ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2030ಕ್ಕೆ ವಿದ್ಯುತ್‌ ಚಾಲಿತ ವಾಹನ ಕಾರುಬಾರು

ಪರಿಸರ ಸ್ನೇಹಿ ವಾಹನ ಬಳಕೆ ಆದ್ಯತೆ: ಇಂಧನ ಖಾತೆ ರಾಜ್ಯ ಸಚಿವ ಪೀಯೂಷ್‌ ಗೋಯಲ್‌
Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘2030ರ ವೇಳೆಗೆ ದೇಶದಲ್ಲಿ ತಯಾರಾಗುವ ಹಾಗೂ ಮಾರಾಟವಾಗುವ ಎಲ್ಲ ವಾಹನಗಳೂ ವಿದ್ಯುತ್‌ ಚಾಲಿತ ವಾಹನಗಳೇ ಆಗಿರುತ್ತವೆ’ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಶುಕ್ರವಾರ ಇಲ್ಲಿ ಹೇಳಿದರು.

‘ಕೇಂದ್ರ ಸರ್ಕಾರವು ವಿದ್ಯುತ್‌ ವಾಹನಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದೆ. ಪರಿಸರ ಸ್ನೇಹಿ ವಾಹನ ಬಳಕೆ ನಮ್ಮ ಆದ್ಯತೆ. ಹೀಗಾಗಿ ಭವಿಷ್ಯದಲ್ಲಿ ಸಂಚರಿಸುವ ವಾಹನಗಳು ವಿದ್ಯುತ್‌ ಚಾಲಿತ ವಾಹನಗಳೇ ಆಗಿರುತ್ತವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನೀತಿ ಆಯೋಗದ ಸೂಚನೆ ಮೇರೆಗೆ ಕೇಂದ್ರ ಸರ್ಕಾರವು ವಿವಿಧ ಇಲಾಖೆಗಳಿಂದ ನವೀಕರಿಸಬಲ್ಲ ಇಂಧನಗಳ ಬಳಕೆ ಕುರಿತಂತೆ ಮಾಹಿತಿ ಸಂಗ್ರಹಿಸಿದೆ.

‘ಸೌರಶಕ್ತಿ ಘಟಕಗಳು ಹಾಗೂ ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಬಲ್ಲ ಸಾಧ್ಯತೆಗಳ ಬಗ್ಗೆ ಈಗ ಮಾಹಿತಿ ಕಲೆಹಾಕಲಾಗಿದೆ. ಈ ಮಾಹಿತಿಯನ್ನು ಆಧರಿಸಿ 2030ರ ವೇಳೆಗೆ ಸಂಪೂರ್ಣ ವಿದ್ಯುಚ್ಛಾಲಿತ ವಾಹನಗಳನ್ನು ರಸ್ತೆಗಳಿಸುವ ಸಿದ್ಧತೆ ನಡೆಸಲಿದ್ದೇವೆ’ ಎಂದು ಅವರು ವಿವರಿಸಿದರು.

‘ಈ ಯೋಜನೆಯ ಭಾಗವಾಗಿ ನವದೆಹಲಿಯಲ್ಲಿ ಸುಮಾರು 10 ಸಾವಿರ ಸರ್ಕಾರಿ ಕಾರುಗಳನ್ನು ವಿದ್ಯುತ್‌ ಚಾಲಿತ ವಾಹನಗಳಿಗೆ ಬದಲಿಸಲಾಗುತ್ತದೆ. ಹೈಬ್ರಿಡ್‌ ವಾಹನಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಈ ರೀತಿಯ ವಾಹನಗಳಿಂದ ಹೆಚ್ಚಿನ ಲಾಭವೂ ಇಲ್ಲ. ಭಾರತದಂತಹ ರಾಷ್ಟ್ರದಲ್ಲಿ ಅದಕ್ಕೆ ವ್ಯಾಪ್ತಿ ಕಡಿಮೆ. ಕೆಲವು ವಾಹನಗಳ ಕಂಪೆನಿಗಳು ಹೈಬ್ರಿಡ್‌ ತಂತ್ರಜ್ಞಾನವನ್ನು ಪುರಸ್ಕರಿಸುತ್ತಿರುವುದು ನಿಜ. ಅದಕ್ಕೆ ನಿಜವಾದ ಕಾರಣವೆಂದರೆ, ಆ ಕಂಪೆನಿಗಳ ಬಳಿ ವಿದ್ಯುಚ್ಛಾಲಿತ ಕಾರುಗಳನ್ನು ತಯಾರಿಸುವ ಶ್ರೇಷ್ಠ ತಂತ್ರಜ್ಞಾನ ಇಲ್ಲದೇ ಇರುವುದು ಕಾರಣ’ ಎಂದರು.

‘ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಅನುಕೂಲವಾಗುವಂತೆ ಹಲವು ಸಿದ್ಧತೆಗಳಾಗಬೇಕು. ದೇಶದಾದ್ಯಂತ ವಿದ್ಯುತ್‌ ಚಾರ್ಜಿಂಗ್‌ ಕೇಂದ್ರಗಳನ್ನು ನಿರ್ಮಿಸಬೇಕಿದೆ.

‘ಇದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯೂ ಆಗಲಿದೆ. ಈ ನಿಟ್ಟಿನಲ್ಲಿ ವಾಹನ ಉದ್ಯಮಗಳಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಪೆಟ್ರೋಲ್‌, ಡೀಸೆಲ್‌ ವಾಹನಗಳ ಬಳಕೆ ನಿಲ್ಲಬೇಕು. ಇದರಿಂದ ಇಂಧನ ಆಮದಿಗೆ ವ್ಯಯಿಸುತ್ತಿರುವ ಅಪಾರ ಪ್ರಮಾಣದ ಹಣ ಉಳಿಯುತ್ತದೆ. ಅಲ್ಲದೇ, ಸ್ವಚ್ಛ ಪರಿಸರವೂ ನಮ್ಮದಾಗುತ್ತದೆ’ ಎಂದು ಹೇಳಿದರು.

ಎಲ್‌ಇಡಿ ಬಲ್ಬಿಗೂ ಆದ್ಯತೆ: ‘ಉಜಾಲಾ’ ಯೋಜನೆಯ ಮೂಲಕ ಎಲ್‌ಇಡಿ ದೀ‍ಪ ಬಳಕೆಗೂ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು 1.66 ಕೋಟಿ ಎಲ್‌ಇಡಿ ಬಲ್ಬ್ ಗಳನ್ನು ರಾಜ್ಯಕ್ಕೆ ನೀಡುತ್ತಿದೆ. 2020ರ ವೇಳೆಗೆ ವಿದ್ಯುತ್‌ ಬಳಕೆಯ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಇದರ ಉದ್ದೇಶ ಎಂದರು.

‘2022ರ ವೇಳೆಗೆ ಸೌರಶಕ್ತಿಯ ಮೂಲಕ ದೇಶದಲ್ಲಿ 175 ಗೀಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಇದೆ. ಸಾಂಪ್ರದಾಯಿಕ ಇಂಧನ ಮೂಲಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವುದು ಆದ್ಯತೆಯಾಗಲಿದೆ’ ಎಂದು ತಿಳಿಸಿದರು.

ಕೇಂದ್ರದ ಯೋಜನೆ ಕದ್ದ ಕರ್ನಾಟಕ
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ಕದ್ದು ತನ್ನದು ಎಂದು ಹೇಳಿಕೊಳ್ಳುತ್ತಿದೆ ಎಂದು ಗೋಯಲ್‌ ಆರೋಪಿಸಿದರು.

‘ಉಜಾಲಾ’ ಯೋಜನೆಯ ಮೂಲಕ ಎಲ್‌ಇಡಿ ಬಲ್ಬ್‌ಗಳನ್ನು ನೀಡುವುದು ಕೇಂದ್ರ ಸರ್ಕಾರದ ಯೋಜನೆ. ಆದರೆ ರಾಜ್ಯ ಸರ್ಕಾರ ‘ಹೊಸಬೆಳಕು’ ಯೋಜನೆಯ ಮೂಲಕ ಈ ಯೋಜನೆಯನ್ನು ತನ್ನದೇ ಯೋಜನೆ ಎಂದು ಹೇಳಿಕೊಳ್ಳುತ್ತಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT