ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಶ್ರೇಷ್ಠ ಭೌತಿಕತೆ- ಆ ಮೂರು ದಿನಗಳು -ಸಾಮಾಜಿಕ ಅಸಮಾನತೆ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರಗತಿಶೀಲತೆಯ ದೃಷ್ಟಿಯಿಂದ ಮುಮ್ಮುಖ ಚಲನೆಯಲ್ಲಿ ಸಾಗುತ್ತಿರುವ ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’, ‘ಸ್ವಚ್ಛ ಭಾರತ’ಮುಂತಾದ ಅಭಿಯಾನಗಳು ದೇಶದ ಅಭಿವೃದ್ಧಿಗೆ ಬೆಳಕಿನ ಸೂಡಿ ಹಿಡಿಯ ಹೊರಟಿವೆ. ಆದರೆ ‘ಸ್ತ್ರೀಯರ ಸ್ಥಾನಮಾನ ಹಾಗೂ ಅವಕಾಶ ಸಮತೆ’ಯ ವಿಚಾರದಲ್ಲಿ ಹಲವು ಪ್ರಶ್ನೆಗಳು ನಮ್ಮೆದುರು ನಿಲ್ಲುತ್ತವೆ. ವಸ್ತ್ರಸಂಹಿತೆ, ಸಾಮಾಜಿಕ ನಿರ್ಬಂಧಗಳು, ಕಡ್ಡಾಯ ವಿವಾಹ, ಮುಂತಾದ ಸಂಗತಿಗಳು ಹೆಣ್ಣಿನ ವ್ಯಕ್ತಿತ್ವ ಹಿಡಿಗೊಳಿಸುವಲ್ಲಿ ಪ್ರಮುಖವಾಗಿವೆ. ಭಾರತದಲ್ಲಿ ಹಳ್ಳಿ ಪಟ್ಟಣವೆನ್ನದೇ ಎಲ್ಲ ಕಡೆಗಳಲ್ಲೂ ಸ್ತ್ರೀಯರ ಸ್ಥಾನಮಾನದಲ್ಲಿ ಇಂದಿಗೂ ಅಂತಹ ಬದಲಾವಣೆ ಆಗಿಲ್ಲ. ಇದಕ್ಕೆ ಉದಾಹರಣೆಗಳು ಹಲವು.  ವಿಧವೆ ಪಟ್ಟ, ಋತುಮತಿಗೆ ತಿಂಗಳ ಮೂರು ದಿನಗಳ ಅಸ್ಪೃಶ್ಯತೆ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ... ಹೀಗೆ ಪಟ್ಟಿ ಬೆಳೆಯುತ್ತದೆ.

ಋತುಮತಿಯಾದವಳನ್ನು ಮೂರು ದಿನಗಳವರೆಗೆ ಮನೆಯಿಂದ ಹೊರಗೆ ಇಡುವ ಪದ್ಧತಿ ಭಾರತದ, ಅದರಲ್ಲೂ ಹಿಂದೂ ಸಂಸ್ಕೃತಿಯ ಪುರಾತನ ಸಂಪ್ರದಾಯ. ಆ ಪದ್ಧತಿಯು ಇಂದಿಗೂ ಆಚರಣೆಯಲ್ಲಿದೆ. ಭಾರತದಂತೆ ಹಿಂದೂಗಳೇ ಅಧಿಕ ಸಂಖ್ಯೆಯಲ್ಲಿರುವ ನೇಪಾಳ ಇದೀಗ ಹೊಸ ಕಾಯ್ದೆಯನ್ನು ಜಾರಿ ಮಾಡಿದೆಯಂತೆ. ಅದೆಂದರೆ, ಮಹಿಳೆಯರನ್ನು ಈ ಮೂರು ದಿನಗಳು ಒತ್ತಾಯದಿಂದ ಮನೆಯಿಂದ ಹೊರಗಿಡುವುದು ಅಪರಾಧ, ಹಾಗೊಮ್ಮೆ ಇರುವಂತೆ ಹೇಳಿದರೆ ಅಂಥವರಿಗೆ ಮೂರು ತಿಂಗಳ ಶಿಕ್ಷೆ ಇಲ್ಲವೇ ಮೂರು ಸಾವಿರ ರೂಪಾಯಿ ದಂಡ ವಿಧಿಸುವ ಕಾಯ್ದೆ ಅದು. ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಅಂಗೀಕಾರ ದೊರೆತಿದೆಯಂತೆ. ಋತುಮತಿಯಾದ ಹೆಣ್ಣನ್ನು ಅಸ್ಪೃಶ್ಯಳಂತೆ ಕಾಣುವುದು, ಅಸ್ಪೃಶ್ಯತೆಯ ಇನ್ನೊಂದು ಮುಖವೇ ಆಗಿದೆ. ಈ ಕಾಯ್ದೆ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಜಾತ್ಯತೀತ ಭಾರತಕ್ಕೂ ಆದರ್ಶಪ್ರಾಯವಾದರೆ ಒಳಿತು.

//ಆದರೆ ಭಾರತದಲ್ಲಿ ಈ ಪದ್ಧತಿಯನ್ನು ಹಿಂದೂಗಳಷ್ಟೇ ಅಲ್ಲದೆ ಕೆಲವು ಅನ್ಯ ಧರ್ಮೀಯರೂ ಅನುಸರಿಸುತ್ತಿರುವುದು ಇನ್ನೂ ಸೋಜಿಗ. ಹೀಗಾಗಿ ಭಾರತದಲ್ಲಿ ಸ್ತ್ರೀ ಸ್ಥಾನದ ಸ್ಪಷ್ಟ ಚಿತ್ರಣ ದೊರೆಯುತ್ತದೆ ಅಲ್ಲವೇ?// ಹಿಂದೆಲ್ಲಾ ಪ್ರತಿ ತಿಂಗಳ ಆ ಮೂರು ದಿನಗಳ ಕಾಲ ಅಮ್ಮಂದಿರೆಲ್ಲಾ ಕಾಗೆ ಮುಟ್ಟಿತೆಂದು ಹೊರಗೆ ಕುಳಿತುಕೊಳ್ಳುತ್ತಿದ್ದರು.ಆ ಮೂರು ದಿನಗಳು ಅವರಿಗೆ ಮನೆಗೆಲಸದ ಹೊರೆಯಿಂದ ಮುಕ್ತಿ ಸಿಗುತ್ತಿತ್ತು ಎಂದರೆ ಅದು ಸುಳ್ಳೇ ಆಗಿರುತ್ತಿತ್ತು. ಹೊಲ ಗದ್ದೆಗಳ ಕೆಲಸಗಳ ಒತ್ತಡ ಕಡಿಮೆಯಿರಲಿಲ್ಲ.ಅದು ಹೇಗೋ ಏಗುತ್ತ ಬೀಳುತ್ತಾ ಬದುಕ ಸವೆಸಿದ ಅವರೆಲ್ಲಾ ಪುರುಷ ಪ್ರಧಾನತೆಯ ದಮನಕಾರಿ ಪ್ರವೃತ್ತಿಯಿಂದ ಸ್ವಂತಿಕೆಯನ್ನು ವ್ಯಕ್ತಗೊಳಿಸಲು ಸಾಧ್ಯವಾಗದೇ ಮಹಾನ್ ಸಹನಶೀಲ ಮಹಿಳೆಯರು ಎಂದೆನ್ನಿಸಿಕೊಂಡರು. ಇಂದಿಗೂ ಈ ಪದ್ಧತಿ ಬುಡಸಮೇತವಾಗಿ ನಿರ್ನಾಮವಾಗಿಲ್ಲ. ಅನೇಕ ಸಮುದಾಯಗಳಲ್ಲಿ, ಹಳ್ಳಿಗಳಲ್ಲಿ ಜೀವಂತವಾಗಿದೆ.

ಇನ್ನು ಮನೆಗಳಲ್ಲಿ ಸ್ವಚ್ಛತೆಯ ಕಾರಣ ನೀಡಿ ಋತುಮತಿಯಾದ ಹೆಣ್ಣು ಆ ಮೂರುದಿನಗಳು ಅನ್ಯರ ಸಂಗದಿಂದ ಹೊರಗುಳಿಯುವಂತೆ ಮಾಡುವ ಪ್ರಯತ್ನವಾಗಿತ್ತೆಂದೋ, ಪತಿ–ಪತ್ನಿ ಆ ಸಂದರ್ಭದಲ್ಲಿ ಕೂಡುವುದು ಅಹಿತಕರವಾದ ಕಾರಣ ಆ ಹಿನ್ನೆಲೆಯಲ್ಲಿ ಹುಟ್ಟಿದ ಸಂಪ್ರದಾಯವೆಂದೋ ಹೇಳಿ ಸಂಪ್ರದಾಯತ್ವವನ್ನು ಎತ್ತಿಹಿಡಿಯುವ ಮತ್ತು ಇಂತಹ ಹುರುಳಿಲ್ಲದ ಕಾರಣ ನೀಡಿ ಅದನ್ನು ಸಮರ್ಥಿಸುವ ಪ್ರತಿಪಾದಕರು ಇಲ್ಲದಿಲ್ಲ.

ಹಾಗಿದ್ದರೆ ಅವಿವಾಹಿತ ಮುಗ್ಧ ಬಾಲೆಯರಿಗೂ ಈ ಶಿಕ್ಷೆಯೇಕೆ? ಎಂಬ ಪ್ರಶ್ನೆಗೆ ಉತ್ತರವಿದೆಯೇ? ಅವರೇನೇ ವಾದಿಸಿದರೂ ಅದರ ಮೂಲ ಕಾರಣ ಸ್ತ್ರೀಯ ವ್ಯಕ್ತಿತ್ವವನ್ನು ಕೀಳರಿಮೆಗೆ ಗುರಿಪಡಿಸುವುದೇ ಆಗಿತ್ತೆಂಬುದು ಅಷ್ಟೇ ಸತ್ಯ. ಗಂಡೇನೂ ಪ್ರಾಣಿಯಲ್ಲ. ಅವನಿಗೂ ಪತ್ನಿಯ ದೈಹಿಕ ಬಾಧೆಗಳ ಅರಿವಿರುವುದು. ಅಂತಹ ಹೆಣ್ಣನ್ನು ಭೋಗಿಸಲು ಆತನೇನು ಮತಿಭ್ರಮಣನೇ? ಎಂಬ ಪ್ರಶ್ನೆ ಕೇಳಬೇಕಾದೀತು. ಹಾಗಿದ್ದ ಮೇಲೆ ಮುಟ್ಟಾದ ಹೆಣ್ಣನ್ನು ಮನೆಯಿಂದ ಹೊರಗಿಡುವುದು ಅವೈಜ್ಞಾನಿಕ. ರೋಗಿಯನ್ನು ಒಳಗಿಟ್ಟು ಶುಶ್ರೂಷೆ ಮಾಡುವ ಸಮಾಜ ಮುಟ್ಟಾದ ಹೆಣ್ಣನ್ನು ರೋಗಾಣುಗಳ ಗೂಡೆಂದು ಕರೆದು ಹೊರಗಿಡುವುದು ಪ್ರತ್ಯೇಕತೆಯ ತಂತ್ರವೇ ಅಲ್ಲವೇ? ಇನ್ನು ಬಹಿಷ್ಠೆಯಾದ ಹೆಣ್ಣು ದೇವಾಲಯಗಳ ಒಳಹೋಗುವಂತಿಲ್ಲ. ಈ ಆಚಾರ ನಮ್ಮಲ್ಲಿ ಪರಂಪರಾಗತವಾಗಿ ರೂಢಿಯಲ್ಲಿದೆ. ನೈರ್ಮಲ್ಯದ ಕಾರಣ ಸರಿಯಾದರೂ ಪುರುಷ ಶರೀರವೂ ಅನೇಕ ತ್ಯಾಜ್ಯಗಳ ವಿಸರ್ಜಿಸುವುದಿಲ್ಲವೇ? ಬೆವರು ಕೂಡಾ ಅಂತಹ ಮಲಿನವೇ ಅಲ್ಲವೇ?

ಬಹಿಷ್ಠೆಯಾದ ಚಿಕ್ಕ ಬಾಲಕಿಯರನ್ನು ಹಿಂದೆ ಮನೆಯಿಂದ ಹೊರಗೆ ಕುಳ್ಳಿರಿಸುತ್ತಿದ್ದರು. ಇಂದಿಗೂ ಕೆಲವೆಡೆ ಆ ಪದ್ಧತಿ ಜೀವಂತವಿದೆ. ಇನ್ನು ಚಿಕ್ಕ ಬಾಲೆಯರಿಗೆ ತಿಂಗಳ ಮುಟ್ಟು ನಿಜಕ್ಕೂ ಕಿರಿಕಿರಿಯ ಸಂಗತಿ. ಅಂತಹ ಎಳೆಯ ಪ್ರಾಯದ ಮಗುವನ್ನು ಬಾಲ್ಯದಲ್ಲಿಯೇ ‘ನೀನು ಹೊರಗೆ ಕೂತು ಮೂರುದಿನಗಳನ್ನು ಕಳೆಯಬೇಕು’ ಎಂದರೆ ಸಹಜವಾಗೇ ಆಕೆಯ ಮಾನಸಿಕ ಜಗತ್ತು ಏರುಪೇರಾಗುತ್ತದೆ. ತಾನೇನು ತಪ್ಪುಮಾಡದೇ ಇದ್ದರೂ ಹೆತ್ತವರ ನಡುವೆ ಹುದುಗಿ ಮಲಗುತ್ತಿದ್ದ ಕಂದ ಪ್ರಾಯದ ಪ್ರಕೃತಿ ಸಹಜ ಪ್ರಕ್ರಿಯೆಗೆ ತೆರೆದುಕೊಳ್ಳುವುದು ಅನಿವಾರ್ಯ. ಈ ನಿಸರ್ಗದ ಸಹಜ ಪ್ರಕ್ರಿಯೆಗೆ ಹುಡುಗಿ ಸಿದ್ಧಳಾದರೂ ಈ ಸಮಾಜದ ಕಟ್ಟಳೆಗಳಿಗೆ ಆ ಮುಗ್ಧ ಹೃದಯ ಬಲಿಪಶುವಾಗುವುದು ಎಷ್ಟು ನ್ಯಾಯ? ತನ್ನನ್ನು ಅಸ್ಪೃಶ್ಯಳಂತೆ ನಡೆಸಿಕೊಳ್ಳುವ ಜನರ ಮುಂದೆ ಹೊರಗೆ ನಿಲ್ಲುವ ಆ ಸಮಯ ಬಂತೆಂದರೆ ಆಕೆ ಕುಗ್ಗಿ ಹೋಗುತ್ತಾಳೆ.

ಸದೃಢ ಮನಸ್ಸು ಕ್ರಮೇಣ ದುರ್ಬಲಗೊಳ್ಳಬಹುದು. ಇವೆಲ್ಲವೂ ಉದ್ದೇಶಪೂರ್ವಕ ಕಟ್ಟಳೆಗಳೆಂಬುದು ಗೋಚರಿಸುತ್ತದೆ. ಚಿಕ್ಕ ಮಗುವಿಗೆ ಋತುಸ್ರಾವದ ಬಗ್ಗೆ ಅನುಭವವಿಲ್ಲದ ಮೊದಲ ಹಂತ ಅದು. ಬಿಂದಾಸ್‌ ಆಗಿ ಬದುಕುತ್ತಿದ್ದ ಹೆಣ್ಣು ಮಗು ಕ್ರಮೇಣ ಹೆಣ್ಣಾಗುವ, ಹೆಣ್ಣಿನ ನಯವಿನಯ ಆವಾಹಿಸಿಕೊಳ್ಳುವ ಸಮಯ.ಆಗ ತಿಂಗಳು ತಿಂಗಳು ಆ ದಿನಗಳ ಕಳೆಯುವುದೆಂದರೆ ಎಂತಹ ಹಿಂಸೆ. ಮತ್ತು ಆ ಪ್ರಾಯದಲ್ಲಿ ಅದು ಎಲ್ಲರಿಗೂ ಮೂರು ದಿನಗಳಿಗೆ ಸೀಮಿತವಾಗಿರುವುದಿಲ್ಲ. ಏಳೆಂಟು ದಿನಗಳಾದರೂ ನೋವು, ಹಿಂಸೆ, ಅಸಹಾಯಕತೆ ಅನುಭವಿಸಲೇಬೇಕು. ಅದನ್ನೂ ತಿಂಗಳು ತಿಂಗಳೂ ಉಣ್ಣಬೇಕು. ಯಾರ ಹತ್ತಿರವೂ ಹೇಳಿಕೊಳ್ಳದೇ ನುಂಗುತ್ತಾ ನವೆಯುತ್ತಾ ಹೆಣ್ಣು ಮಕ್ಕಳೂ ಅದು ಹೇಗೆ ಬದುಕು ಸವೆಯುತ್ತಾರೆ, ಪಾಪ. ಆದರೆ ಕ್ರಮೇಣ ಆ ಚಕ್ರಕ್ಕೆ ಹೊಂದಿಕೊಳ್ಳುತ್ತಲೇ ಹೋದರೂ ಅದು ದೈಹಿಕ ಕೀಳರಿಮೆ ಜೊತೆಗೆ ಮಾನಸಿಕ ಖಿನ್ನತೆಯನ್ನೂ ಮೂಡಿಸುತ್ತವೆ.

ಇಂತಹ ದೈಹಿಕ ಪೀಡನೆಯ ಆ ಸಮಯದಲ್ಲಿ ಸಮಾಜದ ಗೊಡ್ಡು ಸಂಪ್ರದಾಯಗಳು ಆಕೆಯ ವ್ಯಕ್ತಿತ್ವವನ್ನು ಪ್ರಫುಲ್ಲಿತಗೊಳ್ಳಲು ಬಿಡದೆ ಸಂಕೋಲೆಗಳಿಂದ ಬಂಧಿಸಬಯಸುವುದು ಎಷ್ಟು ಸಮಂಜಸ? ಹೆಣ್ಣು ನಿಸರ್ಗದ ಸುಂದರ ಸೃಷ್ಟಿ, ಆಕೆ ಪ್ರಕೃತಿ. ಹೊರುವ ಹೆರುವ ಸಾಮರ್ಥ್ಯ ಇರುವವಳು. ತಾಳಿಕೆ ಸಹನೆ ಇತ್ಯಾದಿ ಇತ್ಯಾದಿ... ಆಕೆಯ ಬಗ್ಗೆ ಉಪಮೆ ರೂಪಕಗಳು ಹೇರಳ. ಹೋದಲ್ಲಿ ಬಂದಲ್ಲಿ ಇವುಗಳ ಕೇಳಿದಾಗಲೆಲ್ಲಾ ಹೆಣ್ಣು ಹಿಗ್ಗುತ್ತಾಳೆ.ಯಾಕೆಂದರೆ ಪ್ರಕೃತಿಯ ದೃಷ್ಟಿಯಲ್ಲಿ ಪುರುಷನಿಗಿಂತ ಸ್ತ್ರೀ ಶ್ರೇಷ್ಠಳು. ಆದರೆ ಅದೇ ಸಾಮಾಜಿಕ ಕಟ್ಟಳೆಗಳಿಂದ ಪ್ರಕೃತಿಯ ಪಡಿಪಾಟಲೋ ಆಕೆ ಮಾತ್ರ ಬಲ್ಲಳು. ಹೀಗಾಗಿ ಆಕೆಯ ಪರಿಪೂರ್ಣ ವ್ಯಕ್ತಿತ್ವ ಪ್ರಫುಲ್ಲಿಸಲು ಬೇಕಾದ ಅಗತ್ಯತೆಯನ್ನು ಇನ್ನೊಂದು ಹೆಣ್ಣು ಅರ್ಥೈಸಿಕೊಂಡು ಆಕೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.  ಈ ವಿಚಾರದಲ್ಲಿ ಪುರುಷ ಕೂಡ ಹೆಗಲೆಣೆಯಾಗಿ ನಿಂತಲ್ಲಿ   ಸರ್ವತೋಮುಖ ಅಭಿವೃದ್ದಿಯ ಕನಸು ನನಸಾಗಬಹುದು.

ನಾಗರೇಖಾ ಗಾಂವಕರ, ಉಪನ್ಯಾಸಕಿ, ಸರಕಾರಿ ಪ. ಪೂರ್ವ ಕಾಲೇಜು ದಾಂಡೇಲಿ, ಹಳಿಯಾಳ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಮೊ.8277634293

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT