ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪಯಣದ ಅನುಭವ

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರೈಲಿನಲ್ಲಿ ಪ್ರಯಾಣಿಸಬೇಕೆಂದಾಗ ಎಡವಟ್ಟುಗಳು ಇದ್ದದ್ದೇ. ಕೆಲವೇ ಕ್ಷಣಗಳಲ್ಲಿ ರೈಲು ತಪ್ಪಿಸಿಕೊಂಡು ಪರದಾಡಿ ಮತ್ತೇ ಬಸ್‌ ಹತ್ತಿದ್ದುಂಟು. ಕೆಲವು ಸಲ ರೈಲು ಹತ್ತುವಾಗಿನ ಗದ್ದಲ ನೋಡಿ ಹತ್ತಲಾಗದೇ ಮರಳಿದ್ದುಂಟು.

ಸುಮಾರು ಆರು ವರ್ಷಗಳ ಹಿಂದೆ ನಾನು ರಾಯಭಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ದೂರಶಿಕ್ಷಣದಿಂದ ಎಂ.ಎ ಮಾಡುತ್ತಿದ್ದೆ. ರಜೆ ದಿನಗಳಲ್ಲಿ ಎಂ.ಎ ತರಗತಿ ನಡೆಸುತ್ತಿದ್ದರು. ಬೆಳಗಾವಿಯಿಂದ ರಾಯಭಾಗಕ್ಕೆ ರೈಲಿನಲ್ಲಿ ಪ್ರಯಾಣಿಸಿ ನಂತರ ಅಲ್ಲಿಂದ ಹಾರೂಗೇರಿಗೆ ಬಸ್ಸಿನ ಪ್ರಯಾಣ ಮಾಡುವುದಿತ್ತು. ರೈಲಿನ ಅನುಭವ ಇಲ್ಲದ ನಾನು ಆತಂಕದಿಂದಲೇ ಗದ್ದಲದಲ್ಲಿ ಕಷ್ಟಪಟ್ಟು ರೈಲೇರಿದೆ. ತರಗತಿಗೆ ಹಾಜರಾಗಿ ಮತ್ತೆ ರೈಲೇರಿ ಕುಳಿತೆ. ರೈಲು ಸುಡುವ ಬಿಸಿಲನ್ನು ಲೆಕ್ಕಿಸದೇ ಹೊರಟಿತು. ಬಹಳ ಗದ್ದಲವಿದ್ದದ್ದರಿಂದಲೋ ರೈಲಿನ ಬಾಗಿಲಲ್ಲಿ ಕಾಲು ಇಳಿಬಿಟ್ಟುಕೊಂಡು ಕುಳಿತುಬಿಟ್ಟಿದ್ದೆ.

ಫಜೀತಿ ಆರಂಭವಾಗಿದ್ದೆ ಇಲ್ಲಿಂದ. ರೈಲು ಬೆಳಗಾವಿ ಸಮೀಪದ ಒಂದು ಸ್ಟೇಷನ್‌ನಲ್ಲಿ ನಿಲ್ಲಲು ಅಣಿಯಾಗುತ್ತಿತ್ತು. ಜನರು ಬರುತ್ತಿರುವುದನ್ನು ಕಂಡು ನಾನು ಅವಸರದಿಂದ ಬಾಗಿಲಿನಲ್ಲಿದ್ದವನು ಮೇಲೆದ್ದು ಒಳಗೆ ಬರುವಾಗ ನನ್ನ ಕಾಲಿನಲ್ಲಿದ್ದ ಒಂದು ಚಪ್ಪಲಿ ಕೆಳಗೆ ಬಿದ್ದುಬಿಟ್ಟಿತು. ರೈಲು ನಿಧಾನವಾಗಿ ನಿಂತಿತು. ಬಿದ್ದ ಚಪ್ಪಲಿಯನ್ನು ಪಡೆದೇ ತೀರಬೇಕೆಂದು ರೈಲಿನಿಂದ ಕೆಳಗಿಳಿದು ಓಡತೊಡಗಿದೆ. ಎಲ್ಲರೂ ನನ್ನ ಕಡೆಗೆ ನೋಡತೊಡಗಿದರೂ ನಾನು ಅವರ ಕಡೆಗೆ ನೋಡದೇ ಒಂದು ಕಾಲಿನ ಹೊಸ ಚಪ್ಪಲಿಯೊಂದಿಗೆ ಇನ್ನೊಂದು ಹೊಸ ಚಪ್ಪಲಿಗಾಗಿ ಇನ್ನೂ ಜೋರಾಗಿ ಓಡತೊಡಗಿದೆ.

ಆದರೆ ರೈಲು ಕೇಳಬೇಕಲ್ಲ! ಅದು ಹೊರಡಲು ಅಣಿಯಾಯಿತು ಮತ್ತು ನಿಧಾನವಾಗಿ ಚಲಿಸತೊಡಗಿತು. ಗಾಬರಿಗೊಂಡ ನಾನು, ರೈಲು ತಪ್ಪಿಸಿಕೊಂಡರೆ ಎಂದು ಕಾಲಲ್ಲಿದ್ದ ಒಂಟಿ ಚಪ್ಪಲಿಯನ್ನು ಅಲ್ಲೇ ಎಸೆದು ಬರಿಗಾಲಲ್ಲಿ ಓಡೋಡಿ ಬಂದು ರೈಲೇರಿದೇ.

ರೈಲು ಬೆಳಗಾವಿ ಸ್ಟೇಷನ್‌ಗೆ ಬಂದು ನಿಂತಿತು. ನನ್ನನ್ನು ಯಾರೂ ನೋಡುತ್ತಿಲ್ಲವೆಂದು ಭ್ರಮಿಸಿಕೊಂಡು ಸಾವಕಾಶವಾಗಿ ಸಿ.ಬಿ.ಟಿ ಬಸ್‌ಗಾಗಿ ಹೆಜ್ಜೆ ಹಾಕತೊಡಗಿದೆ. ಸುಡುವ ರಸ್ತೆಯ ತಾಪಕ್ಕೆ ನನ್ನ ಪಾದಗಳು ಸಂಕಟ ಪಡುತ್ತಿದ್ದವು. ಹಾಗೆಯೇ ಬಸ್ಸನ್ನು ಹತ್ತಿದೆ. ಒಂದು ಕಡೆ ಮುಜುಗರ, ಇನ್ನೊಂದು ಕಡೆ ವೇದನೆ. ಬಸ್ಸಿನಲ್ಲಿದ್ದವರು ನನ್ನ ಕಾಲು ನೋಡಬಾರದೆಂದು ಮುದುಡಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆಗ ಟಿಕೆಟ್ ಕೊಡಲು ಕಂಡಕ್ಟರು ಬಂದು ನನ್ನ ಕಾಲುಗಳನ್ನು ನೋಡಿ ‘ಯಾಕ್ರೀ ಸರ್, ರೈಲಿನಲ್ಲಿ ಚಪ್ಪಲಿ ಕಳಕೊಂಡಿರೇನು? ಚಪ್ಪಲಿ ಹೋದ್ರೆ ಹೋಗಲಿ ಬಿಡಿ ಸರ್ ನೀವ್ ಬಿದ್ದಿದ್ರ ಏನ್ ಮಾಡೋದು, ಬಾಳ ಎಚ್ಚರಿಕೆಯಿಂದ ಬರಬೇಕ್ರಿ’ ಎಂದರು.

ಅವರ ಮಾತಿಗೆ ಮನ್ನಣೆಯಿತ್ತು, ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಳಿದು ಚಪ್ಪಲಿ ತರಲು ವೇಗವಾಗಿ ಬಿರುಬಿಸಿಲಿನಲ್ಲಿ ಅಂಗಡಿ ಕಡೆ ನಡೆಯತೊಡಗಿದೆ. ಆಗ ಆತ್ಮೀಯ ಗೆಳೆಯನೊಬ್ಬ ಭೆಟ್ಟಿಯಾಗಿ ‘ಯಾಕೋ ದೋಸ್ತ್, ಭಾಳ ಅವಸರದಿಂದ ಹೋಗ್ತಿತಿಲ್ಲೋ, ಕಾಲಾಗ್ ಚಪ್ಪಲಿ ಇಲ್ಲ. ಯಾವದಾದ್ರು ವ್ರತ ಮಾಡ್ತೀಯೇನೋ ಅಥವಾ ಯಾರಾದ್ರು ತುಡುಗು ಮಾಡಿದ್ರೋ. ಕಾಲುಗಳು ಬಿಸಿಲಿನ್ಯಾಗ ಮಾತಾಡಾಕ ಹತ್ಯಾವಲ್ಲಾ ಇದೊಂದು ತರ ಮಜಾ ಅದ ತಗೋ’ ಎನ್ನುತ್ತಾ ಚಪ್ಪಲಿ ಖರೀದಿ ಮಾಡಾಕ ಆತನೂ ಬಂದ. ನಡೆದ ವಿಷಯ ಹೇಳಿದೆ. ಬಿದ್ದು ಬಿದ್ದು ನಗಲಾಕ ಹತ್ತಿದ. ಅಂದಿನಿಂದ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಬಾಗಿಲಿನಲ್ಲಿ ಮಾತ್ರ ಕುಳಿತುಕೊಳ್ಳುವುದಿಲ್ಲ ನೋಡ್ರಿ.
ಪಿ.ಎ. ರೊಟ್ಟಿ ಬೆಳಗಾವಿ

ಪ್ರೀತಿ ಹುಡುಗಿಯೊಂದಿಗೆ ಲಾಂಗ್‌ ಟ್ರೇನ್ ಜರ್ನಿ

ಟ್ರೇನು ನನ್ನ ಪ್ರೀತಿಯ ಹುಡುಗಿಯ ನೆನಪಿನೊಂದಿಗೆ ಮಿಳಿತಗೊಂಡಿದೆ. ಅವಳು ಹೆಚ್ಚು ಇಷ್ಟ ಪಡುತ್ತಿದ್ದ ಸಂಗತಿಗಳಲ್ಲಿ ಟ್ರೇನ್ ಜರ್ನಿಯೂ ಒಂದು.ಹೀಗೆ ಒಂದು ದಿನ ಅವಳು ನನ್ನೊಂದಿಗೆ ಒಂದು ಲಾಂಗ್ ಟ್ರೇನ್ ಜರ್ನಿ ಮಾಡಬೇಕೆಂಬ ಆಸೆಯನ್ನು ತಿಳಿಸಿದಾಗ ನಾನು ಹೇಗೆ ಇಲ್ಲ ಅಂದೇನು? ದೂಸರಾ ವಿಚಾರ ಮಾಡದೆ ಯೆಸ್ ಅಂದು, ನಮ್ಮೂರಿನಿಂದ ನೇರ ಬೆಂಗಳೂರಿಗೆ ಎರಡು ಟಿಕೆಟ್ ಬುಕ್ ಮಾಡಿದೆ.

ಅವಳು ಅವಳ ಮನೆಯಲ್ಲಿ ಒಂದು ಸುಳ್ಳು, ನಾನು ನಮ್ಮ ಮನೆಯಲ್ಲಿ ಒಂದು ಸುಳ್ಳು ಹೇಳಿ ಎರಡು ದಿನ ಟ್ರೇನ್ ಜರ್ನಿ ಮಾಡಿದ ನೆನಪು ಇಂದಿಗೂ ನನ್ನ ಚಿತ್ತಭಿತ್ತಿಯಲ್ಲಿ ಅಚ್ಚಳಿಯದಂತಿದೆ. ಅಂದು ನಾವು ಹಾಗೆ ಹೋಗುವಾಗ ನಾವಿಬ್ಬರೂ ಒಂದೇ ಬಣ್ಣದ ಬಟ್ಟೆ ಹಾಕಿಕೊಂಡಿದ್ದೆವು.(ಅದೂ ಅವಳ ಆಸೆಯೇ ಆಗಿತ್ತು). ನಾನು ನೀಲಿ ಬಣ್ಣದ ಅಂಗಿ ಕಪ್ಪು ಪ್ಯಾಂಟು ಹಾಕಿಕೊಂಡಿದ್ದರೆ, ಅವಳು ನೀಲಿ ಟಾಪ್ ಬ್ಲ್ಯಾಕ್ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಳು. ಇಬ್ಬರದು ವಸ್ತುಗಳ ಒಂದು ಬ್ಯಾಗ್.

ಹೀಗೆ ಹೊರಟ ನಮ್ಮನ್ನು ಟ್ರೇನ್‍ನಲ್ಲಿ ಕೆಲವರು ನೋಡುತ್ತಾ ಇವು ಯಾವುದೋ ಊರಿನಿಂದ ಹಾರಿಬಂದ ಜೋಡಿಹಕ್ಕಿಗಳಿರಬೇಕೆಂದುಕೊಳ್ಳುತ್ತಿರುವಂತೆ ಇನ್ನು ಕೆಲವರು ಮೇಡ್ ಫಾರ್ ಈಚ್ ಅದರ್ ಅಂತಂದುಕೊಳ್ಳುತ್ತಿರುವಂತೆ ನನಗೆ ಮನಸ್ಸಿನೊಳಗೆ ಭಾಸವಾಗುತ್ತಿತ್ತು.

ಆದರೆ ಇಂತಹದ್ಯಾವುದಕ್ಕೂ ಕ್ಯಾರೆ ಅನ್ನದೇ ನನ್ನ ಪ್ರೀತಿಯ ಹುಡುಗಿ ಮಾತ್ರ ಕಿಟಕಿ ಬಳಿ ಕುಳಿತು ಮಸ್ತ್ ಎಂಜಾಯ್ ಮಾಡುತ್ತಿದ್ದಳು. ಟ್ರೇನ್ ಸ್ಟಾಪ್ ಆದಾಗೊಮ್ಮೆ ನನ್ನನ್ನು ಟ್ರೇನ್‍ನಿಂದ ಇಳಿಸಿ ಏನಾದರೊಂದು ತಿನ್ನಲು ತಿಂಡಿ ತರಿಸಿಕೊಳ್ಳುತ್ತಿದ್ದಳು. ತನ್ನ ಮೊಬೈಲಿನಲ್ಲಿ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಅದನ್ನು ನನ್ನ ಕಿವಿಗೂ ಹಾಕುತ್ತಾ ತಾನು ಕೇಳುತ್ತಿದ್ದ ಹಾಡನ್ನೇ ನನಗೂ ಕೇಳುವಂತೆ ಆರ್ಡರ್ ಮಾಡುತ್ತಿದ್ದಳು. (ಅವು ರೊಮ್ಯಾಂಟಿಕ್ ಹಾಡಗಳಾಗಿದ್ದವು) ಟ್ರೇನ್‍ನಲ್ಲಿ ರಾತ್ರಿ ಎಲ್ಲರೂ ಮಲಗಿದ ಸರಿ ಹೊತ್ತಿನಲ್ಲಿ ಎದ್ದು, ನನ್ನನ್ನು ಎಬ್ಬಿಸಿ ಅದೆಕೋ ನನಗೊಂದು ಮುತ್ತು ನೀಡಿ, ನನ್ನಿಂದಲೂ ಒಂದು ಮುತ್ತು ಪಡೆದುಕೊಂಡಿದ್ದಳು. ಈಗ ಅವಳು ನನ್ನ ಜೊತೆಗಿಲ್ಲವಾದರೂ ಅವಳ ಪ್ರೀತಿಯ ನೆನಪಿನ ಅಧ್ಯಾಯದಲ್ಲಿ ಅವಳೊಂದಿಗಿನ ಟ್ರೇನ್ ಜರ್ನಿಯ ನೆನಪು ಎಂದೂ ಮರೆಯದ ವಾಕ್ಯದಂತೆ ಉಳಿದುಕೊಂಡಿದೆ.

ಮಂಜುನಾಥ್ ಕಟ್ಟೀಮನಿ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT