ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ನನ್ನ ಹೆಸರು ಪ್ರವೀಣ್. ನಾನು ಎಂಜಿನಿಯರಿಂಗ್ ಮುಗಿಸಿದ್ದೇನೆ. ನನಗೆ ಸರ್ಕಾರಿ ಉದ್ಯೋಗ ಮಾಡುವ ಬಯಕೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.

ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆಂಬ ನಿಮ್ಮ ನಿರ್ಧಾರ ಶ್ಲಾಘನೀಯ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾನೇ ತಯಾರಿ ನಡೆಸಬೇಕು ಮತ್ತು ಅದರ ಮೇಲೆ ಹೆಚ್ಚಿನ ಗಮನ ನೀಡಬೇಕು. ಸಧ್ಯಕ್ಕೆ ಪರೀಕ್ಷಾ ತಯಾರಿಯ ಮೇಲೆ ಗಮನ ಹರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ.
ಯಾವುದೇ ವಿಷಯದ ಮೇಲೆ ಗಮನ ಕೇಂದ್ರಿಕರಿಸಲು ದೈಹಿಕ ಹಾಗೂ ಮಾನಸಿಕ ವ್ಯಾಯಾಮ ಅಗತ್ಯ. ಪ್ರತಿದಿನ ಅರ್ಧಗಂಟೆ ಧ್ಯಾನ ಹಾಗೂ ವ್ಯಾಯಾಮ ಮಾಡಿ. ಅದು ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮನಸ್ಸನ್ನು ನಿಮ್ಮ ಹಿಡಿತದಲ್ಲಿಟ್ಟುಕೊಂಡರೆ ಯಾವ ಕೆಲಸವೂ ಅಸಾಧ್ಯವಲ್ಲ.

* ಮೇಡಂ, ನನಗೆ ಒಬ್ಬ ಹುಡುಗ ಪ್ರೀತಿಸಿ, ಮೋಸ ಮಾಡಿದ. ಅವನು ನನ್ನ ಜೀವನದಿಂದ ದೂರ ಹೋದ ಮೇಲೆ ನಾನು ಒಬ್ಬಳೇ ಇರುವುದು, ಒಬ್ಬಳೇ ಮಾತನಾಡುವುದು ಮಾಡುತ್ತಿದ್ದೇನೆ. ನಾನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದಿದ್ದರೂ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಪರಿಹಾರ ತಿಳಿಸಿ.

ನಿಮಗೆ ಸಹಾಯಬೇಕು ಎಂಬುದನ್ನು ನೀವು ಅರಿತಿದ್ದೀರಿ, ಅದು ಸಂತೋಷದ ವಿಷಯ. ಕೆಲ ಸಮಯದವರೆಗೆ ನೀವು ಒಬ್ಬ ಆಪ್ತಸಮಾಲೋಚಕರನ್ನು ಭೇಟಿಯಾಗುವುದು ಉತ್ತಮ ಎಂಬುದು ನನ್ನ ಭಾವನೆ. ಅವರು ನಿಮಗೆ ಸಹಾಯ ಮಾಡುತ್ತಾರೆ, ಅಲ್ಲದೆ ನೀವು ಮುಂದೆ ಹೇಗೆ ಜೀವನ ನಡೆಸಲು ಸಾಧ್ಯ ಎಂಬುದರ ಕುರಿತು ಸಲಹೆ ನೀಡುತ್ತಾರೆ. ಬೆಂಗಳೂರಿನಲ್ಲಿ ಕೆಲವೊಂದು ಉತ್ತಮ ಆಪ್ತಸಮಾಲೋಚನ ಕೇಂದ್ರಗಳಿವೆ. ಅದರಲ್ಲಿ ಮಲ್ಲೇಶ್ವರದಲ್ಲಿರುವ ‘ಸ್ನೇಹ’ ಕೂಡ ಒಂದು (ಸಂಪರ್ಕಕ್ಕೆ – 093425 05975). ಅಲ್ಲಿ ನೀವು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

* ನನಗೆ 32 ವರ್ಷ. ನನಗೆ ಶೇ.90ರಷ್ಟು ಋಣಾತ್ಮಕ ಆಲೋಚನೆಗಳೇ ಮನಸ್ಸಿನಲ್ಲಿ ಮೂಡುತ್ತದೆ. ಇದರಿಂದಾಗಿ ಪ್ರತಿಯೊಂದು ಕೆಲಸದಲ್ಲಿ ವಿನಾಕಾರಣ ಹೆದರಿಕೆ ಬರುತ್ತಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

ನಿಮ್ಮಲ್ಲಿ ಶೇ.90ರಷ್ಟು ಋಣಾತ್ಮಕ ಯೋಚನೆಗಳೇ ಹುಟ್ಟುತ್ತಿದೆ ಎಂದು ನಿಮಗೆ ಅನ್ನಿಸಿದೆ, ಅಲ್ಲದೇ ಆ ಯೋಚನೆಗಳೇ ನಿಮ್ಮಲ್ಲಿ ಆತಂಕವನ್ನು ಹುಟ್ಟು ಹಾಕಿದೆ. ಆ ಭಯದಿಂದ ಕೆಲಸದಲ್ಲೂ ದಕ್ಷ ಎಂದು ಅನ್ನಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ನಿಮಗೆ ತಿಳಿದಿದೆ. ಋಣಾತ್ಮಕ ಯೋಚನೆಗಳು ನಮಗೆ ಅರಿವಿಲ್ಲದೇ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಆರೋಗ್ಯದ ಸಮಸ್ಯೆ, ಅಸರ್ಮಪಕ ನಿದ್ದೆ, ಸಮತೋಲನವಿಲ್ಲದ ಡಯೆಟ್‌, ದೈಹಿಕ ಹಾಗೂ ಮಾನಸಿಕ ವ್ಯಾಯಾಮದ ಕೊರತೆ ಈ ಎಲ್ಲಾ ಕಾರಣಗಳಿಂದ ಋಣಾತ್ಮಕ ಯೋಚನೆಗಳು ನಮ್ಮಲ್ಲಿ ಹುಟ್ಟಿಕೊಳ್ಳಬಹುದು. ನೀವು ಇವೆಲ್ಲವನ್ನು ಗಮನಿಸಿ, ನಿಮ್ಮಲ್ಲಿ ಯಾವುದರ ಕೊರತೆ ಇದೆ ಎಂಬುದನ್ನು ತಿಳಿದುಕೊಳ್ಳಿ. ಯೋಗ ಹಾಗೂ ಧ್ಯಾನದ ಮೇಲೆ ಹೆಚ್ಚು ಗಮನ ನೀಡಿ. ಇದು ನಿಮ್ಮ ಯೋಚನೆಗಳನ್ನು ನಿಗ್ರಹಿಸಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ. ನಿಮಗೆ ತುಂಬಾ ಇಷ್ಟವಾಗುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಧನ್ಮಾತಕ ವರ್ತನೆ ಇರುವ ಸ್ನೇಹಿತರು ಹಾಗೂ ಬಂಧುಗಳ ಜೊತೆ ಬೆರೆಯಿರಿ. ‘ನಾನು ಧನ್ಮಾತಕವಾಗಿ ಸದೃಢವಾಗಿದ್ದೇನೆ, ಇದು ನನ್ನಿಂದ ಸಾಧ್ಯ’ ಎಂಬ ಮಂತ್ರವನ್ನು ಪಾಲಿಸಿ. ಆಗಲೂ ನಿಮ್ಮಲ್ಲಿ ಅದೇ ಆತಂಕದ ಭಾವನೆಗಳು ಎದುರಾದರೆ ಒಬ್ಬ ಉತ್ತಮ ಆಪ್ತಸಮಾಲೋಚಕರನ್ನು ಕಾಣುವುದು ಉತ್ತಮ.

* ನನಗೆ ಮದುವೆಯಾಗಿ 4 ವರ್ಷವಾಯಿತು. ನನ್ನ ಹಾಗೂ ಗಂಡನ ನಡುವೆ ಯಾವಾಗಲೂ ಜಗಳ. ನನಗೆ ಅವರ ಮೇಲೆ ಯಾವಾಗಲು ಅನುಮಾನ, ಆ ಕಾರಣಕ್ಕೆ ನಮ್ಮ ನಡುವೆ ಜಗಳವಾಗುತ್ತದೆ. ನಾವು ಖುಷಿಯಾಗಿರಬೇಕು ಎಂದರೆ ಏನು ಮಾಡಬೇಕು ತಿಳಿಸಿ.

ಆರೋಗ್ಯಕರ ಸಂವಹನದ ಕೊರತೆ ಮತ್ತು ಸಂಬಂಧಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು ಜಗಳ ಹಾಗೂ ಮನಸ್ತಾಪಗಳಿಗೆ ಎಡೆ ಮಾಡಿಕೊಡುತ್ತದೆ. ಇದು ಮನುಷ್ಯನ ಸಹಜಗುಣ. ಜೀವನ ಸಹಜ ಸ್ಥಿತಿಯಲ್ಲಿ ಸಾಗುತ್ತಿರುವಾಗ ಒಮ್ಮೆಲೇ ಬದಲಾವಣೆ ಕಾಣಿಸಿಕೊಂಡರೆ ಅನುಮಾನಗಳು ಮೂಡುವುದು ಸಹಜ. ಮಾತುಕತೆಯ ಮೂಲಕ ಆ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು, ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದು. ಆ ಕ್ಷಣದಲ್ಲಿ ಅನುಮಾನಗಳನ್ನು ಪರಿಹರಿಸಿಕೊಳ್ಳಲಾಗದಿದ್ದರೆ, ಅದು ತೀರಾ ವಿಕೋಪಕ್ಕೆ ಹೋಗಬಹುದು, ಅಲ್ಲದೇ ಕೆಟ್ಟ ಪರಿಸ್ಥಿತಿಯನ್ನು ಹುಟ್ಟುಹಾಕಲು ಕಾರಣವಾಗಬಹುದು. ಯಾವುದೇ ಸಂಬಂಧದಲ್ಲಾಗಲಿ ಪಾರದರ್ಶಕತೆ, ಸಹಾನುಭೂತಿ, ದಯೆ ಹಾಗೂ ಕ್ಷಮಾಗುಣ ಇರಬೇಕು. ನಡೆದ ಘಟನೆಗಳಿಗೆ ಬೇರೆ ಅರ್ಥ ಅಥವಾ ಕಾರಣ ಹುಡುಕುವುದಕ್ಕಿಂತ ಸಂಬಂಧಗಳನ್ನು ಪೋಷಿಸಲು ಸಮಯ ನೀಡುವುದು ಉತ್ತಮ. ಸಂತೋಷ ನಮ್ಮೋಳಗೆ ಇದೆ. ಆ ಸಂತೋಷವನ್ನು ಇತರರೊಂದಿಗೆ ಹಂಚಿಕೊಂಡಷ್ಟು ನಾವು ಸಂತಸದಿಂದಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT