ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಾ ಎದುರು ಟೈಟನ್ಸ್‌ ಜಯಭೇರಿ

Last Updated 19 ಆಗಸ್ಟ್ 2017, 19:58 IST
ಅಕ್ಷರ ಗಾತ್ರ

ಲಖನೌ: ಬಲಿಷ್ಠ ಯು ಮುಂಬಾವನ್ನು ಎರಡು ಸಲ ಆಲೌಟ್‌ ಮಾಡಿದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆದ್ದಿತು.

ಇಲ್ಲಿನ ಬಾಬು ಬನಾರಸಿ ದಾಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತರಪ್ರದೇಶದ ಕಬಡ್ಡಿ ಪ್ರೇಮಿಗಳಿಗೆ ತವರಿನ ತಂಡವೇ ಗೆಲುವು ಪಡೆದಷ್ಟು ಖುಷಿಯಾಗಿತ್ತು. ಏಕೆಂದರೆ ಇಲ್ಲಿನ ಅಭಿಮಾನಿಗಳು ಪಂದ್ಯದ ಆರಂಭದಿಂದಲೂ ಟೈಟನ್ಸ್ ತಂಡದ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಇದರ ಲಾಭ ಪಡೆದ ಟೈಟನ್ಸ್ ತಂಡ 37–32 ಪಾಯಿಂಟ್ಸ್‌ನಿಂದ ಗೆಲುವು ಪಡೆಯಿತು.

ಅನೂಪ್‌ ಕುಮಾರ್‌ ನಾಯಕರಾಗಿರುವ ಮುಂಬಾ ತಂಡ ಹಿಂದಿನ ಪಂದ್ಯಗಳಲ್ಲಿ ‘ಸೋತು ಗೆಲ್ಲುವ ತಂತ್ರ’ ಅನುಸರಿಸಿತ್ತು. ಮೊದಲರ್ಧದ ಆಟದಲ್ಲಿ ಹಿನ್ನಡೆಯಾದರೂ ಎರಡನೇ ಅವಧಿಯಲ್ಲಿ ತಿರುಗೇಟು ನೀಡುವ ಯೋಜನೆ ರೂಪಿಸಿ ಯಶಸ್ಸು ಕೂಡ ಪಡೆದಿತ್ತು. ಇದೇ ಮೈದಾನದಲ್ಲಿ ಶುಕ್ರವಾರ ಯು.ಪಿ. ಯೋಧಾ ತಂಡದ ಎದುರು ಮೊದಲು ಹಿನ್ನಡೆ ಅನುಭವಿಸಿ ಗೆದ್ದಿತ್ತು. ಆದರೆ ಆ ತಂಡದವರ ಯೋಜನೆ ಟೈಟನ್ಸ್ ಎದುರು ಕೈಗೂಡಲಿಲ್ಲ.

ಹೈದರಾಬಾದ್‌ನ ಟೈಟನ್ಸ್ ತಂಡದ ಶಿಸ್ತುಬದ್ಧ ರಕ್ಷಣಾ ವಿಭಾಗ ಮತ್ತು ಅಭಿಮಾನಿಗಳ ನೆಚ್ಚಿನ ರೈಡರ್‌ ರಾಹುಲ್‌ ಚೌಧರಿ ಮಿಂಚಿನ ವೇಗದ ಆಟ ತಂಡದ ಗೆಲುವಿಗೆ ಕಾರಣವಾಯಿತು. ರಾಹುಲ್‌ 20 ಬಾರಿ ರೈಡಿಂಗ್ ಹೋಗಿ 13 ಪಾಯಿಂಟ್ಸ್‌ ತಂದರು. ಪಂದ್ಯದ ಆರಂಭದ ಐದನೇ ನಿಮಿಷದಲ್ಲಿ ರಾಹುಲ್‌ ‘ಸೂಪರ್‌ ರೈಡ್‌’ ಮಾಡಿ ಮೂರು ಪಾಯಿಂಟ್ಸ್ ಹೆಕ್ಕಿ ತಂದ ಕಾರಣ ತಂಡಕ್ಕೆ ಮೊದಲಿನಿಂದಲೇ ಮುನ್ನಡೆ ಗಳಿಸಲು ಸಾಧ್ಯವಾಯಿತು. 6–4, 8–5 ಪಾಯಿಂಟ್ಸ್‌ನಿಂದ ತಂಡ ಮುನ್ನಡೆಯಲ್ಲಿತ್ತು. 11ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್‌ ಮಾಡಿ ಟೈಟನ್ಸ್ ಎರಡು ಲೋನಾ ಪಾಯಿಂಟ್ಸ್ ಪಡೆದುಕೊಂಡಿತು. ಮುಂಬಾ ತಂಡದವರು ಪದೇ ಪದೇ ಅಂಪೈರ್‌ ತೀರ್ಪು ಪರಿಶೀಲನೆ ಕೋರಿ 12 ನಿಮಿಷಗಳ ಆಟ ಮುಗಿಯುವಷ್ಟರಲ್ಲಿ ತಮ್ಮ ಎರಡು ಅವಕಾಶಗಳನ್ನು ಕಳೆದುಕೊಂಡಿದ್ದರು.

24ನೇ ನಿಮಿಷದಲ್ಲಿ ಮುಂಬಾ ತಂಡದ ಅನೂಪ್‌, ರೈಡಿಂಗ್ ಬಂದಾಗ ಟೈಟನ್ಸ್ ತಂಡದ ಅಂಕಣದಲ್ಲಿ ಮೂವರು ಆಟಗಾರರಷ್ಟೇ ಇದ್ದರು. ಆಗ ಅನೂಪ್‌ ಅವರನ್ನು ಚಾಣಾಕ್ಷತನದಿಂದ ಹಿಡಿದು ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ಇದರಿಂದ ತಂಡ ಆಲೌಟ್ ಆಗುವ ಸಂಕಷ್ಟದಿಂದ ಪಾರಾಯಿತು.

ಮೊದಲರ್ಧದಲ್ಲಿ ಹೋರಾಟ, ಮರು ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಟೈಟನ್ಸ್‌ ಮುನ್ನಡೆ ಸಾಧಿಸಿತು. ಈ ತಂಡ 19–15ರಲ್ಲಿ ಮುನ್ನಡೆ ಗಳಿಸಿ ವಿಶ್ರಾಂತಿಗೆ ಹೋಯಿತು.

ಎರಡು, ಮೂರು ಪಾಯಿಂಟ್ಸ್‌ ಅಂತರದಲ್ಲಿ ಪಂದ್ಯ ಸಾಗಿತ್ತು. ಆದರೆ ರಕ್ಷಣಾ ವಿಭಾಗ ಮತ್ತು ರೈಡಿಂಗ್‌ನಲ್ಲಿ ಟೈಟನ್ಸ್ ತಂಡ ಹಲವು ತಪ್ಪು ಮಾಡಿತು. ಇದರ ಲಾಭ ಪಡೆದ ಮುಂಬಾ ತಂಡ ಎದುರಾಳಿಗಳನ್ನು 32ನೇ ನಿಮಿಷದಲ್ಲಿ ಆಲೌಟ್‌ ಮಾಡಿ ಅಂತರವನ್ನು 25–27ಕ್ಕೆ ಕಡಿಮೆ ಮಾಡಿಕೊಂಡಿತು. ನಂತರದ ನಿಮಿಷದಲ್ಲಿ ಎರಡು ಪಾಯಿಂಟ್ಸ್‌ ಗಳಿಸಿದ ಮುಂಬಾ ತಂಡ 27–27ರಲ್ಲಿ ಸಮಬಲ ಮಾಡಿಕೊಂಡ ಕಾರಣ ಕಬಡ್ಡಿ ಕಣ ರಂಗೇರಿತ್ತು. ಆಗ ಪಂದ್ಯಕ್ಕೆ ತಿರುವು ನೀಡಿದ್ದು ರಾಹುಲ್‌ ಚೌಧರಿ.

ಪಂದ್ಯ ಮುಗಿಯಲು ನಾಲ್ಕು ನಿಮಿಷವಷ್ಟೇ ಬಾಕಿಯಿದ್ದಾಗ ಟೈಟನ್ಸ್ 31–28ರಲ್ಲಿ ಮುನ್ನಡೆಯಲ್ಲಿತ್ತು. ಆಗ ಮುಂಬಾ ತಂಡದಲ್ಲಿ ನಾಲ್ವರು ಆಟಗಾರರು ಮಾತ್ರ ಇದ್ದರು. ಆದರೂ ಎಚ್ಚರಿಕೆಯಿಂದ ಆಡದ ಮುಂಬಾ ತಂಡ ಪಾಯಿಂಟ್‌ ಕಳೆದುಕೊಂಡಿತು. ಬಳಿಕ ಟೈಟನ್ಸ್ ತಂಡಕ್ಕೆ ಎರಡನೇ ಬಾರಿ ‘ಲೋನಾ’ ಪಾಯಿಂಟ್ಸ್ ಲಭಿಸಿತು. ಇದರಿಂದ ಪಾಯಿಂಟ್ಸ್ ಸಂಖ್ಯೆ 37–31ಕ್ಕೆ ಏರಿತು. ಉಳಿದ ಒಂದೂವರೆ ನಿಮಿಷದ ಆಟದಲ್ಲಿ ಟೈಟನ್ ತಂಡ ‘ಸಮಯ ಕಳೆಯುವ ತಂತ್ರ’ ಮಾಡಿದ್ದರಿಂದ ಮುಂಬಾ ತಂಡ ನಿರಾಸೆಗೆ ಒಳಗಾಯಿತು.

ಇಂದಿನ ಪಂದ್ಯಗಳು
ಪಟ್ನಾ ಪೈರಟ್ಸ್‌–ಪುಣೇರಿ ಪಲ್ಟನ್‌
ಆರಂಭ: ರಾತ್ರಿ 8ಕ್ಕೆ.
ಯು.ಪಿ. ಯೋಧಾ–ಜೈಪುರ ಪಿಂಕ್‌ ಪ್ಯಾಂಥರ್ಸ್‌
ಆರಂಭ: ರಾತ್ರಿ 9ಕ್ಕೆ.
ಸ್ಥಳ: ಲಖನೌ. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT