ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಲ್ಲೇ ಅತ್ಯಂತ ಕಡಿಮೆ ನೀರಿನ ಸಂಗ್ರಹ

ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ತೊಂದರೆಯಲ್ಲಿ ಕರ್ನಾಟಕದ ರೈತ ಸಮೂಹ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಒಂದೂವರೆ ತಿಂಗಳು ಬಾಕಿ ಉಳಿದಿದ್ದು, ದಕ್ಷಿಣ ಭಾರತದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದು ತೀವ್ರ ಆತಂಕ ಮೂಡಿಸಿದೆ.

ಸತತ ಐದು ವರ್ಷಗಳಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕದಲ್ಲಿ ಈ ಬಾರಿಯೂ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರೈತ ಸಮೂಹ ತೊಂದರೆಗೆ ಸಿಲುಕಿದೆ. ಆಗಸ್ಟ್ ತಿಂಗಳಲ್ಲಿ ಸರಾಸರಿ ಸುರಿಯಬೇಕಿದ್ದ ಮಳೆಯ ಪ್ರಮಾಣ ಕ್ಷೀಣಿಸಿದೆ.

ಕರಾವಳಿ ಭಾಗದಲ್ಲಿ ಶೇ 26ರಷ್ಟು ಮಳೆಯ ಕೊರತೆ ಕಂಡುಬಂದಿದ್ದರೆ, ಉತ್ತರ ಒಳನಾಡಿನಲ್ಲಿ ಶೇ 21, ದಕ್ಷಿಣ ಒಳನಾಡಿನಲ್ಲಿ ಶೇ 30ರಷ್ಟು ಕೊರತೆ ಕಂಡುಬಂದಿದ್ದರಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸೂಚನೆ ನೀಡಿದೆ.

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿರುವ ಪ್ರಮುಖ 31 ಜಲಾಶಯಗಳಲ್ಲಿ ಶನಿವಾರದವರೆಗೆ (ಆಗಸ್ಟ್‌ 19) ಸಂಗ್ರಹವಾಗಿರುವ ನೀರಿನ ಪ್ರಮಾಣ ಕೇವಲ 535 ಟಿಎಂಸಿ ಅಡಿ ಇದ್ದು (ಈ ಜಲಾಶಯಗಳಲ್ಲಿನ ಅತ್ಯಧಿಕ ಸಂಗ್ರಹ ಸಾಮರ್ಥ್ಯ 1821.88 ಟಿಎಂಸಿ ಅಡಿ), ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 29ರಷ್ಟು ಎಂಬುದೇ ಈ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಇದೇ ದಿನ ಎಲ್ಲ 31 ಜಲಾಶಯಗಳಲ್ಲಿ ಶೇ 44ರಷ್ಟು ನೀರು ಸಂಗ್ರಹವಾಗಿದ್ದರೆ, ಕಳೆದ ಒಂದು ದಶಕದ ಅವಧಿಯಲ್ಲಿ ಆಗಸ್ಟ್‌ 19ಕ್ಕೆ ಸಂಗ್ರಹವಾಗಿದ್ದ ಅಂದಾಜು ನೀರಿನ ಪ್ರಮಾಣ ಶೇ 59ರಷ್ಟು.

ದಕ್ಷಿಣದ ರಾಜ್ಯಗಳಲ್ಲಿನ ಜಲಾಶಯಗಳಿಗೆ ಹೋಲಿಸಿದರೆ ಉತ್ತರ ಭಾರತದ ಹಿಮಾಚಲಪ್ರದೇಶ, ಪಂಜಾಬ್‌, ಜಾರ್ಖಂಡ್‌ಗಳಲ್ಲಿನ ಜಲಾಶಯಗಳಲ್ಲಿ ಕಳೆದ ಒಂದು ದಶಕದ ಅವಧಿಯಲ್ಲೇ ಪ್ರಸಕ್ತ ವರ್ಷ ಸಂಗ್ರಹವಾದ ನೀರಿನ ಪ್ರಮಾಣ ಉತ್ತಮ ಮಟ್ಟದಲ್ಲಿದೆ.

ದೇಶದಾದ್ಯಂತ ಇರುವ ಪ್ರಮುಖ 91 ಜಲಾಶಯಗಳ ಅತ್ಯಧಿಕ ಸಂಗ್ರಹ ಸಾಮರ್ಥ್ಯ 5,572. 30 ಟಿಎಂಸಿ ಅಡಿ ಇದ್ದು, ಸದ್ಯ ಒಟ್ಟು 2,672 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಪ್ರಮಾಣವು ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 48ರಷ್ಟು ಮಾತ್ರ ಎಂದು ಕೇಂದ್ರದ ಜಲ ಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿವೆ.

ಜೂನ್‌ನಲ್ಲೇ ಆರಂಭವಾಗಿರುವ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ, ಮಳೆ ಆಧರಿತ ಪ್ರದೇಶದಲ್ಲಿನ ಬಿತ್ತನೆ ಅವಧಿ ಮುಕ್ತಾಯದ ಹಂತದಲ್ಲಿದೆ. ಕರ್ನಾಟಕದ ಪ್ರಮುಖ ಮಳೆಯಾಶ್ರಿತ ಬೆಳೆಯಾದ ಜೋಳದ ಬಿತ್ತನೆ ಶೇ 15ರಷ್ಟಾಗಿದ್ದು, ರಾಗಿ ಬಿತ್ತನೆ ಪ್ರಮಾಣವೂ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿದ್ದು, ಶೇ 25ರಷ್ಟು ದಾಖಲಾಗಿದೆ.

ಮಳೆ ಕೊರತೆ: ಆಗಸ್ಟ್‌ ತಿಂಗಳಲ್ಲಿ ರಾಜ್ಯದಲ್ಲಿ ಸುರಿದಿರುವ ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಉಂಟಾಗಿದ್ದ ಮಳೆ ಕೊರತೆ ಪ್ರಮಾಣವನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ.

ಜುಲೈನಲ್ಲಿ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಶೇ 35ರಷ್ಟು ಮಳೆ ಕೊರತೆ ಉಂಟಾಗಿತ್ತು. ಈ ಪ್ರಮಾಣ ಈಗ 29ಕ್ಕೆ ಇಳಿಕೆಯಾಗಿದೆ. ಆಗಸ್ಟ್‌ 1ರಿಂದ 19ರ ವರೆಗೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ 333.8 ಮಿ.ಮೀ ಮಳೆಯಾಗಿದೆ. 468.1 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು.

ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸುಂದರ ಮಹಾದೇವ ಮೇತ್ರಿ ‘ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಜುಲೈ ಅಂತ್ಯದವರೆಗೂ ದುರ್ಬಲವಾಗಿದ್ದ ಮುಂಗಾರು, ಆ.5ರ ನಂತರ ಪ್ರಬಲವಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ’ ಎಂದರು.

‘ಲಕ್ಷದ್ವೀಪ, ತಮಿಳುನಾಡು ಕರಾವಳಿ ಹಾಗೂ ಮರಾಠವಾಡ ಪ್ರದೇಶಗಳಲ್ಲಿ ಮೆಲ್ಮೈ ಸುಳಿಗಾಳಿ ನಿರ್ಮಾಣವಾಗಿದೆ, ಅಕ್ಷಾಂಶದಲ್ಲಿ‌ ಗಾಳಿ ಚಲನವಲನಗಳಲ್ಲಿ ಬದಲಾವಣೆ ಉಂಟಾಗಿದೆ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹಾಗಾಗಿ ಮುಂಗಾರು ಚುರುಕಾಗಿದೆ’ ಎಂದು ತಿಳಿಸಿದರು.

ಉತ್ತರ ಒಳನಾಡು, ಕರಾವಳಿಯಲ್ಲಿ ಹೆಚ್ಚಿದ ಮಳೆ ಕೊರತೆ: ಮುಂಗಾರು ಪ್ರಾರಂಭವಾದಾಗ ಮಳೆ ಹಂಚಿಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿತ್ತು. ಈಗ ಆ ಭಾಗಗಳಲ್ಲಿ ಮಳೆ ಕುಂಠಿತವಾಗಿದ್ದು, ಕೊರತೆ ಪ್ರಮಾಣ ಕೊಂಚ ಏರಿಕೆಯಾಗಿದೆ.

ಜುಲೈನಲ್ಲಿ ಉತ್ತರ ಒಳನಾಡಿನಲ್ಲಿ 208.2 ಮಿ.ಮೀ ಮಳೆಯಾಗಿದ್ದು, ಶೇ 15ರಷ್ಟು ಕೊರತೆ ಉಂಟಾಗಿತ್ತು. ಆಗಸ್ಟ್‌ನಲ್ಲಿ ಇಲ್ಲಿಯವರೆಗೆ 251 ಮಿ.ಮೀ ಮಳೆಯಾಗಿದ್ದು, ಶೇ 20ರಷ್ಟು ಕೊರತೆ ಇದೆ.ಕರಾವಳಿ ಭಾಗಗಳಲ್ಲೂ ಕೊರತೆಯ ಪ್ರಮಾಣ ಹೆಚ್ಚಿದೆ. ಜುಲೈನಲ್ಲಿ 1663.6 ಮಳೆಯಾಗಿದ್ದು, ಶೇ 19ರಷ್ಟು ಕೊರತೆ ಇತ್ತು. ಆಗಸ್ಟ್‌ನಲ್ಲಿ ಕೊರತೆ ಪ್ರಮಾಣ ಶೇ 25ರಷ್ಟಾಗಿದೆ.

***

ಇನ್ನೂ ಒಂದು ವಾರ ಉತ್ತಮ ಮಳೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಇನ್ನೂ ಒಂದು ವಾರ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ, ‘ಮಲೆನಾಡು, ಕರಾವಳಿ, ಉತ್ತರ ಒಳನಾಡಿ ಕೆಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಈಗ ರೂಪುಗೊಂಡಿರುವ ವಾತಾವರಣವನ್ನು ನೋಡಿದರೆ ಆಗಸ್ಟ್‌ನಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ’ ಎಂದು ತಿಳಿಸಿದರು.

***

ಅಂಕಿ ಅಂಶ

10– ಅತಿ ಹೆಚ್ಚು ಮಳೆಯಾಗಿರುವ ಜಿಲ್ಲೆಗಳ ಸಂಖ್ಯೆ
5 –ಸಾಮಾನ್ಯ ಮಳೆಯಾಗಿರುವ ಜಿಲ್ಲೆಗಳ ಸಂಖ್ಯೆ
11 –ಕಡಿಮೆ ಮಳೆಯಾಗಿರುವ ಜಿಲ್ಲೆಗಳ ಸಂಖ್ಯೆ
4 –ಮಳೆ ಕೊರತೆ ಉಂಟಾಗಿರುವ ಜಿಲ್ಲೆಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT