ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದಡುಗೆ... ಸಿಹಿ ಬಗೆ ಬಗೆ...

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗೋಧಿ ಹಿಟ್ಟಿನ ಮೋದಕ

ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು - 2 ಬಟ್ಟಲು
ಮೈದಾ ಹಿಟ್ಟು 1ದೊಡ್ಡ ಚಮಚ
ಬೆಲ್ಲ - 1ಬಟ್ಟಲು
ತುರಿದ ಕೊಬ್ಬರಿ - 1ಬಟ್ಟಲು
ಏಲಕ್ಕಿ ಪುಡಿ ಚಿಟಿಕೆಯಷ್ಟು
ತುಪ್ಪ

ತಯಾರಿಸುವ ವಿಧಾನ: ಮೊದಲಿಗೆ ಪುಡಿ ಮಾಡಿದ ಬೆಲ್ಲ , ಏಲಕ್ಕಿ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು( ಸೌಟನಿಂದ ಆಡಿಸುತ್ತಾ ಬಿಸಿ ಮಾಡಿ). ಬೆಲ್ಲ ಮತ್ತು ಕೊಬ್ಬರಿಯ ಹೂರಣ ರೆಡಿಯಾಗುತ್ತದೆ. ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಕಲೆಸಿದ ಹಿಟ್ಟು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ತಟ್ಟಿ ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. ಈ ರೀತಿ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಇಷ್ಟು ಮಾಡಿದರೆ ಗಣೇಶನಿಗೆ ಪ್ರಿಯವಾದ ಮೋದಕ ರೆಡಿ.

*

ಅಕ್ಕಿ ಹಿಟ್ಟಿನ ಮೋದಕ

ಬೇಕಾಗುವ ಸಾಮಗ್ರಿಗಳು
ಜರಡಿ ಹಿಡಿದ ಅಕ್ಕಿ ಹಿಟ್ಟು - 2ಕಪ್
ನೀರು -1 ಕಪ್
ತುರಿದ ತೆಂಗಿನ ಕಾಯಿ - 2ಕಪ್
ಬೆಲ್ಲದ ಪುಡಿ ಅಥವಾ ಸಕ್ಕರೆ - 2 ಕಪ್
ಏಲಕ್ಕಿ ಪುಡಿ ಚಿಟಿಕೆಯಷ್ಟು

ತಯಾರಿಸುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ೧ಕಪ್ ನೀರನ್ನು ಹಾಕಿ ಅದರಲ್ಲಿ ಜರಡಿ ಹಿಡಿದ ಅಕ್ಕಿ ಹಿಟ್ಟನ್ನು ಹಾಕಿ ಮಂದ ಉರಿಯಲ್ಲಿ ಮಿಶ್ರಣ ಮಾಡುತ್ತಾ  ಗಟ್ಟಿಯಾಗಿ ತಳ ಹಿಡಿಯದಂತೆ ಮುದ್ದೆಯಾಕಾರದಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಇನ್ನೊಂದು ಬಾಣಲೆಗೆ ಕೊಬ್ಬರಿ ತುರಿ, ಸಕ್ಕರೆ ಅಥವಾ ಬೆಲ್ಲ ಯಾವುದಾದರೂ ಒಂದನ್ನು ಏಲಕ್ಕಿಪುಡಿ ಜೊತೆ ಬೆರೆಸಿ ಮಂದ ಉರಿಯಲ್ಲಿ ಬೇಯಿಸಿ ಹೂರಣಮಾಡಿ ಇಟ್ಟುಕೊಳ್ಳಬೇಕು. ನಂತರ ಹೂರಣ ತಣ್ಣಗಾದ ನಂತರ ಸ್ವಲ್ಪ ಎಣ್ಣೆಯನ್ನು ಕೈಗೆ ಸವರಿ ಅಕ್ಕಿಹಿಟ್ಟಿನ ಚಿಕ್ಕ ಮುದ್ದೆಯನ್ನು ಪುರಿ ಆಕಾರದಲ್ಲಿ ತಟ್ಟಿ ಅದರ ಮಧ್ಯೆ ಬೆಲ್ಲ ಕೊಬ್ಬರಿ ಹೂರಣವನ್ನು ಹಾಕಿ ಕೈಯಿಂದಲೇ ಬೆಳ್ಳುಳ್ಳಿ ಆಕಾರಕ್ಕೆ ಮಡಚಬೇಕು ಈ ರೀತಿ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಹಬೆಯಲ್ಲಿ ೫ ರಿಂದ 10 ನಿಮಿಷಗಳ ಕಾಲ ಬೇಯಿಸಿ ಮೇಲೆ ತುಪ್ಪ ಸವರಿದರೆ ರುಚಿ ರುಚಿಯಾದ ಅಕ್ಕಿ ಹಿಟ್ಟಿನ ಮೋದಕ ಸವಿಯಲು ಸಿದ್ಧ.

**

ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು
ಮೈದಾಹಿಟ್ಟು - ಒಂದು ಬಟ್ಟಲು
ಚಿಟಿಕೆ ಉಪ್ಪು
ಎರಡು ಚಮಚ ತುಪ್ಪ
ಕಡ್ಲೆ - ಒಂದು ಬಟ್ಟಲು
ಕೊಬ್ಬರಿತುರಿ, ಸಕ್ಕರೆಪುಡಿ, ಏಲಕ್ಕಿ ಪುಡಿ, ಗಸಗಸೆ, ಎಳ್ಳು, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಗಸಗಸೆಯನ್ನು ಸ್ವಲ್ಪ ಹುರಿದು, ಪುಡಿಮಾಡಿಟ್ಟುಕೊಳ್ಳಿ. ನಂತರ ಮೈದಾಹಿಟ್ಟಿಗೆ,ಚಿಟಿಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ,ಗಸಗಸೆ,ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿ ಹೂರಣ ಮಾಡಿಟ್ಟುಕೊಳ್ಳಿ. ನಂತರ ಮೈದಾಹಿಟ್ಟಿನ ಕಣಕದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಅದರಿಂದ ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ, ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ , ಸರಿಯಾಗಿ ಎ ಕಡೆಯೂ ಮುಚ್ಚಿ. ಅಂಚು ಮಡಿಸುವ ವಿಧಾನ ತಿಳಿದಿರುವವರು ಅದನ್ನು ಸುತ್ತಿ ಸುತ್ತಿ ಅಂಚಿಗೆ ಚಿತ್ತಾರ ಮಾಡಬಹುದು. ಅಂಚು ಮಡಚಲು ಬರದವರಿಗೆ ಮಾರುಕಟ್ಟೆಯಲ್ಲಿ ಕಡಬು ತಯಾರಿಸುವ ಕಟರ್ ದೊರೆಯುತ್ತವೆ. ಇದರಿಂದ ಕಟ್ ಮಾಡಿ ಎಲ್ಲಾ ಅಂಚು ಹೊಂದಿಕೊಂಡಿವೆಯೋ ಇಲ್ಲವೋ ಪರೀಕ್ಷಿಸಿ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಎಣ್ಣೆಯಲ್ಲಿ ಪುಡಿಯೆಲ್ಲ ಆಚೆ ಬರುತ್ತದೆ. ಇದನ್ನು ತಯಾರಿಸುವಾಗ ನೋಡಿಕೊಂಡು ಸರಿಯಾಗಿ ತಯಾರಿಸಿಕೊಳ್ಳಿ, ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಗಣಪನಿಗೆ ಇಷ್ಟವಾದ ಕರ್ಜಿಕಾಯಿ ರೆಡಿ.

**

ಹಾಲು ಖೀರು

ಬೇಕಾಗುವ ಸಾಮಗ್ರಿಗಳು

ತೆಂಗಿನಕಾಯಿ ಅಥವಾ ಕೊಬ್ಬರಿ - ಅರ್ಧಕಪ್
ಗಸಗಸೆ - ಒಂದು ದೊಡ್ಡ ಚಮಚ
ಬಾದಾಮಿ - 7–8
ಶ್ಯಾವಿಗೆ - ಕಾಲು ಕಪ್
ಚಿರೋಟಿ ರವೆ - ಎರಡು ಟೇಬಲ ಚಮಚ
ಸಕ್ಕರೆ ಅಥವ ಬೆಲ್ಲ ರುಚಿಗೆ ತಕ್ಕಷ್ಟು
ತುಪ್ಪ - ಮೂರು ದೊಡ್ಡ ಚಮಚ
ಹಾಲು ಅರ್ಧ ಲೀಟರ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ

ತಯಾರಿಸುವ ವಿಧಾನ: ಮೊದಲು ಶ್ಯಾವಿಗೆ ಮತ್ತು ರವೆಯನ್ನು ತುಪ್ಪ ಹಾಕಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಗೋಡಂಬಿ ಮತ್ತು ದ್ರಾಕ್ಷಿಯನ್ನು ಕೂಡ ಹುರಿದುಕೊಂಡು ಇಟ್ಟುಕೊಳ್ಳಿ. ನಂತರ ತೆಂಗಿನಕಾಯಿ ಮತ್ತು ಹದವಾಗಿ ಹುರಿದ ಗಸಗಸೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ,ಸ್ವಲ್ಪ ನೀರು ಸೇರಿಸಿ ರುಬ್ಬಿ. ಅದರ ಜೊತೆಯಲ್ಲಿಯೇ ಬಾದಾಮಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸ್ವಲ್ಪ ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಅದು ಕರಗಿದ ನಂತರ ರುಬ್ಬಿದ ತೆಂಗಿನಕಾಯಿ,ಗಸಗಸೆ ಮಿಶ್ರಣವನ್ನು ಹಾಕಿ, ಅದು ಹಸಿವಾಸನೆ ಹೋಗುವವರೆಗೂ ಕುದಿಸಿ, ಬೇಕೆನಿಸಿದರೆ ಕುದಿಯುವಾಗ ಸ್ವಲ್ಪ ನೀರು ಸೇರಿಸಿ . ಆಮೇಲೆ ಅದಕ್ಕೆ ಶ್ಯಾವಿಗೆ ಮತ್ತು ರವೆಯನ್ನು ಹಾಕಿ, ಅದು ಸ್ವಲ್ಪ ಬೆಂದ ಮೇಲೆ ಹಾಲು ಸೇರಿಸಿ, ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ, ತಳಹತ್ತದಂತೆ ತಿರುವುತ್ತಿರಿ, ಇಲ್ಲವೆಂದರೆ ತಳ ಹತ್ತಿ ಸೀದ ವಾಸನೆ ಬರುತ್ತದೆ, ಆಗಾಗಿ ಎಲ್ಲವನ್ನು ಸೇರಿಸಿದ ಮೇಲು ಚೆನ್ನಾಗಿ ತಿರುಗಿಸುತ್ತಿರಿ. ಶ್ಯಾವಿಗೆ ಬೆಂದ ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ. ಒಂದು ಕುದಿ ಕುದಿಸಿ ಇಳಿಸಿ. ಗುಲಾಬಿ ನೀರನ್ನು ಬಳಸುವುದಾದರೆ ಸ್ವಲ್ಪ ತಣ್ಣಗಾದ ಮೇಲೆ ಸೇರಿಸಿ, ಇದು ತುಂಬಾ ಒಳ್ಳೆಯ ಪರಿಮಳವನ್ನೂ ನೀಡುತ್ತದೆ. ಈಗ ಹಾಲು ಖೀರು ಸವಿಯಲು ಸಿದ್ಧ. ತುಪ್ಪವನ್ನು ನಿಮ್ಮ ಇಷ್ಟದಂತೆ ಹಾಕಿಕೊಳ್ಳಬಹುದು.

**

ರವೆ ಉಂಡೆ

ಬೇಕಾಗುವ ಸಾಮಗ್ರಿಗಳು

ರವೆ - ಎರಡು ಕಪ್
ಸಕ್ಕರೆ - ಎರಡು ಕಪ್
ಕೊಬ್ಬರಿ ತುರಿ - ಒಂದು ಕಪ್, ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ ,
ಕೇಸರಿ ದಳಗಳು - ಅರ್ಧ ಚಮಚ, ಏಲಕ್ಕಿ ಪುಡಿ ಸ್ವಲ್ಪ ಹಾಲು ಅರ್ಧ ಕಪ್, ತುಪ್ಪ - ನಾಲ್ಕು ಚಮಚ

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ. ಅದಕ್ಕೆ ಸಕ್ಕರೆ ಬೆರೆಸಿ,ಕೊಬ್ರಿತುರಿ ಹಾಕಿ. ದ್ರಾಕ್ಷಿ,ಗೋಡಂಬಿ,ಬಾದಾಮಿ,ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ಒಂದೆರಡು ನಿಮಿಷ ಚೆನ್ನಾಗಿ ತಿರುವಿ, ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ತಣ್ಣಗಾದ ಮೇಲೆ ತುಪ್ಪದ ಕೈನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT