ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಯೋಜನೆಗಳು ಬರೀ ರಾಜಕೀಯ ಗಿಮಿಕ್‌ಗಳಾಗದಿರಲಿ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜನರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸಲು ಬೆಂಗಳೂರಿನ 101 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ತಮಿಳುನಾಡಿನಲ್ಲಿ ಈ ಹಿಂದಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು 2013ರಲ್ಲಿ ಆರಂಭಿಸಿದ ‘ಅಮ್ಮಾ ಕ್ಯಾಂಟೀನ್’ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಿದೆ.

2016ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ ನಿಚ್ಚಳ ಬಹುಮತ ಗೆದ್ದುಕೊಳ್ಳಲು ಅಮ್ಮಾ ಕ್ಯಾಂಟೀನ್ ಜನಪ್ರಿಯತೆಯೂ ಕಾರಣವಾಗಿತ್ತು. ಆದರೆ ಇತ್ತೀಚೆಗೆ ಹಣಕಾಸು ಸಮಸ್ಯೆಯಿಂದಾಗಿ ಅನೇಕ ಅಮ್ಮಾ ಕ್ಯಾಂಟೀನ್‌ಗಳನ್ನು ಮುಂದುವರಿಸಿಕೊಂಡು ಹೋಗಲು ಚೆನ್ನೈ ಕಾರ್ಪೊರೇಷನ್‌ಗೆ ಕಷ್ಟವಾಗುತ್ತಿದೆ ಎಂಬಂತಹ ವರದಿಗಳೂ ಪ್ರಕಟವಾಗಿವೆ.ಇಂತಹ ಸಂದರ್ಭದಲ್ಲಿ ರಾಜ್ಯದಲ್ಲೂ ಅಮ್ಮಾ ಕ್ಯಾಂಟೀನ್ ಮಾದರಿಯ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗುತ್ತಿವೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿವೆ. ಹೀಗಾಗಿ, ರಾಜಕೀಯ ಲಾಭ ಗಳಿಸುವ ಉದ್ದೇಶ ಇಲ್ಲಿರುವುದು ಸ್ಪಷ್ಟ. ‘ಕ್ಯಾಂಟೀನ್ ಆರಂಭಿಸಲು ಆತುರ ಮಾಡಿದರು ಎಂದು ಕೆಲವರು ದೂರಿದ್ದಾರೆ. ಬಡವರಿಗೆ ಊಟ ಕೊಡುವುದು ನಮ್ಮ ಬದ್ಧತೆ. ಬಡವರ ಕಾರ್ಯಕ್ರಮ ವಿಳಂಬವಾಗಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈದ್ಧಾಂತಿಕ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಇಂತಹ ಸಮರ್ಥನೆಗಳು ಏನೇ ಇದ್ದರೂ ಇದರ ಹಿಂದಿರುವ ರಾಜಕೀಯ ಅರ್ಥವಾಗುವಂತಹದ್ದೇ. ಇಂದಿರಾ ಕ್ಯಾಂಟೀನ್ ಎಂಬಂಥ ಹೆಸರಿಡುವುದರಲ್ಲೇ ಈ ರಾಜಕೀಯ ಗಿಮಿಕ್ ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ.

ವಂಶಾಡಳಿತದ ಪರಂಪರೆಯ ಗುಂಗಿನಿಂದ ಹೊರಬರಲು ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಸಾಧ್ಯವಾಗದಿರುವುದು ವಿಷಾದನೀಯ. ಇನ್ನು ಇಂದಿರಾ ಕ್ಯಾಂಟೀನ್ ಆರಂಭವಾಗುವ ಮೊದಲೇ ಜೆಡಿಎಸ್ ಮುಖಂಡ ಎಚ್. ಡಿ. ದೇವೇಗೌಡ ಹೆಸರಲ್ಲಿ ‘ನಮ್ಮ ಅಪ್ಪಾಜಿ’ ಕ್ಯಾಂಟೀನ್ ಒಂದನ್ನು ಜೆಡಿಎಸ್ ಶಾಸಕ ಟಿ. ಎ. ಶರವಣ ಅವರು ಪೈಪೋಟಿಯಲ್ಲಿ ಈ ಮೊದಲೇ ಆರಂಭಿಸಿದ್ದಾರೆ. ಬೆಂಗಳೂರಿನಾದ್ಯಂತ ಇಂತಹ 27 ಕ್ಯಾಂಟೀನ್‌ಗಳನ್ನು ತೆರೆಯುವ ಯೋಜನೆ ಪ್ರಕಟಿಸಿದ್ದಾರೆ. ಬಡವರ ಹೆಸರಲ್ಲಿ ಮಾಡಲಾಗುವ ಇಂತಹ ರಾಜಕೀಯಗಳು, ಉದ್ದೇಶದ ಪ್ರಾಮಾಣಿಕತೆಯನ್ನು ಶಂಕೆಗೀಡುಮಾಡುತ್ತವೆ.

ಬಜೆಟ್‌ಗೆ ಭಾರಿ ಹೊರೆಯಾಗುವ ಇಂತಹ ಜನಪ್ರಿಯ ಯೋಜನೆಗಳನ್ನು ಅರ್ಥಶಾಸ್ತ್ರಜ್ಞರು ಟೀಕಿಸುತ್ತಲೇ ಬಂದಿದ್ದಾರೆ. ಹೀಗಿದ್ದೂ ರಾಷ್ಟ್ರದಾದ್ಯಂತ ಒಂದಾದ ಮೇಲೇ ಒಂದರಂತೆ ಅನೇಕ ರಾಜ್ಯಗಳು ಈ ಮಾದರಿಯನ್ನು ಅನುಕರಿಸುತ್ತಿವೆ. ವಾಸ್ತವವಾಗಿ 2011ರಲ್ಲೇ ಮೊದಲ ಬಾರಿಗೆ ಜಾರ್ಖಂಡ್‌ನ ಆಗಿನ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ‘ಮುಖ್ಯಮಂತ್ರಿ ದಾಲ್ ಭಾತ್ ಯೋಜನಾ’ ಹೆಸರಲ್ಲಿ 370 ಕೇಂದ್ರಗಳನ್ನು ಆರಂಭಿಸಿದ್ದರು. ಆದರೆ ಇವು ಅಮ್ಮ ಕ್ಯಾಂಟೀನ್‌ನಷ್ಟು ಜನಪ್ರಿಯವಾಗಲಿಲ್ಲ. ನಂತರ ಹಣವಿಲ್ಲದೆ ಬಹುತೇಕ ಮುಚ್ಚಿಹೋಗಿದ್ದವು.

ಕಳೆದ ವರ್ಷ ಜನವರಿಯಲ್ಲಿ ಸರ್ಕಾರ ಇವನ್ನು ಪುನರ್ ಆರಂಭಿಸಿದೆ. 2016ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲೂ ಇಂತಹ ಯೋಜನೆ ಆರಂಭವಾಗಿದ್ದು ‘ಅನ್ನಪೂರ್ಣ ರಸೋಯಿ’ ಎಂದು ಹೆಸರಿಡಲಾಗಿದೆ. ಒಡಿಶಾದಲ್ಲಿ ‘ಆಹಾರ’ ಕೇಂದ್ರಗಳಿವೆ. ಆಂಧ್ರದಲ್ಲಿ ಎನ್‌ಟಿಆರ್ ಅಣ್ಣಾ ಕ್ಯಾಂಟೀನ್‌ಗಳು, ನೂರಾರು ಸರ್ಕಾರಿ ಉದ್ಯೋಗಿಗಳಿಗೆ ಊಟ ತಿಂಡಿ ನೀಡುತ್ತಿವೆ. ಮಧ್ಯಪ್ರದೇಶದಲ್ಲಿ ‘ದೀನ್ ದಯಾಳ್ ಕಿಚನ್‌’ಗಳಿವೆ. ಇತ್ತೀಚೆಗೆ ಗುಜರಾತ್ ಸರ್ಕಾರ ಸಹ ಸಬ್ಸಿಡಿ ಊಟ ನೀಡಲು ಮುಂದಾಗಿದೆ. ಈ ಬಗ್ಗೆ 2017 –18ರ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ವಲಸೆ ಕಾರ್ಮಿಕರಿಗಾಗಿ ಈ ಯೋಜನೆ ಮೀಸಲು ಎನ್ನಲಾಗಿದೆ.

ನವೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅನೇಕ ನಗರಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಉತ್ತರ ಪ್ರದೇಶ ಇನ್ನೂ ಮುಂದೆ ಹೋಗಿ ‘ಪ್ರಭು ಕಿ ರಸೋಯಿ’ ಆರಂಭಿಸಿದೆ. ಇಲ್ಲಿ ಬಡವರಿಗೆ ಉಚಿತ ಊಟ ನೀಡಲಾಗುವುದಂತೆ. ಜೊತೆಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಪೂರೈಸುವ ‘ಅನ್ನಪೂರ್ಣ ಭೋಜನಾಲಯ’ಗಳನ್ನೂ ಆರಂಭಿಸುವ ಯೋಜನೆ ಪ್ರಕಟಿಸಿದೆ.

ಸಮಾಜ ಕಲ್ಯಾಣ ಉಪಕ್ರಮಗಳನ್ನು ಜನಪ್ರಿಯ ರಾಜಕೀಯ ಗಿಮಿಕ್‌ಗಳಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಇಲ್ಲೆಲ್ಲಾ ಸುವ್ಯಕ್ತ. ನಗರೀಕರಣ ಪ್ರಕ್ರಿಯೆ ಭಾರತದಲ್ಲಿ ತೀವ್ರಗೊಳ್ಳುತ್ತಿರುವಂತೆಯೇ ನಗರಗಳಲ್ಲಿ ವಾಸಿಸುವ ಬಡವರ ಸಂಖ್ಯೆಯೂ ಸಹಜವಾಗಿಯೇ  ಹೆಚ್ಚಾಗುತ್ತಿದೆ. ಹೀಗಾಗಿ ನಗರಗಳ ಬಡವರ ಅಪೌಷ್ಟಿಕತೆ, ಹಸಿವು ನಿಯಂತ್ರಣಕ್ಕೆ ಇಂತಹ ಕ್ಯಾಂಟೀನ್‌ಗಳು ನೆರವಾಗುತ್ತವೆ ಎಂಬುದು ಸರಿ. ಆದರೆ ಅನೇಕ ಕಡೆ ಮಧ್ಯಮವರ್ಗದವರೂ ಇಂತಹ ಕ್ಯಾಂಟೀನ್‌ಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬುದೂ ನಿಜ.

ಅನೇಕ ಕಡೆ ಬಡವರು ನಡೆಸುವ ಸಣ್ಣ ಸಣ್ಣ ಬೀದಿಬದಿ ಆಹಾರ ವ್ಯಾಪಾರಿಗಳ ಉದ್ಯೋಗಳನ್ನು ಇಂತಹ ಕ್ಯಾಂಟೀನ್‌ಗಳು ಕಸಿದುಕೊಳ್ಳುತ್ತವೆ ಎಂಬ ಮಾತೂ ಇದೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಭ್ರಷ್ಟಾಚಾರ ನುಸುಳುವುದಿಲ್ಲ ಎಂದು ಹೇಳಲು ಯಾವ ಗ್ಯಾರಂಟಿಯೂ ಇಲ್ಲ. ಈ ಬಗ್ಗೆ ಸರ್ಕಾರ ಹೆಚ್ಚು ಸಂವೇದನಾಶೀಲವಾಗಿರಬೇಕು. ಬಡವರನ್ನು ನೇರವಾಗಿ ತಲುಪಬಹುದಾದ ಇಂತಹ ಯೋಜನೆಗಳನ್ನು ವೃತ್ತಿಪರ ದಕ್ಷತೆಯಿಂದ ನಡೆಸುವುದು ಅವಶ್ಯ.

ನಗರ ಬಡವರ ಅಪೌಷ್ಟಿಕತೆ ನಿವಾರಣೆಗೆ ಇಂತಹ ಕ್ಯಾಂಟೀನ್‌ಗಳು ನೆರವಾಗುವುದಾದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೇಲೆ ಬೀಳಬಹುದಾದ ವೆಚ್ಚವೂ ಕಡಿಮೆಯಾಗಬಹುದು. ಹೀಗಾಗಿ ಯೋಜನೆಗಳು ಮಧ್ಯದಲ್ಲೇ ನಿಲ್ಲದಂತೆ ಸುಸ್ಥಿರವಾಗಿ ಮುಂದುವರಿಸಿಕೊಂಡು ಹೋಗುವ ಸವಾಲುಗಳನ್ನು ನಿರ್ವಹಿಸುವುದೂ ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT