ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂವೇಲ್ ಚಾಲೆಂಜ್ ಮಕ್ಕಳಲ್ಲಿ ಜಾಗೃತಿ ಮೂಡಿಸಿ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹದಿಹರೆಯದ ಮಕ್ಕಳನ್ನು ಸಾವಿನ ದವಡೆಗೆ ನೂಕುವ ‘ಬ್ಲೂವೇಲ್‍ ಚಾಲೆಂಜ್‍’ ಆಟದ ಲಿಂಕ್‍ಗಳನ್ನು ತೆಗೆದುಹಾಕುವಂತೆ ಜಾಲತಾಣಗಳಿಗೆ ಸೂಚಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಆನ್‍ಲೈನ್ ಆಟದಿಂದ ಪ್ರಚೋದಿತರಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾದ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗಿವೆ. ಎಳೆಯ ಮನಸ್ಸುಗಳನ್ನು ಆಟದ ನೆಪದಲ್ಲಿ ಸಾವಿಗೆ ಪ್ರಚೋದಿಸುವ ವ್ಯವಸ್ಥಿತ ಗುಂಪೊಂದು ಅಂತರ್ಜಾಲದಲ್ಲಿ ಸಕ್ರಿಯವಾಗಿದ್ದು, ಅದರ ಕಬಂಧಬಾಹುಗಳು ಭಾರತದಲ್ಲೂ ಚಾಚಿಕೊಂಡಿವೆ. ಪಂಜಾಬ್‍, ದೆಹಲಿ, ಮಹಾರಾಷ್ಟ್ರ, ಕೇರಳಗಳಿಂದ ವರದಿಯಾಗಿರುವ ಪ್ರಕರಣಗಳಲ್ಲಿ ಹದಿನಾರರ ಆಸುಪಾಸಿನವರೇ ಮಿಕಗಳಾಗಿರುವುದು ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿಸುವಂತಿದೆ. ಈ ಸಾವಿನ ಆಟ ಮೊದಲು ಕಾಣಿಸಿಕೊಂಡಿದ್ದು ರಷ್ಯಾದಲ್ಲಿ. ನೂರಾರು ಯುವಜನರನ್ನು ಬಲಿ ತೆಗೆದುಕೊಂಡಿದೆ ಎನ್ನಲಾದ ಈ ಆಟ ದುರ್ಬಲ‌ ಮನಸ್ಸಿನವರನ್ನು ಗುರಿಯಾಗಿರಿಸಿಕೊಂಡಿದೆ. ಐವತ್ತು ದಿನಗಳ ಕಾಲ ಪ್ರತಿದಿನವೂ ಒಂದೊಂದು ‘ಟಾಸ್ಕ್’‌ ಪೂರೈಸಲು ಇದು ಒತ್ತಾಯಿಸುತ್ತದೆ. ಅವೇಳೆಯಲ್ಲಿ ನಿದ್ರೆಯಿಂದ ಎಚ್ಚರವಾಗುವುದು, ಇಡೀ ದಿನ ಯಾರೊಂದಿಗೂ ಮಾತನಾಡದಿರುವುದು, ಹಾರರ್ ಸಿನಿಮಾಗಳನ್ನು ಒಂಟಿಯಾಗಿ ನೋಡುವುದು, ದೇಹವನ್ನು ಕೊಯ್ದುಕೊಳ್ಳುವುದು - ಟಾಸ್ಕ್ ಹೆಸರಿನಲ್ಲಿ ನೀಡಲಾಗುವ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಕ್ಕಳನ್ನು ಒತ್ತಾಯಿಸಲಾಗುತ್ತದೆ. ಕೊನೆಯ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ. ಒತ್ತಾಯಕ್ಕೆ ಮಣಿದೋ ಆಟದ ಅಮಲಿನಲ್ಲೋ ಮಕ್ಕಳು ಜೀವ ಕಳೆದುಕೊಳ್ಳುತ್ತಾರೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸುರಕ್ಷಿತ ಭಾವವನ್ನು ಮೂಡಿಸುವಲ್ಲಿ ನಮ್ಮ ಶಿಕ್ಷಣ ಹಾಗೂ ಕೌಟುಂಬಿಕ ವ್ಯವಸ್ಥೆಗಳು ಸೋಲುತ್ತಿವೆ ಎನ್ನುವ ಆತಂಕಕ್ಕೆ ‘ಬ್ಲೂ ವೇಲ್‍ ಚಾಲೆಂಜ್‍’ ದುರಂತಗಳು ಪುಷ್ಟಿ ನೀಡುವಂತಿವೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ರೂಪಿಸುತ್ತಿದೆ. ಪೋಷಕರು ಕೂಡ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬದಲಾಗಿ ಪರೀಕ್ಷೆಗಳ ಫಲಿತಾಂಶಕ್ಕೆ ಒತ್ತು ನೀಡುತ್ತಿದ್ದಾರೆ. ಈ ಇಬ್ಬಗೆಯ ಒತ್ತಡಕ್ಕೆ ಸಿಲುಕುವ ಮಕ್ಕಳು, ಸತತವಾಗಿ ಗೆಲ್ಲುವುದೇ ಜೀವನದ ಗುರಿ ಎನ್ನುವ ನಿಲುವಿಗೆ ಬರುವಂತಾಗಿದೆ. ಗೆಲುವಿನ ತಹತಹ ಸೋಲನ್ನು ಅಪಮಾನ ಹಾಗೂ ದುರಂತದ ರೀತಿಯಲ್ಲಿ ಕಾಣುವ ಮನಸ್ಥಿತಿಗೆ ಕಾರಣವಾಗಿದೆ. ಆ ಕಾರಣದಿಂದಲೇ ಪ್ರತಿವರ್ಷ ಎಸ್‍ಎಸ್‍ಎಲ್‍ಸಿ , ಪಿಯುಸಿ ಫಲಿತಾಂಶಗಳ ಜೊತೆಗೆ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳೂ ವರದಿಯಾಗುತ್ತವೆ. ಸಣ್ಣಪುಟ್ಟ ಸಂಗತಿಗಳಿಗೂ ವಿವೇಕವನ್ನು ಬದಿಗಿರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಯುವಜನರು ಹೆಚ್ಚುತ್ತಿದ್ದಾರೆ. ಈ ದುರಂತಗಳ ಹಿನ್ನೆಲೆಯಲ್ಲಿ ಯುವಪೀಳಿಗೆಯ ಮೇಲೆ ಸಮಾಜ ಹೇರುತ್ತಿರುವ ಅನಾರೋಗ್ಯಕರ ಒತ್ತಡದ ಪಾತ್ರ ಮುಖ್ಯವಾದುದು. ಇಂಥ ಒತ್ತಡಕ್ಕೆ ಗುರಿಯಾಗಿ ಒಂಟಿತನ ಅನುಭವಿಸುವ ಹಾಗೂ ಅತಿ ಶಿಸ್ತಿನಲ್ಲಿ ಉಸಿರುಗಟ್ಟುವ ಮಕ್ಕಳು ‘ಬ್ಲೂವೇಲ್ ಚಾಲೆಂಜ್’ ರೀತಿಯ ದುಸ್ಸಾಹಸಗಳತ್ತ ಆಕರ್ಷಿತರಾಗುವ ಸಾಧ್ಯತೆ ಹೆಚ್ಚು. ಜೂಜಿನ ಕುದುರೆಗಳಂತೆ ಮಕ್ಕಳನ್ನು ರೂಪಿಸುವ ಯತ್ನದಲ್ಲಿ ಉಂಟಾಗುವ ಸಾಮಾಜಿಕ ಒತ್ತಡಗಳು ಬಹುತೇಕ ಸಂದರ್ಭಗಳಲ್ಲಿ ‘ಬ್ಲೂವೇಲ್’ ಆಟಕ್ಕಿಂಥ ಹೆಚ್ಚು ಭಿನ್ನವಾಗಿಯೇನೂ ಇರುವುದಿಲ್ಲ.

ಮಕ್ಕಳ ಸುರಕ್ಷತೆಗೆ ಆತಂಕವೊಡ್ಡಿರುವ ‘ಬ್ಲೂವೇಲ್‍ ಚಾಲೆಂಜ್‍’ ಸಮಸ್ಯೆಗೆ ಕಾನೂನು ದೃಷ್ಟಿಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ನೆಲೆಗಟ್ಟಿನಲ್ಲೂ ಪ್ರತಿರೋಧ ವ್ಯಕ್ತಪಡಿಸಬೇಕಾಗಿದೆ. ಆಟದ ಹೆಸರಿನಲ್ಲಿ ಯುವಜನರನ್ನು ಸಾವಿಗೆ ದೂಡುವ ಆಟಗಳನ್ನು ಪ್ರತಿಬಂಧಿಸುವುದು ಅಗತ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಸೈಬರ್‍ ಜಗತ್ತಿನಲ್ಲಿ ನಿಷೇಧ-ನಿರ್ಬಂಧ ಎನ್ನುವುದು ಒಂದು ಹಂತದವರೆಗಷ್ಟೇ ಸಾಧ್ಯ. ಖದೀಮರು ಯಾವಾಗ ಯಾವ ರೂಪದಲ್ಲಿ ಅಂತರ್ಜಾಲದಲ್ಲಿ ಎದುರಾಗುತ್ತಾರೆ ಎನ್ನುವುದನ್ನು ಊಹಿಸುವುದು ಕಷ್ಟ. ಹಾಗಾಗಿ ನಿರ್ಬಂಧಕ್ಕಷ್ಟೇ ಸೀಮಿತವಾಗದೆ, ಮಕ್ಕಳನ್ನು ಜಾಗೃತಗೊಳಿಸುವ ಪ್ರಯತ್ನಗಳು ಶಾಲಾಕಾಲೇಜುಗಳಲ್ಲಿ, ಮನೆಗಳಲ್ಲಿ ವ್ಯಾಪಕವಾಗಿ ನಡೆಯಬೇಕಾಗಿದೆ. ಮಕ್ಕಳಲ್ಲಿ ಅಸ್ವಾಭಾವಿಕ ನಡವಳಿಕೆ ಕಂಡುಬಂದರೆ ಅವರ ಬಗ್ಗೆ ಹೆಚ್ಚು ನಿಗಾ ವಹಿಸುವುದು ಅಗತ್ಯ. ಅಗತ್ಯಬಿದ್ದಲ್ಲಿ ಮಾನಸಿಕ ತಜ್ಞರ ಸಲಹೆಯನ್ನು ಪಡೆಯಬಹುದು. ಮಕ್ಕಳನ್ನು ಮಾನಸಿಕವಾಗಿ ಸಶಕ್ತಗೊಳಿಸುವುದು ಜರೂರಾಗಿ ಆಗಬೇಕಿರುವ ಕೆಲಸ. ಪಠ್ಯದ ಹೊರತಾಗಿ ಮಕ್ಕಳೊಂದಿಗೆ ಮಾತನಾಡುವ ಹಾಗೂ ಅವರ ಸಮಸ್ಯೆಗಳನ್ನು ಆಲಿಸುವ ಸಾವಧಾನವನ್ನು ಪೋಷಕರು ಬೆಳೆಸಿಕೊಂಡರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ. ಅನೇಕ ಕುಟುಂಬಗಳಲ್ಲಿ ಮಾನವೀಯ ಸಂಬಂಧಗಳಿಗಿಂತಲೂ ಗ್ಯಾಜೆಟ್‍ಗಳಿಗೇ ಹೆಚ್ಚು ಆತುಕೊಂಡಿರುವ ಮಕ್ಕಳಿದ್ದಾರೆ. ಮಕ್ಕಳ ಮನಸ್ಸು ಅರಳಬೇಕಾದುದು ಬಂಧುಮಿತ್ರರ ಬೆಚ್ಚನೆಯ ಸಾಮೀಪ್ಯದಲ್ಲೇ ಹೊರತು ಗ್ಯಾಜೆಟ್‍ಗಳ ಪರದೆಯ ಬೆಳಕಿನಲ್ಲಲ್ಲ. ಮಕ್ಕಳ ಮನಸ್ಸು ಸೂಕ್ಷ್ಮವಾದುದು. ಅದು ದುರ್ಬಲಗೊಳ್ಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪಾಲಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT