ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತಿಗಳ ಮಾಹಿತಿ ಕೋಶಕ್ಕೆ ಯೋಜನೆ

ಎರಡು ವರ್ಷದಲ್ಲಿ ಯೋಜನೆ ಪೂರ್ಣ– ಮಾಲಗತ್ತಿ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತಿಗಳ ಪರಿಚಯ ಒಳಗೊಂಡ ಮಾಹಿತಿ ಕೋಶ ಹೊರತರುವ ಉದ್ದೇಶದಿಂದ ‘ಬಂಗಾರದ ಎಲೆಗಳು’ ಎಂಬ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

ನವೋದಯ ಪೂರ್ವದ ಕೆಂಪು ನಾರಾಯಣನ ‘ಮುದ್ರಾಮಂಜೂಷ’ ಕೃತಿಯಿಂದ ಪ್ರಾರಂಭಿಸಿ ಇದುವರೆಗಿನ ಎಲ್ಲ ಲೇಖಕರ ಮಾಹಿತಿಯನ್ನು ಈ ಕೋಶ ಒಳಗೊಂಡಿರುತ್ತದೆ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ಇಂತಹ ಮಾಹಿತಿ ಕೋಶಗಳು ಇದ್ದರೂ ಅವು ಬಿಡಿಬಿಡಿ ಆಗಿವೆ. ಅಲ್ಲದೆ, ಎಲ್ಲರನ್ನೂ ಒಳಗೊಂಡಿಲ್ಲ. ಸಾಹಿತಿಗಳ ಮಾಹಿತಿ ಅಕಾಡೆಮಿಗೆ ಜೀವಕೋಶ ಇದ್ದಂತೆ. ಅದಕ್ಕಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಲೇಖಕನ ಹುಟ್ಟಿದ ದಿನಾಂಕ, ಊರು, ಉದ್ಯೋಗ, ಕುಟುಂಬದ ಸಂಕ್ಷಿಪ್ತ ವಿವರ, ಪ್ರಕಟಿತ ಕೃತಿಗಳು, ಪ್ರಶಸ್ತಿಗಳು, ಸಂದ ಗೌರವಗಳು ಮತ್ತು ವ್ಯಕ್ತಿತ್ವ  ಕುರಿತು ಸಂಕ್ಷಿಪ್ತವಾಗಿ ನಿರೂಪಿಸಲಾಗುವುದು. ಪ್ರಮುಖ ಕೃತಿಗಳ ಬಗ್ಗೆ  ಒಂದೆರಡು ವಾಕ್ಯದ ವಿವರಣೆಯನ್ನೂ ನೀಡುವ ಆಲೋಚನೆ ಇದೆ. ಕನಿಷ್ಠ ಎರಡು ಕೃತಿ ಪ್ರಕಟಿಸಿದವರನ್ನು ಲೇಖಕರು ಎಂದು ಪರಿಗಣಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದ ಯಾವುದೇ ಭಾಗದ ಲೇಖಕ ತನ್ನ ಸ್ವಯಂ ವಿವರಗಳು ಮತ್ತು ತನ್ನ ನೆರೆಹೊರೆಯ ಲೇಖಕರು ಮತ್ತು ನಿಧನರಾದ ಲೇಖಕರ ಮಾಹಿತಿಗಳನ್ನು ಅಕಾಡೆಮಿಯ ಇ–ಮೇಲ್ (sahithya.academy@gmail.com) ವಿಳಾಸಕ್ಕೆ ಕಳುಹಿಸಬಹುದು. ಈ ವಿವರಗಳನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗುವುದು ಎಂದು ಮಾಲಗತ್ತಿ ವಿವರಿಸಿದರು.

ಅಕಾಡೆಮಿಯ ವೆಬ್‌ಸೈಟ್‌ ಉನ್ನತೀಕರಿಸಲಾಗುವುದು. ಅಲ್ಲದೆ, ಟ್ವಿಟರ್, ಫೇಸ್‌ಬುಕ್, ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣಗಳಲ್ಲಿ ಅಕಾಡೆಮಿಯ ಖಾತೆಗಳನ್ನು ತೆಗೆದು ಯುವ ಜನರನ್ನು ಸೆಳೆಯುವ ಉದ್ದೇಶ ಇದೆ ಎಂದೂ ಹೇಳಿದರು.

ಸಹ ಸದಸ್ಯರ ನೇಮಕ:

ವಿಕ್ರಮ್ ವಿಸಾಜಿ (ಕಲಬುರ್ಗಿ), ಶೈಲಾ ನಾಗರಾಜ್ (ತುಮಕೂರು) ಮತ್ತು ನೀಲಗಿರಿ ತಳವಾರ (ಮೈಸೂರು) ಅವರನ್ನು ಸಾಹಿತ್ಯ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಲಗತ್ತಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

***

ಪುಸ್ತಕ ಮಾರಾಟ ಕೇಂದ್ರ:

ಸಾಹಿತ್ಯ ಅಕಾಡೆಮಿ ಹೊರತರುವ ಪುಸ್ತಕಗಳ ಮಾರಾಟಕ್ಕೆ ಪ್ರತ್ಯೇಕ ಮಾರಾಟ ಕೇಂದ್ರ ಆರಂಭಿಸುವ ಉದ್ದೇಶವಿದೆ ಎಂದು ಮಾಲಗತ್ತಿ ಹೇಳಿದರು.

‘ಸಾಹಿತ್ಯ ಅಕಾಡೆಮಿ ಹೊರತಂದ ಅನೇಕ ಉತ್ತಮ ಕೃತಿಗಳನ್ನು ಓದುಗರು ಹುಡುಕಾಡಿ ಖರೀದಿಸುತ್ತಾರೆ. ಸಿಗದಿದ್ದಾಗ ನೇರವಾಗಿ ಅಕಾಡೆಮಿಗೆ ಬಂದು ವಿಚಾರಿಸುತ್ತಾರೆ. ಇದಲ್ಲದೆ ಸಗಟು ಖರೀದಿಗೂ ಬರುತ್ತಾರೆ. ಅವರೆಲ್ಲರಿಗೂ ಅನುಕೂಲ ಆಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT