ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದ ಮುಂದೆ ಸಿಂಧುಗೆ ಲವ್‌ ಆಯ್ತು!

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ‘ಲೂಸ್ ಕನೆಕ್ಷನ್’ ವೆಬ್‌ ಸರಣಿಯಲ್ಲಿ ಅಭಿನಯಿಸುತ್ತಿರುವ ಅನುಭವ?

ಧಾರಾವಾಹಿ, ವೆಬ್‌ ಸರಣಿಗಳಲ್ಲಿ ತೊಡಗಿಕೊಂಡರೆ ಅವಕಾಶಗಳ ಕೊರತೆ ಎನ್ನುತ್ತಾರೆ. ಆದರೆ ಹಾಗೇನೂ ಇಲ್ಲ. ಸಿನಿಮಾದಲ್ಲಿ ತೊಡಗಿಕೊಳ್ಳುವುದರ ಜೊತೆ ಇದನ್ನೂ ಮಾಡುತ್ತಿದ್ದೇನೆ. ಕಥೆ–ಚಿತ್ರೀಕರಣದಲ್ಲೂ ವ್ಯತ್ಯಾಸವಿಲ್ಲ, ಸಿನಿಮಾ ನಿರ್ಮಾಣದಷ್ಟೆ ಗುಣಮಟ್ಟದಿಂದ ತಯಾರಾಗುತ್ತಿದೆ.‌

* ವೆಬ್‌ ಧಾರಾವಾಹಿಯಲ್ಲಿ ಏನಿದು ಶೌಚಾಲಯ ಪ್ರಕರಣ?

ನಾನು ಸುನೀಲ್ ರಾವ್ ಒಂದು ಪಾರ್ಟಿಗೆ ಹೋಗಿರುತ್ತೇವೆ. ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಸುನೀಲ್‌ ಕೂಡ ಬಾಗಿಲ ಬಳಿ ಕಾಯುತ್ತಿರುತ್ತಾರೆ. ಇಬ್ಬರು ಕಾಯುತ್ತಿರುವ ಸಂದರ್ಭದಲ್ಲಿ ಪರಿಚಯವಾಗುತ್ತದೆ. ಅಷ್ಟರಲ್ಲಿ ಹೋಟೆಲ್‌ನವರು ಶೌಚಾಲಯ ಕೆಟ್ಟಿರುವ ಬಗ್ಗೆ ತಿಳಿಸುತ್ತಾರೆ. ಪಕ್ಕದಲ್ಲೇ ನನ್ನ ಮನೆಯಿರುತ್ತದೆ ಹಾಗಾಗಿ ಸುನೀಲ್‌ ಅವರನ್ನೂ ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ. ನಮ್ಮಿಬ್ಬರಿಗೂ ಪ್ರೀತಿಯಾಗುತ್ತದೆ. ಧಾರಾವಾಹಿಯಲ್ಲಿ ಇದೊಂದು ತಮಾಷೆ ಪ್ರಸಂಗ.

* ನಿಜ ನೀವನದಲ್ಲೂ ಇಂಥ ಸಮಾಜಸೇವೆ ಮಾಡಿದ್ದೀರಾ?

ಅಯ್ಯೋ ಇಲ್ಲಪ್ಪ. ಹುಡುಗರಿಗೇನು ಸಾರ್ವಜನಿಕ ಶೌಚಾಲಯವಿದೆಯಲ್ಲ. ಹೋಗಲಿ ಬಿಡಿ. ಆದರೆ ಬಾತ್‌ರೂಂನ ಮುಂದೆ ಕಾಯುವ ಪ್ರಸಂಗ ಎಷ್ಟೋ ಆಗಿದೆ. ಒಳಗೆ ಯಾರೂ ಇರುವುದಿಲ್ಲ. 20–30 ನಿಮಿಷ ಯಾರೋ ಇದ್ದಾರೆ ಎಂದುಕೊಂಡು ಸುಮ್ಮನೆ ಕಾಯುತ್ತಾ ನಿಂತಿರುತ್ತೇನೆ.

* ಮನೆಗೆ ಬಂದ ಸುನೀಲ್ ನಿಮ್ಮ ಒಳ ಉಡುಪು ಕದ್ದುಕೊಂಡು ಹೋಗುತ್ತಾರೆ..

ಹ್ಹಹ್ಹ.. ಹ್ಹ... ಅದೊಂದು ಆಕಸ್ಮಿಕ ಘಟನೆ. ನಾನು ಬಾಲ್ಕನಿಯಲ್ಲಿ ಒಳಉಡುಪುಗಳನ್ನು ಒಣ ಹಾಕಿರುತ್ತೇನೆ. ಸುನೀಲ್ ಆಕಸ್ಮಿಕವಾಗಿ ಅದನ್ನು ಮುಟ್ಟುತ್ತಾರೆ ಅದು ಕ್ಲಿಪ್‌ನಿಂದ ಬಿಚ್ಚಿಕೊಂಡು ಕೈಗೆ ಬರುತ್ತದೆ. ತಕ್ಷಣ ನನ್ನ ಎಂಟ್ರಿ ಆಗುತ್ತದೆ. ಅವರು ಅದನ್ನು ಬಾಲ್ಕನಿಯಿಂದ ಕೆಳಗೆ ಎಸೆಯುತ್ತಾರೆ. ಕೊನೆಗೆ ಅದನ್ನು ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಒಂದಕ್ಕೊಂದು ಕಥೆ ಬೆಳೆದುಕೊಂಡು ಹೋಗಿದೆ. ಬಹಳ ತಮಾಷೆಯಾಗಿದೆ ಧಾರಾವಾಹಿ.

* ವೆಬ್‌ ಸರಣಿಯಾದ ಕಾರಣ ಸೆನ್ಸಾರ್ ಇಲ್ಲ, ಧೂಮಪಾನ–ಮದ್ಯಪಾನದ ದೃಶ್ಯಗಳ ಹೆಚ್ಚಿವೆ...

ಕಥೆಯೇ ಹಾಗಿದೆ. ನಾಸಾ ಎನ್ನುವ ಪಾತ್ರ ಧೂಮಪಾನ ವ್ಯಸನಿ. ಆಮೇಲೆ ವೆಬ್‌ ಸರಣಿಯಾದ ಕಾರಣ ಅಲ್ಲಿನ ವೀಕ್ಷಕರಿಗೆ ಸಾಮಾಜಿಕ ಕಾಳಜಿ ಬಗ್ಗೆ ಹೇಳಬೇಕಿಲ್ಲ. ಅವರಿಗೂ ಇದರ ಅರಿವು ಇರುತ್ತದೆ. ನಾವು ಏನು ಇದನ್ನು ಹೊಸದಾಗಿ ತೋರಿಸುತ್ತಿಲ್ಲ.

* ಹಿಂದಿ, ತಮಿಳಿನಲ್ಲಿ ವೆಬ್‌ ಧಾರಾವಾಹಿಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಕನ್ನಡದಲ್ಲಿ ಇದು ಮೊದಲ ಪ್ರಯೋಗ ಪ್ರತಿಕ್ರಿಯೆ ಹೇಗಿದೆ?

ಕನ್ನಡದವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಹಾಗಾಗಿ ವೀಕ್ಷಕರ ಕೊರತೆ ಏನಿಲ್ಲ. ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ. ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

* ನೀವು ಪಾತ್ರ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಎನ್ನುತ್ತಾರಲ್ಲ?

ಹೌದು ನನ್ನೊಳಗಿನ ಕಲಾವಿದೆ ತುಂಬಾ ಚ್ಯೂಸಿ. ಪ್ರಯೋಗಶೀಲ ಮನಸ್ಥಿತಿಯಿಂದಾಗಿ ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡುತ್ತೇನೆ. ನನಗೆ ಇಷ್ಟವಾಗಬೇಕು. ಹೊಸಬರ ತಂಡ ಎಂದರೆ, ಅವರೊಂದಿಗೆ ಕೆಲಸ ಮಾಡಲು ನನಗೆ ಆಸಕ್ತಿ ಹೆಚ್ಚು. ಅವರು ತುಂಬಾ ಕ್ರಿಯಾತ್ಮಕವಾಗಿರುತ್ತಾರೆ. ಹಾಗೇ ನನ್ನ ಪಾತ್ರ ಹೇಗಿದೆ ಎಂದು ನೋಡುತ್ತೇನೆ. ಅಭಿನಯಕ್ಕೆ ಅವಕಾಶವಿದ್ದರೆ ಒಪ್ಪಿಕೊಳ್ಳುತ್ತೇನೆ.

* ಹೆಚ್ಚು ಬೋಲ್ಡ್‌ ಪಾತ್ರಗಳೇ ನಿಮ್ಮನ್ನು ಅರಸಿ ಬರುತ್ತಿವೆಯೇ?

ಹಾಗೇನೂ ಇಲ್ಲ. ಪ್ರಯೋಗಗಳನ್ನು ಮಾಡಲು ಇಷ್ಟ. ಇಂಥ ಪಾತ್ರಗಳನ್ನೇ ಮಾಡಬೇಕು ಎಂಬ ಮನಸ್ಥಿತಿ ನನಗಿಲ್ಲ. ಹಾಗೇ ನನಗೆ ಅರಸಿ ಬಂದವೂ ಬೋಲ್ಡ್‌ ಪಾತ್ರವಷ್ಟೇ ಅಲ್ಲ. ನಾನು ಆಯ್ಕೆ ಮಾಡಿಕೊಂಡ ಪಾತ್ರಗಳು ಹಾಗಿದ್ದವು. ಜನಪ್ರಿಯ ಪಾತ್ರಗಳಿಗಾಗೇ ಕಾಯುತ್ತಾ ಕೂರಬಾರದು. ಪ್ರಯೋಗ ಮಾಡುತ್ತಿರಬೇಕು.

* ನಿಜ ಜೀವನದಲ್ಲಿ ಆಕಸ್ಮಿಕವಾಗಿ ಪರಿಚಯವಾದವರು ಪ್ರೇಮಿಯಾಗಿದ್ದಾರಾ..

ಇಲ್ಲ. ನಾನು ಒಂಥರಾ ಹುಡುಗರಂಗೇ. ಹುಡುಗರೊಂದಿಗೆ ಮಚ್ಚಾ, ಮಗಾ ಎಂದುಕೊಂಡು ಗೆಳಯರೊಂದಿಗೆ ಗೆಳೆಯನಾಗಿಬಿಡುತ್ತೇನೆ. ಎಲ್ಲರೊಂದಿಗೂ ಬ್ರೋ ಜೋನ್‌ನಲ್ಲಿ ಇರುತ್ತೇನೆ. ಹಾಗಾಗಿ ಇಂಥ ಅವಕಾಶ ಕಡಿಮೆ.

* ಯಾರೊಂದಿಗೆ ಡೇಟ್‌ ಮಾಡಲು ಇಷ್ಟ?

ಡೇಟ್‌ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲ. ಸೀದಾ ಮದುವೆಯಾಗೋಣ ಎಂಬ ಯೋಚನೆಯಲ್ಲಿ ಇದ್ದೇನೆ.

* ಯಾವ ಸಿನಿಮಾ ತಯಾರಿಯಲ್ಲಿ ಇದ್ದೀರಿ?

‘ಹೀಗೊಂದು ದಿನ’, ‘ಕಾಣದಂತೆ ಮಾಯವಾದನೊ’, ಹಾಗೇ ತುಳುವಿನ ‘ಅಂಬರ್ ಕೇಟ್ರಸ್‌’ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT