ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಯನ'ದ ಮೂಲಕ ಸಿನಿತೆರೆಗೆ ಬಂದ ಅಪೂರ್ವಾ!

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹೊಸ ಸಿನಿಮಾವೊಂದು ಇನ್ನು ಕೆಲವೇ ವಾರಗಳಲ್ಲಿ ಕನ್ನಡ ಸಿನಿತೆರೆಗೆ ಬರಲಿದೆ. ಆ ಸಿನಿಮಾದ ಹೆಸರು 'ಅಯನ'. ಆ ಸಿನಿಮಾದ ಕಥೆ ಕೂಡ ಕನ್ನಡದಲ್ಲಿ ಹೊಸದು. ಹಾಗೆಯೇ, ಸಿನಿಮಾದ ನಾಯಕಿ ಕೂಡ ಸಿನಿಮಾ ರಂಗಕ್ಕೆ ಹೊಸ ಮುಖ. ಅವರ ಹೆಸರು ಅಪೂರ್ವಾ. 'ಅಯನ' ಸಿನಿಮಾದಲ್ಲಿ ಇವರು ದಿವ್ಯಾ ಎನ್ನುವ ಐ.ಟಿ. ಕ್ಷೇತ್ರದ ಹೆಣ್ಣುಮಗಳ ಪಾತ್ರ ನಿಭಾಯಿಸಿದ್ದಾರೆ.

'ಅಯನ' ಎಂದರೆ ಪಥ ಅಥವಾ ಹಾದಿ ಎಂಬ ಹೆಸರು ಇದೆ. ಈ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಅಪೂರ್ವಾ ಅವರ ಹಾದಿಯ ಬಗ್ಗೆ ಒಂದು ಕಿರುನೋಟ ಹರಿಸಿದೆ 'ಚಂದನವನ'. ಅಂದಹಾಗೆ, ಅಪೂರ್ವಾ ಅವರು ಮಾತಿಗೆ ಸಿಕ್ಕಿದ್ದು ಒಂದು ರಜೆಯ ದಿನ. ಹಾಗಾಗಿಯೇ ಅವರು ಕೆಲಸದ ಒತ್ತಡಗಳಿಂದ ಮುಕ್ತವಾಗಿದ್ದಂತೆ ಕಂಡುಬಂತು. ಕೆಲಸದ ಬಿಡುವು ಕೊಡುವ ಖುಷಿಯಲ್ಲೇ ಮಾತಿಗೆ ಕುಳಿತರು.

ಅಪೂರ್ವಾ ಅವರ ಕುಟಂಬಕ್ಕೆ ಸಿನಿಮಾ ಹಿನ್ನೆಲೆಯೊಂದು ಇದೆ. ಅವರ ತಾತ ರಾಜಾರಾಮ್ ಗಿರಿಯನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದವರು. ಅವರು ಡಾ. ರಾಜಕುಮಾರ್‌, ಶ್ರೀನಾಥ್‌ ಜೊತೆ ಕೆಲಸ ಮಾಡಿದ್ದರಂತೆ. 'ನನಗೆ ಸಿನಿಮಾ ಕ್ಷೇತ್ರಕ್ಕೆ ಬರಲು ನನ್ನ ತಾತ ರಾಜಾರಾಮ್ ಅವರೇ ಪ್ರೇರಣೆ' ಎನ್ನುತ್ತ ಮಾತು ಆರಂಭಿಸಿದರು.

'ತಾತ ರಾಜಾರಾಮ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ನಾನು ಚಿಕ್ಕ ವಯಸ್ಸಿನಿಂದಲೂ ಅವರನ್ನು ತೆರೆಯ ಮೇಲೆ ನೋಡುತ್ತಿದ್ದೆ. ಅದೇ ನನಗೆ ಸಿನಿತೆರೆಯತ್ತ ಮುಖ ಮಾಡಲು ಪ್ರೇರಣೆ ನೀಡಿತು' ಎಂದು ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಲೇ ಒಂದು ಖುಷಿಯ ನಗು ಬೀರಿದರು ಅಪೂರ್ವಾ. ಹಾಗಂತ, ಅಪೂರ್ವಾ ಅವರ ತಂದೆ-ತಾಯಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದವರಲ್ಲ.

ಅಪೂರ್ವಾ ಅವರು ನೇರವಾಗಿ ಸಿನಿಮಾ ಅಭಿನಯಕ್ಕೆ ಇಳಿದವರಲ್ಲ. ಅವರದ್ದು ಒಂದು ರೀತಿಯಲ್ಲಿ, ಮೆಟ್ಟಿಲುಗಳನ್ನು ಏರುತ್ತಾ ಬಂದಿರುವ ಬದುಕು. 'ನಾನು ಮೂರು ವರ್ಷ ವಯಸ್ಸಿನಲ್ಲಿ ಇದ್ದಾಗಲೇ ದೂರದರ್ಶನದಲ್ಲಿ ಚಿಕ್ಕ ನಾಟಕವೊಂದರಲ್ಲಿ ಕಾಣಿಸಿಕೊಂಡಿದ್ದೆ. ಅದಕ್ಕೂ ನನ್ನ ತಾತನೇ ಕಾರಣ. ನಂತರ, ಎಂಜಿನಿಯರಿಂಗ್ ಓದುವಾಗ ನನಗೆ ರಂಗಭೂಮಿಯ ಪರಿಚಯ ಆಯಿತು. 'ವಿ ಮೂವ್ ಥಿಯೇಟರ್' ಎನ್ನುವ ತಂಡದ ಕಾರಣದಿಂದಾಗಿ ನಟನೆ ಹಾಗೂ ರಂಗಭೂಮಿ ಕುರಿತ ನನ್ನ ಆಸಕ್ತಿಗಳು ಹೆಚ್ಚಾದವು' ಎಂದು ಹೇಳಿದರು.

'ಮೈಸೂರಿನಲ್ಲಿ ಎಂಜಿನಿಯರಿಂಗ್‌ ಓದುವಾಗ ಕೆಲವು ಸಿನಿಮಾ ಸ್ಕ್ರಿಪ್ಟ್‌ಗಳು ನನ್ನ ಬಳಿ ಬಂದಿದ್ದವು. ನಾಯಕಿಯಾಗಿ ಅಭಿನಯಿಸುವಂತೆಯೂ ಆಹ್ವಾನ ಬಂದಿತ್ತು. ಆದರೆ ಯಾವ ಕಥೆಯೂ, ಅಂದು ನನ್ನ ಪಾಲಿಗೆ ಬಂದ ಯಾವ ಪಾತ್ರವೂ ನನಗೆ ಖುಷಿ ಕೊಡಲಿಲ್ಲ, ನನಗೆ ಹತ್ತಿರವಾಗಲಿಲ್ಲ. ಅಲ್ಲದೆ, ಓದು ಮುಗಿದ ನಂತರವೇ ಸಿನಿಮಾ ರಂಗ ಪ್ರವೇಶಿಸಬೇಕು ಎಂಬ ನಿಲುವು ತಾಳಿದ್ದೆ. ಹಾಗಾಗಿ ಆಗ ಬಂದ ಅವಕಾಶಗಳನ್ನು ಒಪ್ಪಿಕೊಳ್ಳಲಿಲ್ಲ' ಎಂದರು - ಯಾವುದೇ ಬಿಗುಮಾನಗಳಿಲ್ಲದೆ.

ಅಂದವಾಗಿ ಕಾಣುವ ಹೆಣ್ಣುಮಕ್ಕಳಿಗೆ 'ಹೀರೋಯಿನ್ ಆಗಬೇಕು' ಎಂಬ ಆಸೆ ಇರುವುದು ತೀರಾ ಅಸಹಜವೇನೂ ಅಲ್ಲ. ಆದರೆ 'ನನ್ನ ಆಸೆಗಳು ಅಂಥವಲ್ಲ' ಎಂದರು ಅಪೂರ್ವಾ. 'ನನಗೆ ಹೀರೋಯಿನ್ ಆಗಬೇಕು ಎಂಬುದಕ್ಕಿಂತ, ನನ್ನ ಪಾತ್ರ ಏನು ಎಂಬುದರ ಬಗ್ಗೆ ಹೆಚ್ಚು ಆಸಕ್ತಿ ಇದೆ' ಎಂದು ಚುಟುಕಾಗಿ, ಆದರೆ ಖಡಕ್ಕಾಗಿ ಹೇಳುತ್ತಾರೆ ಅವರು.

'ನಾನು ಈ ಹಿಂದೆ ಮಾಡೆಲಿಂಗ್‌ನಲ್ಲಿ ಇದ್ದೆ. ಟಿ.ವಿ. ಕಮರ್ಷಿಯಲ್‌ಗಳಲ್ಲಿ ಕೂಡ ಅಭಿನಯಿಸಿದ್ದೇನೆ. ಓದು ಮುಗಿದ ನಂತರ ಕೆಲವು ಕಾಲ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಆದರೆ ಐ.ಟಿ. ಕ್ಷೇತ್ರ ನನಗೆ ಅಷ್ಟೇನೂ ಸೂಕ್ತವಲ್ಲ ಅನಿಸಿತ್ತು. ಹಾಗಾಗಿ ಅಲ್ಲಿನ ಉದ್ಯೋಗ ತೊರೆದೆ. ಆ ಸಂದರ್ಭದಲ್ಲೇ 'ಅಯನ'ದಲ್ಲಿ ನಟಿಸುವ ಅವಕಾಶ ದೊರೆಯಿತು' ಎಂದು ಈ ಸಿನಿಮಾಕ್ಕೆ ಪ್ರವೇಶ ಪಡೆದ ಬಗೆಯನ್ನು ವಿವರಿಸಿದರು.

ಅಪೂರ್ವಾ ಅವರಿಗೆ ಈ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಆಡಿಷನ್ ಮೂಲಕ. 'ಅಯನದಲ್ಲಿ ನನಗೆ ಸಿಗಲಿರುವುದು ಗಟ್ಟಿತನ ಇರುವ ಪಾತ್ರ, ಎಲ್ಲರಿಗೂ ರಿಲೇಟ್ ಆಗುವಂತಹ ಸರಳತೆಯ ಪಾತ್ರ ಇದು ಅನಿಸಿತು' ಎಂದು ತಮ್ಮ ಮೊದಲ ಸಿನಿಮಾ ಬಗ್ಗೆ ಖುಷಿಯಿಂದ ಮಾತುಗಳನ್ನು ಹಂಚಿಕೊಂಡರು.

'ನಿಮಗೆ ಯಾವ ಬಗೆಯ ಪಾತ್ರ' ಬೇಕು ಎಂದು ಪ್ರಶ್ನಿಸಿದರೆ 'ಗ್ಲಾಮರಸ್ ಪಾತ್ರವೇ ಬೇಕು' ಎಂಬ ಉತ್ತರ ಇವರಿಂದ ಬರುವುದಿಲ್ಲ. 'ನನಗೆ ಒಂದು ಪ್ರಬುದ್ಧ ಪಾತ್ರ ಬೇಕು ಎಂದು ಯಾವತ್ತೂ ಅನಿಸುತ್ತಿತ್ತು. ನನ್ನ ಪ್ರಕಾರ ಯಾವ ಪಾತ್ರವೂ ಕೆಟ್ಟದಲ್ಲ - ಅದು ಪ್ರಬುದ್ಧ ಪಾತ್ರ ಇರಬಹುದು ಅಥವಾ ಗ್ಲಾಮರಸ್ ಪಾತ್ರವೇ ಇರಬಹುದು. ನಾವು ಸಾಧ್ಯತೆಗಳಿಗೆ ಸದಾ ತೆರೆದುಕೊಂಡು ಇರಬೇಕು. ನಮಗೆ ವಹಿಸುವ ಪಾತ್ರಕ್ಕೆ ನಾವೆಷ್ಟು ಜೀವ ತುಂಬಬಹುದು ಎಂಬುದು ಮುಖ್ಯ' ಎಂಬ ಉತ್ತರವನ್ನು ಅವರು ನೀಡಿದರು.

'ಅಭಿನಯವನ್ನು ಯಾವ ರೀತಿಯಲ್ಲಿ ಸ್ವೀಕರಿಸುವಿರಿ? ಸಿನಿಮಾದಲ್ಲಿ ಎಷ್ಟು ವರ್ಷಗಳ ಕಾಲ ಇರಬೇಕು ಎಂಬ ಆಸೆ ಇದೆ' ಎಂಬ ಪ್ರಶ್ನೆಯನ್ನು ಅವರ ಮುಂದಿಡಲಾಯಿತು. ಅದಕ್ಕೆ ಅವರ ಕೊಟ್ಟ ಉತ್ತರ ಸುಂದರವಾಗಿತ್ತು - ಅವರಂತೆಯೇ! 'ಎಲ್ಲರ ಜೊತೆ ತಾನೂ ಬೆಳೆಯುವುದು ಕಲಾವಿದೆಯ ಶಕ್ತಿ. ಒಳ್ಳೆಯ ಸಿನಿಮಾಗಳು, ಸವಾಲಿನ ಪಾತ್ರಗಳು ಸಿಗುತ್ತಿರುವಷ್ಟು ಕಾಲ ಕಲಾವಿದೆಯ ಬೆಳವಣಿಗೆ ನಿಲ್ಲುವುದಿಲ್ಲ. ಹಾಗಾಗಿ, ಒಳ್ಳೆಯದಾಗುತ್ತದೆ ನನಗೆ ಎಂಬ ಭರವಸೆ ನನ್ನಲ್ಲಿದೆ' ಎಂದರು.

ಈ ಮಾತುಗಳ ಮುಂದುವರಿಕೆಯಂತೆಯೇ ಇನ್ನೊಂದು ಮಾತನ್ನೂ ಅವರು ಹೇಳಿದರು. 'ಕಷ್ಟಪಟ್ಟು ಮೇಲೆ ಬರುವವರು ನನಗೆ ರೋಲ್ ಮಾಡಲ್‌ ಆಗುತ್ತಾರೆ! ಸಿನಿಮಾದಲ್ಲಿ ಯಾರಿಷ್ಟ ಅಂತ ಕೇಳಿದರೆ ಬಹಳ ಜನ ನನ್ನ ಕಣ್ಣ ಮುಂದೆ ಬರುತ್ತಾರೆ. ನನಗೆ ಅನಂತನಾಗ್ ಹಾಗೂ ಕಲ್ಪನಾ ಇಷ್ಟ. ಅನುರಾಗ್ ಕಶ್ಯಪ್ ಅವರ ನಿರ್ದೇಶನ ಇಷ್ಟ. ಹಾಗೆಯೇ ಸಿನಿಮಾದಲ್ಲಿ ಇಷ್ಟವಾಗುವವರು ಇನ್ನೂ ಹಲವರು ಇದ್ದಾರೆ. ಪ್ರತಿಭೆಯನ್ನೇ ನಂಬಿಕೊಂಡು ಮೇಲೆಬಂದ ನವಾಜುದ್ದೀನ್ ಸಿದ್ದಿಕಿ ಕೂಡ ಇಷ್ಟ' ಎಂದರು.

ಪರ್ಯಾಯ ಸಿನಿಮಾಗಳು ಅಪೂರ್ವಾ ಪಾಲಿನ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದು. ಸರಳವಾಗಿದ್ದರೂ, ಶಕ್ತಿಯುತವಾದಂತಹ ಪಾತ್ರಗಳನ್ನು ನಿಭಾಯಿಸಬೇಕು ಎಂಬ ಆಸೆ ಇವರದ್ದು. ಸದಾ ನಗುವ ಅಪೂರ್ವಾ ಅವರು 'ಗುಲ್ಟು ಆನ್‌ಲೈನ್‌' ಎಂಬ ಇನ್ನೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 'ನಿಮ್ಮ ಸಿನಿಮಾ ಆಸೆಗಳು ಏನು' ಎಂದು ಕೇಳಿದರೆ, 'ನಾನು ಚೆನ್ನಾಗಿ ಕೆಲಸ ಮಾಡಬೇಕು. ಬೇರೆ ಬೇರೆ ಬಗೆಯ ಪಾತ್ರಗಳನ್ನು ನಿಭಾಯಿಸಬೇಕು' ಎಂದು ಮುಗ್ಧವಾಗಿ ಉತ್ತರಿಸುತ್ತಾರೆ.

**

ಸಿನಿಮಾ ಆಸೆಗಳೇನು?

ಸಿನಿಮಾ ಕ್ಷೇತ್ರದ ಬಗ್ಗೆ ನಿಮಗೆ ಇರುವ ಆಸೆಗಳು ಏನು, ಯಾವ ನಿರ್ದೇಶಕರ ಜೊತೆ ಕೆಲಸ ಮಾಡುವುದು ನಿಮಗೆ ಇಷ್ಟ ಎಂದು ಪ್ರಶ್ನಿಸಿದಾಗ ತುಸು ಆಲೋಚನೆಗೆ ಇಳಿದರು ಅಪೂರ್ವ.

'ಯೋಗರಾಜ್ ಭಟ್, ಸಿಂಪಲ್ ಸುನಿ ಅವರಂತಹ ನಿರ್ದೇಶಕರ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದೆ. ಹಾಗೆಯೇ, ಒಳ್ಳೆಯ ಕಥೆ ಇಟ್ಟುಕೊಂಡು ಬರುತ್ತಿರುವ ಹೊಸ ನಿರ್ದೇಶಕರು, ಕಥೆಯನ್ನು ಸುಂದರವಾಗಿ ಹೇಳುವ ಶಕ್ತಿ ಇರುವ ನಿರ್ದೇಶಕರು ನನ್ನಲ್ಲಿ ಕುತೂಹಲ ಮೂಡಿಸುತ್ತಾರೆ' ಎಂದರು ಸಾವಧಾನವಾಗಿ.

'ಇಂಥ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯನ್ನು ಅವರೇ ಹುಟ್ಟಿಸುತ್ತಾರೆ! ಕಲಾವಿದರ ಕನಸುಗಳು ಎಂದಿಗೂ ನಿಲ್ಲುವುದಿಲ್ಲ. ಕಲಾವಿದನಲ್ಲಿನ ಕಲೆಯನ್ನು ಬಳಸಿಕೊಳ್ಳುವ ತಂಡದ ಜೊತೆ ಕೆಲಸ ಮಾಡಬೇಕು ಎಂಬ ಆಸೆಯಂತೂ ಇದ್ದೇ ಇರುತ್ತದೆ' ಎಂದರು.

**

ಅಯನದಲ್ಲಿ ನನ್ನ ಪಾತ್ರ ದಿವ್ಯಾ ಎಂಬ ಹೆಣ್ಣುಮಗಳದ್ದು. ನಾನು ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಾನು ಕೂಡ ದಿವ್ಯಾ ಆಗಿದ್ದೆ. ಈ ಸಿನಿಮಾದಲ್ಲಿ ಇರುವುದು ಒಂದು ತಾಜಾ ಅನಿಸುವ ಕಥೆ. ದಿವ್ಯಾ ಪಾತ್ರ ಬಹಳಷ್ಟು ಜನರಿಗೆ ಹತ್ತಿರುವಾಗುತ್ತದೆ. ಐ.ಟಿ. ಕ್ಷೇತ್ರದ ಎಂಜಿನಿಯರ್‌ಗಳ ಕಥೆ, ಅವರ ಸುಖ-ದುಃಖಗಳ ಬಗ್ಗೆ ಕನ್ನಡದಲ್ಲಿ ಆಗುತ್ತಿರುವ ಮೊದಲ ಸಿನಿಮಾ ಇದು.

-ಅಪೂರ್ವ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT