ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಿ ಮಾಡಿದೆ ‘ಇಂದು ನಿನ್ನ ಎದುರಲಿ...‌’

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಧುರವಾದ, ಪ್ರಬುದ್ಧ ಪ್ರೀತಿ ಎಂಬುದು ಸದ್ದಿಲ್ಲದೆ ಅರಳುವ ಹೂವಿನಂತೆ. ತಂಗಾಳಿಯಲ್ಲಿ ತೇಲಿಬರುವ ಸುಗಂಧದಂತೆ. ಮನಸುಮನಸುಗಳು ಮೌನವಾಗಿ ಬೆಸುಗೆಗೊಂಡ ಆ ಕ್ಷಣಗಳ ಭಾವಲಹರಿ ನೀಡುವ ಅನುಭೂತಿ ಅನನ್ಯ. ಅಂಥದೊಂದು ಅನುಭೂತಿ ನೀಡುತ್ತದೆ ‘ಕಾಫಿ ತೋಟ’ದ ‘ಇಂದು ನಿನ್ನ ಎದುರಲಿ’ ಹಾಡು.

ಟಿ.ಎನ್. ಸೀತಾರಾಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಕಾಫಿ ತೋಟ’ದಲ್ಲಿ ಕಾಫಿಯಷ್ಟೇ ಹಿತವಾಗಿ ಪರಿಮಳ ಬೀರುವ, ಹದವಾಗಿ ಹಬೆಯಾಡುವ ಕಾಫಿಯಷ್ಟೇ ಮಧುರವಾಗಿರುವ ಈ ಹಾಡು ಮಲೆನಾಡಿನ ಸಿರಿಯಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡಿದೆ. ಎಫ್.ಎಂ. ರೇಡಿಯೋಗಳಲ್ಲಿ ವಾರಗಟ್ಟಲೆ ಹಿಟ್ ಸಾಂಗ್ ಪಟ್ಟಿಯಲ್ಲಿ ಆದ್ಯ ಸ್ಥಾನ ಗಳಿಸಿರುವ ಈ ಹಾಡು, ಈಗ ಚಂದನವನದ ‘ಹಿಟ್ ಹಾಡು’ಗಳ ಸಾಲಿಗೆ ಸೇರ್ಪಡೆಗೊಂಡಿದೆ. ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು 5ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

‘ಮಾಯಾಮೃಗ’, ‘ಮುಕ್ತ’ (ಧಾರಾವಾಹಿ) ’ಮತದಾನ’ದಂಥ ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಟಿ.ಎನ್. ಸೀತಾರಾಂ ಅವರಿಗೆ ಅವರದ್ದೇ ಆದ ವೀಕ್ಷಕ ವರ್ಗವಿದೆ. ಎಲ್ಲೂ ಸಭ್ಯತೆಯ ಗಡಿ ದಾಟದೇ, ಪ್ರೀತಿಯ ತೋಟದೊಳಗೆ ವಿಹರಿಸುವ ನಾಯಕ–ನಾಯಕಿಯನ್ನು ‘ಇಂದು ನಿನ್ನ ಎದುರಲಿ’ ಹಾಡಿನಲ್ಲಿ ಚಿತ್ರೀಕರಿಸಿರುವ ರೀತಿಯೇ ವಿಶಿಷ್ಟವಾಗಿದೆ. ಕಣ್ಮುಚ್ಚಿ ಕೇಳಿದರೂ, ಕಣ್ತೆರೆದು ಹಾಡನ್ನು ನೋಡಿದರೂ ಮನದಲ್ಲೊಂದು ಮಧುರವಾದ ಭಾವವೀಣೆಯೊಂದು ಮೀಟಿದಂಥ ಅನುಭೂತಿ ನೀಡುವಂತಿದೆ ಈ ಹಾಡು.

ಗೀತ ರಚನೆಕಾರ ಜಯಂತ ಕಾಯ್ಕಿಣಿ ಅವರ ಭಾವಲಹರಿಗೆ, ಮಿದುನ್ ಮುಕುಂದನ್ ಸಂಗೀತ ನಿರ್ದೇಶಿಸಿದ್ದರೆ, ಸಂಗೀತ, ಸಾಹಿತ್ಯಕ್ಕೆ ಪೂರಕವಾಗಿ ಛಾಯಾಗ್ರಾಹಕ ಅಶೋಕ ಕಶ್ಯಪ್ ಸಿನಿಮಾಟೋಗ್ರಫಿ ಮಾಡಿದ್ದಾರೆ. ಹಾಡಿನಲ್ಲಿ ಕಂಡು ಬರುವ ಕರಾವಳಿಯಲ್ಲಿರುವ ದ್ವೀಪಗಳು, ಚಿಕ್ಕಮಗಳೂರಿನ ಹಸಿರ ಸಿರಿ, ಬೀಚ್‌ಗಳ ದೃಶ್ಯಗಳು ನೋಡುಗರ ಕಣ್ಣಗಳಿಗೆ ತಂಪೆರೆಯುತ್ತವೆ.

‘ಈ ಹಾಡು ಪ್ರಬುದ್ಧಪ್ರೀತಿಯಾಗಿ, ರೊಮ್ಯಾಂಟಿಕ್ ಆಗಿ ಬರಬೇಕೆಂದು ನಿರ್ದೇಶಕ ಟಿ.ಎನ್.ಸೀತಾರಾಂ ಅವರು ವಿವರಿಸಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಅವರಿಗೆ  ಆರು ಟ್ಯೂನ್‌ಗಳನ್ನು ಕೊಟ್ಟಿದ್ದೆ. ಅದರಲ್ಲಿ ಈಗ ಹಿಟ್ ಆಗಿರುವ ‘ಇಂದು ನಿನ್ನ ಎದುರಲಿ’ ಟ್ಯೂನ್ ಸೀತಾರಾಂ ಅವರಿಗೆ ಇದು ತುಂಬಾ ಇಷ್ಟವಾಯಿತು. ಟ್ಯೂನ್ ಸಿದ್ಧವಾದ ನಂತರ ಜಯಂತ್ ಸರ್‌ಗೆ ಕೊಟ್ಟೆ. ಅವರು ಅದಕ್ಕೆ ತಕ್ಕ ಭಾವಲಹರಿಯ ಗೀತರಚನೆ ಮಾಡಿಕೊಟ್ಟರು. ನಾನು ಹೇಗೆ ಸಂಗೀತ ಸಂಯೋಜಿಸಿದ್ದೇನೋ, ಹಾಡಿನ ಅರ್ಥಕ್ಕನುಗುಣವಾಗಿ ಹಾಡು ಚಿತ್ರೀಕರಣಗೊಂಡಿದೆ. ಸಂಗೀತ, ಸಾಹಿತ್ಯ, ಛಾಯಾಗ್ರಹಣ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿವೆ. ಅದುವೇ ಈ ಹಾಡಿನ ಯಶಸ್ಸು’ ಎನ್ನುತ್ತಾರೆ ಈ ಹಾಡಿನ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್.

‘ಸಂಗೀತದ ಇಂಪು ಕೇಳುಗರನ್ನು ಹಿಡಿದಿಡಬೇಕು. ಅದನ್ನು ಕೇಳಿದವರು ಮತ್ತೆಮತ್ತೆ ಗುನುಗುವಂತಿರಬೇಕು ಎಂಬುದಷ್ಟೇ ನನ್ನ ಮನದಲ್ಲಿತ್ತು. ಅವೆಲ್ಲವನ್ನು  ಗಮನದಲ್ಲಿಟ್ಟುಕೊಂಡು ಸಂಗೀತ ಸಂಯೋಜಿಸಿದೆ. ನಿಜಕ್ಕೂ ಇದೊಂದು ಮ್ಯಾಜಿಕ್. ಕನ್ನಡದಲ್ಲಿ ಇದು ನನ್ನ ನಾಲ್ಕನೇ ಸಿನಿಮಾ. ಈಗ ಜನರು ನನ್ನನ್ನು ಗುರುತಿಸುವಂತಾಗಿದೆ. ನಾನು ಕನ್ನಡದವನಲ್ಲ. ಕೇರಳದವನು. ಹಾಡಿನ ಸಾಹಿತ್ಯವನ್ನು ಜಯಂತ್ ಸರ್ ನನಗೆ ತುಂಬಾ ಚೆನ್ನಾಗಿ ವಿವರಿಸಿ, ಅರ್ಥ ಮಾಡಿಸಿದರು.  ಮಾಧುರ್ಯಕ್ಕೆ ಸದಾ ಮನ್ನಣೆ ದೊರೆಯುತ್ತದೆ ಎಂಬುದನ್ನು ಈ ಹಾಡು ಮತ್ತೆ ಸಾಬೀತು ಪಡಿಸಿದೆ’ ಎನ್ನುತ್ತಾರೆ ಅವರು.

ಮುಟ್ಟಬಾರದು, ಮುತ್ತು ಕೊಡಬಾರದು!

‘ಕಾಫಿತೋಟ’ ಸಿನಿಮಾದ ನಿರ್ದೇಶಕ ಸೀತಾರಾಂ ಸರ್ ಅವರು ಈ ಹಾಡಿನ ಚಿತ್ರೀಕರಣದ ಜವಾಬ್ದಾರಿ ನನಗೆ ನೀಡಿದ್ದರು. ಹಾಡಿನ ಕಾನ್ಸೆಪ್ಟ್‌ ಹೇಗಿರಬೇಕೆಂದು ಸೀತಾರಾಂ ಅವರನ್ನು ಕೇಳಿದಾಗ ನಾಯಕ–ನಾಯಕಿ ಪರಸ್ಪರರನ್ನು ಮುಟ್ಟಬಾರದು, ತಬ್ಬಿಕೊಳ್ಳಬಾರದು, ಮುತ್ತೂ ಕೊಡಬಾರದು ಎಂಬ ಕಂಡೀಷನ್ ಹಾಕಿದ್ದರು. ರೊಮ್ಯಾಂಟಿಕ್ ಹಾಡನ್ನು ಹೀಗೂ ಚಿತ್ರೀಕರಿಸಬಹುದು ಎಂಬುದನ್ನು ತೋರಿಸಿಕೊಡುವ ಸವಾಲು ನನ್ನದಾಗಿತ್ತು’ ಎನ್ನುತ್ತಾರೆ ಈ ಹಾಡಿನ ಸಿನಿಮಾಟೋಗ್ರಾಫರ್ ಅಶೋಕ ಕಶ್ಯಪ್‌.

‘ಸೀತಾರಾಂ ಅವರನ್ನು ಮನಸಿನಲ್ಲಿಟ್ಟುಕೊಂಡೇ ಹಾಡಿನ ಬಿಗಿಬಂಧ, ಮೂವ್‌ಮೆಂಟ್‌ಗಳನ್ನು ರೂಪಿಸುತ್ತಾ ಹೋದೆ. ಈ ಹಾಡಿನಲ್ಲಿ ನಾಯಕ ತುಸು ಸಂಕೋಚ ಸ್ವಭಾವ. ಆದರೆ, ನಾಯಕಿ ಲವಲವಿಕೆಯ ಖನಿ. ಹಾಗಾಗಿ, ಇಲ್ಲಿ ಹೂವನ್ನು ಹುಡುಗನಿಗೆ ಹುಡುಗಿಯೇ ಕೊಡುವಂತೆ ಮಾಡಿದೆ. ಯಾವಾಗಲೋ ಒಮ್ಮೆ ಮೂಲ್ಕಿಗೆ  ಹೋಗಿದ್ದಾಗ 300 ವರ್ಷಗಳ ಹಿಂದಿನ ಮನೆಗಳನ್ನು ನೋಡಿದ್ದೆ. ಅದರ ಮುಂದೆ ಶೂಟಿಂಗ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಆ ಮನೆಗಳ ಮುಂದೆಯೇ ನಾಯಕಿ, ನಾಯಕನ ಫೋಟೊಗಳನ್ನು ತೆಗೆಯುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆ. ಈಗ ನೀವು ಯೂಟ್ಯೂಬ್‌ನಲ್ಲಿ ನೋಡ್ತಾ ಇರೋದು ಹಾಡಿನ ಅರ್ಧ ವರ್ಷನ್. ಆದರೆ, ಈ ಮನೆಗಳನ್ನು ಸಿನಿಮಾದಲ್ಲಿ 2ಡಿ ಪೇಂಟಿಂಗ್ ಥರ ಬಳಸಿಕೊಂಡಿದ್ದೇನೆ. ಸಣ್ಣ ಸಣ್ಣ ಘಟನೆಗಳನ್ನಿಟ್ಟು ಕೊಂಡು ನಾಯಕಿ–ನಾಯಕನ ಸ್ನೇಹ, ಪ್ರೀತಿ, ಅನೋನ್ಯತೆಯನ್ನು ತೋರಿಸಿದ್ದೇನೆ. ಸೀತಾರಾಂ ಅವರ ಕಾನ್ಸೆಪ್ಟ್ ಅನ್ನು ಎಲ್ಲೂ

ಹಾಳು ಮಾಡದೇ ಡ್ರೋಣ್ ಕ್ಯಾಮೆರಾ ಬಳಸಿ ಹಾಡನ್ನು ಚಿತ್ರೀಕರಿಸಿದೆ. ಹಾಡು ಅಂತಿಮಗೊಂಡಾಗ ಅದನ್ನು ನೋಡಿ ಸೀತಾರಾಂ ಅವರು ತುಂಬಾ ಮೆಚ್ಚಿದರು’ಎಂದು ಹಾಡಿನ ಅನುಭವ ಕಥನ ಬಿಚ್ಚಿಡುತ್ತಾರೆ ಕಶ್ಯಪ್.

**

–ರಾಧಿಕಾ ಚೇತನ್, ನಟಿ

**

ಮನಸಿನ ಮಾತಿನ ಹಾಡಿದು
ಟಿ.ಎನ್. ಸೀತಾರಾಂ ಹೇಳಿದ ಪ್ರಕಾರ ನಾಯಕ–ನಾಯಕಿ ನಡುವಿನ ಒಂದು ರೀತಿಯ ಮೂಕಸೆಳೆತವನ್ನು ಹಾಡಿನ ರೂಪದಲ್ಲಿ ತರಬೇಕಿತ್ತು. ಮುಖ್ಯವಾಗಿ ಇಬ್ಬರ ಭಾವಲಹರಿಯನ್ನು ಶಬ್ದಗಳಲ್ಲಿ ಒಡಮೂಡಿಸಲು ನನಗೆ ಮಾನಸಿಕ ಸ್ವಾತಂತ್ರ್ಯವಿತ್ತು. ಆಡುಮಾತಿನ ಲಯಕ್ಕೂ, ಹಾಡಿನ ಲಯಕ್ಕೂ ಹೊಂದಾಣಿಕೆಯಾಗುವಂಥ ಹಾಡಿನ ಓಪನಿಂಗ್ ಸಾಲಗಳು ಸಿಕ್ಕಿಬಿಟ್ಟರೆ ಹಾಡಿನ ಬಾಕಿ ಪ್ರಯಾಣ ಅನುಕೂಲಕರವಾಗಿ ಆಗಿಬಿಡುತ್ತೆ. ಇಂಥದೊಂದ್ದು ಸಾಲುಗಳು ಸಿಕ್ಕಿಬಿಟ್ಟರೆ, ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟು ಸಿಕ್ಕಂತೆ.

ಇಂದು ಯಾಕೋ ಮಾತೇ ಬೇಡ ಅನ್ಸುತ್ತೆ ಅನ್ನುವಂಥ ಸರಳವಾದ ಸಾಲುಗಳೇ ಇಲ್ಲಿ ಓಪನಿಂಗ್ ಸಾಲುಗಳು. ಹಾಗಾಗಿ, ಹಾಡಿನ ಮುಂದಿನ ಪಯಣ ಸುಗಮವಾಗಿದೆ. ಇದು ನನ್ನ ಭಾವಲಹರಿ ಅಷ್ಟೇ. ಈ ಸಿನಿಮಾದ ನಾಯಕ, ನಾಯಕಿ ಇಬ್ಬರನ್ನೂ ನಾನು ನೋಡಿಲ್ಲ. ನಾನು ಯಾವುದೇ ಹಾಡು ಬರೆಯುವಾಗ ಅದಕ್ಕೆ ಒಂದು ಖಚಿತವಾದ ಮುಖ ಅನ್ನೋದು ಇರೋದಿಲ್ಲ .ಹಾಗಾಗಿ, ನನ್ನ ಕಲ್ಪನಾ ಲೋಕದ ಲಹರಿ ಈ ಹಾಡಾಗಿ ಹೊರಹೊಮ್ಮಿತು. ಎಲ್ಲಕ್ಕಿಂತ ಈ ಹಾಡು ಮನಸಿನ ಮಾತು, ದೇಹದ ಮಾತಲ್ಲ. ಹಾಗಾಗಿ, ಇದು ಮನಸಿಗೆ ಥಟ್ಟುವ ಹಾಡು.

-ಜಯಂತ ಕಾಯ್ಕಿಣಿ, ಗೀತರಚನೆಕಾರ, ಕವಿ

**

ಅಬ್ಬರವಿಲ್ಲದ ಮಧುರಗೀತೆ

ಹಾಡು ಜನಪ್ರಿಯವಾಗುತ್ತೆ ಅನ್ನುವ ನಿರೀಕ್ಷೆ ಇತ್ತು. ಮಿದುನ್ ಮುಕುಂದ್‌ ಟ್ಯೂನ್ ತುಂಬಾ ಇಷ್ಟವಾಯಿತು. ನಮ್ಮ ತಂಡದ ಸಾಮೂಹಿಕ ಶ್ರಮದ ಫಲವಾಗಿ ಹಾಡು ಸೊಗಸಾಗಿ ಮೂಡಿಬಂದಿದೆ. ಸಭ್ಯತೆಯ ಚೌಕಟ್ಟು ದಾಟಬಾರದು ಅಂದುಕೊಂಡಿದ್ದೆ. ಅದನ್ನು ಅಶೋಕ ಕಶ್ಯಪ್ ಅಂದುಕೊಂಡಂತೆಯೇ ಚಿತ್ರೀಕರಿಸಿದ್ದಾರೆ. ಅಬ್ಬರವಿಲ್ಲದ ಮಧುರಗೀತೆ ಇದಾಗಬೇಕೆಂದು ಬಯಸಿದ್ದೆ. ಕಣ್ಮಚ್ಚಿ ಕೇಳಿದರೂ, ಕಣ್ಣು ತೆರೆದರೂ ಹಾಡು ಭಿನ್ನವಾಗಿಲ್ಲ. ಕಣ್ಣು–ಕಿವಿಗೆ ಎರಡಕ್ಕೂ ಕೆಮಿಸ್ಟ್ರಿ ಹೊಂದಾಣಿಕೆಯಾಗಿದೆ’

–ಟಿ.ಎನ್. ಸೀತಾರಾಂ, ನಿರ್ದೇಶಕ ‘ಕಾಫಿತೋಟ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT