ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ: ಜೀವಾವಧಿ ಶಿಕ್ಷೆ

Last Updated 17 ಆಗಸ್ಟ್ 2017, 7:50 IST
ಅಕ್ಷರ ಗಾತ್ರ

ಕೋಲಾರ: ಒಂಟಿ ಮಹಿಳೆ ಕೊಲೆ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ಶ್ರೀಧರ್ ಎಂಬಾತನಿಗೆ ಒಂದನೇ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಶ್ರೀಧರ್‌, ಕೋಲಾರದ ಕುರುಬರಪೇಟೆಯಲ್ಲಿ ವಾಸವಾಗಿದ್ದ ಬ್ಯೂಟಿಷಿಯನ್‌ ಕವಿತಾ (30) ಎಂಬುವರನ್ನು 2015ರ ಮೇ 10ರಂದು ಕೊಲೆ ಮಾಡಿ ಪರಾರಿಯಾಗಿದ್ದ. ಕವಿತಾ ಅವರ ಶವ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶ್ರೀಧರ್‍ ತನ್ನ ಸ್ನೇಹಿತೆ ಮೂಲಕ ಕವಿತಾ ಅವರನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಪರಸ್ಪರರ ಮಧ್ಯೆ ಪ್ರೇಮಾಂಕುರವಾಗಿತ್ತು. ಬೆಂಗಳೂರಿನ ನಾರಾಯಣಪುರದಲ್ಲಿ ವಾಸವಾಗಿದ್ದ ಶ್ರೀಧರ್‌ ಆಗಾಗ್ಗೆ ಕವಿತಾರ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಆತ ಕೊಲೆ ಘಟನೆಯ ದಿನ ಕವಿತಾರ ಮನೆಗೆ ಬಂದಿದ್ದಾಗ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಆತ ಅವರನ್ನು ಕೊಲೆ ಮಾಡಿ 40 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದ. ನಂತರ ಬೆಂಗಳೂರಿನ ಫೈನಾನ್ಸ್‌ನಲ್ಲಿ ಸರ ಅಡವಿಟ್ಟು ಹಣ ಪಡೆದಿದ್ದ.

ಪೊಲೀಸರು ಕವಿತಾರ ಮೊಬೈಲ್ ಕರೆಗಳನ್ನು ಆಧರಿಸಿ ಶ್ರೀಧರ್‌ನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್‌.ವಿ.ವಿಜಯ್‌ ಅವರು ಶ್ರೀಧರ್‌ಗೆ ಜೀವಾವಧಿ ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದರು.

ಮಹಿಳೆ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ
ಕೊಲೆ ಪ್ರಕರಣವೊಂದರ ಸಂಬಂಧ ಮಹಿಳೆ ಸೇರಿದಂತೆ ಇಬ್ಬರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿಯ ಕಣ್ಣನ್ ಮತ್ತು ಆಂಧ್ರಪ್ರದೇಶದ ಚಂದ್ರಮ್ಮ ಶಿಕ್ಷೆಗೆ ಗುರಿಯಾದವರು. ಅಪರಾಧಿಗಳು 2014ರ ಮೇ 5ರಂದು ದಾಮೋದರ ಎಂಬುವರನ್ನು ಕೊಲೆ ಮಾಡಿದ್ದರು.

ಚಂದ್ರಮ್ಮ ಮೊದಲು ದಾಮೋದರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡು ತೋಟದ ಮನೆಯಲ್ಲಿ ವಾಸವಾಗಿದ್ದಳು. ನಂತರ ಆಕೆಗೆ ಕಣ್ಣನ್‌ನ ಪರಿಚಯವಾಗಿತ್ತು. ಬಳಿಕ ಆಕೆ ಕಣ್ಣನ್‌ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದಾಮೋದರ ಈ ವಿಷಯ ತಿಳಿದು ಕೋಪಗೊಂಡಿದ್ದರು.

ದಾಮೋದರ ತಮ್ಮ ಸಂಬಂಧಕ್ಕೆ ಅಡ್ಡಿಪಡಿಸಬಹುದೆಂಬ ಕಾರಣಕ್ಕೆ ಚಂದ್ರಮ್ಮ ಮತ್ತು ಕಣ್ಣನ್‌ ಸಂಚು ರೂಪಿಸಿ ಅವರನ್ನು ಕೊಲೆ ಮಾಡಿದ್ದರು.

ಈ ಸಂಬಂಧ ಅಂಡರ್ಸನ್‌ ಪೇಟೆ ಪೊಲೀಸರು ಚಂದ್ರಮ್ಮ ಮತ್ತು ಕಣ್ಣನ್‌ನನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸಿ ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT