ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆಸ್‌ ಬೋರ್ಡ್‌ ಸ್ವರೂಪದಲ್ಲಿ ನಗರ ನಿರ್ಮಿಸಿ’

ಪ್ರೊ. ವಿಕ್ರಂ ಸೋನಿ
Last Updated 19 ಆಗಸ್ಟ್ 2017, 19:37 IST
ಅಕ್ಷರ ಗಾತ್ರ

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿಕ್ರಂ ಸೋನಿ ದೇಶದ ಪ್ರಮುಖ ಭೌತಶಾಸ್ತ್ರಜ್ಞರಲ್ಲಿ ಒಬ್ಬರು. ಯಮುನಾ ನದಿಯ ಪ್ರವಾಹ ಪ್ರದೇಶದಿಂದ ನವದೆಹಲಿಗೆ ನೀರು ಪೂರೈಸುವ ಯಶಸ್ವಿ ಯೋಜನೆಯನ್ನು ರೂಪಿಸಿದವರು. ‘ಜಲಮೂಲ ಸಂರಕ್ಷಿಸಿ, ಬಳಸಿ’ ಎನ್ನುವುದು ಅವರ ಮಂತ್ರ. ಜಲ ಸಾಕ್ಷರತೆ ಮೂಡಿಸಲು ದೇಶದ ಉದ್ದಗಲಕ್ಕೂ ಓಡಾಡುತ್ತಿರುವ ಅವರು, ವಿಜಯಪುರದಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶದಲ್ಲೂ ಪಾಲ್ಗೊಂಡಿದ್ದರು. ಸಮಾವೇಶದ ಗಡಿಬಿಡಿ ನಡುವೆಯೇ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದರು.

* ಕರ್ನಾಟಕ ಸತತ ಮೂರು ವರ್ಷಗಳಿಂದ ಬರದ ಸಂಕೋಲೆಯಲ್ಲಿ ಸಿಕ್ಕು ನರಳುತ್ತಿದೆ. ಇದರಿಂದ ಪಾರಾಗುವ ಬಗೆ ಹೇಗೆ?
ಕರ್ನಾಟಕ ಮಾತ್ರವೇಕೆ? ದೇಶದ ಹಲವು ರಾಜ್ಯಗಳು ಸದ್ಯ ಎದುರಿಸುತ್ತಿರುವ ಬಹುದೊಡ್ಡ ಬಿಕ್ಕಟ್ಟಿದು. ಜಲಮೂಲಗಳನ್ನೆಲ್ಲ ಛಿದ್ರಗೊಳಿಸಿರುವ ನಾವು, ತಾಜಾ ನೀರಿನ ತಾಣಗಳಾಗಿದ್ದ ಬಹುಪಾಲು ಅರಣ್ಯಗಳನ್ನೂ ಬರಿದು ಮಾಡಿದ್ದೇವೆ. ಭೂಮಿಯ ಮೇಲೆ ಲಭ್ಯವಿರುವ ತಾಜಾ ನೀರೆಲ್ಲ ಮನುಷ್ಯನೊಬ್ಬನ ಸ್ವತ್ತಲ್ಲ; ಅದರ ಅಗತ್ಯವಿರುವ ಗಿಡ–ಮರಗಳು, ಪಶು–ಪಕ್ಷಿಗಳೂ ಇವೆ ಎಂಬುದನ್ನು ಮರೆಸಿದಂತಹ ಮಹಾದಾಹ ನಮ್ಮದು. ಆ ಭರದಲ್ಲಿ ಭೂಮಿಯ ಮೇಲ್ಮೈನಲ್ಲಿದ್ದ ಜಲಮೂಲಗಳನ್ನಲ್ಲದೆ ಆಳದಲ್ಲಿದ್ದ ಅಂತರ್ಜಲವನ್ನೂ ಖಾಲಿ ಮಾಡಿಬಿಟ್ಟೆವು. ಅದರ ಫಲವನ್ನು ನಾವೀಗ ಉಣ್ಣಬೇಕಿದ್ದು, ಎಲ್ಲೆಡೆ ಮರುಭೂಮಿಗಳು ಸೃಷ್ಟಿಯಾಗುತ್ತಿವೆ.

ಪ್ರತಿವರ್ಷ ಪ್ರಕೃತಿಯಿಂದ ಮರುಪೂರಣ ಆಗುವಷ್ಟು (ಮಳೆ ಸುರಿಸುವ) ನೀರನ್ನಷ್ಟೇ ಬಳಕೆ ಮಾಡುವಂತೆ ನಮ್ಮ ಪ್ರವೃತ್ತಿಗಳು ಬದಲಾಗಬೇಕು. ಅದಕ್ಕಾಗಿ ನೀರಿನ ಬಜೆಟ್‌ (ವಾಟರ್‌ ಬಜೆಟ್‌) ತಯಾರಿಸಬೇಕು. ಜಲ ಮೂಲಗಳಾದ ಪರ್ವತಗಳು, ಸರೋವರಗಳು, ನದಿಗಳು, ಕೆರೆಗಳು, ಪ್ರವಾಹ ಪ್ರದೇಶಗಳು ಹಾಗೂ ಅರಣ್ಯಗಳನ್ನು ಆದ್ಯತೆಯ ಮೇಲೆ ರಕ್ಷಿಸಬೇಕು. ಕೈಗಾರಿಕೆ ಹಾಗೂ ಕೃಷಿಗೆ ಬಳಸುವ ನೀರಿನ ಮೇಲೆ ಮಿತಿ ವಿಧಿಸಬೇಕು. ನದಿ–ಕೆರೆಗಳ ಜೋಡಣೆಯತ್ತ ಗಮನಹರಿಸಬೇಕು. ವಿಜಯಪುರದಲ್ಲಿ ಅಂತಹ ಯತ್ನಗಳು ಶುರುವಾಗಿರುವುದು ಸ್ತುತ್ಯಾರ್ಹ.

* ಜಲ ಸಂರಕ್ಷಣೆಯಲ್ಲಿ ಎದುರಾಗಿರುವ ಪ್ರಮುಖ ಸವಾಲು ಯಾವುದು? ಅದಕ್ಕೆ ಏನು ಪರಿಹಾರ?
ಕೃಷಿಯಲ್ಲಿ ಅಳವಡಿಸಿಕೊಂಡ ನೀರಾವರಿ ವಿಧಾನವೇ ಜಲ ಸಂರಕ್ಷಣೆಯಲ್ಲಿ ಪ್ರಮುಖ ಸವಾಲು. ದೇಶದಲ್ಲಿ ಶೇ 80ರಷ್ಟು ನೀರು ಕೃಷಿ ಕ್ಷೇತ್ರವೊಂದಕ್ಕೇ ಬಳಕೆಯಾಗುತ್ತಿದ್ದು, ಅದರಲ್ಲಿ ಬಹುಪಾಲು ಪೋಲಾಗುತ್ತಿದೆ. ಹೀಗಾಗಿ ಕೃಷಿ ವಿಧಾನದ ನಕ್ಷೆ ಬದಲಾಗಬೇಕು. ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ ಹಾಗೂ ಕಡಿಮೆ ನೀರು ಬಯಸುವ ಬೆಳೆಗಳ ಆಯ್ಕೆಯಿಂದ ಬರದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ. ಕರ್ನಾಟಕ ಹೇಗೂ ಬರ ನಿರೋಧಕ ಬೆಳೆಗಳಿಗೆ ಹೆಸರಾಗಿದೆ. ಅಂತಹ ಬೀಜ ಪರಂಪರೆಯತ್ತ ರೈತರು ಹಿಂದಿರುಗಿ ನೋಡಬೇಕು.

* ದೇಶದ ಬಹುತೇಕ ಪ್ರಮುಖ ನದಿಗಳು ‘ಐಸಿಯು’ನಲ್ಲಿವೆ ಎಂಬ ಮಾತು ಜಲತಜ್ಞರಿಂದ ಮತ್ತೆ, ಮತ್ತೆ ಕೇಳಿಬರುತ್ತಿದೆ. ಉಸಿರು ಕಟ್ಟಿರುವ ನದಿಗಳು ಮರುಹುಟ್ಟು ಪಡೆಯಲು ಸಾಧ್ಯವಿದೆಯೇ?
ಸದಾ ಹರಿಯುವುದೇ ನದಿಗಳ ಜೀವಂತಿಕೆಯ ಲಕ್ಷಣ. ಆದರೆ, ಪ್ರತಿ ನದಿಗೂ ನಾವು ದೊಡ್ಡ–ದೊಡ್ಡ ಅಣೆಕಟ್ಟೆ ಕಟ್ಟಿಬಿಟ್ಟಿದ್ದೇವೆ. ವರ್ಷದುದ್ದಕ್ಕೂ ನೈಸರ್ಗಿಕ ಹರಿವನ್ನೇ ಕಾಣದ ನದಿಗಳು ಹೇಗೆ ಬದುಕಬಲ್ಲವು, ನೀವೇ ಹೇಳಿ? ಹೂಳು ತುಂಬದಂತೆ, ಪಾಚಿ ಕಟ್ಟದಂತೆ ತಾಜಾತನ ಕಾಪಾಡಿಕೊಳ್ಳಲು ಅವುಗಳ ಪಾತ್ರದಲ್ಲಿ ಸದಾ ನೀರು ಹರಿಯಲೇಬೇಕು. ಪುಟ್ಟ–ಪುಟ್ಟ ಬಾಂದಾರಗಳನ್ನು ನಿರ್ಮಾಣ ಮಾಡಿದರೆ ಜಲ ಮರುಪೂರಣದ ಜತೆಗೆ ನದಿಯ ಹರಿವಿಗೂ ಅನುವು ಮಾಡಿದಂತೆ ಆಗುತ್ತದೆ. ಆದರೆ, ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ದೊಡ್ಡ ಯೋಜನೆಗಳೇ ಬೇಕಲ್ಲ (ನಗು). ದೊಡ್ಡ ಯೋಜನೆಗಳೆಂದರೆ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ದಾರಿಯಲ್ಲವೆ?

ನದಿಗಳು ಉಳಿಯಲು ಅವುಗಳ ಪಾತ್ರದಲ್ಲಿ ಮರಳು ಇರಲೇಬೇಕು. ಕೃಷ್ಣೆಯ ಒಡಲಲ್ಲಂತೂ ಮರಳನ್ನೆಲ್ಲ ಸಂಪೂರ್ಣವಾಗಿ ಬಗೆಯಲಾಗಿದೆ. 50 ಅಡಿಗಳಷ್ಟು ಆಳವಾದ ಕಂದಕಗಳು ಅದರ ಪಾತ್ರದಲ್ಲಿ ಬಿದ್ದಿದ್ದು, ಸಮುದ್ರದ ನೀರು ಮುಖಜ ಭೂಮಿಯಿಂದ ಬಹುದೂರದವರೆಗೆ ಒಳನುಗ್ಗುತ್ತಿದೆ. ಸಿಹಿನೀರಿನ ನೆಲೆಯೀಗ ಉಪ್ಪು ನೀರಿನ ತಾಣವಾಗಿದೆ. ನದಿ ಪಾತ್ರದ ಮೇಲೆ ನಮ್ಮ ದಾಳಿ ಇದೇ ರೀತಿ ಮುಂದುವರಿದರೆ ಅದು ತನ್ನ ದಾರಿಯನ್ನು ತಾನು ಕಂಡುಕೊಳ್ಳುತ್ತದೆ. ಆಗ ಮಹಾಪೂರದ ತೂಗುಗತ್ತಿ ಅಪಾಯದ ಅಂದಾಜಿಗೂ ನಿಲುಕದಂತೆ ಜೋರಾಗಿ ತೂಗಲಿದೆ.

ಒತ್ತುವರಿ ಆಗದಂತೆ ನದಿಗಳನ್ನು ರಕ್ಷಿಸುವ ಜತೆಗೆ ಅವುಗಳ ನೀರು ಕಲುಷಿತವಾಗದಂತೆ ತಡೆಯಲು ಎರಡೂ ಬದಿಗಳಲ್ಲಿ ಒಂದು ಕಿ.ಮೀ. ದೂರದವರೆಗೆ ಅರಣ್ಯವನ್ನು ಬೆಳೆಸಬೇಕು. ಅಲ್ಲದೆ, ನದಿಗಳ ಸ್ವಾತಂತ್ರ್ಯವನ್ನು ಅವುಗಳಿಗೆ ಬಿಟ್ಟುಕೊಡಬೇಕು. ‘ಸಂರಕ್ಷಿಸು ಮತ್ತು ಮಿತವಾಗಿ ಬಳಸು’ ನಮ್ಮ ಮಂತ್ರವಾಗಬೇಕು.

* ಕಾವೇರಿಯಂತಹ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವೇ ಇಲ್ಲವೆ?
ಕ್ಷುಲ್ಲಕ ರಾಜಕೀಯದಿಂದ ಇಂತಹ ವಿವಾದಗಳು ಜೀವಂತವಾಗಿವೆ. ಯಾವುದೇ ನದಿ ರಾಜ್ಯ, ಗಡಿ, ಜನ, ಭಾಷೆ ಎಂದೆಲ್ಲ ನೋಡಿಕೊಂಡು ಹರಿಯುವುದಿಲ್ಲ. ದೇಶದ ಪ್ರಾಕೃತಿಕ ಸಂಪತ್ತು ಅದಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರೆಲ್ಲ ಒಂದೆಡೆ ಕುಳಿತು ಚರ್ಚಿಸಿದರೆ ಪರಿಹಾರ ಕಷ್ಟವಲ್ಲ. ಆದರೆ, ರಾಜಕೀಯ ಒಳಸುಳಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಕಾನೂನು ಹೋರಾಟದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ. ಅದು ಸಮಯ ಕೊಲ್ಲುವ ಒಂದು ಸಾಧನವಷ್ಟೇ.

ಜಮೀನುಗಳಲ್ಲಿ ಬಿದ್ದ ಮಳೆ ನೀರನ್ನು ಮೊದಲು ಹರಿದು ಹೋಗಲು ಬಿಟ್ಟು, ಬಳಿಕ ಅದನ್ನು ಪಡೆಯಲು ಹೋರಾಡುವ ಬದಲು, ಬಿದ್ದ ಮಳೆ ನೀರನ್ನು ಮೊದಲೇ ಸಂಗ್ರಹಿಸಿಕೊಂಡರೆ ಯಾವ ಜಲ ವಿವಾದಗಳೂ ಕಾಡಲಾರವು.

* ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಏನು ಪರಿಹಾರ?
ಪರಾವಲಂಬಿಗಳಾದ ಬೆಂಗಳೂರು ಹಾಗೂ ನವದೆಹಲಿಯಂತಹ ನಗರಗಳು ಸುಸ್ಥಿರವಾಗಿ ಬೆಳೆಯಲು ಸಾಧ್ಯವೇ ಇಲ್ಲ. ಈ ಎರಡೂ ನಗರಗಳಿಗೆ ಸ್ವಂತ ಜಲಮೂಲವಿಲ್ಲ. ಕೋಟ್ಯಂತರ ಜನರನ್ನು ಗುಡ್ಡೆ ಹಾಕಿಕೊಂಡು ನೂರಾರು ಕಿ.ಮೀ. ದೂರದಿಂದ ನೀರು ಎತ್ತಿ ತಂದು ಪೂರೈಸುವಂತಹ ಈಗಿನ ವ್ಯವಸ್ಥೆ ಬಹುಕಾಲ ಮುಂದುವರಿಯದು. ಈ ನಗರಗಳ ಜನ ಸಣ್ಣ ನಗರಗಳ ಕಡೆಗೆ ಹೋಗುವಂತೆ ಉತ್ತೇಜಿಸಬೇಕು. ಮಹಾನಗರಗಳಿಂದ ಜನರ ವಲಸೆಗೆ ಪ್ರೋತ್ಸಾಹ ನೀಡುವಂತಹ ಯೋಜನೆ ರೂಪಿಸಬೇಕು. ಜನಸಂಖ್ಯೆ ಪ್ರಮಾಣ ಕಡಿಮೆ ಆಗದಿದ್ದರೆ ಈ ಮಹಾನಗರಗಳು ಎದುರಿಸುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ. ಮಾಲಿನ್ಯದ ಪ್ರಮಾಣ ಸಹ ತಹಬದಿಗೆ ಬರಲಾರದು.

ಬನ್ನೇರುಘಟ್ಟದ ಪ್ರದೇಶ ಖನಿಜದಿಂದ ಸಮೃದ್ಧವಾಗಿದೆ. ಮಳೆಗಾಲದಲ್ಲಿ ಅಲ್ಲಿ ಬೀಳುವ ನೀರನ್ನು ಸಂಗ್ರಹಿಸಿ, ವಿತರಿಸುವ ವ್ಯವಸ್ಥೆ ಮಾಡಿದರೆ ನಗರದ ನೀರಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕು, ನಿಸರ್ಗದತ್ತವಾದ ಖನಿಜಯುಕ್ತ ನೀರು ಜನರಿಗೆ ಒದಗಲಿದೆ. ಶುದ್ಧೀಕರಿಸಿದ ನೀರಿನ (ಆರ್‌.ಒ) ಹೆಸರಿನಲ್ಲಿ ಜನರ ಆರೋಗ್ಯದ ಮೇಲೆ ನಡೆದಿರುವ ದಾಳಿಯೂ ತಪ್ಪಲಿದೆ.

* ಯಮುನಾ ನದಿಯ ಪ್ರವಾಹ ಪ್ರದೇಶದಿಂದ ನೀರು ಸಂಗ್ರಹಿಸಿ ನವದೆಹಲಿಗೆ ಒದಗಿಸುವಂತಹ ಯೋಜನೆ ಹೊಳೆದದ್ದು ಹೇಗೆ? ಅದು ಸರಿಯಾಗಿ ಅನುಷ್ಠಾನವಾಗಿದೆಯೇ?
ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ನೀರಿನ ಠೇವಣಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದು ನಮ್ಮ ಸಂಶೋಧನೆಗಳಿಂದ ಬೆಳಕಿಗೆ ಬಂದಿತ್ತು. ಈ ಪ್ರದೇಶ 5–6 ಕಿ.ಮೀ.ಗಳಷ್ಟು ಅಗಲ ಹಾಗೂ ನೂರು ಮೀಟರ್‌ನಷ್ಟು ಆಳದವರೆಗೆ ಚಾಚಿಕೊಂಡಿದೆ. ದೆಹಲಿ ಹತ್ತಿರವೇ 48 ಕಿ.ಮೀ.ನಷ್ಟು ಉದ್ದ ಆ ನದಿ ಹರಿಯುತ್ತದೆ. ಅಲ್ಲಿ ಲಭ್ಯವಿರುವ ನೀರಿನಿಂದ ಬಹುಪಾಲು ಕೊರತೆ ನೀಗಿಸಬಹುದು; ಪ್ರತಿವರ್ಷ 25 ಕೋಟಿ ಕ್ಯುಬಿಕ್‌ ಮೀಟರ್‌ನಷ್ಟು ನೀರು ತೆಗೆಯಬಹುದು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಮರಳಿನಲ್ಲಿ ಸಂಗ್ರಹವಾದ ಈ ನೀರನ್ನು ತೆಗೆದರೆ ಮಳೆಗಾಲದಲ್ಲಿ ನದಿ ತುಂಬಿ ಹರಿದಾಗ ಮರುಪೂರಣ ಆಗುತ್ತದೆ. ಪ್ರವಾಹದ ಪ್ರಮಾಣವನ್ನು ತಗ್ಗಿಸಲೂ ಇದರಿಂದ ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದ್ದೆವು. ಪ್ರವಾಹ ಪ್ರದೇಶದ ಮೇಲ್ಪದರದ ನಾಲ್ಕು ಮೀಟರ್‌ ಆಳದವರೆಗಿನ ನೀರನ್ನು ಮಾತ್ರ ತೆಗೆಯಲು ಶಿಫಾರಸು ಮಾಡಿದ್ದೆವು. ಸರ್ಕಾರ ನಮ್ಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಅದರಿಂದ ದೆಹಲಿ ಜಲ ಮಂಡಳಿಗೆ ಕಳೆದ ವರ್ಷ ಪ್ರತಿದಿನ 2.5 ಕೋಟಿ ಲೀಟರ್‌ ನೀರು ಸಿಕ್ಕಿದೆ. ₹ 250 ಕೋಟಿ ವರಮಾನವೂ ಅದಕ್ಕೆ ಹರಿದುಬಂದಿದೆ.

* ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯನ್ನು ‘ನೈಸರ್ಗಿಕ ನಗರ’ವಾಗಿ ಕಟ್ಟುವ ಯೋಜನೆ ರೂಪಿಸಿದ್ದೀರಲ್ಲವೆ? ಈ ನೈಸರ್ಗಿಕ ನಗರದ ಗುಣಲಕ್ಷಣಗಳು ಏನು?
ನಾವು ನದಿ ಪ್ರವಾಹ ಪ್ರದೇಶದ ನೀರನ್ನು ಕುಡಿಯಲು ಬಳಕೆ ಮಾಡುವ ಸಂಬಂಧ ಮೊದಲೇ ಸಂಶೋಧನೆ ನಡೆಸಿದ್ದೆವು. ಆಂಧ್ರದ ಸರ್ಕಾರ ಅಮರಾವತಿ ನಗರವನ್ನು ಕೃಷ್ಣಾ ತಟದಲ್ಲಿ ನಿರ್ಮಿಸಲು ತೀರ್ಮಾನಿಸಿದಾಗ ಆ ಪ್ರದೇಶದಲ್ಲೂ ನೀರಿನ ಠೇವಣಿ ಅಪಾರವಾಗಿದ್ದನ್ನು ನಾವು ಗಮನಿಸಿದೆವು. ಅಲ್ಲದೆ, ನಗರ ಪರಿಮಿತಿಗೆ ಒಳಪಡುವ ಭೂಮಿ ಅತ್ಯಂತ ಫಲವತ್ತಾಗಿದೆ ಎಂದು ಗೊತ್ತಾಯಿತು. ನಗರ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ 216 ಚದರ ಕಿ.ಮೀ. ಭೂಮಿಯಲ್ಲಿ 35 ಚದರ ಕಿ.ಮೀ. ಅಚ್ಚುಕಟ್ಟು ಪ್ರದೇಶ ಸೇರಿತ್ತು. ನಗರಕ್ಕೆ ನೀರು ಪೂರೈಸುವ ಜತೆಗೆ ಹಣ್ಣು–ತರಕಾರಿ ಬೆಳೆದುಕೊಡಬಲ್ಲ ಸಾಮರ್ಥ್ಯವನ್ನು ಆ ಭೂಮಿ ಹೊಂದಿತ್ತು.

ನಿರ್ಮಾಣವಾಗಲಿರುವ ಹೊಸ ನಗರವನ್ನು ಒಂದು ಚೆಸ್‌ ಬೋರ್ಡ್‌ ಎಂದು ಭಾವಿಸಿಕೊಳ್ಳಿ. ಅದರ ಬಿಳಿ ಮನೆಗಳು ಕಟ್ಟಡನಿರ್ಮಿತ ಪ್ರದೇಶವಾಗಿಯೂ ಕಪ್ಪು ಮನೆಗಳು ಹಸಿರು ಪ್ರದೇಶವಾಗಿಯೂ ಇರಬೇಕು. ಇಡೀ ನಗರ ಈ ರೀತಿ ಪುಟ್ಟ–ಪುಟ್ಟ ಪ್ರದೇಶಗಳಲ್ಲಿ ವಿಭಜನೆಯಾಗಬೇಕು ಎನ್ನುವುದು ನಮ್ಮ ಸಲಹೆ. ಬೇಸಿಗೆಯಲ್ಲಿ ವಿಜಯವಾಡದ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತದೆ. ಕಟ್ಟಡ ನಿರ್ಮಿತ ಪ್ರದೇಶದ ಪಕ್ಕವೇ ಹಸಿರು ವಲಯವಿದ್ದರೆ ಅಲ್ಲಿಂದ ಬೀಸುವ ತಂಗಾಳಿಯಿಂದ ಜನವಸತಿ ಪ್ರದೇಶದಲ್ಲಿ ಐದು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ತಗ್ಗಿಸಬಹುದು. ಕಟ್ಟಡದೊಳಗಿನ ತಾಪಮಾನ ಇನ್ನೂ ಕಡಿಮೆ ಆಗುವುದು. ನೈಸರ್ಗಿಕ ವ್ಯವಸ್ಥೆಯನ್ನೇ ಬಳಸಿಕೊಂಡು ಏರ್‌ ಕಂಡಿಷನಿಂಗ್‌ ವ್ಯವಸ್ಥೆಯಿಲ್ಲದೆ ಐದರಿಂದ ಎಂಟು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ತಗ್ಗಿಸಬಹುದು.

ತನ್ನ ಬಹುಪಾಲು ಆಹಾರವನ್ನು ತಾನೇ ಬೆಳೆದುಕೊಳ್ಳುವ, ನೀರಿನ ಸ್ವಂತ ಮೂಲ ಹೊಂದುವ, ವಿದ್ಯುತ್‌ ಬಳಕೆ ಕಡಿಮೆ ಮಾಡುವ, ನಿಸರ್ಗದತ್ತವಾದ ವಾತಾನುಕೂಲ ವ್ಯವಸ್ಥೆ ಪಡೆದಿರುವ ಇಂತಹ ಸುಸ್ಥಿರ ನಗರವೇ ನೈಸರ್ಗಿಕ ನಗರ. ಈ ಪರಿಕಲ್ಪನೆಯನ್ನು ಆಂಧ್ರದ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೆವು. ಅವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಯಾವುದೇ ರಾಜ್ಯ ಈ ನೀಲನಕ್ಷೆಯಂತೆ ಟೌನ್‌ಷಿಪ್‌ ಅಭಿವೃದ್ಧಿಪಡಿಸಿದರೆ ಅದು ಸುಸ್ಥಿರವಾಗಿ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT