ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ: ಬತ್ತದ ಭಾವಝರಿ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗೌರಿ - ಎಂಥ ಚಂದದ ಹೆಸರು!

ಮಗಳಿಗೊಂದು ಮುದ್ದನೆ ಹೆಸರು ಹುಡುಕುವವರಿಗೆ ಇದಕ್ಕಿಂದಲೂ ಸೊಗಸಾದ ಇನ್ನೊಂದು ಹೆಸರು ದೊರೆಯಲು ಸಾಧ್ಯವೇ? ಗೌರಿ ಎನ್ನುವುದು ಚಂದದ ಹೆಸರಷ್ಟೇ ಅಲ್ಲ – ಆ ಹೆಸರಿನಲ್ಲಿ ಸರಳತೆಯಿದೆ, ಮನಸ್ಸನ್ನು ಮುದಗೊಳಿಸುವ ಪ್ರಪುಲ್ಲತೆಯಿದೆ. ಮಗಳ ಹೆಸರು ಏನೇ ಇರಲಿ, ಅವಳನ್ನು ಮುದ್ದಿನಿಂದ ಗೌರಿ, ಪುಟ್ಟಗೌರಿ ಎಂದು ಕರೆಯುವವರಿದ್ದಾರೆ. ದಾರಿಯಲ್ಲೆಲ್ಲೋ ಕಣ್ಣಿಗೆ ಬಿದ್ದು ಮನಸ್ಸಿನಲ್ಲಿ ಉಳಿದುಬಿಡುವ, ಆಪ್ತವಾದ ಅಲೆಯೊಂದನ್ನು ಮೀಟುವ ಹೆಣ್ಣಿಗೆ ಮನಸ್ಸು ತಂತಾನೇ ‘ಗೌರಿ’ ಎನ್ನುವ ಹೆಸರು ಕೊಟ್ಟುಬಿಡುತ್ತದೆ.

ಗೌರಿಯಷ್ಟೇ ಲಕ್ಷ್ಮಿ ಎನ್ನುವ ಹೆಸರೂ ಜನಪ್ರಿಯ. ಆದರೆ, ಗೌರಿಗಿರುವ ಆರ್ದ್ರತೆ ಲಕುಮಿಗಿಲ್ಲ. ಗೌರಿ ಎನ್ನುವ ಹೆಸರು ಒಸರುವ ಆಪ್ತತೆ ಲಕ್ಷ್ಮಿಗಿಲ್ಲ.

ಗೌರಿ ಮುಕ್ಕಣ್ಣ ಶಿವನ ಪತ್ನಿ. ಆದರೆ ಆಕೆಯ ಚಿತ್ರ ನಮ್ಮ ಮನಸ್ಸಿನಲ್ಲಿ ಅಚ್ಚಾಗಿರುವುದು ಶಿವನ ಜೋಡಿಯಾಗಲ್ಲ – ಗಣಪನ ಜೊತೆಗೆ. ಷಣ್ಮುಖ ಕೂಡ ಪಾರ್ವತಿಪುತ್ರ. ಆದರೂ ಅಮ್ಮನ ಜೊತೆ ಸದಾ ತಳಕು ಹಾಕಿಕೊಂಡಿರುವುದು ವಿನಾಯಕನೇ. ಗಣೇಶನನ್ನು ಮಡಿಲಲ್ಲೋ ಪಕ್ಕದಲ್ಲೋ ಕೂರಿಸಿಕೊಂಡು, ಮೊಗದ ತುಂಬಾ ಮಾತೃತ್ವದ ಪ್ರಸನ್ನತೆಯನ್ನು ತುಳುಕಿಸುವಂತೆ ಕಾಣಿಸುವ ಗೌರಿಯ ಚಿತ್ರ ಆಪ್ತವೆನ್ನಿಸುತ್ತದೆ. ಈ ಗೌರಿ ವಾತ್ಸಲ್ಯಮಯಿ, ಮಂಗಳದಾಯಿನಿ.

ಪತಿಯನ್ನು ಮೀರಿ ಪುತ್ರನೊಂದಿಗೆ ಗೌರಿಯನ್ನು ಗುರ್ತಿಸಲು ಕಾರಣವಿದೆ. ಈ ಗಣೇಶನ ಹುಟ್ಟು ಎಲ್ಲ ಮಕ್ಕಳಂತಲ್ಲ. ಆತನನ್ನು ಗೌರಿ ಸೃಷ್ಟಿಸಿದ್ದು ಒಂದು ವಿಚಿತ್ರ ಸಂದರ್ಭದಲ್ಲಿ. ಗಂಡ ಮನೆಯಲ್ಲಿಲ್ಲ. ಶಿವೆಗೆ ಸ್ನಾನ ಮಾಡಬೇಕನ್ನಿಸಿದೆ. ಮೀಯುವ ಸುಖದ ಏಕಾಂತಕ್ಕೆ ಯಾವುದಾದರೂ ಅಡ್ಡಿ ಒದಗಬಹುದೆಂದು ಆಕೆಗನ್ನಿಸಿರಬೇಕು. ಲಯಕರ್ತನ ಪತ್ನಿಗೂ ಅಳುಕು! ಆ ಅಳುಕಿನ ನಿವಾರಣೆಯ ರೂಪದಲ್ಲಿ ಗೌರಿ ತನ್ನ ಮೈಯ ಅರಿಷಿಣದಿಂದಲೋ ದೂಳಿನಿಂದಲೋ ಬಾಲಕನೊಬ್ಬನನ್ನು ಸೃಷ್ಟಿಸಿದಳು. ‘ತಾನು ಮಿಂದು ಬರುವವರೆಗೂ ಕಾವಲು ನಿಂತಿರು’ ಎಂದಳು.

ಸಂಚಾರ ಮುಗಿಸಿದ ಶಿವ ಮನೆಗೆ ಬಂದ. ಪಾರ್ವತಿಪುತ್ರ ಬಾಗಿಲಲ್ಲೇ ತಡೆದ. ಮಾತಿಗೆ ಮಾತು ಬೆಳೆದು ಈಶ್ವರ ಗೌರೀಪುತ್ರನ ತಲೆಯನ್ನು ತರಿದ. ವಿಷಯ ಗೊತ್ತಾದ ಮೇಲೆ ಆನೆಯ ತಲೆಯೊಂದನ್ನು ತಂದು ಬಾಲಕನ ಮುಂಡಕ್ಕೆ ಜೋಡಿಸಿ ಗಣೇಶ ಎಂದು ಕರೆಯಲಾಯಿತು. ಮಗನ ಮುಖ ತಾಯಿ-ತಂಧೆಯರ ಮುಖದಲ್ಲಿ ಅಚ್ಚಾಗುವ ಮೊದಲೇ ರೂಪಾಂತರ ಹೊಂದಿತು. ಮಗನ ವೇಷ ಬದಲಾದರೂ ತಾಯಿಯ ವಾತ್ಸಲ್ಯ ಬದಲಾಗಲಿಲ್ಲ. ಅದು ಇನ್ನೂ ಹೆಚ್ಚಾಯಿತು. ತಾಯಿ-ಮಗನ ಈ ಅಪೂರ್ವ ನಂಟೇ ಚಿತ್ರಪಟದಲ್ಲೂ ಕಾಣಿಸಿಕೊಂಡಂತಿದೆ.

ಹಬ್ಬದಲ್ಲಿ ಎಲ್ಲೆಲ್ಲೂ ಅವತರಿಸುವ ಗಣೇಶ ರೂಪುಗೊಳ್ಳುವುದು ಮಣ್ಣಿನಿಂದ. ಗಣೇಶನನ್ನು ಮಣ್ಣಿನಿಂದ ಮಾಡುವುದಕ್ಕೂ ಅವನ ಜನ್ಮವೃತ್ತಾಂತಕ್ಕೂ ನಂಟಿರಬೇಕು. ಇದೆಯೆಂದೇ ನಂಬೋಣ. ಆ ಮೂಲಕ ಗಣೇಶನನ್ನು ಮಣ್ಣಿನ ಮಗನಾಗಿ, ಶ್ರಮದ ರೂಪಕವಾಗಿ ಕಾಣೋಣ.

ಮತ್ತೆ ಅಮ್ಮನ ವಿಷಯಕ್ಕೆ ಬರೋಣ. ಈ ಗೌರಮ್ಮ ನಮ್ಮ ಹೆಣ್ಣುಮಕ್ಕಳ ಭಾವಜಗತ್ತಿಗೆ ಸುಲಭವಾಗಿ ಒದಗಿಬರುವವಳು. ನಿರಾಭರಣ ಸುಂದರಿಯರನ್ನು ‘ಬಿಚ್ಚೋಲೆ ಗೌರಮ್ಮ’ ಎನ್ನುತ್ತೇವೆ. ಇಲ್ಲಿನ ಬಿಚ್ಚೋಲೆ ಸರಳತೆಯ ಸಂಕೇತ, ಸರಳವಾಗಿ ಇರುವುದರಲ್ಲಿನ ಚೆಲುವನ್ನು ಸೂಚಿಸುವ ಸಂಕೇತ. ‘ಗೌರಿದುಃಖ’ ಗಂಡಸಿನ ಭಾವವಲಯಕ್ಕೆ ನಿಲುಕದ ಸಂಗತಿ. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುವವರನ್ನು ಗೌರಮ್ಮ ಎಂದು ಕಾಲೆಳೆಯುವುದೂ ಇದೆ. ಗೌರಮ್ಮ ಎನ್ನುವ ವಿಶೇಷಣ, ‘ಈ ಕಾಲದವಳಲ್ಲ’ ಎನ್ನುವ ಅರ್ಥವನ್ನೂ ಕೆಲವೊಮ್ಮೆ ಸ್ಫುರಿಸುತ್ತದೆ. ಇದು ಕಿರುತೆರೆಯ ‘ಪುಟ್ಟಗೌರಿ’ ಕಾಲ. ಈ ಪುಟ್ಟಗೌರಿ ಸೂಚಿಸುವುದು ಕೂಡ ಹೆಣ್ಣಿನ ಅನವರತ ಕಷ್ಟಕೋಟಲೆಗಳನ್ನೇ.

ಗೌರಿ ಎನ್ನುವುದು ಆಪ್ತಭಾವವನ್ನು ಉಂಟುಮಾಡುವ ರೂಪಕವಷ್ಟೆ. ಕೆಲವೊಮ್ಮೆ ಇದು ಮನಸ್ಸನ್ನು ತತ್ತರಗೊಳಿಸುವ ರೂಪಕವೂ ಹೌದು. ಕಟ್ಟಡ ಕಾಮಗಾರಿಗಳಲ್ಲಿ ಇಟ್ಟಿಗೆ-ಸಿಮೆಂಟು ಎತ್ತುವ ಹೆಣ್ಣುಮಕ್ಕಳನ್ನು ನೋಡಿ. ಅವರ ಗಣೇಶಂದಿರು ಮರಗಳ ಅಥವಾ ಮೋಟುಗೋಡೆಗಳ ಹರಕುನೆರಳಲ್ಲಿ ಮಲಗಿರುತ್ತಾರೆ. ಬೆವರಿನ ಬದುಕುಗಳಲ್ಲಿ ಮಹಾಭಾರತದ ಆಧುನಿಕ ಪರ್ವಗಳಿವೆ. ‌

ಗೌರಿಯ ವೇಷ ಕೆಲವರಿಗೆ ಹಳತೆನ್ನಿಸಬಹುದು. ಆದರೆ, ಇದು ಪೋಷಾಕಿಗೆ ಸಂಬಂಧಿಸಿದ ಸಂಗತಿಯಷ್ಟೇ ಅಲ್ಲ. ಜೀನ್ಸ್‍ ಜಾಣೆಯರಲ್ಲೂ ಗೌರಿಯರಿರಬಹುದು. ಸೀರೆಯುಟ್ಟವರು ಅಂತರಂಗದಲ್ಲಿ ಗೌರಿಯ ವ್ಯತಿರಿಕ್ತ ರೂಪವಾಗಿರಬಹುದು.

ಜಗತ್ತೆಲ್ಲ ಗೌರವರ್ಣದ ಹಿಂದೆಬಿದ್ದಿರುವ ಸಂದರ್ಭದಲ್ಲಿ ಗೌರಿ ಹೆಚ್ಚು ಪ್ರಸ್ತುತಳೆನ್ನಿಸುತ್ತಾಳೆ. ಗೌರಿಯ ಗೌರವರ್ಣದ ಕುರಿತು ಕಥೆಗಳಿವೆ. ಗಣಪನ ಮಾತೆ ಗೌರಮ್ಮ ಮೂಲತಃ ಕಪ್ಪಾಗಿದ್ದಳಂತೆ. ಶಿವ ಯಾವುದೋ ಸಂದರ್ಭದಲ್ಲಿ ಪತ್ನಿಯ ಬಣ್ಣ ಹೆಸರಿಸಿ ಮಾತನಾಡಿದ್ದರಿಂದ ಲಜ್ಜಿತಳಾದ ಆಕೆ, ದೇಹತ್ಯಾಗ ಮಾಡಿ ಮತ್ತೆ ಗೌರವರ್ಣದೊಂದಿಗೆ ಜನಿಸಿದಳಂತೆ. ಇನ್ನೊಂದು ಕಥೆಯಲ್ಲಿ, ರಾಕ್ಷಸಸಂಹಾರಕ್ಕಾಗಿ ಕುಮಾರಿಯೊಬ್ಬಳಿಗೆ ಜನ್ಮ ಕೊಟ್ಟ ಸಂದರ್ಭದಲ್ಲಿ ದೇವಿ ಕಪ್ಪಾಗುತ್ತಾಳೆ. ನಂತರ ತಪಸ್ಸು ಮಾಡಿ ಗೌರವರ್ಣ ಪಡೆಯುತ್ತಾಳೆ. ಬಣ್ಣದ ಕೀಳರಿಮೆ ಜಗಜ್ಜನನಿಯನ್ನೂ ಕಾಡಿತು. ಅದು ಈ ಕಾಲದ ಗೌರಿಯರಲ್ಲೂ ಇದೆ.

ಇದು ಬಣ್ಣಗಳ ಅರ್ಥಗಳನ್ನು ಮೀರುವ ಜರೂರು ಹೆಚ್ಚಾಗಿರುವ ಕಾಲ. ಕಪ್ಪೆನ್ನುವುದು ತೊಗಲಿನಲ್ಲಿಲ್ಲ, ಅದು ಮನಸ್ಸಿನಲ್ಲಿದೆ, ನಮ್ಮ ವ್ಯತಿರಿಕ್ತ ನಡವಳಿಕೆಯಲ್ಲಿದೆ ಎನ್ನುವ ಭಾವನೆಯನ್ನು ಸಾಂಕ್ರಾಮಿಕಗೊಳಿಸಬೇಕಾದ ಕಾಲ. ಈಗ ನಮ್ಮ ಗೌರಿಯರು ಹಂಬಲಿಸಬೇಕಿರುವುದು ಗೌರ ವರ್ಣವನ್ನಲ್ಲ, ಗೌರವಯುತ ಬದುಕನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT