ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಭಾರತದ ಕನಸಿಗೆ ರೆಕ್ಕೆ ಮಾತುಗಳು ಕೃತಿಗಿಳಿಯಲಿ

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಈ ಬಾರಿಯದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ನಾಲ್ಕನೇ  ಸ್ವಾತಂತ್ರ್ಯೋತ್ಸವ ಭಾಷಣ. ಎಂದಿನಂತೆ ಅನೇಕ ವಿಷಯಗಳನ್ನು ಈ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿನ ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ನೀಡಿದ್ದಾರೆ. ರಾಷ್ಟ್ರವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರವಾಗಿ ಈ ಭಾಷಣದಲ್ಲಿ ಹೇಳಿದ್ದಾರೆ. ಬಡವರು, ಮಹಿಳೆಯರು, ಯುವಜನರು, ಸೈನಿಕರು ಹಾಗೂ ಮಧ್ಯಮ ವರ್ಗದವರ ಕುರಿತು ಮಾತನಾಡಿದ್ದಾರೆ. ಅವರಿಗಾಗಿ ಕೈಗೊಂಡ ಕ್ರಮಗಳು ಹಾಗೂ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ತಮ್ಮದೇ ನೇತೃತ್ವದಲ್ಲಿ ರಾಷ್ಟ್ರದಲ್ಲಿ ದೊಡ್ಡ ಪರಿವರ್ತನೆಯೂ ಆಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಅಂಕಿ ಅಂಶಗಳನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ.

ನೋಟು ರದ್ದತಿಯಿಂದ ಹೆಚ್ಚುಹಣ ಬ್ಯಾಂಕುಗಳಿಗೆ ಹರಿದುಬಂದಿದೆ ಎಂದಿದ್ದಾರೆ ಅವರು. ₹ 1.75ಲಕ್ಷ ಕೋಟಿ ಅಘೋಷಿತ ಹಣ ಬ್ಯಾಂಕುಗಳಿಗೆ ಬಂದಿದೆ ಎಂದು ಲೆಕ್ಕ ನೀಡಿದ್ದಾರೆ. ಹೊಸ ಪ್ರಕಟಣೆಗಳಿಗಿಂತ ಹೆಚ್ಚಾಗಿ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲೇ ಹೆಚ್ಚು ಸಮಯ ವ್ಯಯಿಸಿರುವುದು ಈ ಬಾರಿಯ ಭಾಷಣದ ವಿಶೇಷ. ಇನ್ನೇನು ಸುಮಾರು 20ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ರಾಷ್ಟ್ರ ಸಜ್ಜಾಗುತ್ತಿದೆ. ಇಂಥ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಧಾಟಿಯೂ ಈ ಭಾಷಣದಲ್ಲಿ ವ್ಯಕ್ತ. ಆದರೆ 2014ರ ನಂತರ ಮೋದಿಯವರು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣಗಳಲ್ಲಿ 57 ನಿಮಿಷದ ಈ ಭಾಷಣ ಅತ್ಯಂತ ಸಂಕ್ಷಿಪ್ತವಾದುದು.

ಜಿಎಸ್‌ಟಿ, ಭಯೋತ್ಪಾದನೆ, ತ್ರಿವಳಿ ತಲಾಖ್, ರೈತರ ಸಮಸ್ಯೆಗಳು ಮೋದಿ ಅವರ ಮಾತುಗಳಲ್ಲಿ ಹಾದು ಹೋಗಿವೆ. 2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ರಾಷ್ಟ್ರ ಆಚರಿಸುವ ಸಂದರ್ಭದಲ್ಲಿ ‘ಹೊಸ ಭಾರತ’ ಸೃಷ್ಟಿಸುವ ಕನಸನ್ನು ಮೋದಿಯವರು ಬಿತ್ತಿದ್ದಾರೆ. ಇದು ಆಸಕ್ತಿದಾಯಕ ಸಂಗತಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಹಾಗೂ ಭಯೋತ್ಪಾದನೆ ಮುಕ್ತವಾದ ಸ್ವಚ್ಛ, ಆರೋಗ್ಯಕರ ‘ಹೊಸ ಭಾರತ’ ನಿರ್ಮಿಸುವ ಆದರ್ಶದ ಮಾತುಗಳನ್ನಾಡಿದ್ದಾರೆ. ಹೊಸ ವಿಶ್ವಾಸವನ್ನು ಜನರಲ್ಲಿ ತುಂಬುವ ಪ್ರಯತ್ನ ಇಲ್ಲಿದೆ. ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯ 75ನೇ ವರ್ಷ ಇದು. ‘ಭಾರತ್ ಛೋಡೋ’ (ಭಾರತದಿಂದ ತೊಲಗಿ) ಎಂಬುದು ಆಗಿನ ಕರೆ. ಆದರೆ ‘ಭಾರತ್ ಜೋಡೋ’ (ಭಾರತವನ್ನು ಒಂದುಗೂಡಿಸಿ) ಎಂಬುದು ಇಂದಿನ ಕರೆ ಎಂದು ಮೋದಿಯವರು ಹೇಳಿದ್ದಾರೆ. ಗೋರಕ್ಷಣೆಯ ಹೆಸರಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಸಹಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಗೋರಕ್ಷಕರಿಗೆ ಕಠಿಣ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ.

21ನೇ ಶತಮಾನದ ಆರಂಭದ ವರ್ಷದಲ್ಲಿ ಜನಿಸಿದವರು ಮುಂದಿನ ವರ್ಷ 18ನೇ ವರ್ಷದವರಾಗುತ್ತಾರೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಪ್ರಧಾನಿ ಪಟ್ಟಕ್ಕೆ ಏರುವ ಮುನ್ನ ಮೋದಿಯವರು ನೀಡಿದ್ದರು. ಆದರೆ ಈಗ ಆ ಭರವಸೆ ಉಳಿಸಿಕೊಳ್ಳಲಾಗಿಲ್ಲ ಎಂಬುದು ಕಹಿ ವಾಸ್ತವ. ಇಂತಹ ಸಂದರ್ಭದಲ್ಲಿ ‘ಉದ್ಯೋಗಗಳನ್ನು ನೀವೇ ಸೃಷ್ಟಿಸಿ’ ಎಂದು ಯುವಜನರಿಗೆ ಮೋದಿ ಕರೆ ನೀಡಿದ್ದಾರೆ. ಆದರೆ ಅದು ಹೇಗೆ ಎಂಬುದನ್ನು ಅವರು ವಿವರಿಸಲು ಹೋಗಿಲ್ಲ. ಗಲಭೆ ಪೀಡಿತ ಕಾಶ್ಮೀರಕ್ಕೆ ಕಡೆಗೂ ಒಂದಿಷ್ಟು ಭರವಸೆಯ ಮಾತುಗಳನ್ನು ಮೋದಿಯವರು ಹೇಳಿರುವುದು ಮಹತ್ವದ್ದು. ಕಳೆದ ಕೆಲವು ತಿಂಗಳಿಂದ ಮೋದಿ ಸರ್ಕಾರ ಅನುಸರಿಸಿಕೊಂಡು ಬಂದಿದ್ದ ನಿಲುವಿಗೆ ಇದು ವ್ಯತಿರಿಕ್ತವಾದದ್ದು. ದೊಡ್ಡ ಬದಲಾವಣೆಗೆ ಇದು ಸೂಚಕ.

‘ಗಾಲಿ’, ‘ಗೋಲಿ’ಯಿಂದಲ್ಲ ‘ಪರಿವರ್ತನ್ ಹೋಗಾ ಗಲೇ ಲಗಾನೆ ಸೇ..’ ಎಂದು ಕಾವ್ಯಮಯವಾಗಿ ದಶಕಗಳ ಕಗ್ಗಂಟಿಗೆ ಪರಿಹಾರ ಸೂಚಿಸಿದ್ದಾರೆ. ಆಕರ್ಷಕ ನುಡಿಗಟ್ಟುಗಳಲ್ಲಿ ವಿಷಯಗಳನ್ನು ಮಂಡಿಸುವ ಮೋದಿ ಅವರ ಪರಿಣತಿ ಈ ನುಡಿಗಟ್ಟಿನಲ್ಲೂ ವ್ಯಕ್ತ. ಹೃದಯಸ್ಪರ್ಶಿಯಾದ ಮಾತುಗಳಿವು. ಹಿಂಸೆ ಅಥವಾ ಬಂದೂಕಿನ ಗುಂಡಿನಿಂದ ಕಾಶ್ಮೀರ ಸಮಸ್ಯೆ ಪರಿಹಾರವಾಗದು. ವಾತ್ಸಲ್ಯ ಪ್ರತಿನಿಧಿಸುವ ಅಪ್ಪುಗೆಯಿಂದ ಪರಿಹಾರ ಸಾಧ್ಯ ಎಂಬ ಮಾತುಗಳು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಹೇಳಿದ್ದ ಕಾಶ್ಮೀರಿಯತ್‌, ಝಮೂರಿಯತ್ ಹಾಗೂ ಇನ್‌ಸಾನಿಯತ್‌ (ಕಾಶ್ಮೀರಿ ಅಸ್ಮಿತೆ, ಪ್ರಜಾಪ್ರಭುತ್ವ ಮತ್ತು ಮಾನವೀಯತೆ) ಎಂಬಂಥ ಪ್ರಸಿದ್ಧ ಸೂತ್ರ ನೆನಪಿಸುತ್ತವೆ.  ಆದರೆ ಇದು ಶಬ್ದಾಡಂಬರದ ಮಾತುಗಳಾಗಿಯಷ್ಟೇ ಉಳಿಯಬಾರದು. ಸರಿಯಾದ ಕ್ರಮಗಳನ್ನೂ ಕೈಗೊಂಡಲ್ಲಿ ಮಾತ್ರ ಅರ್ಥಪೂರ್ಣ ಪರಿಣಾಮ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT