಗ ಅವನನ್ನು ಸ್ವಾಗತಿಸಿದ್ದು ಅವನ ತಾಯಿಯ ಅಸ್ಥಿಪಂಜರ.

ತಂದೆಯನ್ನು ಕೊಂದ ಬಾಲಕ ಹಾಗೂ ತಾಯಿಯನ್ನು ಬಹು ಕಾಲ ದೂರವಾಣಿಯಲ್ಲಿಯೂ ಸಂಪರ್ಕಿಸದ ಮಗ-ಈ ಘಟನೆಗಳು ನಮ್ಮ ಸದ್ಯದ ಸಾಮಾಜಿಕ ಸ್ಥಿತಿಯ ಪ್ರತಿಬಿಂಬವೆನ್ನಬಹುದು. ಈ ಘಟನೆಗಳಲ್ಲಿ ಶಿಕ್ಷಣದ ಪಾಲೆಷ್ಟು ಎಂಬ ಕುರಿತು ಚಿಂತನೆ ಮಾಡಬೇಕಾದ ತುರ್ತು ಅಗತ್ಯವಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾದ ಶಿಕ್ಷಣದ ಕಾರಣದಿಂದಲೇ ಅಪಾಯಗಳು ಜರುಗುತ್ತಿವೆಯೆಂದಾದಲ್ಲಿ ಇಂತಹ ಶಿಕ್ಷಣವನ್ನು ವಿಪರೀತದ ಪೈಪೋಟಿ ಹಾಗೂ ಸ್ಪರ್ಧೆಗಳಿಂದ ಕೊಂಚ ದೂರವಿಡಬೇಕಿದೆ. ಮಕ್ಕಳ ಆಸಕ್ತಿ, ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ರೂಪಿಸುವಲ್ಲಿ ಚಿಂತನೆಗಳು ನಡೆಯಬೇಕಿದೆ. ಇಲ್ಲದಿದ್ದಲ್ಲಿ ಪೂರ್ಣ ಸಾಕ್ಷರತೆಯನ್ನು ಹೊಂದಿದ ರಾಕ್ಷಸ ಸಮಾಜದ ಸೃಷ್ಟಿಗೆ ನಾವೆಲ್ಲರೂ ಕಾರಣರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆರ್ಥಿಕ ಬೆಳವಣಿಗೆ, ಸಂಪತ್ತಿನ ಅಭಿವೃದ್ಧಿಗಳನ್ನು ಮಾತ್ರ ಸಮಾಜದ ಪ್ರಗತಿಯ ಮಾನದಂಡಗಳನ್ನಾಗಿ ಗುರುತಿಸದೆ, ಮಾನವೀಯ ಮೌಲ್ಯಗಳನ್ನು ಹೊಂದಿದ ಹೃದಯವಂತ ನಾಗರಿಕರನ್ನು ಸೃಷ್ಟಿಸುವ ಶಿಕ್ಷಣ ಕ್ಷೇತ್ರದ ಸ್ವರೂಪವನ್ನೂ ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ತುರ್ತು ಆದ್ಯತೆಗಳನ್ನು ಗುರುತು ಹಾಕಿಕೊಂಡು ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT