ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯವನು ಎಂಥವನು?

Last Updated 12 ಏಪ್ರಿಲ್ 2019, 3:53 IST
ಅಕ್ಷರ ಗಾತ್ರ

ರಾಮಾಯಣದ ಆರಂಭದಲ್ಲಿಯೇ ತಳಮಳವಿದೆ; ಚಿಂತೆಯಿದೆ; ಚಿಂತನೆಯೂ ಇದೆ; ಎಲ್ಲಕ್ಕಿಂತಲೂ ಮೊದಲು ಆತಂಕವಿದೆ. ವಾಲ್ಮೀಕಿಗಳು ನಾರದರನ್ನು ಕೇಳಿದ ಪ್ರಶ್ನೆ: ‘ಈಗ ಈ ಲೋಕದಲ್ಲಿ ಒಳ್ಳೆಯ ಮನುಷ್ಯ ಯಾರಿದ್ದಾನೆ?’

ಕೆಟ್ಟವರನ್ನೇ ನೋಡಿ ನೋಡಿ ಸಾಕಾದ ಮೇಲೆ ಇಂಥ ಪ್ರಶ್ನೆ ಹುಟ್ಟಬಹುದು; ಅಥವಾ, ನಾವು ಒಳ್ಳೆಯವರು ಎಂದುಕೊಂಡವರು ‘ಕೆಟ್ಟ’ವರಾಗಿ ಕಂಡಾಗಲೂ ಹುಟ್ಟಬಹುದು. ಒಟ್ಟಿನಲ್ಲಿ ಒಳ್ಳೆಯತನದ ಬಗ್ಗೆ ಹುಡುಕಾಟವಿದೆ; ಅದು ಈಗ ಮರೆಯಾಗಿದೆ ಎಂಬ ಆತಂಕವಿದೆ; ಅದಿಲ್ಲದಿದ್ದರೆ ಮುಂದಿನ ದಿನಗಳು ಹೇಗೆ ಎಂಬ ಚಿಂತೆಯಿದೆ; ಒಳ್ಳೆಯತನ ಎಂದರೆ ಏನು ಎನ್ನುವುದರ ಬಗ್ಗೆಯೇ ಚಿಂತನೆಯಿದೆ.

ಹೌದು, ‘ಒಳ್ಳೆಯವನು ಎಂದರೆ ಯಾರು?’ ಒಳ್ಳೆಯತನದ ಲಕ್ಷಣವನ್ನು ಹೇಳುವುದು ಸುಲಭವಲ್ಲ. ‘ಒಳ್ಳೆಯವನು’ ಎಂದರೆ ‘ಗುಣವಂತ’ ಎಂದು ನಾವು ಹೇಳುವ, ಹೇಳಬಹುದಾದ ಸುಲಭದ ಅರ್ಥ. ಆದರೆ ಒಳ್ಳೆಯತನದ ಬಗ್ಗೆ ವಾಲ್ಮೀಕಿಗಳ ಪಟ್ಟಿ ಮನನೀಯವಾಗಿದೆ: ‘ಗುಣವಂತ (ಗುಣವಾನ್‌); ವೀರ (ವೀರ್ಯವಾನ್‌); ಧರ್ಮಜ್ಞ; ಕೃತಜ್ಞ; ಸತ್ಯವಾದಿ (ಸತ್ಯವಾಕ್ಯಃ); ದೃಢಸಂಕಲ್ಪವಂತ (ದೃಢವ್ರತಃ); ಸದಾಚಾರನಿಷ್ಠ (ಚಾರಿತ್ರೇಣ ಯುಕ್ತಃ); ಎಲ್ಲ ಪ್ರಾಣಿಗಳ ಹಿತವನ್ನೂ ಬಯಸತಕ್ಕವನು (ಸರ್ವಭೂತೇಷು ಹಿತಃ): ವಿದ್ವಾಂಸ (ವಿದ್ವಾನ್‌); ಸಮರ್ಥ; ನೋಡುವ ಜನರಿಗೆ ಆನಂದವನ್ನು ಉಂಟುಮಾಡುವವನು (ಪ್ರಿಯದರ್ಶನಃ); ಧೈರ್ಯಶಾಲಿ (ಆತ್ಮವಾನ್‌); ಕ್ರೋಧವನ್ನು ಗೆದ್ದವನು (ಜಿತಕ್ರೋಧಃ); ಕಾಂತಿಯುಕ್ತ (ದ್ಯುತಿಮಾನ್‌); ಅಸೂಯೆಯೇ ಇಲ್ಲದವನು (ಅನಸೂಯಕಃ); ಯುದ್ಧದಲ್ಲಿ ಮುನಿದು ನಿಂತರೆ ದೇವತೆಗಳಿಗೂ ಹೆದರಿಕೆ ಉಂಟುಮಾಡಬಲ್ಲವನು.’

ಇಷ್ಟೆಲ್ಲ ಗುಣಗಳನ್ನು ಹೊಂದಿರುವವನು ಈಗ ಯಾರಾದರೂ ಇದ್ದಾರೆಯೆ? ಇದು ವಾಲ್ಮೀಕಿಗಳ ಪ್ರಶ್ನೆ. ‘ಇಂಥ ಮನುಷ್ಯ ಯಾರಾದರೊಬ್ಬ ಇರುವನೇ? ತುಂಬ ಕುತೂಹಲದಿಂದ (ಪರಂ ಕೌತೂಹಲಂ) ಕೇಳುತ್ತಿರುವೆ. ಅಂಥವನ ವಿಷಯವಾಗಿ ಹೇಳಲು ನೀವೇ ಸಮರ್ಥರು’ ಎಂದರು, ನಾರದರನ್ನು ಉದ್ದೇಶಿಸಿ

ನಾರದರನ್ನು ಕುರಿತು ‘ಅಂಥವನ ಬಗ್ಗೆ ಹೇಳಲು ನೀವೇ ಸಮರ್ಥರು’ ಎಂದದ್ದು ಸ್ವಾರಸ್ಯಕರವಾಗಿದೆ. ನಾರದರು ತ್ರಿಲೋಕಸಂಚಾರಿ; ಮೂರು ಲೋಕಗಳನ್ನು ಸುಲಭವಾಗಿ ಸುತ್ತಬಲ್ಲವರು. ದೇವತೆಗಳು, ರಾಕ್ಷಸರು ಮತ್ತು ಮನುಷ್ಯರೊಡನೆ ಒಡನಾಟ ಇಟ್ಟುಕೊಂಡವರು.

ಕೆಲವರು ಸೃಷ್ಟಿಯ ಮೊದಲ ಪತ್ರಕರ್ತನೆಂದರೆ ಅದು ನಾರದ ಮಹರ್ಷಿಗಳೇ ಸರಿ ಎನ್ನುವುದುಂಟು! ಒಳ್ಳೆಯ ಅರ್ಥದಲ್ಲಿ ಈ ಮಾತನ್ನು ಸ್ವೀಕರಿಸಬಹುದೇನೋ? ಎಲ್ಲರ ಒಳಿತನ್ನು ತಮ್ಮ ಮಾತಿನ ಮೂಲಕ ಸಾಧಿಸುವ ತವಕ ಅವರದ್ದು. ರಾಮಾಯಣದ ಆರಂಭದಲ್ಲಿಯೇ ಅವರನ್ನು ‘ಮಾತಿನಲ್ಲಿ ಚತುರರು’ (ವಾಗ್ವಿದಾಂ) ಎಂದು ಕರೆದಿರುವುದು ವ್ಯರ್ಥವಚನವಲ್ಲ. (ಆದರೆ ನಾರದರ ಈ ಮಾತಿನ ವೈಖರಿಯನ್ನು ತಪ್ಪಾಗಿ ಅರ್ಥಮಾಡಿಕೊಂಡಿರುವ ನಮ್ಮ ಸಿನಿಮಾಮಂದಿ ಅವರನ್ನು ‘ಜಗಳ ತಂದಿಡುವ ಕಿಲಾಡಿ’ – Fitting master – ಎಂಬಂತೆ ಚಿತ್ರಿಸುವುದು ವಾಡಿಕೆಯಾಗಿದೆಯೆನ್ನಿ!) ಪುರಾಣಪ್ರಪಂಚದಲ್ಲಿ ಪತ್ರಕರ್ತರಂತೆ ಇರುವವರು ನಾರದರು. ಅವರಿಗೆ ಎಲ್ಲ ಲೋಕಗಳಿಗೂ ಸುಲಭ ಪ್ರವೇಶ, ಎಲ್ಲರೊಂದಿಗೂ ಸುಲಭ ಸಂಪರ್ಕ ಸಾಧ್ಯ; ಹೀಗಾಗಿ ಕೇವಲ ಭೂಲೋಕದಷ್ಟೆ ಅಲ್ಲದೆ ಎಲ್ಲ ಕಡೆಯ ವಾರ್ತೆಯೂ ಅವರಿಗೆ ತಿಳಿದಿರುವುದರಿಂದ ವಾಲ್ಮೀಕಿಗಳ ಪ್ರಶ್ನೆಗೆ ಉತ್ತರಿಸಲು ಅವರೇ ಸಮರ್ಥರು. ಏಕೆಂದರೆ ವಾಲ್ಮೀಕಿಗಳು ಕೇಳಿರುವಂಥ ಒಳ್ಳೆಯವನನ್ನು ಕೇವಲ ಒಂದು ಲೋಕದಲ್ಲಷ್ಟೆ ಹುಡುಕುವುದರಿಂದ ಸಿಗುವಂಥವನಲ್ಲ; ಅಂಥವನು ಎಲ್ಲ ಲೋಕದಲ್ಲೂ, ಎಲ್ಲ ಕಾಲದಲ್ಲೂ ದುರ್ಲಭ; ಸುಲಭದಲ್ಲಿ ದೊರಕುವವನಲ್ಲ!

ನಾರದರೇ ಈ ಮಾತನ್ನು ಹೇಳುತ್ತಾರೆ: ‘ವಾಲ್ಮೀಕಿಗಳೇ, ನೀವು ಹೇಳಿರುವ ಗುಣಗಳು ಒಂದಲ್ಲ; ಹಲವು. ಈ ಎಲ್ಲ ಗುಣಗಳೂ ಒಬ್ಬನಲ್ಲೇ ಇರುವುದು ಅತ್ಯಂತ ದುರ್ಲಭ’. ಆದರೆ ವಾಲ್ಮೀಕಿಗಳ ಮಾತನ್ನು ಕೇಳಿ ಅವರು ಸಂತೋಷದಿಂದ ಉಬ್ಬಿ ಹೋದರಂತೆ. ಜನರಿಗೆ ಯಾವ ಕಾಲದಲ್ಲೂ ಕೆಟ್ಟದ್ದರ ಬಗ್ಗೆಯೇ ಕುತೂಹಲವಲ್ಲವೆ? ಆದರೆ ಅಪರೂಪಕ್ಕೆ ಒಳ್ಳೆಯತನದ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ಆದ ಕಾರಣ ಸಹಜವಾಗಿಯೇ ನಾರದರಿಗೆ ಸಂತೋಷವಾಗಿದೆ. ‘ದುರ್ಲಭ, ದಿಟ; ಆದರೆ ಅಂಥ ಗುಣವಂತನಾದ ಪುರುಷನೊಬ್ಬನಿದ್ದಾನೆ’ ಎಂದರು, ಅವರು ಹೆಮ್ಮೆಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT