ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಂ ಶಿವಂ ಸುಂದರಂ

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರೂಪಾ ಪರಮ ಸುಂದರಿ. ಊರ ಪೂಜಾರಿಯ ಮಗಳು. ಇಂಪಾಗಿ ಹಾಡುತ್ತಾಳೆ. ಆದರೆ ಅವಳ ಮುಖದ ಒಂದು ಬದಿ ಸುಟ್ಟು ಕರಕಲಾಗಿದೆ. ಈ ಕುರೂಪವನ್ನು ಯಾವಾಗಲೂ ಅಡಗಿಸಿಟ್ಟುಕೊಂಡೇ ಅವಳು ಅಡ್ಡಾಡುತ್ತಾಳೆ.

ರಾಜೀವ್‌ ಎಂಜಿನಿಯರ್‌. ಸ್ಫುರದ್ರೂಪಿ. ವಿರೂಪ ವನ್ನು ಕಂಡರೆ ಅವನಿಗೆ ಅಸಹ್ಯ. ಅದನ್ನು ಅವನು ಸಹಿಸಿಕೊಳ್ಳಲಾರ. ರೂಪಾಳ ಊರಿನ ಪಕ್ಕದ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟಿನ ಮೇಲ್ವಿಚಾರಕನಾಗಿ ಬರುತ್ತಾನೆ. ಅಲ್ಲಿ ದಿನವೂ ದೇವಸ್ಥಾನದಲ್ಲಿ ಭಕ್ತಿ ಗೀತೆ ಹಾಡು ರೂಪಾಳ ಶಾರೀರಸಿರಿಗೆ ಮಾರು ಹೋಗುತ್ತಾನೆ.

ಅವಳನ್ನು ಭೇಟಿಯಾಗುತ್ತಾನೆ ಕೂಡ. ಆದರೆ ಅವಳು ಬಚ್ಚಿಟ್ಟುಕೊಂಡ ಮುಖದ ವಿಕಾರ ಭಾಗವನ್ನು ಕಾಣುವುದೇ ಇಲ್ಲ. ಅವಳನ್ನು ಪ್ರೇಮಿಸತೊಡಗುತ್ತಾನೆ. ಅವಳ ತಂದೆಯ ಅನುಮತಿ ಪಡೆದು ಮದುವೆಯೂ ಆಗುತ್ತಾನೆ. ಮದುವೆಯಾದ ಮೇಲೆ ಅವನಿಗೆ ರೂಪಾಳ ಮುಖದಲ್ಲಿನ ವಿಕಾರದ ವಾಸ್ತವ ತಿಳಿಯುತ್ತದೆ. ಅವಳ ದೇಹಸಿರಿಯನ್ನೇ ನೆಚ್ಚಿ ಮೋಹಿಸಿದವನು ಅದೇ ದೇಹದ ಇನ್ನೊಂದು ಭಾಗವಾಗಿರುವ ವಿಕಾರವನ್ನು ಅರಗಿಸಿಕೊಳ್ಳಲಾರದೇ ಸಿಟ್ಟಿಗೇಳುತ್ತಾನೆ.

ತನಗೆ ವಂಚನೆ ಮಾಡಿದಳೆಂಬ ಕಾರಣ ನೀಡಿ ಅವಳನ್ನು ದ್ವೇಷಿಸುತ್ತಾನೆ, ಮನೆಯಿಂದ ಹೊರಗೆ ಹಾಕುತ್ತಾನೆ. ಹೀಗೆ ಅಂತರಂಗ – ಬಹಿರಂಗದ ಸೌಂದರ್ಯ ಮೀಮಾಂಸೆಯನ್ನಿಟ್ಟುಕೊಂಡೇ ರೂಪಿತ ಗೊಂಡ ಸಿನಿಮಾ ‘ಸತ್ಯಂ ಶಿವಂ ಸುಂದರಂ’. ಹೆಸರಿಲ್ಲೇ ಇರುವಂತೆ ಸತ್ಯ, ಶಿವಸ್ವರೂಪ ಮತ್ತು ಸೌಂದರ್ಯಗಳ ಹಲವು ಆಯಾಮಗಳ ಶೋಧನೆ ಈ ಸಿನಿಮಾದಲ್ಲಿದೆ. ರಾಜ್‌ ಕಪೂರ್‌ ಅವರೇ ನಿರ್ಮಾಣ ಮಾಡಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಶಿ ಕಪೂರ್‌ ಮತ್ತು ಜೀನತ್‌ ಅಮನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಶಶಿ ಕಪೂರ್‌ನ ಸ್ಫುರದ್ರೂಪ ಮತ್ತು ಜೀನತ್‌ ಅಮನ್‌ ಅವರ ಮಾದಕ ಮೈಮಾಟವನ್ನು ಈ ಚಿತ್ರದಲ್ಲಿ ಚೆನ್ನಾಗಿಯೇ ಬಳಸಿಕೊಳ್ಳಲಾಗಿದೆ. ಜೀನತ್‌ ಅವರಂತೂ ಇಂದೂ ಪಡ್ಡೆಹುಡುಗರ ಮನಸ್ಸಲ್ಲಿ ಕಿಚ್ಚು ಉರಿಸುವಂತೇ ಕಾಣಿಸಿಕೊಂಡಿದ್ದಾರೆ. ಆದರೆ ಅಂತರಂಗದ ಸೌಂದರ್ಯದ ಮಹತ್ವವನ್ನೇ ಪ್ರತಿಪಾದಿಸುವ ಈ ಚಿತ್ರದಲ್ಲಿ ಶಶಿ ಕಪೂರ್‌ ಮತ್ತು ಜೀನತ್‌ ಅಮನ್‌ ಅವರ ಅಭಿನಯ ಪ್ರತಿಭೆಯೂ ಪ್ರಖರವಾಗಿದೆ.

ಹಳ್ಳಿಬದುಕಿನ ಪರಿಸರ, ಅಲ್ಲಿನ ನಂಬಿಕೆ, ಜನರ ಬದುಕನ್ನು ನಿರ್ಧರಿಸುವ ಅಂಶಗಳು, ಅವರ ಮುಗ್ಧತೆ ಸೋ ಕಾಲ್ಡ್‌ ಸಿವಿಲೈಜೇಶನ್‌ ಮನಸ್ಥಿತಿ ದುರುಪ ಯೋಗಪಡಿಸಿಕೊಳ್ಳುವ ಬಗೆ, ಪ್ರಕೃತಿಯ ಎದುರಿನ ಮನುಷ್ಯನ ಹೋರಾಟದ ಹುಸಿತನ ಎಲ್ಲವನ್ನೂ ಬಹುಸೂಕ್ಷ್ಮವಾಗಿ ತೆರೆದಿಡುವ ಸಿನಿಮಾ ಇದು.

ಪ್ರಕೃತಿಯನ್ನು ಸೋಲಿಸಿ ನಾನು ಅಣೆಕಟ್ಟು ಕಟ್ಟಬಲ್ಲೆ ಎಂಬ ರಾಜೀವ್‌ನ ಅಹಂಕಾರಕ್ಕೂ, ಅಸಹ್ಯವಾದದ್ದನ್ನು ಸಹಿಸಿಕೊಳ್ಳಲಾರೆ ಎಂಬ ಅವನ ಮನಸ್ಥಿತಿಗೂ ಸಂಬಂಧವಿದೆ. ಆದ್ದರಿಂದಲೇ ಅವನು ಕಟ್ಟುತ್ತಿರುವ ಅಣೆಕಟ್ಟು ಒಡೆದು ಊರೊಳಗೆ ಪ್ರವಾಹ ನುಗ್ಗುವ ಭೀಕರ ಸಂದರ್ಭದಲ್ಲಿಯೇ ಅವನ ಅಹಂಕಾರವೂ ಮುರಿದು ರೂಪಾಳನ್ನು ಕಾಪಾಡುವ ಮಾನವೀಯ ಸ್ಥಿತಿಯನ್ನು ದಕ್ಕಿಸಿಕೊಳ್ಳುತ್ತಾನೆ. ಅಂತಿಮ ದೃಶ್ಯದಲ್ಲಿನ ಪ್ರವಾಹದ ದೃಶ್ಯವನ್ನು ಅಂದಿನ ತಾಂತ್ರಿಕತೆಯನ್ನು ಬಳಸಿಕೊಂಡು ಹೇಗೆ ಚಿತ್ರಿಸಬಹುದು ಎಂಬುದೇ ಆಶ್ಚರ್ಯ ಹುಟ್ಟಿಸುತ್ತದೆ.

ಈ ಸಿನಿಮಾದ ಇನ್ನೊಂದು ಧನಾತ್ಮಕ ಅಂಶ ಲಕ್ಷ್ಮೀಕಾಂತ – ಪ್ಯಾರೇಲಾಲ್‌ ಅವರ ಸಂಗೀತ. ಲತಾ ಮಂಗೇಶ್ಕರ್‌, ಮುಖೇಶ್‌, ಮನ್ನಾ ಡೇ, ಭೂಪಿಂದರ್ ಸಿಂಗ್‌, ನಿತಿನ್‌ ಮುಖೇಶ್‌ ಅವರ ಶಾರೀರದಲ್ಲಿರುವ ಹನ್ನೊಂದು ಹಾಡುಗಳು ಒಂದಕ್ಕಿಂತ ಒಂದು ಗಾಢವಾಗಿ ಕಾಡುವಂತಿವೆ. 1978ರಲ್ಲಿ ಬಿಡುಗಡೆ ಯಾಗಿರುವ ಈ ಚಿತ್ರ 172 ನಿಮಿಷ ಅವಧಿಯದ್ದು. ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ goo.gl/r4iPWi ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT