ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠ ಮೋರ್ಚಾಗಳು: ಪ್ರಬಲ ಮತ್ತು ಸ್ಪಷ್ಟ ಸಂದೇಶ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮರಾಠರು ಯಾರು?
ಮಹಾರಾಷ್ಟ್ರ ರಾಜ್ಯದ ಶೇ 32ರಿಂದ 35ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯ ಇದು. ಇದರಲ್ಲಿ ಗಣನೀಯ ಪ್ರಮಾಣದಷ್ಟು ಜನ ಆರ್ಥಿಕವಾಗಿ ದುರ್ಬಲರು. ಮಹಾರಾಷ್ಟ್ರದ ಮರಾಠ ಸಮುದಾಯವನ್ನು ರಾಜಸ್ಥಾನ ಮತ್ತು ಹರಿಯಾಣದ ಜಾಟ್ ಹಾಗೂ ಗುಜರಾತಿನ ಪಾಟೀದಾರ- ಪಟೇಲರೊಂದಿಗೆ ಹೋಲಿಸಬಹುದು. ಇವರೆಲ್ಲಾ ಪ್ರಮುಖವಾಗಿ ಕೃಷಿಕರು. ಗುಜರಾತಿನ ಪಾಟೀದಾರ- ಪಟೇಲ ಸಮುದಾಯ ಕೂಡ ಮೀಸಲಾತಿಗಾಗಿ ಒತ್ತಾಯಿಸುತ್ತಿದೆ. ಮರಾಠ ಸಮುದಾಯದ ಬಹುತೇಕರು ರೈತಾಪಿ ವರ್ಗಕ್ಕೆ ಸೇರಿದವರೇ ಆಗಿದ್ದಾರೆ.

ಮರಾಠ ಕ್ರಾಂತಿ ಮೋರ್ಚಾಗಳು ಎಂದರೆ ಏನು?
ಸಮುದಾಯದ ಹಿತಾಸಕ್ತಿಯ ವಿಷಯ ಬಂದಾಗ ತಾವೆಲ್ಲರೂ ಒಂದು ಎಂಬುದನ್ನು ಮರಾಠ ಕ್ರಾಂತಿ ಮೋರ್ಚಾಗಳು ಕಳೆದೊಂದು ವರ್ಷದ ಅವಧಿಯಲ್ಲಿ ಸ್ಪಷ್ಟಪಡಿಸಿವೆ. 2016ರ ಆಗಸ್ಟ್ 9ರಿಂದ 2017ರ ಆಗಸ್ಟ್ 9ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಹಾಗೂ ಇನ್ನಿತರ ಕೆಲವೆಡೆ ಸೇರಿ ಒಟ್ಟು 58 ರ‍್ಯಾಲಿಗಳು ನಡೆದಿವೆ. ಇವೆಲ್ಲವೂ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಪೂರ್ಣ ಶಾಂತಿಯುತವಾಗಿ ನಡೆದಿವೆ ಎಂಬುದೇ ಒಂದು ದಾಖಲೆಯಾಗಿದೆ. ಮೊದಲ ರ‍್ಯಾಲಿ ಔರಂಗಾಬಾದ್‍ನಲ್ಲಿ ನಡೆದಿದ್ದರೆ, ಕಡೆಯ ರ‍್ಯಾಲಿ ನಡೆದದ್ದು ಮುಂಬೈನಲ್ಲಿ. ಮಹಾರಾಷ್ಟ್ರದ ಎಲ್ಲಾ 36 ಜಿಲ್ಲೆಗಳಲ್ಲೂ ರ‍್ಯಾಲಿಗಳು ನಡೆದಿವೆ. ಜತೆಗೆ ರಾಷ್ಟ್ರದ ರಾಜಧಾನಿ ನವದೆಹಲಿ, ಕರ್ನಾಟಕದ ಬೆಳಗಾವಿ ಮತ್ತು ಬೀದರ್, ಮಧ್ಯಪ್ರದೇಶದ ಇಂದೋರ್, ಕೇಂದ್ರಾಡಳಿತ ಪ್ರದೇಶವಾದ ದಾಮನ್ ಮತ್ತು ದಿಯು, ತೆಲಂಗಾಣದ ಹೈದರಾಬಾದಿನಲ್ಲಿ ಕೂಡ ರ‍್ಯಾಲಿಗಳನ್ನು ಆಯೋಜಿಸಲಾಗಿತ್ತು. ಅಷ್ಟೇ ಅಲ್ಲದೆ ವಿದೇಶದ ನ್ಯೂಯಾರ್ಕ್, ಸೇಂಟ್ ಪೀಟರ್ಸ್‍ ಬರ್ಗ್ ಮತ್ತು ದುಬೈಗಳಲ್ಲೂ ಸಾಂಕೇತಿಕ ರ‍್ಯಾಲಿಗಳು ನಡೆದಿವೆ.

ಮರಾಠ ಕ್ರಾಂತಿ ಮೋರ್ಚಾ ಚಟುವಟಿಕೆ ಟಿಸಿಲೊಡೆದದ್ದು ಹೇಗೆ?
ಅಹಮದ್‍ ನಗರ ಜಿಲ್ಲೆಯ ಕೊಪರ್ಡಿ ಎಂಬಲ್ಲಿ 2016ರ ಜುಲೈ 13ರಂದು ಮರಾಠ ಹದಿಹರೆಯದ ಹುಡುಗಿಯ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಕೊಲೆಯೇ ಇದಕ್ಕೆ ಕಾರಣವಾದ ಘಟನೆ. ಈ ಪ್ರಕರಣದಲ್ಲಿ ಮೂವರು ದಲಿತ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬುದು ಮರಾಠ ಸಮುದಾಯದ ಆಗ್ರಹವಾಗಿದೆ.

ಮೋರ್ಚಾ ಬೇಡಿಕೆಗಳು ಏನೇನು?
ಮರಾಠ ಸಮುದಾಯದ ಹಿತರಕ್ಷಣೆಗಾಗಿ 15 ಬೇಡಿಕೆಗಳನ್ನು ಮುಂದಿಡಲಾಗಿದೆ. ಮರಾಠ ಸಮುದಾಯಕ್ಕೆ ಸೇರಿದವರಿಗೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಸೀಟುಗಳಲ್ಲಿ ಮೀಸಲು ನಿಗದಿ ಮಾಡಬೇಕು ಎಂಬುದು ಪ್ರಥಮ ಬೇಡಿಕೆಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ– 1989ಕ್ಕೆ ತಿದ್ದುಪಡಿ ತರಬೇಕು ಎಂಬುದು ಎರಡನೇ ಬೇಡಿಕೆಯಾಗಿದೆ. ಈ ಕಾಯ್ದೆಯನ್ನು ತಮ್ಮ ಸಮುದಾಯದ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ಮರಾಠರ ದೂರು. ಕೊಪರ್ಡಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಘಟನೆಯ ಕಾರಣಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿ ಸಂಬಂಧ ಎಂ.ಎಸ್.ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಮರಾಠ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮರಾಠ ಕಾಲದ ಕೋಟೆಗಳ ರಕ್ಷಣೆ, ಅರಬ್ಬಿ ಸಮುದ್ರದಲ್ಲಿ ಮಹಾನ್ ಸಮರವೀರ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣ- ಇವು ಇನ್ನಿತರ ಬೇಡಿಕೆಗಳು.

ಈ ರ‍್ಯಾಲಿಗಳು ಯಾವ ಬಗೆಯಲ್ಲಿ ವಿಭಿನ್ನ?
ಇವು ಸಂಪೂರ್ಣ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆದಿವೆ. ಈ ರ‍್ಯಾಲಿಗಳ ಹಿಂದೆ ಯಾವುದೇ ಒಬ್ಬ ನಾಯಕ ಇದ್ದಾನೆ ಎಂದು ಹೇಳಲಾಗದು. ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಸ್ವಯಂಪ್ರೇರಿತ ಕಾರ್ಯಕರ್ತರಾಗಿದ್ದು, ನಾಯಕ ಕೂಡ ಆಗಿರುತ್ತಾರೆ. ಮಹಿಳೆಯರು ಮತ್ತು ಮಕ್ಳಳು ಈ ರ‍್ಯಾಲಿಗಳ ಮುಂಚೂಣಿಯಲ್ಲಿದ್ದರು. ಇಲ್ಲಿ ರಾಜಕೀಯ ವ್ಯಕ್ತಿಗಳಿಂದ ಭಾಷಣ ಇರುವುದಿಲ್ಲ. ರ‍್ಯಾಲಿಗಳನ್ನು ಆಯೋಜಿಸುವ ಹೊಣೆ ನಿರ್ವಹಿಸುತ್ತಿರುವ ಮರಾಠ ಸಂಘಗಳ ಏಕೀಕೃತ ಸಂಘಟನೆಯಾದ 'ಸಕಲ್ ಮರಾಠ ಸಮಾಜ'ವು ರಾಜಕೀಯ ವ್ಯಕ್ತಿಗಳು ಈ ಆಂದೋಲನವನ್ನು ಹೈಜಾಕ್ ಮಾಡದಂತೆ ಎಚ್ಚರಿಕೆ ವಹಿಸುತ್ತಾ ಬಂದಿದೆ. ಸಮುದಾಯವು ವಿವಿಧೆಡೆ ತನ್ನ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಆಗ್ರಹಿಸಿದ ಸಂದರ್ಭದಲ್ಲೆಲ್ಲಾ 'ಏಕ್ ಮರಾಠ, ಲ್ಯಾಕ್ ಮರಾಠ' ಹಾಗೂ 'ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ' ಎಂಬ ಘೋಷಣೆಗಳು ಮುಗಿಲುಮುಟ್ಟಿವೆ. ರ‍್ಯಾಲಿಗಳ ಆಯೋಜಕರು ರ‍್ಯಾಲಿ ನಿಯಂತ್ರಿಸುವ ಸಲುವಾಗಿ ನಿಯಂತ್ರಣ ಕೇಂದ್ರ ಮತ್ತು ಸಮರ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಜನಸಮುದಾಯವನ್ನು ಸಂಘಟಿಸಲು ಹಾಗೂ ತಮ್ಮ ಸಂದೇಶವನ್ನು ಎಲ್ಲೆಡೆ ಪ್ರಚುರಪಡಿಸುವ ಸಲುವಾಗಿ ಸಾಮಾಜಿಕ ಜಾಲತಾಣ ಮಾಧ್ಯಮಗಳಾದ ವಾಟ್ಸ್ ಆ್ಯಪ್, ಟ್ವಿಟರ್, ಫೇಸ್‍ ಬುಕ್ ಇತ್ಯಾದಿಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ.

ರಾಜಕೀಯ ಸ್ಪಂದನ
ಮರಾಠ ಸಮುದಾಯದ ಮೀಸಲಾತಿ ಬೇಡಿಕೆಯನ್ನು ರಾಜಕಾರಣಿಗಳು, ಪಕ್ಷ ಮತ್ತು ಸಂಘಟನೆಗಳ ಭೇದ ಮರೆತು ಬೆಂಬಲಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯ ಚರಿತ್ರೆಯಲ್ಲಿ ಮರಾಠ ಸಮುದಾಯಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಯಶವಂತರಾವ್ ಚವಾಣ್, ವಸಂತದಾದ ಪಾಟೀಲ್, ಶರದ್ ಪವಾರ್, ಶಂಕರರಾವ್ ಚವಾಣ್, ಅವರ ಮಗ ಅಶೋಕ್ ಚವಾಣ್ ಮತ್ತು ವಿಲಾಸರಾವ್ ದೇಶಮುಖ್ ಇವರಲ್ಲಿ ಕೆಲವರು. 1962ರಿಂದ 2004ರ ನಡುವಿನ ಅವಧಿಯಲ್ಲಿ ಒಟ್ಟು ಆಯ್ಕೆಯಾಗಿರುವ 2000ಕ್ಕೂ ಹೆಚ್ಚು ಶಾಸಕರ ಪೈಕಿ 1200ಕ್ಕೂ ಹೆಚ್ಚು ಶಾಸಕರು, ಅಂದರೆ ಶೇ 55ರಷ್ಟು ವಿಧಾನಸಭಾ ಪ್ರತಿನಿಧಿಗಳು ಈ ವರ್ಗಕ್ಕೆ ಸೇರಿದವರು. ರಾಜ್ಯದ ಶೇ 72ಕ್ಕೂ ಹೆಚ್ಚು ಸಹಕಾರ ಸಂಘಗಳು ಈ ಸಮುದಾಯದ ನಿಯಂತ್ರಣದಲ್ಲಿವೆ. ಮಂತ್ರಿಗಳಾದವರಲ್ಲಿ ಹೆಚ್ಚಿನವರು ಈ ಸಮುದಾಯಕ್ಕೆ ಸೇರಿದವರೇ. ಮರಾಠ ಸಮುದಾಯವು ಭೂಮಿ ಮತ್ತು ಸಹಕಾರ ಕ್ಷೇತ್ರದ ಮೇಲೆ, ವಿಶೇಷವಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಹಿಡಿತ ಹೊಂದಿದೆ. ಬಹುತೇಕ ಶೈಕ್ಷಣಿಕ ಸಂಸ್ಥೆಗಳ ಮಾಲೀಕತ್ವ ಈ ಜನಾಂಗದವರದ್ದೇ ಆಗಿದೆ.

ಹಿನ್ನೆಲೆ
ಈ ಹಿಂದಿನ ಕಾಂಗ್ರೆಸ್- ಎನ್‍ಸಿಪಿ ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ಸಿಗ ಪೃಥ್ವಿರಾಜ್‌ ಚವಾಣ್ ಅವರು ಸಮುದಾಯಕ್ಕೆ ಸರ್ಕಾರಿ ಹುದ್ದೆ ಮತ್ತು ಶಿಕ್ಷಣ ಸಂಸ್ಥೆಗಳ ಸೀಟುಗಳಲ್ಲಿ ಶೇ 16ರಷ್ಟು ಮೀಸಲು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿ ಅದನ್ನು ಅಧಿಕೃತವಾಗಿ ಘೋಷಿಸಿದರು. ಆದರೆ ಬಾಂಬೆ ಹೈಕೋರ್ಟ್ ಇದನ್ನು ಅನೂರ್ಜಿತಗೊಳಿಸಿತು. ನಂತರ ಸರ್ಕಾರವು ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಏನೂ ಪ್ರಯೋಜನವಾಗಲಿಲ್ಲ. ಈಗ ಪುನಃ ಇದರ ವಿಚಾರಣೆ ಬಾಂಬೆ ಹೈಕೋರ್ಟ್ ಮುಂದೆಯೇ ಇದೆ. ಈ ಸಂಬಂಧ ಬಾಂಬೆ ಹೈಕೋರ್ಟ್ ಮರಾಠಿಗರಿಗೆ ಮೀಸಲಾತಿ ನೀಡುವಿಕೆಯನ್ನು ಸಮರ್ಥಿಸಿಕೊಂಡು, ಸರ್ಕಾರ ನೀಡಿರುವ ಪ್ರಮಾಣಪತ್ರ ಕುರಿತು ವರದಿ ನೀಡುವಂತೆ ಮಹಾರಾಷ್ಟ್ರ ರಾಜ್ಯದ ಹಿಂದುಳಿದ ಆಯೋಗಕ್ಕೆ ಸೂಚಿಸಿದೆ. ಈ ಹಿಂದಿನ ಸರ್ಕಾರವು ತನ್ನ ಸಂಪುಟದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ, ಮಾಜಿ ಮುಖ್ಯಮಂತ್ರಿ ಹಾಗೂ ಸಮುದಾಯದ ಧುರೀಣರೂ ಆದ ನಾರಾಯಣ ರಾಣೆ ಅವರ ಅಧ್ಯಕ್ಷತೆಯಲ್ಲಿ ಮರಾಠ ಮೀಸಲಾತಿ ಸಂಬಂಧ ವರದಿ ಸಿದ್ಧಪಡಿಸಲೆಂದು ಸಮಿತಿ ರಚಿಸಿತ್ತು. ದೇವೇಂದ್ರ ಫಡಣವೀಸ್ ನೇತೃತ್ವದ ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರವೂ ಈ ಬೇಡಿಕೆ ಈಡೇರಿಸಲು ತಾನು ಬದ್ಧವಾಗಿರುವುದಾಗಿ ಹೇಳುತ್ತಾ ಬಂದಿದೆ.

ಮುಂಬೈ ರ‍್ಯಾಲಿಯ ನಂತರ...
ಆರ್ಥಿಕ ದುರ್ಬಲ ವರ್ಗದ (ಇಬಿಸಿ) ಆದಾಯ ಮಿತಿಯನ್ನು ವಾರ್ಷಿಕ 6 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಹಾಗೂ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಅಥವಾ ಕಡಿಮೆ ಇದ್ದರೆ ಅಂತಹ ವಿದ್ಯಾರ್ಥಿಗಳ ಶೇ 50ರಷ್ಟು ಶುಲ್ಕ ಭರಿಸುವುದಾಗಿ ಮುಖ್ಯಮಂತ್ರಿ ಘೋಷಿಸಿರುವುದು ಸಮುದಾಯಕ್ಕೆ ಸ್ವಲ್ಪಮಟ್ಟಿನ ಸಮಾಧಾನ ಮೂಡಿಸಿದೆ. ಮರಾಠ ಕಾಲದ ಕೋಟೆಗಳನ್ನು ಸಂರಕ್ಷಿಸುವುದಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿಯಿಂದ ಹೇಳಿಕೆ ಪ್ರಕಟಗೊಂಡಿದೆ. ಬಹುನಿರೀಕ್ಷಿತ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವುದಾಗಿಯೂ ಭರವಸೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2016ರ ಡಿಸೆಂಬರ್‌ 24ರಂದು ನಡೆದ ಭಾರಿ ಸಮಾರಂಭದಲ್ಲಿ ಇದಕ್ಕಾಗಿ ಜಲಪೂಜೆ ಮತ್ತು ಭೂಮಿಪೂಜೆಯನ್ನೂ ನೆರವೇರಿಸಿದ್ದಾರೆ. ಆದರೆ ವಾಸ್ತವ ಕಾಮಗಾರಿ ಇನ್ನೂ ಆರಂಭವಾಗಬೇಕಿದೆ. ಸಾಲ ಮನ್ನಾ ಕುರಿತು ಹೇಳುವುದಾದರೆ, ಸರ್ಕಾರವು 34,000 ಕೋಟಿ ರೂಪಾಯಿ ಮೊತ್ತದ ’ಛತ್ರಪತಿ ಶಿವಾಜಿ ಮಹಾರಾಜ್ ಕೃಷಿ ಸಮ್ಮಾನ್’ ಯೋಜನೆ ಪ್ರಕಟಿಸಿದೆ. ಜತೆಗೆ, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಗೆ ಸಂಬಂಧಿಸಿದಂತೆ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಗೊಳಿಸಲು ತಾನು ಬದ್ಧವಾಗಿರುವುದಾಗಿಯೂ ಹೇಳಿದೆ.
*
ಮರಾಠ ಕ್ರಾಂತಿ ಮೋರ್ಚಾ: ಹೆಜ್ಜೆ ಜಾಡು

* ಮರಾಠ ಸಮುದಾಯದ ಮೀಸಲಾತಿ ಕೂಗು 1980ರ ದಶಕದಿಂದಲೂ ಕೇಳಿಬರುತ್ತಿದೆ
* 2008-09: ಮುಖ್ಯಮಂತ್ರಿಗಳಾಗಿದ್ದ ಶರದ್ ಪವಾರ್, ವಿಲಾಸರಾವ್ ದೇಶಮುಖ್ ಅವರು ಬೇಡಿಕೆಗೆ ತಮ್ಮ ಬೆಂಬಲ ನೀಡಿದರು.
* 2009-14: ರಾಜಕೀಯ ಪಕ್ಷಗಳು, ಸಂಘಟನೆಗಳು ಮರಾಠ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿದವು
* 2014 ಜೂನ್ 25- ಪೃಥ್ವಿರಾಜ್‌ ಚವಾಣ್ ನೇತೃತ್ವದ ಕಾಂಗ್ರೆಸ್- ಎನ್‍ಸಿಪಿ ಮೈತ್ರಿಕೂಟ ಸರ್ಕಾರವು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠ ಸಮುದಾಯಕ್ಕೆ ಶೇ 16ರಷ್ಟು ಹಾಗೂ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತು

* 2014 ಅಕ್ಟೋಬರ್ 31- ದೇವೇಂದ್ರ ಫಡಣವೀಸ್ ಅವರು ಎನ್‍ಸಿಪಿ ಪರೋಕ್ಷ ಬೆಂಬಲದೊಂದಿಗೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು
* 2014 ಡಿಸೆಂಬರ್ 5- ಶಿವಸೇನೆಯು ಬಿಜೆಪಿ ಜತೆ ಕೈಜೋಡಿಸುವ ಮೂಲಕ ಸರ್ಕಾರಕ್ಕೆ ಸ್ಥಿರತೆ ಒದಗಿಸಿತು
* 2014 ನವೆಂಬರ್ 14- ಶೇ 16ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರದ ತೀರ್ಮಾನಕ್ಕೆ ಬಾಂಬೆ ಹೈಕೋರ್ಟ್‍ನಿಂದ ತಡೆಯಾಜ್ಞೆ
* 2014 ನವೆಂಬರ್ 15- ತಡೆಯಾಜ್ಞೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬಿಜೆಪಿ- ಶಿವಸೇನಾ ಸರ್ಕಾರ ನಿರ್ಧಾರ
* 2014 ಡಿಸೆಂಬರ್ 18- ಬಾಂಬೆ ಹೈಕೋರ್ಟ್ ಮಧ್ಯಂತರ ಆದೇಶ ವಜಾಗೊಳಿಸಲು ಸುಪ್ರೀಂ ಕೋರ್ಟ್ ನಕಾರ

* 2015 ಜನವರಿ 6- ಮರಾಠ ಸಮುದಾಯಕ್ಕೆ ಮೀಸಲಾತಿ ಸಮರ್ಥಿಸಿಕೊಂಡು ನ್ಯಾಯಾಲಯಕ್ಕೆ ಹೆಚ್ಚುವರಿ ಮಾಹಿತಿ ಒದಗಿಸಲು ಸರ್ಕಾರದ ತೀರ್ಮಾನ
* 2016 ಜುಲೈ 13- ಅಹಮದ್‍ ನಗರ ಜಿಲ್ಲೆಯ ಕೊಪರ್ಡಿಯಲ್ಲಿ ಸಮುದಾಯದ ಹದಿಯುವತಿ ಮೇಲೆ ಎಸಗಿದ ಅತ್ಯಾಚಾರ ಹಾಗೂ ಆಕೆಯ ಕೊಲೆ ಘಟನೆಯು ಮರಾಠರಲ್ಲಿ ತಮ್ಮ ಬೇಡಿಕೆಗಳಿಗಾಗಿ ಹೋರಾಟಕ್ಕಿಳಿಯುವ ಕಿಚ್ಚು ಮೂಡಿಸಿತು
* 2016 ಆಗಸ್ಟ್ 9- ಔರಂಗಾಬಾದ್‍ ನಲ್ಲಿ ಮೊದಲ ಮರಾಠ ಕ್ರಾಂತಿ ಮೋರ್ಚಾ ನಡೆಯಿತು
* 2016 ನವೆಂಬರ್ 6- ಮುಂಬೈನಲ್ಲಿ ಮರಾಠ ಬೈಕ್ ರ‍್ಯಾಲಿ ನಡೆಯಿತು

* 2016 ನವೆಂಬರ್ 20- ನವದೆಹಲಿಯಲ್ಲಿ ಮರಾಠ ಮೋರ್ಚಾ ನಡೆಯಿತು
* 2016 ಡಿಸೆಂಬರ್ 5- ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದು ಕಾನೂನುಬದ್ಧ ಹಾಗೂ ಇದರಿಂದ ಸಂವಿಧಾನದ ಪರಿಚ್ಛೇದಗಳ ಉಲ್ಲಂಘನೆಯಾಗದು ಎಂದು ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದ ಮಹಾರಾಷ್ಟ್ರ ಸರ್ಕಾರ
* 2016 ಡಿಸೆಂಬರ್ 14- ಮಹಾರಾಷ್ಟ್ರ ಶಾಸಕಾಂಗವು ಚಳಿಗಾಲದ ಅಧಿವೇಶನ ನಡೆಸುತ್ತಿದ್ದ ಸಂದರ್ಭದಲ್ಲಿ ನಾಗಪುರದಲ್ಲಿ ಮರಾಠ ಮೋರ್ಚಾ ನಡೆಸಲಾಯಿತು
* 2017 ಆಗಸ್ಟ್ 9- ಮುಂಬೈನಲ್ಲಿ ಬೃಹತ್ ಮರಾಠ ಮೋರ್ಚಾ ನಡೆಯಿತು

ಧನಾತ್ಮಕ ಅಂಶಗಳು
ಸಂಘಟನೆಯ 'ಒಂದು ವರ್ಷ- 58 ಮೋರ್ಚಾಗಳು' ಸ್ಪಷ್ಟವಾಗಿ ಹಲವು ಧನಾತ್ಮಕ ಅಂಶಗಳನ್ನು ಒಳಗೊಂಡಿವೆ.
* ಮರಾಠ ಸಮುದಾಯದ ಮಡುಗಟ್ಟಿದ್ದ ಆಕ್ರೋಶವನ್ನು ಯಾರಿಗೆ ಮುಟ್ಟಿಸಬೇಕಿತ್ತೋ ಅವರಿಗೆ ಮುಟ್ಟಿಸಲಾಗಿದೆ.
*  ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಕ್ರಿಯವಾಗುವಂತೆ ಮಾಡಲಾಗಿದೆ.
* ಆಂದೋಲನವೊಂದರ ಶಾಂತಿ ಹಾಗೂ ನಿರಂತರತೆಯನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೂ ಇದೊಂದು ಉದಾಹರಣೆಯಾಗಿದೆ.
*
58 ರ‍್ಯಾಲಿ
72% ಸಹಕಾರ ಸಂಘಗಳು ಮರಾಠ ಸಮುದಾಯದ ಹಿಡಿತದಲ್ಲಿ
15 ಬೇಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT