ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಚ್ಚಿಕೊಂಡ ಸಮುದ್ರ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ರೇಣುಕಾ ರಮಾನಂದ

*

ದಿಕ್ಕು ತಪ್ಪುವಂತ ಸಂಜೆಗಳಲ್ಲಿ
ದಿನವೂ ಒಮ್ಮೆ
ಸಣ್ಣಗೆ ಮೂಗುತಿ ಮಿನುಗಿಸುತ್ತ
ಈ ಪಾಪದ ಕಡಲ ಕಿನಾರೆಗೊಮ್ಮೆ
ಭೇಟಿ ನೀಡದಿದ್ದರೆ
ತಿಂದ ಅನ್ನ
ಅರಗುವುದಿಲ್ಲ ನನಗೆ

ಹಲವು ಬಿಗುಮಾನಗಳನ್ನು ಬದಿಗಿಟ್ಟು
ಅಲೆಗಳನ್ನೂ ಮೊರೆತವನ್ನೂ ಮಡಚಿಟ್ಟು
ಕಾಯುತ್ತದೆ ಅದು ನನಗಾಗಿ
ಥೇಟ್ ಹಳೆಯ ಹುಡುಗನಂತೆ
ಚಡಪಡಿಸುತ್ತದೆ
ಮೊದಲದಿನ ಶಾಲೆಗೆ ಹೊರಟ
ಬಾಲೆಯಂತೆ
ಅದರ ಎದೆಯಲ್ಲಿ ಒಂದೂ
ಮೀನುಗಳಿರುವುದಿಲ್ಲ
ನಾನು ಮಡಿಲು ಸಡಲಿಸಿ ಬೊಗಸೆಗೊಡ್ಡಿ
ತೂರುವವರೆಗೆ...

ಒಲೆಯೂ..ಕುದಿವ ಮಸಾಲೆಯೂ..
ಒಂದು ಸಾರಿನ ಮೀನಿಗಾಗಿ ಹೋದ
ಪಾತಿದೋಣಿಯ ನಿರೀಕ್ಷೆ ಯಲ್ಲಿರುವ ಹೊತ್ತಿಗೆ
ಸರಿಯಾಗಿ ತಲುಪಿರುತ್ತೇನೆ
ನಾನು ಅಲ್ಲಿಗೆ
ಮೊನ್ನೆಯಷ್ಟೆ ಮದುವೆಯಾಗಿದೆ
ಬೆಸ್ತನಿಗೆ
ಹುಡುಗಿ ಬೆಲ್ಲದಚ್ಚಿನಂತವಳು
ತಲೆಯೆತ್ತದೆ ಅಕ್ಕಿಕೇರುತ್ತ ನುಡಿಯುತ್ತಾಳೆ-
ದಮ್ಮಯ್ಯ ಒಂದು ಮುದ್ದೆ ಉಂಡು ಹೋಗಿ
ನೀವಿರದಿದ್ದರೆ ನಮಗೆ
ಮೀನೇ....
ಇರಲಿಲ್ಲ...

ಪ್ರತಿಬಾರಿಯೂ
ಮೊಣಕಾಲುಮಟ ನೀರಿಗಿಳಿದು
ಕುಪ್ಪಳಿಸಿ ಒದ್ದೆಯಾದ ಮೇಲೆ
ಸುಖಾಸುಮ್ಮನೆ ಆಗಾಗ ಬೆವರುವ
ಶರಧಿಯ
ಬೊಗಸೆ ಉಪ್ಪುನೀರು ಕುಡಿವ ನನ್ನ ಚಟ
ವ್ಯಾಪಕವಾದದ್ದು ಮತ್ತು
ಅನಾದಿಕಾಲದ್ದು
ಅದೇನೂ ಅಂತಹ ದುರಭ್ಯಾಸವಲ್ಲ
ಏನೂ ಆಗುವುದಿಲ್ಲ ಹೆದರಬೇಡಿ
ಎಂದರೂ...
ತೆರೆಗಳು ತೀರುವಲ್ಲಿ ಕಾಲಾಡಿಸುವ ಜನಕ್ಕದು
ಒಳ್ಳೇ ಹಾಸ್ಯಾಸ್ಪದ...

ನೋಡನೋಡುತ್ತಿದ್ದಂತೆ
ಮತ್ತೆ ಕತ್ತಲಾಗಲು ಬರುತ್ತದೆ
ಬೇಲೆಯಂಚಿನ ಕೇದ‍ಗೆ ಹಿಂಡುಗಳಲ್ಲಿ
ಪರಿಮಳದ ಸ್ರಾವ ಜಿನುಗಿ
ಊರಿನ ಅಷ್ಟೂ ಮಿಡಿನಾಗರಗಳಿಗೆ
ಸುರತಕ್ಕೆ ಅವಸರವಾಗೋ
ಹೊತ್ತಾಗುತ್ತದೆ
ಎತ್ತಿಕಟ್ಟಿದ್ದ ನೆರಿಗೆ ಇಳಿಸಿಕೊಂಡು
ಹುಗಿದಿಟ್ಟ ಕಾಲು ಹೊಯಿಗೆಯಿಂದ
ಕಿತ್ತಿಟ್ಟುಕೊಂಡು
ಮರಳಲು ಸಜ್ಜಾಗುತ್ತಿದ್ದೇನೆ
ನಾನೆಂಬ ನಾನು
ಮತ್ತೆ ಮನೆಗೆ.

ನಾಳೆ ಬರುವೆನೆಂದು
ಮೈದಡವಿ
ಸಮಾಧಾನಿಸುತ್ತಿದ್ದರೂ...
ತಬ್ಬಿಕೊಂಡು ಗೋಗರೆಯುತ್ತಲೇ ಇದೆ
ಹಚ್ಚಿಕೊಂಡ ಸಮುದ್ರ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT