ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್: ಗದ್ದಲಕ್ಕೆ ಬೆದರಿದ ಸಿಕ್ಕಾ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತೀಯರ ಭಾವನೆಗಳ ಲೆಕ್ಕದಲ್ಲಿ ಹೇಳುವುದಾದರೆ ಈ ದೇಶದ ಅತ್ಯಂತ ಮಹತ್ವದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೊಸಿಸ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ (ಸಿಇಒ) ಮತ್ತೆ ಹುಡುಕಾಟ ಆರಂಭಿಸಿದೆ. ಈವರೆಗೆ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ಅವರು ದಿಢೀರ್ ರಾಜೀನಾಮೆ ನೀಡಿರುವುದು ಇದಕ್ಕೆ ಕಾರಣ. 2014ರಲ್ಲಿ ಭಾರತೀಯ ಅಮೆರಿಕನ್ ವಿಶಾಲ್ ಸಿಕ್ಕಾ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು. ಸಂಸ್ಥೆಯ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಹೊರಗಿನ ವ್ಯಕ್ತಿಯೊಬ್ಬರು ಸಿಇಒ ಆಗಿ ಬಂದಿದ್ದರು.

1981ರಲ್ಲಿ ಇನ್ಫೊಸಿಸ್ ಟೆಕ್ನಾಲಜೀಸ್ ಲಿ. ಸ್ಥಾಪನೆ ಆದಂದಿನಿಂದ 2002ರವರೆಗೆ ಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಸಿಇಒ ಆಗಿದ್ದರು. ಇದು ಇನ್ಫೊಸಿಸ್‍ನ ಬೆಳವಣಿಗೆ ಮತ್ತು ಉಚ್ಛ್ರಾಯದ ಕಾಲ. ಮೂರ್ತಿ ಅವರ ಬಳಿಕ 2014ರವರೆಗೆ ಸಹ ಸಂಸ್ಥಾಪಕರೇ ಸಿಇಒ ಹುದ್ದೆಯಲ್ಲಿದ್ದರು. ಆದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಇನ್ಫೊಸಿಸ್ ಬೆಳವಣಿಗೆ ನಿಧಾನವಾಗತೊಡಗಿತು. ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗಿಂತ ಪ್ರಗತಿಯಲ್ಲಿ ಇನ್ಫೊಸಿಸ್ ಹಿಂದೆ ಬಿದ್ದಿತ್ತು. 2013ರಲ್ಲಿ ನಾರಾಯಣಮೂರ್ತಿ ಅವರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮತ್ತೆ ಸಂಸ್ಥೆಯ ಆಡಳಿತದ ಚುಕ್ಕಾಣಿ ಹಿಡಿದಾಗ ನಿರೀಕ್ಷೆ ಗರಿಗೆದರಿತ್ತು. ಆದರೆ ಭಾರಿ ಬದಲಾವಣೆ ತರಲು ಮೂರ್ತಿ ಅವರಿಗೆ ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ ತಾವು ಕಟ್ಟಿ ಬೆಳೆಸಿದ ಸಂಸ್ಥೆಯ ನೇತೃತ್ವ ವಹಿಸಲು ಮೂರ್ತಿಯವರೇ ಸಾಕಷ್ಟು ಹುಡುಕಾಟ ನಡೆಸಿ ವಿಶಾಲ್ ಸಿಕ್ಕಾ ಅವರನ್ನು ಆಯ್ಕೆ ಮಾಡಿದ್ದರು.

ಸಿಕ್ಕಾ ಅವರ ಹೆಗಲ ಮೇಲೆ ಎಷ್ಟು ಹೊರೆ ಬೀಳುತ್ತದೆ ಎಂಬುದರ ಅರಿವು ಮೂರ್ತಿ ಅವರಿಗೆ ಸ್ಪಷ್ಟವಾಗಿತ್ತು. ಹೊಸ ಹುದ್ದೆಗೆ ಬಂದ ಸಿಕ್ಕಾ ಅವರಿಗೂ ತಮ್ಮ ಮುಂದಿರುವ ಜವಾಬ್ದಾರಿ ಏನು ಎಂಬುದು ತಿಳಿದಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಂಪ್ರದಾಯಿಕತೆಯನ್ನು ಮೀರಿ ಇನ್ಫೊಸಿಸ್ ಸಂಸ್ಥೆಯನ್ನು ಬೆಳೆಸುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಕೃತಕ ಬುದ್ಧಿಮತ್ತೆ (ಎಐ), ಚತುರ ವ್ಯವಸ್ಥೆಗಳು, ಪ್ರೋಗ್ರಾಮಿಂಗ್ ಲ್ಯಾಂಗ್ವೆಜ್ ಮತ್ತು ಮಾಡೆಲ್‍ಗಳು, ಮಾಹಿತಿ ನಿರ್ವಹಣೆ ಸಿಕ್ಕಾ ಅವರ ನೆಚ್ಚಿನ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿನ ತಮ್ಮ ಸಂಶೋಧನೆ ಮತ್ತು ಅನುಭವವನ್ನು ಬಳಸಿಕೊಂಡ ಸಿಕ್ಕಾ ಅವರು ಇನ್ಫೊಸಿಸ್ ಅನ್ನು ಹೊಸ ದಾರಿಯಲ್ಲಿ ಮುನ್ನಡೆಸಿದ್ದಾರೆ. ಸಿಕ್ಕಾ ಅವರ ಪ್ರಯತ್ನ ಸಂಪೂರ್ಣ ಯಶಸ್ಸು ಕಂಡಿದೆ ಎಂಬುದನ್ನು ಇನ್ಫೊಸಿಸ್ ಬಿಡುಗಡೆ ಮಾಡಿದ ಅಂಕಿ ಅಂಶಗಳೇ ಹೇಳುತ್ತಿವೆ.

ಇನ್ಫೊಸಿಸ್‍ನ ವರಮಾನ 2017ರಲ್ಲಿ ಸಾವಿರ ಕೋಟಿ ಡಾಲರ್‍ಗಳನ್ನು (ಸುಮಾರು 65 ಸಾವಿರ ಕೋಟಿ) ಮೀರಿ ಬೆಳೆದಿದೆ. ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇನ್ಫೊಸಿಸ್‍ನ ಲಾಭದ ಪ್ರಮಾಣ ದೇಶದ ಅತ್ಯಂತ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟಿಸಿಎಸ್‍ಗಿಂತ ಹೆಚ್ಚಾಗಿದೆ. ಕೆಲಸ ಬಿಟ್ಟು ಹೋಗುವವರ ಪ್ರಮಾಣ ಮೂರು ವರ್ಷದ ಹಿಂದೆ ಶೇ 23.4ರಷ್ಟಿತ್ತು. ಜೂನ್‍ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಇದು ಶೇ 16.9ಕ್ಕೆ ಇಳಿದಿದೆ. ಕಳೆದ ಮೂರು ವರ್ಷದಲ್ಲಿ ಷೇರುದಾರರಿಗೆ 19 ಸಾವಿರ ಕೋಟಿ ರೂಪಾಯಿ ಡಿವಿಡೆಂಡ್ ನೀಡಲಾಗಿದೆ. ಸಿಕ್ಕಾ ಅವರ ಕಾರ್ಯಕ್ಷಮತೆಗೆ ಕನ್ನಡಿ ಹಿಡಿಯಲು ಈ ಅಂಕಿಅಂಶಗಳೇ ಸಾಕು. ಆದರೆ ಕಳೆದ ಸುಮಾರು ಒಂದು ವರ್ಷದ ಅವಧಿಯಲ್ಲಿ ಇನ್ಫೊಸಿಸ್ ಆಡಳಿತದ ಬಗ್ಗೆ ನಾರಾಯಣಮೂರ್ತಿ ನೇತೃತ್ವದ ಸಂಸ್ಥಾಪಕರ ಗುಂಪು ಹಲವು ಗಂಭೀರ ಟೀಕೆಗಳನ್ನು ಮಾಡಿದೆ. ಸಂಸ್ಥೆ ಬಿಟ್ಟು ಹೋದ ಹಿರಿಯ ಅಧಿಕಾರಿಗಳಿಗೆ ಭಾರಿ ಮೊತ್ತದ ಪರಿಹಾರಧನ ಪಾವತಿ, ಸಿಕ್ಕಾ ಅವರ ಸಂಬಳ ಹೆಚ್ಚಳದ ಬಗ್ಗೆಯೂ ಈ ಗುಂಪು ಟೀಕೆ ಮಾಡಿದೆ. ಇಸ್ರೇಲ್‍ನ ಪನಯ ಸಂಸ್ಥೆಯನ್ನು ಸುಮಾರು ₹ 1,300 ಕೋಟಿ ಕೊಟ್ಟು ಖರೀದಿಸುವ ನಿರ್ಧಾರವೂ ಟೀಕೆಗೆ ಒಳಗಾಗಿದೆ. ಇವೆಲ್ಲವೂ ಆಡಳಿತದ ಲೋಪಗಳು ಎಂದು ಮೂರ್ತಿ ಆರೋಪಿಸಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಆಡಳಿತದಲ್ಲಿ ಹೊರಗಿನ ಒತ್ತಡ ಇರಬಾರದು, ಆಡಳಿತ ಮಂಡಳಿ ಸ್ವತಂತ್ರವಾಗಿರಬೇಕು ಎಂದು ನಾರಾಯಣಮೂರ್ತಿ ಅವರು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದವರು. ಹಾಗಿದ್ದರೂ ಇನ್ಫೊಸಿಸ್‍ನಲ್ಲಿ ಇಂತಹದೊಂದು ತಿಕ್ಕಾಟ ನಡೆಯಬಾರದಿತ್ತು ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಶ್ಲೇಷಕರು ಹೇಳುತ್ತಾರೆ. ಮಾಹಿತಿ ತಂತ್ರಜ್ಞಾನದ ಸಾಂಪ್ರದಾಯಿಕತೆಯಿಂದ ಇನ್ಫೊಸಿಸ್ ಅನ್ನು ಬೇರೊಂದು ಹಂತಕ್ಕೆ ಒಯ್ಯಲು ಸಿಕ್ಕಾ ಅವರು ನಡೆಸಿದ ಪ್ರಯತ್ನವೇ ಸಂಸ್ಥಾಪಕರ ಆಕ್ರೋಶಕ್ಕೆ ಕಾರಣವಾಗಿರಬಹುದು ಎಂದು ಈ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕೆಲವರು ಹೊಂದಿರುವ ಅತೃಪ್ತಿಯು ನಿರಂತರ ಅಡಚಣೆಯಾಗಿ, ಅದು ವೈಯಕ್ತಿಕ ಮಟ್ಟಕ್ಕೂ ಬಂದು ಕೆಲಸ ಮಾಡುವುದು ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲಿ ರಾಜೀನಾಮೆ ನೀಡಿದ್ದಾಗಿ ಇನ್ಫೊಸಿಸ್ ಉದ್ಯೋಗಿಗಳಿಗೆ ಬರೆದ ಇಮೇಲ್‍ನಲ್ಲಿ ಸಿಕ್ಕಾ ಹೇಳಿಕೊಂಡಿದ್ದಾರೆ.

ಹೊಸ ಸಂಸ್ಥೆ ಕಟ್ಟುವುದು, ಹೊಸ ಹೊಣೆಗಾರಿಕೆ ನಿಭಾಯಿಸುವುದು, ತಮ್ಮ ಕೆಲಸ ಮುಗಿಯಿತು ಅನಿಸಿದಾಗ ಎದ್ದು ಹೊರನಡೆಯುವುದು ಸಿಕ್ಕಾ ಅವರಿಗೆ ಹೊಸದಲ್ಲ. ಐಬ್ರೇನ್ ಮತ್ತು ಬೋಧ ಡಾಟ್ ಕಾಮ್, ಸಿಕ್ಕಾ ಅವರೇ ಸ್ಥಾಪಿಸಿದ ನವೋದ್ಯಮಗಳು. ಜೆರಾಕ್ಸ್ ಸೇರಿ ಹಲವು ಸಂಸ್ಥೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೆ ಸ್ಯಾಪ್ ಸಂಸ್ಥೆಯಲ್ಲಿ ಅವರ ಕೆಲಸ ಕಾರ್ಪೊರೇಟ್ ಜಗತ್ತಿನ ಗಮನ ಸೆಳೆಯಿತು. ಸ್ಯಾಪ್‍ಗೆ ಸಿಕ್ಕಾ ಸೇರುವ ಹೊತ್ತಿಗೆ ಆ ಸಂಸ್ಥೆ ಮೇಲೇಳುವ ಯಾವ ಲಕ್ಷಣವೂ ಇರಲಿಲ್ಲ. ಆದರೆ 12 ವರ್ಷ ಅಲ್ಲಿ ಕೆಲಸ ಮಾಡಿದ ಸಿಕ್ಕಾ ಸಂಸ್ಥೆಯನ್ನು ಭಾರಿ ಲಾಭದ ಹಾದಿಗೆ ತಂದಿದ್ದರು. ಆ ಸಂಸ್ಥೆಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಹುದ್ದೆಯನ್ನು 2007ರಲ್ಲಿ ಅವರಿಗೆ ನೀಡಲಾಗಿತ್ತು.

ಸ್ಯಾಪ್‍ನ ಸಂಸ್ಥಾಪಕ ಹಸ್ಸೊ ಪ್ಲಾಟ್‍ನರ್ ತಮಗೆ ಗುರು ಸಮಾನ ಎಂದು ಸಿಕ್ಕಾ ಹೇಳಿದ್ದುಂಟು. ಸರಳ ಮತ್ತು ನೇರ ನಡೆ ನುಡಿಯ ಸಿಕ್ಕಾ, ಪಕ್ಕಾ ಸಂಸಾರಸ್ಥ. ಟ್ವಿಟರ್ ಖಾತೆಯಲ್ಲಿ ಅವರು ತಮ್ಮನ್ನು ‘ಗಂಡ, ಅಪ್ಪ, ಮಗ, ಸಹೋದರ, ಗೆಳೆಯ, ವಿದ್ಯಾರ್ಥಿ’ ಎಂದು ಪರಿಚಯಿಸಿಕೊಳ್ಳುತ್ತಾರೆ. ತಮ್ಮ ಹೆಂಡತಿ ನೀಡುವ ಬೆಂಬಲ ಮತ್ತು ಶಕ್ತಿಯೇ ಪ್ರಶ್ನಾತೀತ ಪ್ರೀತಿ ಮತ್ತು ಬೆಂಬಲ ಏನು ಎಂಬುದನ್ನು ತಮಗೆ ತಿಳಿಸಿಕೊಟ್ಟಿದೆ ಎಂದು ಅವರು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಇಂಡಿಯಾ ಟುಡೆ ಪತ್ರಿಕೆ 2017ರಲ್ಲಿ ಗುರುತಿಸಿದ ಭಾರತದ ಅತ್ಯಂತ ಪ್ರಭಾವಿ 50 ಮಂದಿಯಲ್ಲಿ ಸಿಕ್ಕಾ ಅವರಿಗೆ 39ನೇ ಸ್ಥಾನ.

ಸಿಕ್ಕಾ ಅವರ ಪ್ರತಿಭೆಯ ಬಗ್ಗೆಯೇ ವ್ಯಕ್ತವಾದ ಟೀಕೆ ಅವರಿಗೆ ನೋವು ಮಾಡಿದಂತೆ ಕಾಣಿಸುತ್ತಿದೆ. ‘ಸಿಇಒ ಆಗುವ ಪ್ರತಿಭೆ ಸಿಕ್ಕಾ ಅವರಿಗೆ ಇಲ್ಲ, ಅವರೊಬ್ಬ ಸಿಟಿಒ ಮಾತ್ರ. ಇನ್ಫೊಸಿಸ್‍ಗೆ ಬರುವ ಹೊಸ ಮುಖ್ಯಸ್ಥ ಸಿಇಒ ಆಗಿರಬೇಕೇ ಹೊರತು ಸಿಟಿಒ ಅಲ್ಲ’ ಎಂದು ಮೂರ್ತಿ ಅವರು ತಮ್ಮ ಹತ್ತಿರದವರಲ್ಲಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ತಂತ್ರಜ್ಞಾನದ ಹಿನ್ನೆಲೆ ಇಲ್ಲದವರು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ನೇತೃತ್ವ ವಹಿಸಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿಯಂತೂ ಅಸಾಧ್ಯ. ಈಗ ಇರುವ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರನ್ನು ನೋಡಿದರೆ ಅದು ಅರ್ಥವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಫೇಸ್‍ಬುಕ್‍ನ ಮಾರ್ಕ್ ಜುಕರ್‍ಬರ್ಗ್, ಮೈಕ್ರೊಸಾಫ್ಟ್‍ನ ಸತ್ಯ ನಾದೆಲ್ಲ, ಗೂಗಲ್‍ನ ಸುಂದರ್ ಪಿಚೈ. ಅಷ್ಟೇ ಯಾಕೆ, ಸುದೀರ್ಘ ಕಾಲ ಇನ್ಫೊಸಿಸ್ ಸಿಇಒ ಆಗಿದ್ದ ಮೂರ್ತಿ ಅವರು ಕೂಡ ಎಂಜಿನಿಯರಿಂಗ್ ಪದವಿ ಪಡೆದವರು ಮತ್ತು ತಾಂತ್ರಿಕ ಹಿನ್ನೆಲೆಯವರೇ ಹೊರತು ಆಡಳಿತ ನಿರ್ವಹಣೆಯ ಪರಿಣತ ಅಲ್ಲ.

ಮತ್ತೊಂದು ಗಮನಿಸಬೇಕಾದ ಅಂಶ: ಇನ್ಫೊಸಿಸ್ ನೀಡಿದ ಅಂಕಿ ಅಂಶಗಳೇ ಹೇಳುವಂತೆ, ಸಿಕ್ಕಾ ಎಂಬ ಸಿಟಿಒ, ಇನ್ಫೊಸಿಸ್ ಸಿಇಒ ಕೆಲಸವನ್ನು ಮೆಚ್ಚುಗೆ ಮೂಡುವಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT