ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿನ್ನನ್ನು ನಾನು ಕ್ಷಮಿಸುವುದಿಲ್ಲ...’

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಾನು ನಿಮ್ಮ ಕಡೆ ಬಂದಾಗ ಮನೆಗೆ ಬರಬೇಕೆಂದು ಹೇಳಿದ್ದಿ. ಆರೋಗ್ಯ ತುಂಬ ಹದಗೆಟ್ಟಿದೆ. ನೀನು ಅನುಮತಿ ಕೊಟ್ಟರೆ ನಾನು ಕಾರ್ಯಕ್ರಮ ಮುಗ್ಸಿಕೊಂಡು ಇಲ್ಲಿಂದಲೆ ಮಣಿಪಾಲ್ ಆಸ್ಪತ್ರೆಗೆ ಹೋಗುತ್ತೇನೆ. ಇಲ್ಲ ಬರಲೇಬೇಕು ಎಂದರೆ ಬರುತ್ತೇನೆ’ ಎಂದು ಅನಂತಮೂರ್ತಿಯವರು ಮಣಿಪಾಲ್ ಆಸ್ಪತ್ರೆಯಿಂದಲೆ ಆಳ್ವಾಸ್ ನುಡಿಸಿರಿಗೆ ಬರುವಾಗ ಮಾರ್ಗ ಮಧ್ಯೆ ಫೋನ್ ಮಾಡಿ ನನಗೆ ಕೇಳಿದ್ದರು. ಮೂಡುಬಿದ್ರೆಗೆ ಬಂದ ಎಲ್ಲ ಸ್ನೇಹಿತರೂ ನನ್ನಲ್ಲಿಗೆ ಬಂದರೆ ನಿಭಾಯಿಸಲು ನನಗೆ ಸಾಧ್ಯವಿಲ್ಲ ಎಂಬುದು ನಿಜವೇ ಆದರೂ, ಬಂದು ಹೋಗಿ ಆದ ಮೇಲೆ ಮತ್ತೆಂದೋ ಸಿಕ್ಕಿದಾಗ, ‘ನಾನು ನಿಮ್ಮೂರಿಗೆ ಬಂದಿದ್ದೆ, ಛೆ ನಿಮಗೆ ಫೋನ್ ಮಾಡ್ಲಿಕೇ ಆಗ್ಲಿಲ್ಲ ನೋಡಿ’ ಎಂದು ನನ್ನನ್ನು ಟೊಳ್ಳಾದ ಅಂಬಟೆ ಮರಕ್ಕೆ ಹತ್ತಿಸಿದವರು ಇದ್ದಾರೆ. ಆಗೆಲ್ಲ, ‘ಆ ದಿವಸ ಏನು ಅದ್ಭುತವಾಗಿ ಮಾತಾಡಿದ್ರಿ ಸರ್ ನೀವು. ನಾನು ಹಿಂದೆ ಕುಳಿತು ನಿಮ್ಮ ಭಾಷಣ ಕೇಳುತ್ತಿದ್ದೆ. ನಿಮ್ಮ ಭಾಷಣ ಕೇಳಲಿಕ್ಕಾಗಿಯೇ ಬಂದಿದ್ದೆ ನಾನು. ಆಮೇಲೆ ನೀವು ಬ್ಯುಸಿ ಇರ್ತೀರಿ ಎಂದು ಮಾತಾಡಿಸಲು ಬರಲಿಲ್ಲ’ ಎಂದು ನನ್ನನ್ನು ಅಂಬಟೆ ಮರಕ್ಕೆ ಹತ್ತಿಸಲು ಹೊರಟವರನ್ನು ನಾನೂ ಪಪ್ಪಾಯಿ ಮರಕ್ಕೆ ಹತ್ತಿಸಿದ್ದೇನೆ. ಆದರೆ ಈ ನಡುವೆ ಅನಂತಮೂರ್ತಿಯವರ ನಡವಳಿಕೆ ಜೀವಮಾನದ ನೆನಪಾಗಿ ಉಳಿದುಕೊಂಡಿದೆ.

ಅನಂತಮೂರ್ತಿ ಅವರ, ‘ದಿವ್ಯ’ ಕಾದಂಬರಿ ಬಂದಾಗ ಅದರ ಬಗ್ಗೆ ಆಕಾಶವಾಣಿಯ ಭಾಷಣಕ್ಕೆ ನಾನು ಬರೆದಿದ್ದ ಅನಿಸಿಕೆಯ ಪ್ರತಿಯನ್ನು ಅವರಿಗೆ ಕಳಿಸಿದ್ದೆ. ‘ಚೆನ್ನಾಗಿ ಬರೆದಿದ್ದೀರಿ’ ಎಂಬ ಎರಡು ಸಾಲಿನ ಪತ್ರ ಬಂದಿತ್ತು. ನಂತರ ನನ್ನ ಯಾವುದೋ ಲೇಖನವನ್ನು ಓದಿ ಸ್ಥಿರ ದೂರವಾಣಿ ಮಾತ್ರವಿದ್ದ ಆ ಸಮಯದಲ್ಲಿ ಮನೆಗೆ ಫೋನ್ ಮಾಡಿ ಲೇಖನದ ಬಗ್ಗೆ ಮೆಚ್ಚುಗೆಯನ್ನು ಕಾಲು ಗಂಟೆಯಷ್ಟು ಹೇಳಿದ್ದರು. ನಂತರ ಅವರು ರಾಜ್ಯಸಭಾ ಚುನಾವಣೆಗೆ ನಿಂತಾಗ ಅವರ ಬಗ್ಗೆ ನನ್ನ ಕೆಲವು ಭಿನ್ನಾಭಿಪ್ರಾಯಗಳನ್ನು ಒಂದು ಲೇಖನದಲ್ಲಿ ಬರೆದಿದ್ದೆ. ಅದರಿಂದ ಸಿಟ್ಟಿಗೆದ್ದ ಅನಂತಮೂರ್ತಿಯವರು ಊಹಿಸಲಿಕ್ಕೂ ಸಾಧ್ಯವಿಲ್ಲದಷ್ಟು ಖಾರವಾಗಿ ಕೈಬರಹದಲ್ಲಿ ಹದಿನಾಲ್ಕು ಪುಟಗಳಷ್ಟು ಪತ್ರ ಬರೆದು, ‘ನಿನ್ನನ್ನು ನಾನು ಕ್ಷಮಿಸುವುದಿಲ್ಲ. ನನ್ನ ಬಳಿ ಇನ್ನು ಮಾತನಾಡಬೇಡ’ ಎಂದು ಬರೆದಿರುವ ಪತ್ರ ಇಂದೂ ಫೈಲ್‌ಗಳನ್ನು ತೆಗೆದಾಗ ನನ್ನನ್ನು ಅಣಕಿಸುತ್ತಿದೆ. ಅವರನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಮಾತಾಡಬಾರದು ಎಂದಿದ್ದಾರೆ. ಹೇಗೆ ಮನವರಿಕೆ ಮಾಡಿಕೊಡಲಿ ಎಂದು ನನ್ನ ಬಗ್ಗೆಯೇ ಬೇಜಾರಾಗಿಬಿಟ್ಟಿತ್ತು. ನನ್ನ ಅಳಲನ್ನು ಸುಬ್ರಾಯ ಚೊಕ್ಕಾಡಿಯವರ ಬಳಿಯೂ, ದಿವಂಗತ ಪ್ರೊ.ಕೆ.ರಾಮದಾಸ್ ಅವರ ಬಳಿಯೂ ಹೇಳಿಕೊಂಡಿದ್ದೆ. ರಾಮದಾಸ್ ಅವರು ಗಟ್ಟಿಯಾಗಿ,‘ಕ್ಷಮಿಸದೆ ಏನು ಗಲ್ಲಿಗೆ ಹಾಕ್ತಾರಂತಾ. ಸುಮ್ನಿದ್ದುಬಿಡಿ. ಸಿಕ್ಕಾಗ ನಾನು ಹೇಳ್ತೀನಿ’ ಅಂದಿದ್ದರು.

ಇದಾಗಿ ಎರಡು ಮೂರು ತಿಂಗಳ ನಂತರ ನಾನು ಶಾಲೆಯಲ್ಲಿರಬೇಕಾದರೆ ಸ್ಥಿರ ದೂರವಾಣಿಗೆ ಅನಂತಮೂರ್ತಿಯವರ ಕರೆ. ಮನೆಗೆ ಫೋನ್ ಮಾಡಿ ನನ್ನಾಕೆಯಿಂದ ಶಾಲೆಯ ನಂಬರ್ ತೆಗೆದುಕೊಂಡು ಫೋನ್ ಮಾಡಿದ್ದರು.:‘ನೀನು ದೇಶ-ಕಾಲ ಪತ್ರಿಕೆಯಲ್ಲಿ ಬರೆದ ಲೇಖನ ಓದಿದೆ. ತುಂಬ ಚೆನ್ನಾಗಿ ಬರೆದಿದ್ದಿ. ನಿನ್ನ ಮೇಲಿನ ಎಲ್ಲ ಸಿಟ್ಟನ್ನೂ ಬಿಟ್ಟಿದ್ದೇನೆ. ಬೆಂಗಳೂರಿಗೆ ಬಂದಾಗ ಮನೆಗೆ ಬಾ’ಎಂದು ಕರೆದರು. ಒಬ್ಬ ಲೇಖಕನಿಗೆ ಇನ್ನೊಬ್ಬ ಲೇಖಕನ ಒಂದು ಲೇಖನ ಸಿಟ್ಟನ್ನು ಬಿಡಲು ಕಾರಣ ಆಗುತ್ತದೆ ಅಥವಾ ಆಗಬೇಕು ಎಂದು ನನಗೆ ಅರ್ಥ ಆದದ್ದು ಅನಂತಮೂರ್ತಿಯವರಿಂದ.

ಅನಂತಮೂರ್ತಿಯವರ ಬಗ್ಗೆ ಆಕ್ಷೇಪಗಳೇನೆ ಇದ್ದಿದ್ದರೂ ಅವರು ನ್ಯಾಷನಲ್ ಐಕಾನ್ ಆಗಿದ್ದವರು. ನಾನು ಒಂದು ಹಳ್ಳಿ ಮೂಲೆಯಲ್ಲಿ ಸಣ್ಣ ಶಾಲೆಯ ಮೇಷ್ಟ್ರು, ಹೊಸ ಹುಡುಗ. ಆದರೆ ಒಬ್ಬ ಹೊಸ ಹುಡುಗನ ಬರಹಗಳನ್ನೂ ತಾನು ಓದುತ್ತೇನೆ, ಓದಿ ಪ್ರತಿಕ್ರಿಯಿಸುತ್ತೇನೆ ಎನ್ನುವ ಅವರ ನಿಲುವು ಬಹಳ ದೊಡ್ಡದು. ಹಾಗೆಯೆ ಅವರು ನನ್ನ ಬಗ್ಗೆ ವೈಯಕ್ತಿಕ ಕಾಳಜಿಯನ್ನೂ ಹೊಂದಿದ್ದರು.

ಒಮ್ಮೆ ಅವರ ಮನೆಗೆ ಹೋಗಿದ್ದಾಗ, ‘ಅರವಿಂದ್, ನಿನಗೆ ಸಂಬಳ ಎಷ್ಟು ಬರ್ತದಪ್ಪ?’ ಎಂದು ಕೇಳಿದ್ದರು. ‘ನಾಲ್ಕೂವರೆ ಸಾವಿರ ಸರ್’ಎಂದೆ.‘ಅಷ್ಟು ಕಡಿಮೆ! ಕಷ್ಟ ಆಗುದಿಲ್ವ? ಯಾವುದಾದರೂ ಬೇರೆ ಎಕ್ಸಾಂ ತಗೊ. ಅಲ್ಲ ಯಾವುದಾದರೂ ಖಾಸಗಿ ಕಾಲೇಜ್‌ಗೆ ಸೇರ್ಕೊಳ್ತಿಯಾ? ಯಾರಿಗಾದರೂ ಹೇಳ್ಲಾ?‘ಎಂದರು. ‘ಬೇಡಿ ಸರ್, ನನಗೆ ಸಾಮರ್ಥ್ಯ ಇದೆಯೋ ಇಲ್ವೊ ಎಂದು ಪರೀಕ್ಷಿಸಲು ಮೂರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿ ಅಮೇಲೆ ತಿರಸ್ಕರಿಸಿ ನಾನು ಬಡವರ ಮಕ್ಕಳೊಂದಿಗೇ ಇರಬೇಕೆಂದು ತೀರ್ಮಾನಿಸಿ ಉಳ್ಕೊಂಡಿದ್ದೇನೆ.ಇನ್ನು ಇಲ್ಲೆ ಇರುತ್ತೇನೆ’ ಎಂದೆ. ಆಮೇಲೆ ಆ ವಿಚಾರವನ್ನು ನನ್ನ ಬಳಿ ಮಾತನಾಡಲಿಲ್ಲ. ಆದರೆ ಬೇರೆ ನನ್ನ ಕೆಲವು ಅತ್ಮೀಯರ ಬಳಿ,‘ಅವನಿಗೆ ತುಂಬಾ ಕಡಿಮೆ ಸಂಬಳ. ಕಷ್ಟ ಆಗುವುದಿಲ್ವಾ’ಎಂದು ಹೇಳಿಕೊಂಡಿದ್ದರಂತೆ.

ನಾವು ಕಾಯಮಾತಿಯ ಹೋರಾಟ ಎಲ್ಲ ಮಾಡುತ್ತಿದ್ದಾಗ ಅನಂತಮೂರ್ತಿಯವರ ಬಳಿ ಫೋನ್ ಮಾಡಿ,‘ಸರ್, ನೀವು ದೊಡ್ಡ ಮೇಷ್ಟ್ರು. ನಾವು ಸಣ್ಣ ಮೇಷ್ಟ್ರುಗಳು. ನಮ್ಮ ಪರವಾಗಿ ನೀವು ಸರಕಾರಕ್ಕೆ ಪತ್ರ ಬರೆಯಲಿಕ್ಕೆ ಆಗ್ತದಾ?’ಎಂದು ಕೇಳಿದೆ. ‘ಬರಿತೀನಿ. ನಾನು ಬರೆದ ಹಾಗೆ ನೀನೇ ಒಂದು ಲೆಟರ್ ಮಾಡಿ ನನಗೆ ಮೆಯಿಲ್ ಮಾಡು. ಸೈನ್ ಮಾಡಿ ಕಳಿಸ್ತೀನಿ. ನಿಮ್ಮ ಮಂತ್ರಿಗಳಿಗೂ ಹೇಳ್ತೀನಿ. ಚೀಫ್ ಮಿನಿಸ್ಟರ್ ಸಿಕ್ಕಿದಾಗ ಅವರಿಗೂ ಹೇಳ್ತೀನಿ’ಎಂದರು. ಮಾಡುತ್ತೇನೆ ಎಂದುದನ್ನು ಅಚ್ಚುಕಟ್ಟಾಗಿ ಮಾಡಿ ಪ್ರತಿಯೊಂದನ್ನೂ ನನಗೆ ತಿಳಿಸಿದ್ದರು. ನಮ್ಮ ಹೋರಾಟ ಯಶಸ್ವಿಯಾದಾಗ,‘ಈಗ ನನಗೆ ನೆಮ್ಮದಿಯಾಯಿತು ಅರವಿಂದ್’ ಎಂದರು.

ನಾನು ತಿರುವಳ್ವರ್ ಮತ್ತು ಗಾಂಧಿ ಅರ್ಥಶಾಸ್ತ್ರೀಯ ಚಿಂತನೆಗಳ ಆಧಾರದಲ್ಲಿ ಬರೆದಿದ್ದ ‘ಮೂರನೆಯ ಇರವು’ ಪುಸ್ತಕವನ್ನು ಲೋಹಿಯಾ ಪ್ರಕಾಶನದವರು ಪ್ರಕಟಿಸಿದ್ದರು. ಆಗ ಅನಂತಮೂರ್ತಿಯವರ ಬಳಿ, ‘ಇದಕ್ಕೆ ನೀವು ಬೆನ್ನುಡಿ ಬರೆದು ಕೊಡಲು ಆಗ್ತದಾ?’ ಎಂದು ಕೇಳಿದೆ. ‘ಟಿಪ್ಪಣಿ ಕಳಿಸಿಕೊಡು’ ಎಂದರು.

ಈ ಬ್ರಾಹ್ಮಣ ಸಮುದಾಯದಿಂದ ಬಂದ ದೊಡ್ಡ ಲೇಖಕರಲ್ಲಿ ಒಂದು ಸಮಸ್ಯೆ ಇರುತ್ತದೆ. ಸಣ್ಣ (ವಯಸ್ಸಿನಲ್ಲೂ ಸಣ್ಣವನಾದರೆ ಇನ್ನೂ ಶೋಚನೀಯ)ಲೇಖಕರು ಮುನ್ನುಡಿಯನ್ನೊ, ಬೆನ್ನುಡಿಯನ್ನೊ ಕೇಳಿದರೆ ಕೇಳಿದವನು ತನ್ನದೇ ಸಮುದಾಯದಿಂದ ಬಂದವನಾಗಿದ್ದರೆ ತಪ್ಪಿಸಿಕೊಳ್ಳಲು ಆಗದೆ ಇದ್ದಾಗ, ಕಟುವಾಗಿ ಅಲ್ಲ, ಕೆಟ್ಟದಾಗಿಯೇ ಅಭಿಪ್ರಾಯ ಕೊಡುತ್ತಾರೆ. ಆಮೇಲೆ ಅವನೇನಾದರೂ ಸ್ವಂತ ಸಾಮರ್ಥ್ಯದಿಂದ ಮೇಲೆ ಬಂದರೆ, ‘ನಾನು ಅವನಿಗೆ ಅಷ್ಟು ಕಟುವಾಗಿ ಬರೆದದ್ದರಿಂದ ಈಗ ಹೇಗೆ ಬೆಳೆದಿದ್ದಾನೆ ನೋಡಿ’ ಎಂದು ಆ ಕ್ರೆಡಿಟ್ಟನ್ನೂ ತಮ್ಮ ಬಗಲಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಡವಳಿಕೆಯಲ್ಲಿ ದುರುದ್ದೇಶವೇನೂ ಇರುವುದಿಲ್ಲ. ಸರೀಕರ ಮುಂದೆ ತಾನು ತನ್ನ ಜಾತಿಯವರನ್ನು ಬೆಂಬಲಿಸಿದ್ದೇನೆಂದು ಅನಿಸಬಾರದು ಎನ್ನುವ ‘ಸೈಕಲಾಜಿಕಲ್ ಇನ್ ಬಿಲ್ಟನ್’ ಸಮಸ್ಯೆಯಷ್ಟೆ ಇದು. ಅನಂತಮೂರ್ತಿಯವರ ಬಳಿ ಈ ಸಮಸ್ಯೆ ಇರಲಿಲ್ಲ. ನಾನು ಬರೆದಿರುವುದಕ್ಕಿಂತ ಸ್ವಲ್ಪ ಜಾಸ್ತಿ ಚೆನ್ನಾಗಿದೆ ಎಂದೇ ಅವರು ಬರೆದಿದ್ದರು. ನಾನೇ ಯೋಚಿಸದಿದ್ದ ನನ್ನ ಆಲೋಚನಾಕ್ರಮ ಏನು ಎಂಬುದನ್ನೂ ಬರೆದಿದ್ದರು.

ಒಂದು ಬಾರಿ ಬೆಳ್ತಂಗಡಿಯ ಸ್ಥಳೀಯ ಪತ್ರಿಕೆ ‘ಜೈಕನ್ನಡಮ್ಮ’ದವರು ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನಂತಮೂರ್ತಿಯವರನ್ನು ಕರೆಯಿಸಿಕೊಡಬೇಕು ಎಂದು ಕೇಳಿದರು. ಅವರು ಒಪ್ಪಿಕೊಳ್ಳುವಾಗ ಅವರ ಆರೋಗ್ಯ ಚೆನ್ನಾಗಿತ್ತು. ಕಾರ್ಯಕ್ರಮದ ಸಮಯಕ್ಕಾದಾಗ ಆರೋಗ್ಯ ಹದಗೆಟ್ಟಿತ್ತು. ‘ಸರ್, ನೀವು ಇಲ್ಲಿ ಬಂದು ಮಾಡಬೇಕಾದ ಭಾಷಣವನ್ನು ನಿಮ್ಮ ಮನೆಯಲ್ಲೆ ಮಾಡಿ. ನಾನು ಬಂದು ವಿಡಿಯೊ ಶೂಟಿಂಗ್ ಮಾಡಿಸಿ ತಂದು ಇಲ್ಲಿ ಪ್ರದರ್ಶಿಸುತ್ತೇನೆ’ ಎಂದೆ. ನಾನೂ, ನಮ್ಮ ಪ್ರಾಂಶುಪಾಲರಾದ ಮುರಳೀಧರ್ ಅವರೂ ಹೋಗಿ ವಿಡಿಯೊ ಶೂಟಿಂಗ್ ಮಾಡಬೇಕಾದರೆ ಐದು ನಿಮಿಷಕ್ಕೊಮ್ಮೆ ಹತ್ತು ನಿಮಿಷ ಬಿಡುವು ತೆಗೆದುಕೊಂಡು ಅರ್ಧ ಗಂಟೆಯ ಭಾಷಣ ಮಾಡಿದರು.

ಕಾಂತಾವರ ಕನ್ನಡ ಸಂಘದವರು ಪ್ರಕಟಿಸಿದ, ನಾನು ಸಂಪಾದಿಸಿದ ಸುಬ್ರಾಯ ಚೊಕ್ಕಾಡಿಯವರ ಅಭಿನಂದನಾ ಗ್ರಂಥಕ್ಕೆ ಸುಬ್ರಾಯ ಚೊಕ್ಕಾಡಿಯವರ ಒಂದು ಪುಸ್ತಕದ ಬಗ್ಗೆ ನೀವು ಬರೆಯಬೇಕು ಎಂದು ಕೇಳಿದ್ದೆ. ಆ ಲೇಖನವನ್ನು ಕೊಡುತ್ತಾ, ‘ನೀನು ನಿನ್ನ ಅಂತರಂಗಕ್ಕೆ ನಾನು ಹೇಳುತ್ತಿರುವುದು ಸರಿ ಎಂದು ಅನಿಸದ ಹೊರತು ಏನನ್ನೂ ಹೇಳಬೇಡ. ಜನರಿಗೆ ನಾವು ಹೇಳಿದ್ದು ಅರ್ಥವಾಗಲಿಲ್ಲ ಎಂದು ನಾವು ಹೇಳುವುದನ್ನು ನಿಲ್ಲಿಸಬಾರದು. ಅರ್ಥ ಆಗುವ ವರೆಗೂ ನಾವು ಹೇಳ್ತಾನೇ ಇರಬೇಕು’ಎಂದಿದ್ದರು. ನನ್ನ ಅಪ್ಪ ಸತ್ತಾಗ ಅಪ್ಪನ ನೆನಪಿನಲ್ಲಿ ವಿವಿಧ ಲೇಖಕರು ತಮ್ಮ ತಂದೆ-ತಾಯಿಯ ಬಗ್ಗೆ ಬರೆದ, ವಿಜಯಪುರದ ಚಾಣಕ್ಯ ಪ್ರಕಾಶನದವರು ಪ್ರಕಟಿಸಿದ, ‘ಎರಡು ತಲೆಮಾರು’ ಪುಸ್ತಕವನ್ನು ಸಂಪಾದಿಸಿದ್ದೆ. ಅದಕ್ಕೂ ಅನಂತಮೂರ್ತಿಯವರು ಅವರ ತಂದೆಯ ಬಗ್ಗೆ ಲೇಖನ ಬರೆದು ಕೊಟ್ಟಿದ್ದರು. ‘ಸಾವು ನಮ್ಮ ಹಿಂದೆಯೇ ಇರುತ್ತದೆ ಅರವಿಂದ್. ನಮಗೆ ಗೊತ್ತಾಗಿರುವುದಿಲ್ಲ ಅಷ್ಟೆ’ ಎಂದಿದ್ದರು.

ಅನಂತಮೂರ್ತಿಯವರ ಸಾವು ನನಗೆ ಹಲವು ರೀತಿಯಲ್ಲಿ ಭಾಸವಾಗುತ್ತದೆ. ‘ಮೋದಿಯವರು ಪ್ರಧಾನಿಯಾಗುವ ದೇಶದಲ್ಲಿ ನಾನು ಇರುವುದಿಲ್ಲ’ ಎಂದಿದ್ದರು. ಆ ಹೇಳಿಕೆಯನ್ನಿಟ್ಟುಕೊಂಡು ಅನಾರೋಗ್ಯ ಪೀಡಿತನಾದ ವಯಸ್ಸಾದ ಒಬ್ಬ ಅಜ್ಜನಿಗೆ ಹಿಂದೂ ಧರ್ಮ ಕ್ಷಮಿಸಲು ಸಾಧ್ಯವೇ ಇಲ್ಲದಂತಹ ಹಿಂಸೆಯನ್ನು ಕೊಟ್ಟದ್ದೂ ಆಯಿತು. ಆದರೆ ಅನಂತಮೂರ್ತಿಯವರು ಅವರಾಡಿದ ಮಾತನ್ನು ಅತ್ಯಂತ ಕ್ರೂರವಾಗಿ ನಡೆಸಿ ಕೊಟ್ಟಿದ್ದಾರೆ. ಮೇಲಾಗಿ ಮಹಾತ್ಮನಾಗಲಾರದ ಅನಂತ ಮೂರ್ತಿಯವರಿಗೆ ಮಹಾತ್ಮಾ ಗಾಂಧಿ, ಯಾಸೆರ್ ಅರಾಫತ್ ಅವರಿಗೆ ಸಿಕ್ಕಿದ ಗೌರವವೂ ಸಿಕ್ಕಿತು. ಗಾಂಧಿ ಹತ್ಯೆ ಆದಾಗ ಪಾಕಿಸ್ತಾನದಲ್ಲಿ, ಯಾಸೆರ್ ಅರಾಫತ್ ಸತ್ತಾಗ ಇಸ್ರೇಲ್‌ನಲ್ಲಿ ಕೆಲವರು ಸಂಭ್ರಮಾಚರಣೆ ಮಾಡಿದ್ದರಂತೆ...

ಕಾಳಿದಾಸ ‘ಭೋಜರಾಜೇ ದಿವಂಗತೇ’ ಎಂದಾಗ ಭೋಜರಾಜ ಸತ್ತನಂತೆ ಎಂಬುದು ಕಥೆ. ಜ್ಞಾನಿಯ ಮಾತು ಸುಳ್ಳಾಗುವುದಿಲ್ಲ ಎಂದು ಅದರ ಹಿಂದಿರುವ ನಂಬಿಕೆ. ಅನಂತಮೂರ್ತಿಯವರ ಮರಣದ ವೈಜ್ಞಾನಿಕವಾದ ಎಲ್ಲ ಕಾರಣಗಳ ಅರಿವಿದ್ದೂ ಈ ನಂಬಿಕೆ ಸರಿ ಇರಬಹುದೇನೊ ಎಂದು ಅನಿಸಿಬಿಡುತ್ತದೆ.

ಇತ್ತೀಚೆಗೆ ಗೆಳೆಯ ಅಜಕ್ಕಳ ಗಿರೀಶ ಭಟ್ ಅವರು ತಮ್ಮ ಎರಡು ಪುಸ್ತಕಗಳನ್ನು ಕಳಿಸಿದ್ದರು. ವಿಮರ್ಶೆ ಮಾಡಬೇಕಾಗಿದ್ದ ಪುಸ್ತಕಗಳೇ ಆಗಿವೆ ಅವು. ಆದರೆ ಅವುಗಳ ಬಗ್ಗೆ ಏನೇ ಬರೆಯುವುದಿದ್ದರೂ ಅನಂತಮೂರ್ತಿಯವರನ್ನು ಪ್ರಸ್ತಾಪಿಸಲೇಬೇಕು. ಅವರು ಬದುಕಿರುತ್ತಿದ್ದರೆ, ‘ನಿಮ್ಮ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೇಳಿ ಒಂದು ಲೇಖನ ಬರೆಯುತ್ತಿದ್ದೇನೆ ಸರ್’ ಎಂದು ಅವರಿಗೆ ತಿಳಿಸಿ ಬರೆಯುತ್ತಿದ್ದೆ. ಅಸಮಾಧಾನವಾದರೆ ‘ನಿನ್ನನ್ನು ನಾನು ಕ್ಷಮಿಸುವುದಿಲ್ಲ’ ಎನ್ನಲು ಅವರೇ ಇರುತ್ತಿದ್ದರು. ಆದರೆ ಈಗ ಅವರಿಲ್ಲ. ಆದ್ದರಿಂದ ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಲಾರೆ. ಆದ್ದರಿಂದ ‘ನಿಮ್ಮ ಪುಸ್ತಕ ತಲುಪಿದೆ’ ಎನ್ನುವುದಕ್ಕಿಂತ ಹೆಚ್ಚಿನ ಯಾವ ಉತ್ತರವನ್ನೂ ನಾನು ಅಜಕ್ಕಳ ಗಿರೀಶ ಭಟ್ ಅವರಿಗೆ ಕೊಟ್ಟಿಲ್ಲ. ಅನಂತಮೂರ್ತಿಯವರಿಗೆ ಸಮರ್ಥಿಸಿಕೊಳ್ಳಲು ಅವಕಾಶವಿಲ್ಲದ ಜಗತ್ತಿನಲ್ಲಿ ಅವರ ಕುರಿತ ನೇತ್ಯಾತ್ಮಕ ಅಭಿಪ್ರಾಯವನ್ನು ನಾನು ಹೇಳಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT