ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಯಾರಿಗೂ ದಕ್ಕದ ಪ್ರೀತಿಯ ಕಥೆ

Last Updated 19 ಆಗಸ್ಟ್ 2017, 15:10 IST
ಅಕ್ಷರ ಗಾತ್ರ

ಸಿನಿಮಾ: ಫಸ್ಟ್ ಲವ್

ನಿರ್ದೇಶನ: ಮಲ್ಲಿ

ನಿರ್ಮಾಣ: ಅಶೋಕ್ ಲಮಾಣಿ

ತಾರಾಗಣ: ರಾಜೇಶ್, ಕವಿತಾ ಗೌಡ, ಸ್ನೇಹಾ ನಾಯರ್

*

ಎಫ್‌ಎಂ ರೇಡಿಯೊ ಕಾರ್ಯಕ್ರಮವೊಂದರ ಮೂಲಕ ‘ಲವ್ ಗುರು’ ಎಂದೇ ಹೆಸರು ಪಡೆದಿರುವ ರಾಜೇಶ್ ಅವರ ಮೊದಲ ಸಿನಿಮಾ ‘ಫಸ್ಟ್ ಲವ್’. ಯುವಕನೊಬ್ಬ ಮೊದಲ ಬಾರಿಗೆ ಪ್ರೀತಿಗೆ ಬೀಳುವುದು, ಆ ಪ್ರೀತಿಯನ್ನು ದಕ್ಕಿಸಿಕೊಳ್ಳುವುದು, ದಕ್ಕಿಸಿಕೊಂಡ ನಂತರ ಅದನ್ನು ಕಾಪಿಟ್ಟುಕೊಳ್ಳಲು ಯತ್ನಿಸುವುದನ್ನು ಸಿನಿಮಾ ಮೂಲಕ ಹೇಳುವ ಯತ್ನ ಇದು.

ಪ್ರೀತಿಯನ್ನು ಕಳೆದುಕೊಂಡ ನಂತರ ಸಂಕಟ ಅನುಭವಿಸುತ್ತಲೇ ಆಕೆಗಾಗಿ ಕಾಯುತ್ತಲೇ ಇರುವ ತೀರ್ಮಾನ ಕೈಗೊಳ್ಳುವುದು, ಕೈಗೆ ದಕ್ಕುವ ಇನ್ನೊಂದು ಪ್ರೀತಿಯನ್ನು ಒಲ್ಲೆ ಎನ್ನುವುದು... ಪ್ರೀತಿ ಎಂಬುದು ಕೊನೆಗೆ ಯಾರಿಗೂ ಸಿಗದಿರುವುದು ಕೂಡ ಈ ಸಿನಿಮಾದ ಭಾಗ.

ಮಲ್ಲಿ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ರಾಜೇಶ್ ಅವರು ನಾಯಕ ಸೂರ್ಯನ ಪಾತ್ರ ನಿಭಾಯಿಸಿದ್ದಾರೆ. ನಾಯಕಿಯರಾಗಿ ಕವಿತಾ ಗೌಡ (ಅಂಜಲಿ) ಹಾಗೂ ಸ್ನೇಹಾ ನಾಯರ್ (ಮನೀಶಾ) ಕಾಣಿಸಿಕೊಂಡಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯೂ ಹೌದು. ಸೂರ್ಯ ಹಾಗೂ ಅಂಜಲಿ ನಡುವೆ ಪ್ರೇಮಾಂಕುರ ಆಗುವ ಮೂಲಕ ಸಿನಿಮಾ ಆಂಭವಾಗುತ್ತದೆ. ಪ್ರೇಮ ಬೆಳೆದು, ಒಬ್ಬರನ್ನೊಬ್ಬರು ಮದುವೆ ಆಗುವ ತೀರ್ಮಾನಕ್ಕೆ ಬರುತ್ತಾರೆ ಸೂರ್ಯ ಮತ್ತು ಅಂಜಲಿ.

ಆದರೆ, ಈ ಪ್ರೇಮಕ್ಕೆ ‘ಸಾಂಪ್ರದಾಯಿಕ ವಿಘ್ನ’ವೊಂದು ಅಡ್ಡಿಯಾಗುತ್ತದೆ. ಆ ವಿಘ್ನ ಏನು ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು. ವಿಘ್ನ ಎದುರಾಗುವುದಕ್ಕೆ ಮೊದಲು ಕೂಡ ಒಂದೆರಡು ಅಡೆತಡೆಗಳು ಸೂರ್ಯ ಹಾಗೂ ಅಂಜಲಿ ನಡುವೆ ಬಂದುಹೋಗಿರುತ್ತವೆ. ಈ ನಡುವೆ ಸೂರ್ಯ, ಮನೀಶಾಳಿಂದ ಬರುವ ಪ್ರೇಮ ಪ್ರಸ್ತಾವನೆಯನ್ನು ತಿರಸ್ಕರಿಸಿರುತ್ತಾನೆ.

‘ವಿಘ್ನ’ ಎದುರಾದ ನಂತರದ ವರ್ಷಗಳಲ್ಲಿ ಸೂರ್ಯ ಮತ್ತು ಅಂಜಲಿ ಒಬ್ಬರನ್ನೊಬ್ಬರು ಬಿಟ್ಟಿದ್ದರೂ, ಪ್ರೀತಿ ಇಬ್ಬರಲ್ಲಿಯೂ ಹಸಿರಾಗಿಯೇ ಇರುತ್ತದೆ. ಇಬ್ಬರೂ ‘ಮುಂದೊಮ್ಮೆ ಒಳ್ಳೆಯ ದಿನಗಳು ಬರಬಹುದು’ ಎಂಬ ನಿರೀಕ್ಷೆಯಲ್ಲೋ ಅಥವಾ ‘ಒಬ್ಬರ ಪ್ರೀತಿ ಸಾಕು. ಅದಕ್ಕಾಗಿ ಮತ್ತೆ ಅರಸುವುದು ಬೇಡ’ ಎಂಬ ತೀರ್ಮಾನದಲ್ಲೋ ಬದುಕುತ್ತಿರುತ್ತಾರೆ. ಪರಸ್ಪರರಲ್ಲಿ ಪ್ರೀತಿ ಜೀವಂತವಾಗಿದ್ದರೂ, ಬೇರೆಬೇರೆಯಾಗಿದ್ದ ಸೂರ್ಯ ಹಾಗೂ ಅಂಜಲಿ ಮತ್ತೆ ಒಂದಾಗಬಹುದು ಎಂಬ ಸೂಚನೆಗಳು ಸಿನಿಮಾದ ಅಂತ್ಯದ ಹೊತ್ತಿಗೆ ಕಾಣಿಸಿಕೊಳ್ಳುತ್ತವೆ.

ಆದರೆ, ಸೂರ್ಯ ಅಂಜಲಿಗೆ ಮತ್ತೆಂದೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಇದು ಕಥೆಯ ಹಂದರ. ಕಥೆಯನ್ನು ವಾಚ್ಯವಾಗಿ ಹೇಳಿಬಿಟ್ಟರೆ ಸಿನಿಮಾ ವೀಕ್ಷಣೆ ವೇಳೆ ಖುಷಿ ಸಿಗುವುದಿಲ್ಲ. ಹಾಗಾಗಿ ಇಲ್ಲಿ ಇಷ್ಟು ಮಾತ್ರ ಸಾಕು. ಪ್ರೀತಿಯ ಬಗ್ಗೆ ಹುಡುಗರು ಯಾವ ಭಾವ ಹೊಂದಿರುತ್ತಾರೆ, ಹುಡುಗಿಯರಲ್ಲಿ ಎಂತಹ ಭಾವ ಇರುತ್ತದೆ ಎಂಬ ಬಗ್ಗೆ ಪಾತ್ರಗಳ ಸಂಭಾಷಣೆ ಮೂಲಕ ಒಂದಿಷ್ಟು ಮಾತು ಹೇಳುವ ಯತ್ನ ಇಲ್ಲಿ ನಡೆದಿದೆ. ಆದರೆ ಅವು ಸಹಜವೆಂಬಂತೆ ಎಲ್ಲ ಸಂದರ್ಭಗಳಲ್ಲಿಯೂ ಕಾಣುವುದಿಲ್ಲ.

ಶ್ರೀಧರ ವಿ. ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದೆರಡು ಹಾಡುಗಳನ್ನು ಗುನುಗಿಕೊಳ್ಳಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT