ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ದೋಣಿ ಸಂಚಾರ ಮತ್ತೆ ಆರಂಭ

*4 ವರ್ಷದಿಂದ ಸಂಕಷ್ಟದಲ್ಲಿದ್ದ ವ್ಯಾಪಾರಿಗಳು *ಜಲಮಾರ್ಗ ವಿದ್ಯಾರ್ಥಿಗಳಿಗೆ ಅನಿವಾರ್ಯ
Last Updated 17 ಆಗಸ್ಟ್ 2017, 7:28 IST
ಅಕ್ಷರ ಗಾತ್ರ

ಹೊಸಪೇಟೆ: ಕೆಲ ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಬಂದಿದ್ದು, ದೋಣಿ ಸಾಗಿಸುವವರ ಬದುಕು ಮತ್ತೆ ಹಳಿ ಮೇಲೆ ಬಂದಿದೆ.

ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲ ಸಮೀಪದ ತುಂಗಭದ್ರಾ ನದಿ ಸ್ನಾನಘಟ್ಟದಿಂದ ವಿರೂಪಾಪುರ ಗಡ್ಡಿ, ತಳವಾರಘಟ್ಟದಿಂದ ಆನೆಗುಂದಿ, ನದಿ ತಟದಿಂದ ನವ ವೃಂದಾವನ, ಕೋದಂಡರಾಮ ದೇವಸ್ಥಾನ, ಕೋಟಿ ಶಿವಲಿಂಗಕ್ಕೆ ಹೋಗಬೇಕಾದರೆ ದೋಣಿಯೇ ಪ್ರಮುಖ ಆಸರೆ.

ಹೋದ ವರ್ಷ ಸಮರ್ಪಕವಾಗಿ ಮಳೆಯಾಗದ ಕಾರಣ ಮಾರ್ಚ್‌ನಲ್ಲಿ ನದಿ ಸಂಪೂರ್ಣವಾಗಿ ಬತ್ತು ಹೋಗಿತ್ತು. ಜನ ನಡೆದಾಡಿ ಕೊಂಡೇ ನದಿ ದಾಟುತ್ತಿದ್ದರು. ಇದರಿಂದ ಸಹಜವಾಗಿಯೇ ದೋಣಿಗಳ ಓಡಾಟ ನಿಂತು ಹೋಗಿತ್ತು. ಅದನ್ನೇ ಅವಲಂಬಿಸಿ ಬದುಕು ನಡೆಸುವವರಿಗೆ ದೊಡ್ಡ ಆಘಾತ ಉಂಟಾಗಿತ್ತು. ಅವರಿಗೆ ದಿಕ್ಕೇ ತೋಚ ದಂತಾಗಿತ್ತು. ಈ ವರ್ಷವೂ ಸಕಾಲಕ್ಕೆ ಮಳೆಯಾಗಲಿಲ್ಲ. ಇದರಿಂದ ಅವರ ಚಿಂತೆ ಇನ್ನಷ್ಟು ಹೆಚ್ಚಿತ್ತು.

ಮಳೆಗಾಲ ಆರಂಭವಾಗಿ ಸುಮಾರು ಎರಡೂವರೆ ತಿಂಗಳ ನಂತರ ಇತ್ತೀಚೆಗೆ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರು ಬಂದಿದೆ. ಇದರಿಂದ ದೋಣಿಗಳು ಮತ್ತೆ ನೀರಿಗೆ ಇಳಿದಿವೆ. ನಿಧಾನವಾಗಿ ದೋಣಿ ವ್ಯಾಪಾರಿಗಳು ಚೇತರಿಸಿಕೊಳ್ಳುತ್ತಿದ್ದಾರೆ.

ಹಂಪಿಗೆ ಎರಡು ರೀತಿಯ ಪ್ರವಾಸಿಗರು ಬರುತ್ತಾರೆ. ಕೆಲವರು ನಗರ ಜೀವನದಿಂದ ಬೇಸತ್ತು ತುಂಗಭದ್ರಾ ನದಿ ಅಂಚಿನಲ್ಲಿರುವ ವಿರೂಪಾಪುರ ಗಡ್ಡಿಯಲ್ಲಿರುವ ರೆಸಾರ್ಟ್‌ಗಳಲ್ಲಿ ಕಾಲ ಕಳೆದು ಹೋಗಲು ಬರುತ್ತಾರೆ. ಮತ್ತೆ ಕೆಲವರು ಅಲ್ಲಿರುವ ಧಾರ್ಮಿಕ ಸ್ಥಳಗಳು, ಸ್ಮಾರಕಗಳ ವೀಕ್ಷಣೆ ಹಾಗೂ ಅಧ್ಯಯನಕ್ಕಾಗಿ ಬರುತ್ತಾರೆ.

ಯಾವ ಉದ್ದೇಶಕ್ಕೆ ಬಂದರೂ ಅವರು ನದಿ ದಾಟಿಯೇ ಹೋಗಬೇಕು. ಅಲ್ಲದೇ ಸ್ಥಳೀಯರು ನಿತ್ಯದ ಕೆಲಸಗಳಿಗೆ, ಶಾಲಾ ಕಾಲೇಜಿಗೆ ಹೋಗಬೇಕಾದರೆ ನದಿ ದಾಟಿಕೊಂಡೇ ಹೋಗುತ್ತಾರೆ. ಹೀಗಾಗಿ ದೋಣಿಗಳು ಅನಿವಾರ್ಯ. ಹೀಗೆ ಸದಾ ಜನರ ಓಡಾಟವಿರುವುದರಿಂದ ದೋಣಿ ನಡೆಸುವವರ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ.

ಕೈತುಂಬ ಹಣ ಗಳಿಸುತ್ತಾರೆ. ಆದರೆ, ಸತತ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆ ಯಾಗದ ಕಾರಣ ವರ್ಷದ ನಾಲ್ಕೈದು ತಿಂಗಳು ನದಿ ಸಂಪೂರ್ಣ ಬತ್ತು ಹೋಗುತ್ತಿದ್ದು, ಅವರ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ.

‘ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ದೋಣಿ ಓಡಿಸಿಕೊಂಡು ಬದುಕು ನಡೆಸುತ್ತಿದ್ದೇವೆ. ಹಿಂದಿನ ಮೂರು ವರ್ಷ ಬಿಟ್ಟರೆ ಯಾವಾಗಲೂ ದೋಣಿಗಳು ಓಡಾಡುತ್ತಿದ್ದವು. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ, 3 ವರ್ಷದಿಂದ ಮಳೆ ಯಾಗದ ಕಾರಣ ಫೆಬ್ರುವರಿ, ಮಾರ್ಚ್‌ ನಲ್ಲೇ ನದಿ ಬತ್ತು ಹೋಗುತ್ತಿದೆ. ವ್ಯಾಪಾರ ಸಂಪೂರ್ಣ ನಿಂತು ಹೋಗಿ ಕೆಲಸ ವಿಲ್ಲದೇ ಕೂರುವಂತಾಗಿದೆ’ ಎನ್ನುತ್ತಾರೆ ಪಂಪಾ ಪತಿ.

‘ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಮತ್ತೆ ನದಿಯಲ್ಲಿ ನೀರು ಬಂದಿದೆ. ಎಂದಿನಂತೆ ದೋಣಿಗಳ ಓಡಾಟ ಹೆಚ್ಚಾಗಿದೆ. ನದಿಯಲ್ಲಿ ನೀರಿ ದ್ದರೆ ಮಾತ್ರ ನೋಡಲು ಚೆಂದ. ಬಹುತೇಕ ಪ್ರವಾಸಿಗರು ಹಂಪಿಯ ಸ್ಮಾರಕ ಗಳನ್ನು ನೋಡುವುದರ ಜತೆಗೇ ನದಿ ಯಲ್ಲಿ ವಿಹರಿಸಲು ಬರುತ್ತಾರೆ. ಇದರಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. 3 ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಮುಂದೆ ಸರಿಯಾಗಿ ಮಳೆ ಬರದಿದ್ದರೆ ಬರುವ ಜನವರಿ, ಫೆಬ್ರುವರಿಯಲ್ಲೇ ನದಿ ಬತ್ತು ಹೋಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೋಣಿ ಸೇವೆ ಒದಗಿಸಲು ಹಂಪಿ ಗ್ರಾಮ ಪಂಚಾಯಿತಿಯು ಪ್ರತಿ ವರ್ಷ ಟೆಂಡರ್‌ ಕರೆಯುತ್ತದೆ. ಈ ವರ್ಷ ₹8 ಲಕ್ಷಕ್ಕೆ ಟೆಂಡರ್‌ ಕರೆದಿತ್ತು. ಟೆಂಡರ್‌ ಪಡೆದವರು ದೋಣಿ ಮೂಲಕ ನದಿ ದಾಟಿಸಲು ಒಬ್ಬ ವ್ಯಕ್ತಿಗೆ ತಲಾ ₹10, ಬೈಸಿಕಲ್‌ ಅಥವಾ ದ್ವಿಚಕ್ರ ವಾಹನಕ್ಕೆ ₹20 ಶುಲ್ಕ ವಿಧಿಸುತ್ತದೆ. ಇನ್ನು ಕೋಟಿ ಶಿವಲಿಂಗಕ್ಕೆ ತೆಪ್ಪದಲ್ಲಿ ಹೋಗಿ ಬರಲು ಸ್ಥಳೀಯ ಒಬ್ಬ ವ್ಯಕ್ತಿಗೆ ₹30, ವಿದೇಶಿಯರಿಗೆ ₹50 ವಿಧಿಸಲಾಗುತ್ತದೆ’ ಎಂದರು.

‘ಮೋಟಾರ್‌ಚಾಲಿತ ವಾಹನಕ್ಕೆ ಡೀಸೆಲ್‌, ಇಬ್ಬರು ಹುಡುಗರಿಗೆ ಭತ್ಯೆ ಕೊಟ್ಟು ನಿರ್ವಹಣೆ ಮಾಡಬೇಕಾಗುತ್ತದೆ. ತೆಪ್ಪ ನಡೆಸುವವರಿಗೆ ಹೆಚ್ಚಿನ ನಿರ್ವಹಣೆ ಇರುವುದಿಲ್ಲ. ಆದರೂ ಒಬ್ಬ ವ್ಯಕ್ತಿಯನ್ನು ಇಟ್ಟುಕೊಳ್ಳುವುದು ಅನಿವಾರ್ಯ. ದೋಣಿ, ತೆಪ್ಪ ನಡೆಸಿ ಸುಮಾರು 100 ಕ್ಕೂ ಹೆಚ್ಚು ಜನರ ಜೀವನ ನಡೆಯುತ್ತದೆ. ಅನೇಕ ಸಂಕಷ್ಟಗಳು ನಮಗಿವೆ. ಆದರೆ, ಸೂಕ್ತ ಮಳೆಯಾಗಿ ವರ್ಷ ವಿಡೀ ನದಿಯಲ್ಲಿ ನೀರಿದ್ದರೆ ಸಮಸ್ಯೆ ಇಲ್ಲ. ಮಳೆ ಯಾಗದಿದ್ದರೆ ಮಾತ್ರ ಬಹಳ ತೊಂದರೆ ಆಗುತ್ತದೆ’ ಎಂದು ಮನದಾಳ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT