ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ತಾಣಗಳಲ್ಲಿ ಪುಟ್ಟ ಹೆಜ್ಜೆಗಳು

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಾರಾಂತ್ಯ ಮತ್ತು ರಜಾದಿನಗಳು ಬಂದರೆ ಸಾಕು, ನಾವೆಲ್ಲ ಮನರಂಜನೆಯ ತಾಣಗಳಾದ ರೆಸಾರ್ಟ್‌, ಅಮ್ಯೂಸ್‌ಮೆಂಟ್ ಪಾರ್ಕ್‌ ಹಾಗೂ ಮಾಲ್‌ಗಳಿಗೆ ದಾಂಗುಡಿ ಇಡುತ್ತೇವೆ. ಆದರೆ, ಇದೇ ಸಮಯವನ್ನು ಮಕ್ಕಳಲ್ಲಿ ಇತಿಹಾಸ ಹಾಗೂ ಪರಂಪರೆಯ ಪ್ರಜ್ಞೆಯನ್ನು ಬಿತ್ತಲು ಪೂರಕವೆನಿಸುವ ಸ್ಥಳಗಳಿಗೆ ಭೇಟಿ ನೀಡಿ, ರಜಾ ದಿನಗಳನ್ನು ಕುಟುಂಬದೊಂದಿಗೆ ಸಾರ್ಥಕವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಅಪರೂಪದ ಯುವ ಛಾಯಾಗ್ರಾಹಕರೊಬ್ಬರು ಕೊಪ್ಪಳದಲ್ಲಿದ್ದಾರೆ. ಅವರೇ ಛಾಯಾಗ್ರಹಣದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಪ್ರಕಾಶ ಕಂದಕೂರ.

ಕೊಪ್ಪಳದ ಗಡಿಯಾರ ಕಂಬ ವೃತ್ತದ ಬಳಿ ಇರುವ ಕಂದಕೂರ ಸ್ಟುಡಿಯೊದ ಪ್ರಕಾಶ ಪ್ರತಿಭಾವಂತ ಛಾಯಾಗ್ರಾಹಕ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಇವರ ಕ್ಯಾಮೆರಾ ಕಣ್ಣುಗಳು ಪ್ರತಿಯೊಂದನ್ನೂ ವಿಭಿನ್ನವಾಗಿ ನೋಡುವ ಪ್ರಯತ್ನ ಮಾಡುತ್ತಿರುತ್ತವೆ.

ಮಕ್ಕಳಲ್ಲಿ ಎಳವೆಯಲ್ಲಿಯೇ ಸಾಹಿತ್ಯದ ಅಭಿರುಚಿ ಬಿತ್ತಲು ಅವರು ಕಂಡುಕೊಂಡ ಹಾದಿಯೇ ರಜಾ ದಿನಗಳ ಪ್ರವಾಸ. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಗಾದೆ ಮಾತಿನಂತೆ ಪ್ರಕಾಶ ಹಾಗೂ ವಿನುತಾ ದಂಪತಿ ತಮ್ಮ ಮಕ್ಕಳಾದ ಪ್ರವೀಣ ಮತ್ತು ಪವನ್ ಅವರೊಂದಿಗೆ ಪ್ರತಿವರ್ಷ ಅವರ ಪಠ್ಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವ ಪರಿಪಾಠವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಮಕ್ಕಳಿಗೆ ಪಾಠದ ಸ್ಥಳ ಹಾಗೂ ವ್ಯಕ್ತಿ ವೈಶಿಷ್ಟ್ಯದ ಮಾಹಿತಿಯನ್ನು ಒದಗಿಸಲು ಇಂತಹ ಪ್ರವಾಸಗಳು ಸಹಕಾರಿ ಎಂಬುದು ಅವರು ಬಲವಾದ ನಂಬಿಕೆ.

ಮಕ್ಕಳಿಗೆ ಬೇಸಿಗೆ ದಿನಗಳಲ್ಲಿ ಶಾಲೆಗೆ ಬಿಡುವಿದ್ದ ಸಮಯದಲ್ಲಿ ರಜೆ ದಿನಗಳ ಪ್ರವಾಸ ಹಾಕಿಕೊಳ್ಳಬೇಕು ಎಂದು ಯೋಚಿಸಿದ ಪ್ರಕಾಶ, ಈ ಪ್ರವಾಸ ಮಕ್ಕಳ ವ್ಯಕ್ತಿತ್ವ ವಿಕಾಸ ಹಾಗೂ ಅಧ್ಯಯನಕ್ಕೆ ಪೂರಕವಾಗಿದ್ದರೆ ಒಳಿತು ಎಂದುಕೊಂಡು 2012ರಲ್ಲಿ ಯೋಜನೆ ರೂಪಿಸಿದರು. ಇಬ್ಬರೂ ಮಕ್ಕಳಿಗೆ ತಲಾ ಒಂದೊಂದು ಕುಡಿಕೆ ತಂದುಕೊಟ್ಟು ಆಗಾಗ ಹಣ ಕೊಡುತ್ತಾ ಅದರಲ್ಲಿ ಹಾಕಲು ಹೇಳಿದರು.

ವರ್ಷದಲ್ಲಿ ಕುಡಿಕೆ ತುಂಬಿಸಿದರೆ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಆಸೆ ಹುಟ್ಟಿಸಿದರು. ಮಕ್ಕಳು, ಅಪ್ಪ–ಅಮ್ಮಂದಿರಿಂದ ಕಾಡಿ–ಬೇಡಿ ಹಣ ಪಡೆದು ಕುಡಿಕೆ ತುಂಬಿಸತೊಡಗಿದರು. ಹತ್ತು ತಿಂಗಳಲ್ಲೇ ಅವುಗಳು ತುಂಬಿದಾಗ ಅವರಲ್ಲಿ ಹಿರಿ–ಹಿರಿ ಹಿಗ್ಗು.

2013ರ ರಜೆಯಲ್ಲಿ ಮೊದಲ ಪ್ರವಾಸ ಆಯೋಜನೆಯಾಯಿತು. ತರಾಸು ಅವರ ಕಾದಂಬರಿ ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ‘ನಾಗರಹಾವು’ ಸಿನಿಮಾವನ್ನು ಪ್ರಕಾಶ ಮಕ್ಕಳಿಗೆ ತೋರಿಸಿದರು. ನಂತರ ಚಿತ್ರದುರ್ಗಕ್ಕೆ ಪ್ರವಾಸ ಕೈಗೊಂಡು ಮದಕರಿ ನಾಯಕರ ಕಲ್ಲಿನ ಕೋಟೆ, ಓಬವ್ವನ ಕಿಂಡಿ, ಜೋಗಿಮಟ್ಟಿ, ಚಂದ್ರವಳ್ಳಿಗಳಿಗೆ ಭೇಟಿ ನೀಡಿ ಅವುಗಳ ನೈಜದರ್ಶನ ಮಾಡಿಸಿದರು.

ಆಗ ಮಕ್ಕಳಲ್ಲಿ ಉಂಟಾದ ಆನಂದ ಕಂಡು ಪಾಲಕರೂ ಹಿಗ್ಗಿದರು. ಮೊದಲ ಪ್ರವಾಸದಿಂದ ಪ್ರೇರಿತರಾದ ಇವರು 2014ರ ಬೇಸಿಗೆ ರಜೆಯಲ್ಲಿ ಕಿತ್ತೂರು ಚನ್ನಮ್ಮನ ಕಿತ್ತೂರು ಕೋಟೆ, ಆಕೆಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಮತ್ತು ಆತನ ಐವರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದ ನಂದಗಡದ ಐತಿಹಾಸಿಕ ಆಲದಮರ, ಧಾರವಾಡದ ಪಂಡಿತ ಡಾ.ಮಲ್ಲಿಕಾರ್ಜುನ ಮನಸೂರ ಟ್ರಸ್ಟ್‌, ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಮಾದರಿ ವಿದ್ಯಾಲಯ, ವರಕವಿ ಬೇಂದ್ರೆ ಭವನಕ್ಕೆ ಭೇಟಿ ನೀಡಿ ಇತಿಹಾಸ, ಸಂಗೀತ ಮತ್ತು ಸಾಹಿತ್ಯದ ಮಹತ್ವವನ್ನು ಎಳೆಯ ಮಕ್ಕಳ ಎದೆಗಳಲ್ಲಿ ಇಳಿಸಿದರು.

ರಜೆಯ ಪ್ರವಾಸಗಳ ರುಚಿ ಅನುಭವಿಸಿದ ಮಕ್ಕಳು 2015ರಲ್ಲಿ ವೀರ ಸಿಂಧೂರ ಲಕ್ಷ್ಮಣನ ಜನ್ಮಸ್ಥಳ, ಆತ ಬ್ರಿಟಿಷರ ವಿರುದ್ಧ ಹೋರಾಡಿದ ಸ್ಥಳಗಳನ್ನು ನೋಡುವ ಬಯಕೆ ವ್ಯಕ್ತಪಡಿಸಿದರು. ಅವರ ಇಚ್ಛೆಯಂತೆ ವಿಜಯಪುರದತ್ತ ಪ್ರವಾಸ ರೂಪಿಸಿದ ಕಂದಕೂರ ಕುಟುಂಬ ಅಲ್ಲಿನ ಗೋಲಗುಂಬಜ್, ಬಾರಾ ಕಮಾನ್ ಸೇರಿದಂತೆ ಆದಿಲ್‌ಷಾಹಿಗಳ ಎಲ್ಲ ಸ್ಮಾರಕಗಳನ್ನು ವೀಕ್ಷಿಸಿದರು.

ನಂತರ ನೆರೆಯ ಮಹಾರಾಷ್ಟ್ರಕ್ಕೆ ಸೇರಿರುವ ಅಚ್ಚಗನ್ನಡದ ಜತ್ತ ತಾಲ್ಲೂಕಿನ, ಸಮರ್ಪಕ ಸಾರಿಗೆ ಸಂಪರ್ಕಗಳೂ ಇಲ್ಲದ ಸಿಂಧೂರ ಗ್ರಾಮಕ್ಕೆ ಸುಮಾರು 4 ಕಿ.ಮೀ. ನಡೆದುಕೊಂಡೇ ಹೋಗಿ ಲಕ್ಷ್ಮಣನ ವಂಶಸ್ಥರನ್ನು ಖುದ್ದಾಗಿ ಕಂಡು, ಮಾತನಾಡಿಸಿದರು. ಸಿಂಧೂರ ಲಕ್ಷ್ಮಣನ ಹೋರಾಟದ ಕಥೆಗಳನ್ನು ಅವರ ವಾರಸುದಾರರಿಂದಲೇ ಕೇಳಿ ಅಲ್ಲಿಂದ ಆತ ಬ್ರಿಟಿಷರ ವಿರುದ್ಧ ಹೋರಾಡಲು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮುಧೋಳ ತಾಲ್ಲೂಕಿನ ಕಪ್ಪರಪಡಿಯವ್ವನ ಗುಡಿ, ಗುಹೆಗಳ ದುರ್ಗಮ ಹಾದಿಯನ್ನೂ ಸವೆಸಿ ಬಂದರು.

2016ರಲ್ಲಿ ಮಹಾರಾಷ್ಟ್ರದ ಪುಣೆಗೆ ಪ್ರವಾಸ ಕೈಗೊಂಡ ಇವರು, ಅಲ್ಲಿನ ಐತಿಹಾಸಿಕ ಯರವಾಡಾ ಜೈಲು, ಛತ್ರಪತಿ ಶಿವಾಜಿ ಮಹಾರಾಜರ ರಾಯಗಢ ಕೋಟೆ, ಮಹಾಡ್, ಶಿವಾಜಿ ಸಮಾಧಿ, ಕೊಲ್ಲಾಪುರ ಕನ್ಹೇರಿಯ ಸಿದ್ಧಗಿರಿಬೆಟ್ಟಕ್ಕೆ ಭೇಟಿ ನೀಡಿ ಬಂದರು.

ಕಳೆದ ಬೇಸಿಗೆಯಲ್ಲಿ ಕಾರಣಾಂತರಗಳಿಂದ ಪ್ರವಾಸ ತಪ್ಪಿಸಿ ಕೊಂಡಿರುವ ಈ ಕುಟುಂಬ ಸಾಲು ಸಾಲು ರಜಾದಿನಗಳು ಬರುವ ಸಂದರ್ಭಕ್ಕೆ ಕಾಯುತ್ತಿದೆ. ಇಂದಿನ ಹಾವೇರಿ ಜಿಲ್ಲೆಯಲ್ಲಿರುವ ಸರ್ವಜ್ಞ ಕವಿಯ ಜನ್ಮಸ್ಥಳ ಅಬ್ಬಲೂರು, ಕನಕದಾಸರ ಜನ್ಮಭೂಮಿ ಬಾಡ, ಕರ್ಮಭೂಮಿ ಕಾಗಿನೆಲೆ, ಸಂತ ಶಿಶುನಾಳ ಶರೀಫರ ಗದ್ದುಗೆ, ಅಂಬಿಗರ ಚೌಡಯ್ಯನವರ ಜನ್ಮಸ್ಥಳ ಚೌಡದಾನಪುರ, ಹಳ್ಳಿಕೇರಿ ಗುದ್ಲೆಪ್ಪನವರ ಹೊಸರಿತ್ತಿ, ಹಾನಗಲ್ ಸಂದರ್ಶಿಸುವ ಯೋಜನೆ ರೂಪಿಸಿದೆ.

ಇತಿಹಾಸದ ಪಾಠಗಳಿಂದ, ಭೇಟಿಗಳಿಂದ ಉತ್ತೇಜಿತರಾಗಿರುವ ಪ್ರವೀಣ ಹಾಗೂ ಪವನ್ ಅವರಿಗೆ ಒಂದು ಬಾರಿ ಹುತಾತ್ಮ ಭಗತ್ ಸಿಂಗ್ ಅವರ ಜನ್ಮಸ್ಥಳ ಬಾಂಗಾ ಹಾಗೂ ಹುತಾತ್ಮರಾದ ಸ್ಥಳ ಲಾಹೋರ್‌ಗ ಳಿಗೆ ಭೇಟಿ ನೀಡುವ ಬಯಕೆ. ಆದರೆ ಈ ಎರಡೂ ಸ್ಥಳಗಳು ಪಾಕಿಸ್ತಾನದಲ್ಲಿ ಇರುವುದರಿಂದ ಪ್ರವಾಸಕ್ಕೆ ಅವಕಾಶ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪತ್ರ ಬರೆಯಲು ಹೊರಟಿದ್ದಾರೆ!

‘ತವರು ಮನೆಯಲ್ಲಿದ್ದಾಗ ಪ್ರವಾಸಗಳೆಂದರೆ ಕೇವಲ ದೇವಸ್ಥಾನ, ಪುಣ್ಯಕ್ಷೇತ್ರಗಳ ಭೇಟಿ ಎಂದುಕೊಂಡಿದ್ದೆ. ಪ್ರಕಾಶ ಅವರ ಕೈಹಿಡಿದ ಮೇಲೆ ಇದರ ಕಲ್ಪನೆಯೇ ಬೇರೆಯಾಗಿದೆ. ಇಂತಹ ಅಪರೂಪದ ಆಸಕ್ತಿಗಳ ವ್ಯಕ್ತಿಯ ಸಾಂಗತ್ಯ ಸಿಕ್ಕಿದ್ದು ಸಂತಸ ತಂದಿದೆ’ ಎಂದು ಅವರ ಪತ್ನಿ ವಿನುತಾ ಹೆಮ್ಮೆಯಿಂದ ಹೇಳುತ್ತಾರೆ.

‘ಪ್ರಚಲಿತ ವಿದ್ಯಮಾನ, ಮಕ್ಕಳ ಪಠ್ಯಕ್ರಮ, ಹಣಕಾಸಿನ ಲಭ್ಯತೆ ನೋಡಿಕೊಂಡು ಪ್ರತಿವರ್ಷ ಇಂತಹ ಪ್ರವಾಸ ರೂಪಿಸು ತ್ತಿದ್ದೇನೆ. ಇದು ಮಕ್ಕಳ ಬೆಳವಣಿಗೆ ಅಷ್ಟೇ ಅಲ್ಲ ನಮ್ಮ ಜ್ಞಾನ ವೃದ್ಧಿಗೂ ಕಾರಣವಾಗಿದೆ’ ಎನ್ನುತ್ತಾರೆ ಪ್ರಕಾಶ. ತಾವು ಭೇಟಿ ನೀಡಿದ ತಾಣಗಳ ಅಪರೂಪದ ಚಿತ್ರಗಳ ದೊಡ್ಡ ಅಲ್ಬಂ ಅವರ ಸಂಗ್ರಹದಲ್ಲಿದೆ. ದೇಶ ಸುತ್ತುವ ಹವ್ಯಾಸದ ಕರೆಗೆ ಓಗೊಟ್ಟು ಪಾಕಿಸ್ತಾನದ ಗಡಿಯುದ್ದಕ್ಕೂ ಓಡಾಡಿ ದೇಶದ ಅಪರೂಪದ ಹಳ್ಳಿಗಳಿಗೆ ಅವರು ಭೇಟಿ ನೀಡಿದ್ದಾರೆ.

ಚಲನಚಿತ್ರಗಳ ಸಂಗ್ರಹ
ಛಾಯಾಗ್ರಾಹಕರಾಗಿರುವ ಪ್ರಕಾಶ ಕಂದಕೂರ ಸದಭಿರುಚಿಯ ಚಲನಚಿತ್ರಗಳ ಸಂಗ್ರಹಕಾರರೂ ಹೌದು. ತಾಜ್‌ ಮಹಲ್, ಸ್ಕೂಲ್ ಮಾಸ್ಟರ್, ದೋಸ್ತಿ, ಸಿಂಧೂರ ಲಕ್ಷ್ಮಣ, ಸಂತ ಶಿಶುನಾಳ ಶರೀಫ, ಭಗತ್‌ ಸಿಂಗ್‌ನಂತಹ ಅಪರೂಪದ ಹಿಂದಿ, ಕನ್ನಡ ಚಲನಚಿತ್ರಗಳು ಇವರ ಭಂಡಾರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT