ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಜೆಂಟ್‌, ಮಧ್ಯವರ್ತಿಗಳಿಗೆ ರೇರಾ ಮೂಗುದಾರ?

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೋಟು ರದ್ಧತಿಯ ಬಳಿಕ ತಟಸ್ಥವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆಯ ಹಾದಿಗೆ ಬರಲಿದೆ ಎನ್ನುವಷ್ಟರಲ್ಲೇ ರೇರಾ ಕಾಯ್ದೆ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ) ಅನುಷ್ಠಾನಗೊಂಡಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ವಿಶ್ಲೇಷಕರು (ರಿಯಾಲ್ಟಿ) ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿ ಜುಲೈ 10ರಿಂದ ರೇರಾ ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರದ ರೇರಾ ಕಾಯ್ದೆಯಲ್ಲಿರುವ ನಿಯಮಗಳು, ದಂಡ, ಪ್ರಾಧಿಕಾರ ರಚನೆ ಸೇರಿದಂತೆ ಎಲ್ಲವನ್ನೂ ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. 78 ಪುಟಗಳ ನಿಯಮಗಳನ್ನು ರೂಪಿಸಿರುವ ರಾಜ್ಯ ಸರ್ಕಾರ ಪ್ರಾಧಿಕಾರವನ್ನು ರಚನೆ ಮಾಡಿದೆ. ಅಪಾರ್ಟ್‌ಮೆಂಟ್‌ ಹಾಗೂ ಬಡಾವಣೆ ಯೋಜನೆಗಳ ನಿರ್ಮಾಣದಲ್ಲಿ ಶೇ. 60 ಕಾರ್ಯ ಪೂರ್ಣಗೊಂಡಿದ್ದಲ್ಲಿ ಅಂತಹ ಯೋಜನೆಗಳು ರೇರಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉಳಿದಂತೆ ಎಲ್ಲ ಯೋಜನೆಗಳು ರೇರಾ ವ್ಯಾಪ್ತಿಗೆ ಬರಲಿವೆ.

ರೇರಾದಿಂದ ಏಜೆಂಟ್‌ಗಳಿಗೆ ಸಂಕಷ್ಟ…

ರೇರಾ ಕಾಯ್ದೆ ಜಾರಿಗೂ ಮುನ್ನ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಶೇ 60ರಷ್ಟು ಅನಧಿಕೃತ ವ್ಯವಹಾರ ನಡೆಯುತ್ತಿತ್ತು. ರಿಯಲ್ ಎಸ್ಟೇಟ್ ಸಂಸ್ಥೆಗಳು, ಬಿಲ್ಡರ್‌ಗಳು, ಏಜೆಂಟರು ಕಂಪೆನಿ ಕಾಯ್ದೆ ಅಡಿ ನೋಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿದ್ದರು. ಇದೀಗ ಉದ್ಯಮದಲ್ಲಿ ತೊಡಗಿರುವ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳು (ಬ್ರೋಕರ್) ಕೂಡ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಬ್ರೋಕರ್‌ಗಳು ಮನೆ ಅಥವಾ ಫ್ಲ್ಯಾಟ್ ಖರೀದಿಸುವ ಗ್ರಾಹಕರಿಗೆ ಬಿಲ್ಡರ್‌ಗಳನ್ನು ಪರಿಚಯ ಮಾಡಿಸಿ, ಅವರ ಹೆಸರಿಗೆ ಸ್ವತ್ತನ್ನು ಕರಾರು ಮಾಡಿಕೊಟ್ಟು ಕಮಿಷನ್ ಪಡೆದು ಕೈತೊಳೆದುಕೊಳ್ಳುತ್ತಿದ್ದರು.

ಸರಿಯಾದ ಸಮಯಕ್ಕೆ ಬಿಲ್ಡರ್‌ಗಳು ಮನೆ ಅಥವಾ ಫ್ಲ್ಯಾಟ್ ನೀಡದಿದ್ದಾಗ ಗ್ರಾಹಕರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಹೊಸ ಕಾಯ್ದೆ ಅನ್ವಯ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಪ್ರವರ್ತಕ ಸಂಸ್ಥೆಗಳು ಮತ್ತು ಏಜೆಂಟ್‌ಗಳು ಕೂಡ ಸಮಾನ ಜವಾಬ್ದಾರರಾಗಿರುತ್ತಾರೆ ಎಂದು ‘ಸಿಬಿಆರ್‌ಇ ಕನ್ಸಲ್ಟಿಂಗ್’ ಅಧ್ಯಯನ ಸಂಸ್ಥೆಯ ನಿರ್ದೇಶಕ ರಾಮಿ ಕುಶಾಲ್ ಹೇಳುತ್ತಾರೆ. ಅವರು ರಿಯಲ್‌ ಎಸ್ಟೇಟ್‌ ಉದ್ಯಮದ ಬೇಡಿಕೆ, ಮಾರುಕಟ್ಟೆ ಕುರಿತು ವಿಶ್ಲೇಷಣೆ ಮಾಡುತ್ತಾರೆ.

ಪಾರದರ್ಶಕತೆ ಬರಲಿದೆ: ರೇರಾ ಕಾಯ್ದೆಯಿಂದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಪಾರದರ್ಶಕತೆ ಬರಲಿದೆ ಎಂದು ವಿಜಯನಗರದಲ್ಲಿ ರಿಯಲ್ ಎಸ್ಟೇಟ್ ಏಜೆನ್ಸಿ ನಡೆಸುತ್ತಿರುವ ಪಟವರ್ಧನ್ ಹೇಳುತ್ತಾರೆ. ಈ ಹಿಂದೆ ನಾನು ಯಾವುದೇ ನೋಂದಣಿ ಮಾಡಿಕೊಳ್ಳದೇ ವ್ಯವಹಾರ ನಡೆಸುತ್ತಿದ್ದೆ. ಆದರೆ ರೇರಾ ಕಾಯ್ದೆ ಜಾರಿಯಿಂದಾಗಿ ಇನ್ನು ಮುಂದೆ ಅನಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಗ್ರಾಹಕರಿಗೆ ಸ್ವತ್ತನ್ನು ಹಸ್ತಾಂತರಿಸುವವರೆಗೂ ಬ್ರೋಕರ್‌ಗಳು ಮತ್ತು ಏಜೆಂಟ್‌ಗಳ ಮೇಲೂ ಜವಾಬ್ದಾರಿ ಇರುತ್ತದೆ. ಈ ರೀತಿ ಮಾಡುವುದರಿಂದ ಉದ್ಯಮದಲ್ಲಿ ನಂಬಿಕೆ ಮತ್ತು ಪಾರದರ್ಶಕತೆ ಬೆಳೆಯುತ್ತದೆ. ಇದರಿಂದ ರಿಯಾಲ್ಟಿ ಉದ್ಯಮ ಅಭಿವೃದ್ಧಿ ಕಾಣುತ್ತದೆ ಎಂಬುದು ನನ್ನ ವಿಶ್ವಾಸ ಎನ್ನುತ್ತಾರೆ ಪಟವರ್ದನ್.

ರೇರಾ ಕಾಯ್ದೆಯಿಂದ ಏಜೆಂಟ್‌ ಮತ್ತು ಬ್ರೋಕರ್‌ಗಳಿಗೆ ನಷ್ಟವಾಗಲಿದೆ, ಇನ್ನು ಮುಂದೆ ಇವರ್ಯಾರು ಉದ್ಯಮದಲ್ಲಿ ಉಳಿಯುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಸುಳ್ಳು. ರೇರಾ ಕಾಯ್ದೆಯಲ್ಲಿ ಏಜೆಂಟ್‌ಗಳಿಗೆ ಅನ್ಯಾಯವಾಗುವಂತಹ ಅಂಶಗಳು ಇಲ್ಲ. ಬ್ರೋಕರ್‌ಗಳು ಮೊದಲು ಕಾಯ್ದೆಯನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು ಎಂದು ಪಟವರ್ಧನ್ ಸಲಹೆ ಮಾಡುತ್ತಾರೆ.

ಸಣ್ಣ ಪುಟ್ಟ ಬ್ರೋಕರ್‌ಗಳಿಗೆ ತೊಂದರೆ: ಅನಧಿಕೃತವಾಗಿ ರಿಯಾಲ್ಟಿ ಉದ್ಯಮದಲ್ಲಿ ತೊಡಗಿರುವ ಸಣ್ಣ ಪುಟ್ಟ ಏಜೆಂಟ್‌ಗಳಿಗೆ ರೇರಾ ಕಾಯ್ದೆ ಸವಾಲಾಗಿದೆ. ಏಕೆಂದರೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವುದು ಮತ್ತು ಮೂರು ತಿಂಗಳಿಗೊಮ್ಮೆ ‘ಪ್ರಾಧಿಕಾರಕ್ಕೆ ತೆರಳಿ ವರದಿ ನೀಡುವುದು ನಮಗೆ ತೊಂದರೆಯಾಗುತ್ತದೆ ಎಂದು ಯಶವಂತಪುರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಸೂರ್ಯಕುಮಾರ್ ಹೇಳುತ್ತಾರೆ. ಹತ್ತು ವರ್ಷಗಳಿಂದ ಆರಾಮಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೆ. ನೋಟು ರದ್ಧತಿ ಮತ್ತು ರೇರಾ ಕಾಯ್ದೆಯಿಂದಾಗಿ ಈ ಉದ್ಯಮದಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ’ ಎನ್ನುತ್ತಾರೆ ಅವರು.

ಗ್ರಾಹಕರ ಒಳಿತಿಗಾಗಿ ರೂಪಿಸಿರುವ ರೇರಾ ಕಾಯ್ದೆ ಜಾರಿಯಿಂದ ರಿಯಾಲ್ಟಿ ಉದ್ಯಮದಲ್ಲಿನ ಬ್ರೋಕರ್‌ಗಳು ಮತ್ತು ಏಜೆಂಟ್‌ಗಳಿಗೆ ಸ್ವಲ್ಪ ಮಟ್ಟಿನ ಹೊಡೆತ ಬಿದ್ದಿರುವುದು ಅವರ ಅಭಿಪ್ರಾಯಗಳಿಂದ ಗೊತ್ತಾಗುತ್ತದೆ. ಇದರ ಸ್ಪಷ್ಟ ಚಿತ್ರಣವನ್ನು ಕಾಣಬೇಕಾದರೆ ಒಂದೆರಡು ವರ್ಷ ಕಾಯಬೇಕು ಎಂದು ಸಿಬಿಆರ್‌ಇ ಕನ್ಸಲ್ಟಿಂಗ್‌ನ ರಾಮಿ ಕುಶಾಲ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT