ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಮುನ್ನುಡಿಗೆ ಕಾದಿರುವ ಭಾರತ

ಇಂದಿನಿಂದ ಏಕದಿನ ಸರಣಿ: ಶ್ರೀಲಂಕಾ ತಂಡಕ್ಕೆ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯ ಸ್ಥಿತಿ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಂಬುಲಾ: ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಸುಲಭವಾಗಿ ಗೆದ್ದು ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಏಕದಿನ ಸರಣಿಯಲ್ಲಿಯೂ ಪ್ರಾಬಲ್ಯ ಮೆರೆಯಲು ಕಾಯುತ್ತಿದೆ.

ಇಲ್ಲಿನ ದಂಬುಲಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾಗಲಿರುವ ಏಕದಿನ ಸರಣಿ ವೇದಿಕೆಯಾಗಲಿದೆ. ಐದು ಪಂದ್ಯಗಳ ಸರಣಿ ಇದಾಗಿದ್ದು ಸೆಪ್ಟೆಂಬರ್ ಮೂರರವರೆಗೆ ಟೂರ್ನಿ ನಡೆಯಲಿದೆ. ಕೊನೆಯಲ್ಲಿ ಒಂದು ಟ್ವೆಂಟಿ–20 ಪಂದ್ಯ ಜರುಗಲಿದೆ. ಪಲ್ಲೆಕೆ ಲೆಯಲ್ಲಿ ಎರಡನೇ ಏಕದಿನ ಪಂದ್ಯ ಆಯೋಜನೆಯಾಗಿದ್ದು, ಉಳಿದ ಮೂರೂ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ.

ಅಭ್ಯಾಸಕ್ಕೆ ವೇದಿಕೆ: 2019ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯ ಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಈಗಿನಿಂದಲೇ ಅಭ್ಯಾಸ ನಡೆಸುತ್ತಿದೆ. ಈಗಿನ ಮತ್ತು ಮುಂಬರುವ ಸರಣಿಗಳೂ ಅಭ್ಯಾಸಕ್ಕೆ ವೇದಿಕೆಯಾಗಲಿವೆ. ಆದ್ದರಿಂದ ಸೀನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ‘ಎಲ್ಲಾ ಸರಣಿಗಳಂತೆ ಇದು ಕೂಡ ಒಂದು ಸರಣಿಯಷ್ಟೇ. ನಮ್ಮ ಆಟಗಾರರ ಮೇಲೆ ಯಾವುದೇ ಒತ್ತಡವಿಲ್ಲ. ಆದರೆ ಮುಂಬರುವ ವಿಶ್ವಕಪ್‌ ಗಮ ನದಲ್ಲಿಟ್ಟುಕೊಂಡು ಆಟಗಾರರ ಫಿಟ್‌ನೆಸ್‌ಗೆ ಒತ್ತು ಕೊಡಬೇಕಿದೆ. ಇದರ ಬಗ್ಗೆ ಮಾತ್ರ ನಮ್ಮ ಗಮನ’ ಎಂದು ಹೇಳಿದ್ದಾರೆ. ಆದರೆ ಎದುರಾಳಿ ಶ್ರೀಲಂಕಾ ತಂಡದ ಪಾಲಿಗೆ ಇದು ಮಹತ್ವದ ಸರಣಿ.

ಇದೇ ವರ್ಷದ ಸೆಪ್ಟೆಂಬರ್ 30ರ ಒಳಗೆ ರಾಂಕಿಂಗ್‌ನಲ್ಲಿ ಮೊದಲ ಎಂಟು ಸ್ಥಾನಗಳನ್ನು ಹೊಂದಿರುವ ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಆದರೆ ಲಂಕಾ ತಂಡ ಈಗ ಎಂಟನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ಉಳಿಸಿಕೊಳ್ಳಲು ಭಾರತ ವಿರುದ್ಧದ ಸರಣಿಯಲ್ಲಿ ಕನಿಷ್ಠ ಎರಡು ಪಂದ್ಯಗಳನ್ನಾದರೂ ಗೆಲ್ಲಲೇಬೇಕು. 114 ರೇಟಿಂಗ್‌ ಪಾಯಿಂಟ್ಸ್‌ ಹೊಂದಿ ರುವ ಭಾರತ ತಂಡ  ಮೂರನೇ ಸ್ಥಾನ ದಲ್ಲಿದ್ದು ಈಗಾಗಲೇ ನೇರ ಅರ್ಹತೆ ಪಡೆದಿದೆ.

ಸಿಂಹಳೀಯ ನಾಡಿನ ತಂಡ 88 ರೇಟಿಂಗ್ ಪಾಯಿಂಟ್ಸ್‌ ಹೊಂದಿದೆ. ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಐರ್ಲೆಂಡ್‌ ತಂಡಗಳು ನಂತರದ ಸ್ಥಾನಗಳಲ್ಲಿವೆ. ಆದ್ದರಿಂದ ಲಂಕಾ ತಂಡದ ಪಾಲಿಗೆ ಇದು ಅಗ್ನಿ ಪರೀಕ್ಷೆಯ ಸರಣಿ. ಲಂಕಾ ತಂಡ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ರೇಟಿಂಗ್‌ ಪಾಯಿಂಟ್ಸ್‌ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸಿಕೊಳ್ಳುತ್ತದೆ. ಆಗ ವಿಶ್ವಕಪ್‌ಗೆ ನೇರ ಅರ್ಹತೆ ಲಭಿಸುತ್ತದೆ.

ಚೇತರಿಸಿಕೊಳ್ಳುವ ಸವಾಲು: ಇತ್ತೀ ಚಿನ ದಿನಗಳಲ್ಲಿ ಶ್ರೀಲಂಕಾ ತಂಡ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮೇಲಿಂದ ಮೇಲೆ ಕಳಪೆ ಆಟ ವಾಡುತ್ತಿದೆ. ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿನ ಸೋಲು ವಿಶ್ವಾಸ ಕುಗ್ಗಿಸಿದರೆ, ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಜಿಂಬಾಬ್ವೆ ಎದುರು ಅನುಭವಿಸಿದ್ದ ಸರಣಿ ಸೋಲು ತಂಡದ ಜಂಘಾಬಲವನ್ನೇ ಉಡುಗಿಸಿದೆ.

ಈ ಸವಾಲುಗಳನ್ನು ಎದುರಿಸಿ ಚೇತರಿಸಿಕೊಳ್ಳಬೇಕಾದ ಸವಾಲು ಆತಿಥೇಯ ತಂಡದ ಮುಂದಿದೆ. ಪ್ರಮುಖ ಆಟಗಾರರ ಗಾಯದ ಸಮಸ್ಯೆಯೂ ಕಾಡುತ್ತಿದೆ. ಮಂಡಿ ನೋವಿನಿಂದ ಬಳಲುತ್ತಿರುವ ನುವಾನ್‌ ಪ್ರದೀಪ್‌, ಬೆರಳು ಗಾಯದ ನೋವು ಅನುಭವಿಸುತ್ತಿರುವ ಅಸೆಲಾ ಗುಣರತ್ನೆ ಸರಣಿಯಲ್ಲಿ ಆಡುತ್ತಿಲ್ಲ. ಜೊತೆಗೆ ಪೂರ್ಣಾವಧಿ ನಾಯಕರಾದ ಬಳಿಕ ತರಂಗ ಅವರಿಗೆ ಇದು ಮೊದಲ ಪರೀಕ್ಷೆ.

ಏಳು ವರ್ಷಗಳ ಬಳಿಕ ಪಂದ್ಯ: ದಂಬುಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಲಂಕಾ ತಂಡಗಳು ಏಳು ವರ್ಷಗಳ ಬಳಿಕ ಏಕದಿನ ಪಂದ್ಯವಾಡಲು ಸಜ್ಜಾಗಿವೆ. 2010ರಲ್ಲಿ ಆಡಿದ್ದ ಪಂದ್ಯದಲ್ಲಿ ಆತಿಥೇಯರು 74 ರನ್‌ಗಳಿಂದ ಗೆದ್ದಿದ್ದರು.  ಲಂಕಾ ತಂಡದವರು ಇಲ್ಲಿ 2017ರಲ್ಲಿ ಬಾಂಗ್ಲಾದೇಶದ ಎದುರು ಎರಡು ಪಂದ್ಯಗಳನ್ನಾಡಿದ್ದರು.ಆದರಲ್ಲಿ ಒಂದು ಪಂದ್ಯದಲ್ಲಿ ಬಾಂಗ್ಲಾದೇಶ 90 ರನ್‌ಗಳ ಗೆಲುವು ಪಡೆದಿತ್ತು. ಇನ್ನೊಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ. ಲಸಿತ್‌ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್‌, ಉಪುಲ್‌ ತರಂಗ ಅವ ರಂತರ ಅನುಭವಿ ಆಟಗಾರರನ್ನು ಹೊಂದಿದ್ದರೂ ಲಂಕಾ ತಂಡಕ್ಕೆ ಉತ್ತಮ ಆಟವಾಡಲು ಸಾಧ್ಯವಾಗಿಲ್ಲ.

ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆ:
ಕರ್ನಾಟಕದ ಕೆ.ಎಲ್. ರಾಹುಲ್‌ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌ ಹೋದ ವರ್ಷ ಜಿಂಬಾಬ್ವೆ ಎದುರು ಆಡಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. ಆಗ ಅವರು ಮೊದಲ ಮೂರೂ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಇಂಗ್ಲೆಂಡ್‌ ಎದುರಿನ ಮೂರೂ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರೂ ಗಳಿಸಿದ್ದು 24 ರನ್‌ ಮಾತ್ರ. ಆದ್ದರಿಂದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ.

‘ರಾಹುಲ್ ಅಂತಿಮ ಹನ್ನೊಂದರ ತಂಡದಲ್ಲಿ ಆಡುವುದು ಬಹುತೇಕ ನಿಶ್ಚಿತ. ಆದರೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಆಗಬಹುದು’ ಎಂದು ಪ್ರಸಾದ್‌ ಹೋದವಾರ ಹೇಳಿದ್ದರು.  ಆದ್ದರಿಂದ ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಇನಿಂಗ್ಸ್‌ ಆರಂಭಿ ಸಬಹುದು. ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಮಹಾರಾಷ್ಟ್ರದ ಕೇದಾರ್‌ ಜಾಧವ್‌ ಕೂಡ ತಂಡದಲ್ಲಿ ಇರುವುದರಿಂದ ನಾಯಕ ಕೊಹ್ಲಿ ಅವರಿಗೆ ಅಂತಿಮ ಹನ್ನೊಂದರ ತಂಡದ ಆಯ್ಕೆಯೂ ಸವಾಲಿದ್ದಾಗಿದೆ.

ತಂಡಗಳು
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್‌ ಶರ್ಮಾ, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್‌, ಮಹೇಂದ್ರಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಅಕ್ಷರ ಪಟೇಲ್, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ ಕುಮಾರ್‌, ಶಾರ್ದೂಲ್‌ ಠಾಕೂರ್‌.
ಶ್ರೀಲಂಕಾ:
ಉಪುಲ್‌ ತರಂಗ (ನಾಯಕ), ಏಂಜೆಲೊ ಮ್ಯಾಥ್ಯೂಸ್‌, ನಿರೊಷನ್‌ ಡಿಕ್ವೆಲ್ಲಾ, ಧನುಷ್ಕ ಗುಣತಿಲಕ, ಕುಶಾಲ್‌ ಮೆಂಡೀಸ್‌, ಚಾಮರ ಕಪುಗೆದರ, ಮಿಲಿಂದ ಸಿರಿವರ್ಧನೆ, ಮಿಲಿಂದ ಪುಷ್ಪಕುಮಾರ, ಅಖಿಲ ಧನಂಜಯ, ಲಕ್ಷಣ ಸಂದಕನ, ತಿಸಾರ ಪೆರೇರಾ, ವನಿಂದು ಹಸರಂಗ, ಲಸಿತ ಮಾಲಿಂಗ, ದಶುಮಂತ ಚಾಮೀರ, ವಿಶ್ವ ಫೆರ್ನಾಂಡೊ.

ಪಂದ್ಯ ಆರಂಭ: ಮಧ್ಯಾಹ್ನ 2.30
ನೇರ ಪ್ರಸಾರ: ಟೆನ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT