ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಚಂಚಲ; ಇರಲಿ ಎಚ್ಚರ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆದಿತ್ಯ ಚೂಟಿ ಹುಡುಗ. ತುಂಬಾನೇ ಫಾಸ್ಟ್. ಒಂದು ಜಾಗದಲ್ಲಿ ಕೂರಲ್ಲ. ಯಾವಾಗ್ಲೂ ಓಡಾಡ್ತಿರ್ತಾನೆ. ನರ್ಸರಿ ಸ್ಕೂಲಲ್ಲೂ ಅಷ್ಟೆ. ತನ್ನ ಸೀಟ್‌ನಲ್ಲಿ ಕೂರಲ್ಲ. ಏನೇ ಹೇಳಿದರೂ ಕೇಳಲ್ಲ ಅಂತಿದ್ರು ಟೀಚರ್. ಅಲ್ಲಿ ಓಡು, ಇಲ್ಲಿ ಜಿಗಿ, ಅಲ್ಲಿ ಹಾರು... ಏನೇ ಚಟುವಟಿಕೆ ನೀಡಿದರೂ , ಅದನ್ನು ಮುಗಿಸೋಕೆ ಆಗ್ತಿರಲ್ಲಿಲ್ಲ. ಕೀಲಿ ತಿರುಗಿಸಿದ ಗೊಂಬೆ ಹಾಗೆ, ಯಾವಾಗಲೂ ಅಡ್ಡಾಡಿಕೊಂಡೇ ಇರುತ್ತಿದ್ದ. ಅಪ್ಪ-ಅಮ್ಮ ಬೇಸತ್ತು, ಬೈತಿದ್ರು. ಕೆಲವೊಮ್ಮೆ ಹೊಡೀತಾನೂ ಇದ್ರು. ಆದರೂ ಆದಿತ್ಯನ ಚಟಪಟ ಚಟುವಟಿಕೆಗಳ ವೇಗ ಕಡಿಮೆಯಾಗಲಿಲ್ಲ. ಒಂದನೇ ತರಗತಿಗೆ ಹೋಗಲು ಶುರು ಮಾಡಿದ. ಅಲ್ಲೂ ಕೂಡ ಟೀಚರ್, ’ಆದಿತ್ಯ ತರಗತಿಯಲ್ಲಿ ಪಾಠದ ಕಡೆ ಲಕ್ಷ್ಯ ಕೊಡುವುದಿಲ್ಲ, ಹೋಂ ವರ್ಕ್ ಮಾಡಲ್ಲ’ ಅಂತ ಕಂಪ್ಲೇಂಟ್ ಮಾಡ್ತಿದ್ರು. ತನ್ನ ಪೆನ್ಸಿಲ್, ರಬ್ಬರ್, ಪುಸ್ತಕಗಳನ್ನ ಪದೇ ಪದೇ ಕಳ್ಕೊಳ್ತಿದ್ದ. ಆತನ ’ಹೈಪರ್’ ನಡವಳಿಕೆಯಿಂದ ಸಹಪಾಠಿಗಳಿಗೆ ಕಿರಿಕಿರಿ ಆಗ್ತಿತ್ತು. ಹೀಗಾಗಿ ಆತನಿಗೆ ಯಾರೂ ಫ್ರೆಂಡ್ಸ್ ಆಗ್ತಿರಲಿಲ್ಲ.

ಮಕ್ಕಳು ಲವಲವಿಕೆ, ಚಟುವಟಿಕೆಯಿಂದ ಇದ್ದರೇನೆ ಚೆನ್ನ ಮತ್ತು ಅದು ಸಹಜ ಕೂಡ. ಆದರೆ ಚಟುವಟಿಕೆ ವಿಪರೀತವಾಗಿ, ಚಂಚಲತೆ ಮತ್ತು ಹಠಾತ್ ಪ್ರವೃತ್ತಿ ಹೆಚ್ಚಾಗಿ , ಮಗುವಿನ ವೈಯಕ್ತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರಲಾರಂಭಿಸಿದರೆ ಆ ಸ್ಥಿತಿಯನ್ನು, ಅಟೆನ್ಶನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (Attention Deficit Hyperactivity Disorder - ADHD) ಅಥವಾ ಚಿತ್ತಚಂಚಲತೆ ಎನ್ನುತ್ತೇವೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವಂತಹ ಮಿದುಳಿನ ಕಾಯಿಲೆ. ಭಾರತದಲ್ಲಿ ಸುಮಾರು ಶೇ.10ರಷ್ಟು ಶಾಲೆಗೆ ಹೋಗುವ ಮಕ್ಕಳಲ್ಲಿ ಅದರಲ್ಲೂ ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಸಿಗುತ್ತದೆ.

ಚಿತ್ತಚಂಚಲತೆಗೆ ಕಾರಣಗಳು

ಆನುವಂಶೀಯತೆ, ಅತಿ ಚಿಕ್ಕ ವಯಸ್ಸಿನಲ್ಲೇ ಸರಿಯಾದ ಪಾಲನೆ, ಪೋಷಣೆ ಇಲ್ಲದಿರುವುದು, ದೈಹಿಕ ಹಾಗೂ ಮಾನಸಿಕ ಶೋಷಣೆಗಳು ಈ ಅಸ್ವಸ್ಥತೆಗೆ ಕೆಲವು ಕಾರಣಗಳು.

ಮಿದುಳಿನ ಗಮನ ಕೇಂದ್ರೀಕರಣ ವ್ಯೂಹದಲ್ಲಿ ಡೋಪಾಮಿನ್ ಹಾಗೂ ನಾರೆಪಿನೇಫ್ರಿನ್ ಎಂಬ ರಾಸಾಯನಿಕಗಳ ಏರುಪೇರು ಈ ಕಾಯಿಲೆಯ ಗುಣ ಲಕ್ಷಣಗಳಿಗೆ ಕಾರಣವಾಗಿವೆ.

ಚಂಚಲತೆ (inattention), ಅತಿಯಾದ ಚಟುವಟಿಕೆ (hyperactivity) ಹಾಗೂ ಹಠಾತ್ ಪ್ರವೃತ್ತಿ (impulsivity) ಇವು ಈ ಕಾಯಿಲೆಯ ಮೂರು ಮುಖ್ಯ ಲಕ್ಷಣಗಳು. ಶಾಲೆಗೆ ಹೋಗುವ ಮುನ್ನ, ಅತಿಯಾದ ಚಟುವಟಿಕೆ ಹಾಗೂ ಹಠಾತ್ ಪ್ರವೃತ್ತಿ ಎದ್ದು ಕಾಣಿಸಿದರೆ, ಶಾಲೆಗೆ ಹೋಗುವ ಮಕ್ಕಳಲ್ಲಿ ಚಂಚಲತೆ ಹೆಚ್ಚಾಗಿ ಕಂಡು ಬರುತ್ತದೆ.

ಚಂಚಲತೆ: ಮಕ್ಕಳು ಓದಿನಲ್ಲಿ, ಚಟುವಟಿಕೆಯಲ್ಲಿ, ಆಟದಲ್ಲಿ ಸೂಕ್ಷ್ಮವಾದ ವಿವರಗಳಿಗೆ ಗಮನ ನೀಡುವುದಿಲ್ಲ. ಓದಿನಲ್ಲಿ, ಬರವಣಿಗೆಯಲ್ಲಿ, ಚಂಚಲತೆಯಿಂದ ತಪ್ಪುಗಳನ್ನು ಮಾಡುತ್ತಿರುತ್ತಾರೆ. ತುಂಬ ಹೊತ್ತು ಗಮನವಿರಿಸಬೇಕಾದಂತಹ ಚಟುವಟಿಕೆಗಳಲ್ಲಿ (ಪಾಠ ಕೇಳುವುದು) ಅವರಿಗೆ ಪಾಲ್ಗೊಳ್ಳಲಾಗುವುದಿಲ್ಲ. ಅವರ ಜೊತೆ ಮಾತನಾಡುತ್ತಿದ್ದರೆ, ಅವರು ಕೇಳಿಸಿಕೊಳ್ಳುತ್ತಿಲ್ಲ ಎನ್ನಿಸುತ್ತದೆ. ದಿನ ನಿತ್ಯದ ಅವಶ್ಯಕತೆಯ ವಸ್ತುಗಳನ್ನು (ಪೆನ್ಸಿಲ್, ರಬ್ಬರ್, ಪುಸ್ತಕ) ಪದೇ ಪದೇ ಕಳೆದುಕೊಳ್ಳುತ್ತಿರುತ್ತಾರೆ. ಅತಿ ಸುಲಭವಾಗಿ ಚಿಕ್ಕ ಪುಟ್ಟ ವಸ್ತು , ವಿಷಯಗಳಿಂದ ವಿಚಲಿತಗೊಳ್ಳುತ್ತಾರೆ.

ಅತಿಯಾದ ಚಟುವಟಿಕೆ ಹಾಗೂ ಹಠಾತ್ ಪ್ರವೃತ್ತಿ: ಯಾವಾಗಲೂ ಕೈ ಕಾಲು ಅಲ್ಲಾಡಿಸುವದು, ಚಡಪಡಿಕೆ, ಒದ್ದಾಟ. ತರಗತಿಯಲ್ಲಿ ತಮ್ಮ ಸ್ಥಳದಲ್ಲಿ ಕುಳಿತುಕೊಳ್ಳಲಾಗದೇ, ಎದ್ದು ಓಡಾಡುತ್ತಿರುತ್ತಾರೆ. ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ ಪರಿಣಾಮದ ವಿವೇಚನೆಯಿಲ್ಲದೇ ಜಿಗಿಯುವುದು, ಏರುವುದು, ವಿಪರೀತವಾಗಿ ಅರಳು ಹುರಿದಂತೆ ಚಟ ಪಟ ಮಾತನಾಡುತ್ತಾರೆ. ಪ್ರಶ್ನೆ ಕೇಳಿ ಮುಗಿಸುವ ಮೊದಲೇ ಉತ್ತರ ನೀಡುವುದು, ಸಾಲಿನಲ್ಲಿ ನಿಂತಲ್ಲಿ ತನ್ನ ಸರತಿಗಾಗಿ ಕಾಯದೇ ಇರುವುದು. ಬೇರೆಯವರ ಸಂಭಾಷಣೆಯಲ್ಲಿ ಅಥವಾ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಇವೆಲ್ಲ ಕಾಯಿಲೆಯ ಪ್ರತಿಬಿಂಬಗಳೇ ಆಗಿವೆ.

ಚಿಕಿತ್ಸೆ

ಮಿದುಳಿನಲ್ಲಿ ಡೋಪಾಮಿನ್, ನಾರ್‌ಎಪಿನೆಫ್ರಿನ್ ಹಾಗೂ ಇನ್ನಿತರ ರಾಸಾಯನಿಕಗಳ ಪ್ರಮಾಣವನ್ನು ಸರಿದೂಗಿಸುವಂತಹ ಔಷಧಿಗಳನ್ನು ನೀಡುವುದರಿಂದ, ರೋಗಲಕ್ಷಣಗಳು ಒಂದು ಹಂತದವರೆಗೆ ಕಡಿಮೆಯಾಗಬಹುದು.

ಮನೋಸಾಮಾಜಿಕ ಚಿಕಿತ್ಸೆ

ಚಂಚಲತೆಯನ್ನು ಕಡಿಮೆ ಮಾಡಿ, ಗಮನ ಹೆಚ್ಚಿಸಲು ಕೆಲವು ವಿಶೇಷವಾದ ಚಟುವಟಿಕೆಗಳನ್ನು ನೀಡಲಾಗುತ್ತದೆ. ಉದಾ: ನಾಲ್ಕೈದು ತರಹದ ಬೇಳೆಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, ಅವುಗಳನ್ನು ಕೆಲವು ನಿಮಿಷಗಳಲ್ಲಿ ಬೇರ್ಪಡಿಸುವುದು. ಬಿಡಿಸಿದ ರೇಖಾಚಿತ್ರಗಳಲ್ಲಿ, ಬಣ್ಣ ತುಂಬುವುದು.
ಚಟುವಟಿಕೆ ದಿನಚರಿಯನ್ನು ಮಾಡಿ, ಸಮಯದ ನಿಬಂಧನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವದು.

ಪಾಲಕರ ಪಾತ್ರ

ಮಗುವಿನ ಅತಿಯಾದ ಚಟುವಟಿಕೆ ಹಾಗೂ ಹಠಾತ್ ಪ್ರವೃತ್ತಿಯಿಂದ, ಪಾಲಕರು ಸಾಮಾಜಿಕವಾಗಿ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ಮಗುವಿನ ಚಿತ್ತಚಂಚಲತೆಯಿಂದಾಗಿ ಏನನ್ನು ಹೇಳಿದರೂ ಅದು ಕೇಳಿಸಿಕೊಳ್ಳುತ್ತಿಲ್ಲ ಎನ್ನಿಸಬಹುದು. ಶಿಕ್ಷಕರು ಮಗುವಿನ ನಡವಳಿಕೆಯ ಬಗ್ಗೆ ಪದೇ ಪದೇ ದೂರಬಹುದು. ಈ ಎಲ್ಲ ವಿಷಯಗಳಿಂದ ಪಾಲಕರು, ಮಗುವಿನ ಮೇಲೆ ಕೋಪ, ಬೇಸರಗೊಂಡು, ಸಹಜವಾದ ಪ್ರೀತಿ ಕಡಿಮೆಯಾಗಿ ಮಗುವನ್ನು ನಿರ್ಲಕ್ಷಿಸಬಹುದು ಮತ್ತು ಅತಿಯಾಗಿ ಶಿಕ್ಷಿಸಲೂಬಹುದು. ಶಿಕ್ಷೆ ನೀಡಿದರೂ ಸಹ ಮಗುವಿನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರದು.

ಮಗುವಿನ ಇಂತಹ ನಡವಳಿಕೆಯನ್ನು ಅಸ್ವಸ್ಥತೆಯ ಗುಣಲಕ್ಷಣ ಎಂದು ಪಾಲಕರು ಅರ್ಥ ಮಾಡಿಕೊಳ್ಳಬೇಕು. ಮಗು ಬೇಕಂತಲೇ, ಕೀಟಲೆ ಮಾಡಲೆಂದೇ ಈ ರೀತಿ ಮಾಡುತ್ತಿದೆ ಎಂದು ಭಾವಿಸಬಾರದು. ಎಡಿಎಚ್‌ಡಿಯ ಚಿಕಿತ್ಸೆಯಲ್ಲಿ ಪಾಲಕರಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಗುತ್ತದೆ. ಅಂತಹ ಕೆಲವು ಸೂಚನೆಗಳು ಹೀಗಿವೆ:

* ಇಂದಿನ ಸ್ಪರ್ಧಾಯುಗದಲ್ಲಿ, ಸಂಬಂಧಗಳಿಗೆ ಸಮಯ ದೊರೆಯುವುದು ತುಂಬಾ ವಿರಳ. ಹೀಗಾಗಿ ಮಗುವಿಗೆ, ಪಾಲಕರಿಂದ ಸ್ವಾಭಾವಿಕವಾಗಿ ಸಿಗಬೇಕಾದ ಸಮಯ ಸಿಗದಿರಬಹುದು. ಆದ್ದರಿಂದ, ಪ್ರತಿದಿನ ಮಗುವಿಗಾಗಿಯೇ ಸ್ವಲ್ಪ ಸಮಯ ಮೀಸಲಿಡಲೇಬೇಕು. ಆ ಸಮಯದಲ್ಲಿ, ಮಗುವಿನ ಅಂದಿನ ದಿನಚರಿ, ಶಾಲೆಯ ಆಗುಹೋಗುಗಳು, ಸಂತೋಷ-ಬೇಜಾರಿನ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಮಗುವಿನ ಬೇಕು-ಬೇಡಗಳ ಬಗ್ಗೆ ವಿಶೇಷ ಗಮನವಿರಲಿ. ‌

* ಮಗುವಿಗೆ ಯಾವುದೇ ಚಟುವಟಿಕೆ ಮಾಡಲು ಹೇಳಿದರೆ, ನೀವು ನೀಡುವ ಸೂಚನೆ ಸ್ಪಷ್ಟವಾಗಿರಲಿ. ಸಂಕೀರ್ಣ ಅಥವ ಅಸ್ಪಷ್ಟವಾದ ಸೂಚನೆಗಳು ಮಗುವಿಗೆ ಅರ್ಥವಾಗುವುದಿಲ್ಲ. ಮಗು ಗೊಂದಲಕ್ಕೀಡಾಗಿ, ಚಟುವಟಿಕೆಯನ್ನು ಅರ್ಧಕ್ಕೆ ನಿಲ್ಲಿಸಬಹುದು.

* ಮಗುವಿನ ಒಳ್ಳೆಯ ಗುಣ ಹಾಗೂ ಕೆಲಸಗಳನ್ನು ಮುಕ್ತವಾಗಿ ಹೊಗಳಿ. ಪಾಲಕರಿಗೆ ಮಗುವಿನ ಯಾವ ಗುಣ ಖುಷಿ ನೀಡುತ್ತದೆ ಹಾಗೂ ಯಾವ ಗುಣ ಕೋಪ, ಬೇಸರ ಉಂಟು ಮಾಡುತ್ತದೆ ಎಂಬುದು ಮಗುವಿಗೆ ಮನದಟ್ಟಾಗಲಿ.‌

* ಮಗುವಿನ ಹಟಕ್ಕೆ ಬಾಗದಿರಿ. ಎಲ್ಲಿಯವರೆಗೆ ಹಟ ಮಾಡುವದು ಸಹಜ ಎಂಬ ಮಿತಿಯನ್ನು ಗೊತ್ತುಪಡಿಸಿಕೊಳ್ಳಿ. ಮಿತಿ ಮೀರಿದರೆ ಶಿಕ್ಷಿಸಬಹುದು. ಆದರೆ ಶಿಕ್ಷೆಯು ತುಂಬ ಮಿತವಾಗಿರಲಿ. ಶಿಕ್ಷಕರೊಡನೆ ಮಗುವಿನ ಏಳಿಗೆಯ ಬಗ್ಗೆ ನಿಯಮಿತವಾಗಿ ಚರ್ಚೆ ಮಾಡಿ.

* ತಮ್ಮ ಮಗುವಿನಲ್ಲಿ, ಎಡಿಎಚ್‌ಡಿಯ ಲಕ್ಷಣಗಳು ಕಂಡುಬಂದರೆ, ಮನೋವೈದ್ಯರನ್ನು ಕಂಡು ಸಮಾಲೋಚಿಸಿ.

**

‘ಎಡಿಎಚ್‌ಡಿ’ ತೊಂದರೆಗಳು

ಚಂಚಲತೆಯಿಂದ, ಓದಿನ ಕಡೆ ಗಮನ ಕೇಂದ್ರೀಕರಿಸಲಾಗದೇ ಶೈಕ್ಷಣಿಕ ಹಿನ್ನಡೆ.
ಅತಿಯಾದ ಚಟುವಟಿಕೆ ಹಾಗೂ ಹಠಾತ್ ಪ್ರವೃತ್ತಿಯಿಂದ ನೋವು, ಗಾಯ ಹಾಗೂ ಅಪಘಾತಗಳು.

ಬಾಲ್ಯದಲ್ಲಿ ಎಡಿಎಚ್‌ಡಿ ಸಮಸ್ಯೆಯಿದ್ದರೆ , ಕಿಶೋರಾವಸ್ಥೆ ಮತ್ತು ವಯಸ್ಕರಾದ ಮೇಲೆ ಮಾದಕ ವ್ಯಸ್ತುಗಳ ವ್ಯಸನಕ್ಕೆ ಬಲಿಯಾಗುವ ಸಂಭವವಿರುತ್ತದೆ.

ಓದು, ಕೆಲಸ-ಕಾರ್ಯಗಳಲ್ಲಿ ಗಮನ ನೀಡದಿರುವಿಕೆಯನ್ನು ಪಾಲಕರು, ಶಿಕ್ಷಕರು ಹಾಗೂ ಉಳಿದವರು ಮಗುವಿನ ಆಲಸ್ಯ, ಅಸಹಕಾರ, ಬೇಜವಾಬ್ದಾರಿ ಎಂದು ಗ್ರಹಿಸಬಹುದು. ಇದರಿಂದ ಕುಟುಂಬದ ಸದಸ್ಯರು ಹಾಗೂ ಶಿಕ್ಷಕರು ಮಗುವಿನ ಜೊತೆ ಸಹಜವಾಗಿ ಪ್ರೀತಿಯಿಂದ ನಡೆದುಕೊಳ್ಳದಿರಬಹುದು.

ಉಳಿದ ಮಕ್ಕಳು ಮಗುವಿನ ಜೊತೆ ಬೆರೆಯಲು ಇಷ್ಟ ಪಡದಿರಬಹುದು, ಚುಡಾಯಿಸಬಹುದು. ಹೀಗಾಗಿ ಸಮವಯಸ್ಕರೊಂದಿಗೆ ಗೆಳೆತನ ಮಾಡುವುದು ಕಷ್ಟವಾಗಬಹುದು.

(ಲೇಖಕರು: ಮನೋರೋಗ ತಜ್ಞರು. ಅವರ ಇ ಮೇಲ್: bhshiv@gmail.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT