ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕ’ ಕೈಯಲ್ಲಿ ಝಳಪಿಸಿದ ಮಚ್ಚು!

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಪ್ಪು ದೇಹದ ಮಹಿಷಾಸುರನ ಬೃಹದಾಕಾರದ ದೇಹದ ಎದುರುಗಡೆ ಕಡುಗಪ್ಪು ಬಣ್ಣದ ವಿಜಯ್‌, ಬಿಳಿ ಪಂಚೆ ತೊಟ್ಟು, ಕೈಯಲ್ಲಿ ಮಾರುದ್ದದ ಮಚ್ಚು ಹಿಡಿದು ನಿಂತಿದ್ದರು. ಅವರ ಮುಖದಲ್ಲಿ ಎದುರಾಳಿಗಳನ್ನು ಕೊಚ್ಚಿ ಬಿಸಾಡುವ ಕೆಚ್ಚೆ ಎದ್ದು ಕಾಣುತ್ತಿತ್ತು. ಅದೇ ರೋಷದಲ್ಲಿ ಮುಂದಕ್ಕೆ ಬರುತ್ತಿದ್ದ ಹಾಗೆ ಎದುರಿಂದ ಓಡಿಬಂದ ಹೈದ ಇನ್ನೇನು ಕೈಲಿದ್ದ ಕತ್ತಿಯನ್ನು ಅವರ ಮೇಲೆ ಬೀಸಬೇಕು.... ಅಷ್ಟರಲ್ಲಿ ‘ಕಟ್‌’ ಎಂಬ ಧ್ವನಿ ಕೇಳಿಸಿತು. ವಿಜಯ್‌ ಮುಖದಲ್ಲಿ ರೋಷ ಮಾಯವಾಗಿ ಮುಗುಳುನಗೆ ಕಾಣಿಸಿಕೊಂಡಿತು.

ಅದು ಆರ್‌. ಚಂದ್ರು ನಿರ್ದೇಶನದ ‘ಕನಕ’ ಸಿನಿಮಾದ ಚಿತ್ರೀಕರಣ ಸ್ಥಳ. ಕ್ಲೈಮ್ಯಾಕ್ಸ್‌ಪೂರ್ವದ ಫೈಟಿಂಗ್‌ ಅನ್ನು ನಿರ್ದೇಶಿಸುವುದರಲ್ಲಿ ಚಂದ್ರು ಮಗ್ನರಾಗಿದ್ದರು. ಸತ್ಯ ಹೆಗಡೆ ತಲೆಕೆಳಗಾಗಿ ನೇತಾಡುತ್ತಿದ್ದ ಸಹನಟರನ್ನು ಭಿನ್ನ ಆ್ಯಂಗಲ್‌ನಿಂದ ಹೇಗೆ ಚಿತ್ರೀಕರಿಸಬಹುದು ಎಂದು ಯೋಜನೆ ಹಾಕುತ್ತಿದ್ದರು. ವಿನೋದ್‌ಗೆ ತಾವು ಸಂಯೋಜಿಸಿದ ಫೈಟ್‌ ಚೆನ್ನಾಗಿ ಬರುತ್ತಿರುವ ಖುಷಿ.

(ಆರ್‌. ಚಂದ್ರು)

ಈ ಗಡಿಬಿಡಿಯ ನಡುವೆಯೇ ತಂಡ ಪತ್ರಕರ್ತರ ಜತೆ ಮಾತಿಗೆ ಕುಳಿತಿತು. ‘ಕನಕ’ ನನ್ನ ನಿರ್ಮಾಣದ ಮೂರನೇ ಸಿನಿಮಾ. ಶುರುವಾಗಿ ಹತ್ತಿರ ಹತ್ತಿರ ವರ್ಷವಾಗುತ್ತ ಬಂತು. ಚಿತ್ರ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಒಂದೊಂದು ದೃಶ್ಯವನ್ನೂ ತುಂಬ ಸಿದ್ಧತೆ ನಡೆಸಿ ಚಿತ್ರೀಕರಿಸುತ್ತಿದ್ದೇವೆ. ಸಮಯ ಹಣ ಎಲ್ಲಕ್ಕಿಂತ ನಮಗೆ ಗುಣಮಟ್ಟ ಮುಖ್ಯ’ ಎಂದರು ಚಂದ್ರು.

ಈ ಚಿತ್ರದಲ್ಲಿ ಮುಖ್ಯಖಳನಟನಾಗಿ ರವಿಶಂಕರ್‌ ಕಾಣಿಸಿಕೊಂಡಿದ್ದರೆ ಅವರ ಸಹೋದರನಾಗಿ ಯುಗ ಚಂದ್ರು ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ ಅನ್ನು ಕೇರಳದಲ್ಲಿ ಚಿತ್ರೀಕರಿಸುವ ಆಲೋಚನೆಯಲ್ಲಿ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

‘ಚಂದ್ರು ಎಷ್ಟು ಒಳ್ಳೆಯ ನಿರ್ದೇಶಕನೋ ಅಷ್ಟೇ ಒಳ್ಳೆಯ ನಿರ್ಮಾಪಕರೂ ಹೌದು. ಆದ್ದರಿಂದಲೇ ಚಿತ್ರದ ಗುಣಮಟ್ಟದಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳದೇ ಇರಲು ಸಾಧ್ಯವಾಗಿದೆ’ ಎಂದು ಹೊಗಳಿದರು ವಿಜಯ್‌. ಈ  ಚಿತ್ರ ಮುಗಿದ ಮೇಲೆ ಕುಸ್ತಿಯನ್ನು ಆಧರಿಸಿದ ಇನ್ನೊಂದು ಚಿತ್ರವನ್ನೂ ನಾವೇ ಮಾಡಲಿದ್ದೇವೆ ಎಂಬ ಸುಳಿವನ್ನೂ ಅವರು ನೀಡಿದರು.

(ಸತ್ಯ ಹೆಗಡೆ)

‘ನಿರ್ದೇಶಕರು ಕಲ್ಪಿಸಿಕೊಂಡಂತೆ ಚಿತ್ರೀಕರಿಸುವುದು ಛಾಯಾಗ್ರಾಹಕನ ಕೆಲಸ. ನಾವು ಅಂದುಕೊಂಡಂತೆ ಇಲ್ಲಿವರೆಗೆ ಎಲ್ಲ ದೃಶ್ಯಗಳೂ ಚೆನ್ನಾಗಿ ಬಂದಿವೆ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಖುಷಿಯಿದೆ’ ಎಂದರು ಸತ್ಯ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT