ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವ, ಜಾತ್ಯತೀತ ತತ್ವದಲ್ಲಿ ದೇಶ ಭದ್ರ

Last Updated 16 ಆಗಸ್ಟ್ 2017, 6:13 IST
ಅಕ್ಷರ ಗಾತ್ರ

ಹಾವೇರಿ: ‘ಮತೀಯ ಭಾವನೆಗಳನ್ನು ಹುಟ್ಟು ಹಾಕುವ ಶಕ್ತಿಗಳನ್ನು ಮೆಟ್ಟಿನಿಂತು, ಬಹುತ್ವ ಹಾಗೂ ಜಾತ್ಯತೀತ ಮೌಲ್ಯಗಳನ್ನು ಗಟ್ಟಿಗೊಳಿಸುವ ಮೂಲಕ ಅಭಿವೃದ್ಧಿ ಮಾಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಕೊಡುಗೆಯೂ ಸ್ಮರಣೀಯವಾಗಿದೆ. ದೇಶದ ಏಕತೆಯ ತಳಹದಿಯಾದ ಜಾತ್ಯತೀತ ಮೌಲ್ಯಗಳನ್ನು ಉಳಿಸಬೇಕು’ ಎಂದ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಹಾಗೂ ಯೋಧರಿಗೆ ಶುಭ ಹಾರೈಸಿದರು.

ವೈದ್ಯಕೀಯ ಕಾಲೇಜು: ‘ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಮು ದಿನ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ. ವೈದ್ಯಕೀಯ ಮಂಡಳಿ ಅನುಮತಿ ವಿಳಂಬವಾದ ಕಾರಣ ಈ ವರ್ಷ ಸಾಧ್ಯವಾಗಿಲ್ಲ. ಹಾವೇರಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಹನುಮನಮಟ್ಟಿ ಬಳಿ 18 ಎಕರೆ ಜಾಗ ನೀಡಲಾಗಿದೆ.

ಇದರಲ್ಲಿ 4 ಎಕರೆ ಜಮೀನನ್ನು ಕೈಮಗ್ಗ ನೇಕಾರರ ಚಟುವಟಿಕೆಗೆ ಕಾಯ್ದಿರಿಸಲಾಗುವುದು. ನೇಕಾರರು ಹೆಚ್ಚಿರುವ ಕಡೆ ನೂಲು ಮತ್ತು ಫ್ಯಾಬ್ರಿಕ್ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗುವುದು. ನೇಕಾರರಿಗೆ ನೂಲು ಮತ್ತು ಬಟ್ಟೆಯ ಮೇಲೆ ಮುಂಗಡ ಸಾಲ ಒದಗಿಸಲು ಉದ್ದೇಶಿಸಲಾಗಿದೆ’ ಎಂದರು.

ಮುಜರಾಯಿ: ‘ಮುಜರಾಯಿ ಇಲಾಖೆ ಮೂಲಕ ₹10.35ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಹಾವೇರಿಯನ್ನು ಸ್ಮಶಾನಯುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು’ ಎಂದರು.

‘₹1.99 ಲಕ್ಷ  ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ₹3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ, ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಕುರಿತ ಧ್ವನಿ ಬೆಳಕು ಕಾರ್ಯಕ್ರಮ ಹಾಗೂ ಸರ್ಕಾರದ ಸಾಧನೆ ಕುರಿತು  ಮೂರು ದಿನಗಳ ಬೃಹತ್ ಮಾಹಿತಿ ಉತ್ಸವ ಹಾವೇರಿಯಲ್ಲಿ ನಡೆಯಲಿದೆ’ ಎಂದರು.

ಆರೋಗ್ಯ: ‘ಜನರಿಕ್ ಔಷಧಿ ಮಳಿಗೆ, ರಕ್ತ ಸಂಗ್ರಹ ಘಟಕ, ತೀವ್ರ ನಿಗಾ ಘಟಕ, ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಆರೋಗ್ಯ ಇಲಾ ಖೆಗೆ 139 ಗುತ್ತಿಗೆ ಆಧಾರದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕ್ಯಾಂಟಿ ನ್‌ಗಳ ಸ್ಥಾಪನೆ ಪ್ರಗತಿಯಲ್ಲಿದೆ’ ಎಂದರು.

‘102 ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ,33 ಗ್ರಾಮ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಸರಳ ವಿವಾಹ ಮಾಡಿಕೊಂಡ 66 ದಂಪತಿಗಳಿಗೆ ₹33 ಲಕ್ಷ  ಪ್ರೋತ್ಸಾಧನ  ನೀಡಲಾಗಿದೆ’ ಎಂದರು.

‘ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್‌ನಲ್ಲಿ ಜಿ+1 ಮಾದರಿಯ ವಸತಿಗೃಹ ನಿರ್ಮಾಣ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಾವೇರಿ ಕೊಳಚೆ ಪ್ರದೇಶದಲ್ಲಿ 963 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ’ ಎಂದರು.

‘ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದ ಅವರು, ‘ಹಾವೇರಿ ನಗರಕ್ಕೆ ಆವಾಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿದೆ. ಜಿಲ್ಲಾ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈ ಆವರಣದಲ್ಲಿ ಬಾಬು ಜಗಜೀವನರಾಮ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ₹10 ಕೋಟಿ ವೆಚ್ಚದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಹಾಗೂ ₹10 ಕೋಟಿ ವೆಚ್ಚದಲ್ಲಿ ಸರ್ಕಾರಿ ಟೂಲ್ ಆ್ಯಂಡ್ ಮೇಕಿಂಗ್ ಡೆವಲಪ್‌ಮೆಂಟ್ ಸೆಂಟರ್ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದರು. 

‘ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ)ಯಡಿ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಮೂಲಕ ಬ್ಯಾಡಗಿ ತಾಲ್ಲೂಕಿನ ಸುಮಾರು 22 ಗ್ರಾಮಗಳು, ಕಾಗಿನೆಲೆ ಮತ್ತು ಇತರೆ 21 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳು, ಬಸಾಪುರ ಏತ ನೀರಾವರಿ ಯೋಜನೆ, ತಿಳವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನದ ಹಂತದಲ್ಲಿವೆ. ಯುಟಿಪಿ ಕಾಲುವೆ ಮೂಲಕ ಹೆಗ್ಗೇರಿ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಮೂರು ತಿಂಗಳಲ್ಲಿ ಪೂರ್ಣ ಗೊಳಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಬಿ. ಅಂಜನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಎಸ್ಪಿ ಕೆ. ಪರಶುರಾಮ ಇದ್ದರು.

‘ಬರ ಎದುರಿಸಲು ಸನ್ನದ್ಧ’
‘ಬರ ಪರಿಸ್ಥಿತಿಯನ್ನು ಎದುರಿ ಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ’ ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.‘ನೀರಿಗಾಗಿ ಅರಣ್ಯ’ ಯೋಜನೆ ಅಡಿ ಜಿಲ್ಲೆಯಲ್ಲಿ ಈ ವರ್ಷ 5.56 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ. 3.66 ಲಕ್ಷ ಸಸಿಗಳನ್ನು ರೈತರ ಜಮೀನಿನಲ್ಲಿ ಬೆಳೆಸಲು ‘ನರೇಗಾ’ ಅಡಿ ನೀಡಲಾಗುತ್ತಿದೆ’ ಎಂದರು. 

‘ಜಿಲ್ಲೆಯಲ್ಲಿನ ದಾಖಲೆ ರಹಿತ 30 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಈ ಪೈಕಿ ಬಾಲಾಜಿನಗರ, ಭಗತಸಿಂಗ್‌ ನಗರ, ಬೊಮ್ಮನಕಟ್ಟೆ, ಬಸವ ಪುರ, ವೆಂಕಟೇಶಪುರ, ಲಕ್ಷ್ಮೀಪುರ, ಶಿವನಾಯಕನಹಳ್ಳಿ, ರಾಮಾಪುರವನ್ನು ಪರಿವರ್ತಿಸಲು ಪ್ರಾಥಮಿಕ ಅಧಿಸೂಚನೆ ಹಾಗೂ ಶಿವಪುರಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ’ ಎಂದರು.

* * 

ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಣೆ ವೇಳೆ ಶಿಗ್ಗಾವಿಯನ್ನು ‘ಬಯಲು ಬಹಿರ್ದೆಸೆ ಮುಕ್ತ’ ತಾಲೂಕನ್ನಾಗಿ ಘೋಷಿಸಲಾಗುವುದು
ರುದ್ರಪ್ಪ ಲಮಾಣಿ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT