ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನುವಂಶಿಕ ಕಾಯಿಲೆಗಳಿಗೆ ಜೈವಿಕ ತಂತ್ರಜ್ಞಾನದ ಕತ್ತರಿ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಿಜ್ಞಾನದ ಹಾದಿಯಲ್ಲಿ ಆಗೊಮ್ಮೆ ಈಗೊಮ್ಮೆ ಊಹೆಗೂ ಮೀರಿದ ಆವಿಷ್ಕಾರಗಳು ಹೊರಹೊಮ್ಮುತ್ತವೆ. ಅವು ತಮ್ಮಷ್ಟಕ್ಕೆ ತಾವೇ ಆಕಸ್ಮಿಕವಾದ ಆವಿಷ್ಕಾರಗಳಲ್ಲ. ನ್ಯೂಟನ್ ಹೇಳಿದಂತೆ – ‘ನಾನು ದೈತ್ಯರ ಹೆಗಲ ಮೇಲೆ ನಿಂತಿದ್ದೇನೆ, ಹಾಗಾಗಿ ದೂರದೃಷ್ಟಿ’ ಎನ್ನುವ ಮಾತು ಈ ಶೋಧಗಳಿಗೆ ಅನ್ವಯಿಸುತ್ತದೆ.

ನಡೆದುಬಂದ ಹಾದಿಯೇ ನಮ್ಮ ದಿಕ್ಕನ್ನು ಧುತ್ತೆಂದು ಬದಲಾಯಿಸುತ್ತದೆ. ವಿಜ್ಞಾನದ ಪ್ರಗತಿಯಂತೂ ನಿತ್ಯನೂತನವಾದುದು. ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲ್ಯಾಂಕ್ ಹೇಳಿದಂತೆ - Science advances one funeral at a time. ಹಳೆಯದನ್ನು ಹೊಸಕಿ ಹಾಕಿ, ಹೊಸದು ಹೊರಹೊಮ್ಮುತ್ತದೆ. ಈ ನಿತ್ಯನೂತನ ಬೆಳವಣಿಗೆಯಲ್ಲಿ ಕೆಲವು ಐತಿಹಾಸಿಕ ಮೆಟ್ಟಿಲುಗಳಾಗಿರುತ್ತವೆ. ಇಂತಹ ಸಾಲಿಗೆ ಸೇರಿಸಬಹುದಾದ ಹೊಸ ವೈಜ್ಞಾನಿಕ ಸಾಧನೆ ಪ್ರಬಂಧ ಕಳೆದ ವಾರ ‘ನೇಚರ್’ ನಿಯತಕಾಲಿಕದಲ್ಲಿ ಪ್ರಕಟವಾಯಿತು. ಅದು, ಆನುವಂಶಿಕ ಕಾಯಿಲೆಗಳನ್ನು ಭ್ರೂಣದ ಮೊದಲ ಹಂತದಲ್ಲಿಯೇ ಇಲ್ಲವಾಗಿಸುವ ಜಾದೂ ಕುರಿತಾದುದು.

ಭ್ರೂಣದ ಮೊದಲ ಹಂತದಲ್ಲಿಯೇ ಕಾಯಿಲೆಗಳನ್ನು ಇಲ್ಲವಾಗಿಸುವುದು ಎಂದರೆ, ವೀರ್ಯಾಣು ಮತ್ತು ಅಂಡಾಣು ಜೊತೆಯಾದ ಮೊದಲ ಜೀವಕೋಶದಲ್ಲಿಯೇ ಅದು ತನ್ನ ಪೂರ್ವಿಕರಿಂದ ಪಡೆದಿರಬಹುದಾದ ಕಾಯಿಲೆಗಳನ್ನು ತಿದ್ದಿತೀಡಿ ಅಳಿಸಿ ಹಾಕುವುದು.

ಹೃದ್ರೋಗಕ್ಕೆ ಕಾರಣವಾದ MYBC3 ಎಂಬ ಆನುವಂಶಿಕ ಗುಣಾಣು ಪೋಷಕರಿಂದ ಮಕ್ಕಳಿಗೆ ದಾಟಿ ಬರುವುದಾಗಿದೆ. ಈ ಸಮಸ್ಯೆ ಇರುವವರಲ್ಲಿ ಯಾವುದೇ ಸೂಚನೆ ಇಲ್ಲದೆ ಹಠಾತ್ತಾಗಿ ಹೃದ್ರೋಗದಿಂದ ಹೃದಯ ಬಡಿತ ಸ್ಥಗಿತಗೊಂಡು ಸಾವು ಸಂಭವಿಸುತ್ತದೆ. ಈ ಸಮಸ್ಯೆಯಿರುವ ಅನೇಕ ಯುವಕರು ಆಟವಾಡುವಾಗ ಹಠಾತ್ ಆಗಿ ಸಾವನ್ನಪ್ಪಿರುವ ಘಟನೆಗಳಿವೆ. ಇದೇ ರೀತಿ ಇನ್ನೂ ಸುಮಾರು 10 ಸಾವಿರ ಕಾಯಿಲೆಗಳು ನಮ್ಮ ದೇಹದಲ್ಲಿನ ಸುಮಾರು 25 ಸಾವಿರ ಗುಣಾಣುಗಳಲ್ಲಿ ಯಾವುದೋ ಒಂದೇ ಒಂದು ಗುಣಾಣುವಿನ ದೋಷದಿಂದ ಬರುವಂತದ್ದಾಗಿದೆ. ಇವುಗಳು ಸರ್ವೇಸಾಮಾನ್ಯ ಅಲ್ಲದಿದ್ದರೂ ಮಾರಕ ರೋಗಗಳಾಗಿರುವುದಂತೂ ಹೌದು. ಇವುಗಳಲ್ಲಿ ಸಿಸ್ಟಿಕ್ ಫೈಬ್ರೋಸಸ್, ತಾಲಸೀನಿಯಾ, ಫ್ಯಾಬಿಸಂ, ಆಹಾರ ಪಚನಕ್ರಿಯಾ ದೋಷಗಳು ಹಾಗೂ ಇತರೆ ದೈಹಿಕ ಮತ್ತು ಮಾನಸಿಕ ರೋಗಗಳ ದೊಡ್ಡ ಪಟ್ಟಿಯೇ ಇದೆ. ಅನೇಕ ರೋಗಗಳನ್ನು ಅಪರೂಪದ ಕಾಯಿಲೆಗಳೆಂದು ಗುರುತಿಸಲಾಗಿದೆ.

ಜೀವನಶೈಲಿಯಲ್ಲಿ ಕಂಡುಬರುವ ಅನೇಕ ರೋಗಗಳು, ಅಂದರೆ - ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಈ ಒಂದು ಗುಣಾಣು ದೋಷಕ್ಕೆ ಸಂಬಂಧಿಸಿದವಲ್ಲ. ಇವು ಗುಣಾಣು, ಆಹಾರ ಮತ್ತು ಪ್ರಾಕೃತಿಕ ಸಂಬಂಧಗಳ ವೈಪರೀತ್ಯದಿಂದ ಹೊರಹೊಮ್ಮುವ ಕಾಯಿಲೆಗಳಾಗಿವೆ. ಇವುಗಳಿಗೆ ಈ ರೀತಿಯ ಜೈವಿಕ ತಂತ್ರಜ್ಞಾನದ ರಿಪೇರಿ ಕೆಲಸ ಸರಿಹೋಗದು. ಆದರೆ ಈ ಒಂದೇ ಒಂದು ದೋಷದ ಗುಣಾಣುವಿನಿಂದ ಬರುವ ಕಾಯಿಲೆಗಳು ಕಡಿಮೆಯೇನಿಲ್ಲ. ಇಂತಹ ದೋಷ ಹುಟ್ಟಿದ ಮಕ್ಕಳಲ್ಲಿ ಕಂಡು ಬಂದಾಗ, ಈ ಕಾಯಿಲೆಗಳಿಗೆ ಔಷಧಿಗಳಿಲ್ಲದೆ, ಇದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವುದರಿಂದ ಅವರು ಪಡುವ ಪಾಡು ಹೇಳತೀರದು. ಈ ಕಾಯಿಲೆಗಳಿಗೆ ಸಂಬಂಧಪಟ್ಟ ವೈಜ್ಞಾನಿಕ ಸಮ್ಮೇಳನಗಳಲ್ಲಿ ಇಂತಹ ಮಕ್ಕಳ ಪೋಷಕರನ್ನು ಭೇಟಿಯಾದಾಗ ಅವರು ತಮ್ಮ ನೋವು ತೋಡಿಕೊಂಡು, ‘ಇದಕ್ಕೆ ವಿಜ್ಞಾನದಲ್ಲಿ ಯಾವ ಪರಿಹಾರ ಕೊಟ್ಟರೂ ನಾವು ಪರೀಕ್ಷೆಗೊಳಪಡಲು ಸಿದ್ಧ’ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನದ ಮೂಲಕ ಇಂತಹ ಕಾಯಿಲೆಗಳಲ್ಲೊಂದಾದ ಆನುವಂಶಿಕ ಹೃದ್ರೋಗವನ್ನು (Hypertrophic cardiomyopathy - HCM) ಹಾಗೂ ಅದಕ್ಕೆ ಕಾರಣವಾದ ದೋಷಪೂರಿತ ಆನುವಂಶಿಕ ಅಂಶವನ್ನು ಕಿತ್ತೊಗೆದು, ಪ್ರಯೋಗಾಲಯದಲ್ಲಿ ಜೀವಕೋಶಗಳನ್ನು ಆರೋಗ್ಯಕರವಾಗಿ ಬೆಳೆಸುವಂತೆ ಮಾಡಲಾಗಿದೆ. ಈ ರಿಪೇರಿ ಕೆಲಸಕ್ಕೆ ಬಳಸಿರುವ ಸಾಧನ ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣ ‘ಕ್ರಿಸ್ಪರ್ ಕ್ಯಾಸ್೯’ ಆಗಿದೆ.

ವೀರ್ಯಾಣು ಅಂಡಾಣುವನ್ನು ಸೇರುವಾಗಲೇ ‘ಕ್ರಿಸ್ಪರ್ ಕ್ಯಾಸ್೯’ ಉಪಕರಣವನ್ನು ಅಂಡಾಣುವಿನೊಳಗೆ ಸೇರಿಸಿ 25 ಸಾವಿರ ಗುಣಾಣುಗಳಲ್ಲಿ ಸರಿಯಾಗಿ ದೋಷವಿರುವ ಗುಣಾಣುವಿಗೆ ಮಾತ್ರ ಕತ್ತರಿ ಹಾಕಿ ರಿಪೇರಿ ಮಾಡಲಾಗುತ್ತದೆ. ಮುಂದೆ ಆ ಜೀವಕೋಶಗಳು ಒಂದು ಇನ್ನೊಂದಾಗಿ, ಮತ್ತೊಂದು ಮಗದೊಂದಾಗಿ ಬೆಳೆಯುವಾಗ ದೋಷಪೂರಿತ ಗುಣಾಣುರಹಿತವಾಗಿ ಬೆಳೆಯುವಂತೆ ಮಾಡಿದ್ದಾರೆ. ಇದು ಸಾಮಾನ್ಯ ಕೆಲಸವಲ್ಲ.

ಸಾವಿರಾರು ಗುಣಾಣುಗಳಲ್ಲಿ ಆನುವಂಶಿಕವಾಗಿ ಸಮಸ್ಯೆ ಇರುವ ಗುಣಾಣುವಿಗೇ ಕತ್ತರಿ ಹಾಕುವುದು ಅಕ್ಕಿಮೂಟೆಯಲ್ಲಿ ಮರಳಿನ ಕಣ ಹೊರತೆಗೆದಂತೆ ಎನ್ನಬಹುದು. ಹಾಗೆಯೇ ರಿಪೇರಿ ಮಾಡಿದ ಗುಣಾಣುವಿನ ಬದಲು ಇನ್ನೂ ಮಾರಕವಾದ ಅಂಶ ಹೊಂದಿಕೊಂಡರೆ ಇನ್ನೊಂದು ಸಮಸ್ಯೆ ಎದುರಾಗಬಹುದು ಮತ್ತು ಸರಿಪಡಿಸಿದ ಮೊದಲ ಜೀವಕೋಶದಿಂದ ಹೊರಹೊಮ್ಮಿದ ಜೀವಕೋಶಗಳಲ್ಲಿ ಎಲ್ಲಿಯೂ ದೋಷಪೂರಿತ ಗುಣಾಣು ಮತ್ತೆ ಕಾಣಿಸಿಕೊಳ್ಳಕೂಡದು. ಈ ಮೂರೂ ವಿಷಯಗಳಲ್ಲಿ ಸದ್ಯಕ್ಕೆ ಯಶಸ್ಸು ಕಂಡಿರುವುದು ಅಮೆರಿಕದ ‘ಓರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ’ ಮತ್ತು ಅದೇ ದೇಶದ ‘ಸಾಕ್ ಇನ್‍ಸ್ಟಿಟೂಟ್’ ಮತ್ತು ದಕ್ಷಿಣ ಕೊರಿಯಾದ ‘ಕೊರಿಯಾ ಇನ್‍ಸ್ಟಿಟೂಟ್ ಫಾರ್ ಬೇಸಿಕ್ ಸೈನ್ಸ್’ ಜಂಟಿಯಾಗಿ ನಡೆಸಿದ ಸಂಶೋಧನೆಯಾಗಿದೆ. ಈ ಯಶಸ್ಸನ್ನು ಪ್ರಯೋಗಾಲಯದಿಂದ ಮುಂದೆ ಗರ್ಭಧಾರಣೆ ಮಾಡಿ ಹುಟ್ಟುವ ಮಗುವಿನಲ್ಲಿ ಈ ರೋಗಪೀಡಿತ ಆನುವಂಶಿಕ ಅಂಶವನ್ನು ತಡೆಗಟ್ಟಿದರೆ ಮುಂದೆ ಇದೇ ರೀತಿಯ ಸುಮಾರು 10 ಸಾವಿರ ರೋಗ ಹರಡುವ ಆನುವಂಶಿಕ ಕಾಯಿಲೆಗಳಿಗೆ ಕತ್ತರಿ ಬಿದ್ದಂತೆಯೇ ಸರಿ. ಪ್ರಯೋಗಾಲಯದ ಟೆಸ್ಟ್ ಟ್ಯೂಬ್‌ನಲ್ಲಿ ಕಂಡ ಯಶಸ್ಸು ತಾಯಿಯ ಗರ್ಭದಲ್ಲಿಯೂ ಕಂಡಾಗ ಇದು ತಾರ್ಕಿಕ ಅಂತ್ಯ ಕಂಡಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT