ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆವ ದಾರಿಗುಂಟ ಚಿತ್ರದೋಕುಳಿ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಿಎಸ್ಸಿ ಮುಗಿಸಿ ಸೆಂಟ್ರಲ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ನವೀನ್‌ ತೇಜಸ್ವಿ ಅವರ ಫೇಸ್‌ಬುಕ್‌ ಪುಟವನ್ನೊಮ್ಮೆ ನೋಡಬೇಕು. ಬೆಂಗಳೂರು ಬದುಕಿನ ನಾನಾ ಮುಖಗಳು ಅಲ್ಲಿ ತೆರೆದುಕೊಳ್ಳುತ್ತವೆ. ಬಟ್ಟಲು ಹೊಸತಾದರೂ ಅದರ ಖಾಲಿತನ ನೋಡಿ ಮರುಗುವ ಪುಟ್ಟ ಮಗು, ಗ್ರಾಹಕರ ನಿರೀಕ್ಷೆಯಲ್ಲಿ ಒಣಗಿದ ತರಕಾರಿ ಮಾರುವ ಹಿರಿಯ ಜೀವ, ಮೆಜೆಸ್ಟಿಕ್‌ನಲ್ಲಿ ಚೆಲ್ಲಾಪಿಲ್ಲಿಯಾದ ಬದುಕು, ಮಗುವಿನ ಮುಗ್ಧ ನಗು, ಎಂದಿಗೂ ಸಲ್ಲುವ ಅಮ್ಮ, ನೀರಿನ ಹಾಹಾಕಾರ... ಹೀಗೆ ಬೆಂಗಳೂರಿನ ನಾನಾ ಮುಖಗಳನ್ನು ಪ್ರಸ್ತುತಪಡಿಸುತ್ತದೆ ಇವರ ಛಾಯಾಚಿತ್ರಗಳು.

‘ಕ್ಯಾಮರಾ ಮೋಹಿ ನಾನು. ಅಮ್ಮ ಮದುವೆಗೆ ಕರೆದುಕೊಂಡು ಹೋದರೆ ಕ್ಯಾಮರಾಮೆನ್‌ ಪಕ್ಕದಲ್ಲಿ ಹೋಗಿ ನಿಲ್ಲುತ್ತಿದ್ದೆ. ಹೀಗೆ ನನ್ನ ಬೆರಗುಗಣ್ಣುಗಳಲ್ಲಿ ತುಂಬಿಕೊಂಡ ಕ್ಯಾಮರಾಕ್ಕಾಗಿ ಮನಸ್ಸು ದಿನವೂ ಹಾತೊರೆಯುತ್ತಲೇ ಇತ್ತು. ಆದರೆ ಅದನ್ನು ಖರೀದಿಸುವ ಸಾಮರ್ಥ್ಯ ನಮಗಿರಲಿಲ್ಲ. ಊರು ಶಿವಮೊಗ್ಗ. ಅಪ್ಪ ಕಿರಾಣಿ ಅಂಗಡಿ ಇಟ್ಟಿದ್ದಾರೆ. ಅಮ್ಮ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿಕೊಂಡರೆ ಸಾಕು ಎನ್ನುವ ಪರಿಸ್ಥಿತಿ ಇತ್ತು’ ಎನ್ನುತ್ತಾರೆ ನವೀನ್‌.

ಹೀಗೆ ಕ್ಯಾಮರಾ ಧ್ಯಾನದಲ್ಲೇ ಇದ್ದ ನವೀನ್‌ ಗೆಳೆಯರ ಬಳಿ ಇದ್ದ ಕ್ಯಾಮರಾ ನೋಡಿ ಖುಷಿಪಡುತ್ತಿದ್ದರಷ್ಟೇ. ಪದವಿ ಅಂತಿಮ ವರ್ಷದಲ್ಲಿದ್ದಾಗ ಕ್ಯಾಮರಾ ಕೊಳ್ಳಲೇಬೇಕು ಎನ್ನುವ ಹಂಬಲ ಹೆಚ್ಚಾಯ್ತು. ಇದೇ ವೇಳೆಗೆ ಅವರ ಸೀನಿಯರ್‌ ಹೊಸ ಕ್ಯಾಮರಾ ಖರೀದಿಸುವ ವಿಷಯ ತಿಳಿಯಿತು. ಹಳೆಯ ಕ್ಯಾಮರಾ ತನಗೇ ಕೊಡುವಂತೆ ಕೇಳಿಕೊಂಡರು. ಆರೇಳು ವರ್ಷ ಹಳೆಯದಾದ ಆ ಕ್ಯಾಮೆರಾಕ್ಕೆ ₹20 ಸಾವಿರ. ತನಗೆ ಬಂದ ₹5ಸಾವಿರ ಸ್ಕಾಲರ್‌ಶಿಪ್‌ ಹಣ, ಕೇಟರಿಂಗ್‌, ಬೇರೆ ಬೇರೆ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಪ್ರಮೋಟ್‌ ಮಾಡುವ ಕೆಲಸ ಮಾಡಿ ₹20ಸಾವಿರ ಕಲೆಹಾಕಿದರು. ಅಂತೂ ನವೀನ್‌ ಕೈಯಲ್ಲಿ ‘ನಿಕಾನ್‌ 3100’ ಕ್ಯಾಮರಾ ಸಿಕ್ಕೇಬಿಟ್ಟಿತು.

ಕ್ಯಾಮೆರಾ ಸಿಕ್ಕಿತು, ಅಂದಚೆಂದದ ಚಿತ್ರ ತೆಗೆಯಬೇಕು ಎನ್ನುವ ಜಿದ್ದಿಗೇನೂ ನವೀನ್‌ ಬಿದ್ದವರಲ್ಲ. ಕ್ಯಾಂಡಿಡ್‌ ಛಾಯಾಗ್ರಹಣದ ಬಗೆಗೆ ಹೆಚ್ಚು ಒಲವಿರುವ ಅವರು ತಾನೆಲ್ಲೆ ಹೋದರೂ ಕ್ಯಾಮೆರಾ ಜೊತೆಗಿರುವಂತೆ ನೋಡಿಕೊಳ್ಳುತ್ತಾರೆ. ಇನ್ನೊಂದು ವಿಶೇಷ ಎಂದರೆ ನವೀನ್‌ ಹೆಚ್ಚಿನ ಸ್ಥಳಗಳನ್ನು ನಡೆದುಕೊಂಡೇ ಕ್ರಮಿಸುತ್ತಾರೆ. ದುಡ್ಡು ಉಳಿತಾಯವಾಗುತ್ತದೆ ಎನ್ನುವುದು ಒಂದು ಕಾರಣವಾದರೆ ಕ್ಯಾಮರಾ ಕಣ್ಣಲ್ಲಿ ಚಿತ್ರಗಳನ್ನು ಮೊಗೆದುಕೊಳ್ಳಬಹುದು ಎನ್ನುವ ಬಯಕೆ ಅವರದ್ದು. ಅದೆಷ್ಟೋ ಬಾರಿ ಸ್ನೇಹಿತನ ಜೊತೆ ಸೇರಿ ಶಾಂತಿನಗರದಿಂದ ಮಲ್ಲೇಶ್ವರ, ಯಶವಂತಪುರದವರೆಗೂ ನಡೆದುಕೊಂಡೇ ಓಡಾಡಿದ್ದಾರಂತೆ.

ಬದುಕಿನ ಭಾವಲಹರಿಗಳನ್ನು ಅವರು ಶಾಂತಿನಗರ, ಮಲ್ಲೇಶ್ವರ, ಮತ್ತಿಕೆರೆ, ಕಾರ್ಪೊರೇಶನ್‌, ಹೆಬ್ಬಾಳ, ಯಶವಂತಪುರ, ನಾಗರಬಾವಿ, ಅತ್ತಿಗುಪ್ಪೆ, ವಿಜಯನಗರ, ರಾಜರಾಜೇಶ್ವರಿನಗರ, ಮಾಗಡಿ ರಸ್ತೆ, ಕೆ.ಆರ್‌.ಮಾರ್ಕೆಟ್‌, ಮೆಜೆಸ್ಟಿಕ್‌ ಮುಂತಾದೆಡೆ ಸೆರೆಹಿಡಿದಿದ್ದಾರೆ. ‘ನೈಜತೆಯನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ವ್ಯಕ್ತಿಗೆ ತನ್ನ ಚಿತ್ರ ಕ್ಯಾಮರಾದಲ್ಲಿ ಸೆರೆಯಾಗುತ್ತದೆ ಎನ್ನುವುದು ಗೊತ್ತಾದರೆ ಅವನ ಹಾವಭಾವಗಳು ಬದಲಾಗಿಬಿಡುತ್ತವೆ. ಆಗ ನೈಜತೆ ಮರೆಯಾದಂತೆ. ಹೀಗಾಗಿ ಕ್ಯಾಂಡಿಡ್‌ ಛಾಯಾಗ್ರಹಣ ನನಗೆ ಹೆಚ್ಚು ಆಪ್ತ’ ಎನ್ನುತ್ತಾರೆ. ಭಾವಲಹರಿಗಳನ್ನು ಕ್ಲಿಕ್ಕಿಸುವುದಷ್ಟೇ ಅಲ್ಲ, ಆ ಚಿತ್ರಗಳಿಗೆ ಮನಸೆಳೆವ ಸಾಲುಗಳನ್ನೂ ಅವರು ಬರೆಯುತ್ತಾರೆ.

ಮರೆತರೆ ನಿನ್ನ ಜಗದ ಜನರು, ಉಳಿವುದೊಂದೇ ತಾಯಿ ಮಡಿಲು, ಸಂತೆಮಾರ್ಕೆಟ್ -ಕಲರ್‌ಫುಲ್ ಮತ್ತು ಸೋವಿ, ಊರೇ ಕೊಚ್ಚಿ ಹೋಗುವಾಗ ಐಉಳಿದದ್ದು ಹಿರಿಮರವೊಂದೇ, ಮೌನದೋಕುಳಿ, ದೂರದಿಂದ ಕಂಡವರು, ಇಲ್ಲಿ ಕನಸುಗಳನ್ನು ಮಾರಲಾಗುವುದು... ಹೀಗೆ ಚಿತ್ರಗಳಿಗೆ ನವೀನ್‌ ನೀಡುವ ಸಾಲುಗಳೂ ಆಕರ್ಷಕವಾಗಿರುತ್ತವೆ.

ಛಾಯಾಗ್ರಹಣವಷ್ಟೇ ಅಲ್ಲ, ಸಾಹಿತ್ಯವೂ ಅವರಿಗಿಷ್ಟ. ಕಥೆ, ಕವನಗಳನ್ನು ಅವರು ಬರೆದಿದ್ದಾರೆ. ಸಂಗೀತವೂ ಅವರಿಗಿಷ್ಟ. ಅವರದ್ದೇ ಆದ ಬ್ಲಾಗ್‌ ಕೂಡ ಇದೆ. ಪುಸ್ತಕ, ಕವನ ಸಂಕಲನ ಬಿಡುಗಡೆ ಮಾಡುವ ತಯಾರಿಯಲ್ಲಿಯೂ ನವೀನ್‌ ಇದ್ದಾರೆ. ಸಿನಿಮಾ ಹಾಗೂ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುವ ಅವರು ಮುಂದೊಂದು ದಿನ ಸಿನಿಮಾ ಮಾಡುವ ಕನಸಿದೆ.

ನವೀನ್ ಫೇಸ್‌ಬುಕ್‌ ಪುಟದ ಕೊಂಡಿ– http://bit.ly/2wlCB3J

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT